ಸೋಮವಾರ, ಮಾರ್ಚ್ 1, 2021
31 °C

ಕನ್ನಡ ಭಾಷೆಯಲ್ಲ, ನಮ್ಮ ಬದುಕಿನ ಸಂಸ್ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಯಲ್ಲ, ನಮ್ಮ ಬದುಕಿನ ಸಂಸ್ಕೃತಿ

ದೇವನಹಳ್ಳಿ: ‘ಪರಂಪರೆಯ ಇತಿಹಾಸ ಹೊಂದಿರುವ ಕನ್ನಡವೆನ್ನುವುದು ಕೇವಲ ನಮ್ಮ ಭಾಷೆಯಲ್ಲ. ನಮ್ಮ ಬದುಕಿನ ಸಂಸ್ಕೃತಿ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷ ಶರಣಯ್ಯ ಹಿರೇಮಠ ಅಭಿಪ್ರಾಯಪಟ್ಟರು.

ಚಪ್ಪರದಕಲ್ಲುವಿನ ಸುಗಮ ಸಂಗೀತ ದಿಗ್ಗಜ ದಿ.ಸಿ ಅಶ್ವಥ್‌ ವೇದಿಕೆಯಲ್ಲಿ ಮಾತನಾಡಿದ ಅವರು, ‘ವಿಶ್ವದ ನೆಲದಲ್ಲಿ ಸುಮಾರು ಆರು ಸಾವಿರ ಭಾಷೆಗಳಿವೆ. ಮಾನವ ಅಸ್ತಿತ್ವದೊಂದಿಗೆ ಅವನ ಅಲೆಮಾರಿತನ, ನಾಗರಿಕತೆಗಳ ನೆಲೆಯ ಬದುಕಿನೊಂದಿಗೆ ಆಂಗಿಕ ಹಾವಭಾವ, ಧ್ವನಿ ಸಂಕೇತಗಳೊಂದಿಗೆ ಭಾಷೆ ಸ್ವರೂಪ ಪಡೆಯಿತು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಭಾರತದಲ್ಲಿ ಹದಿನೆಂಟು ಭಾಷೆ ಸ್ವಿಕೃತಗೊಂಡು ಅಧಿಕೃತವಾಗಿವೆ. ಇದರಲ್ಲಿ ಕನ್ನಡ ಭಾಷೆಯೂ ಒಂದು ಎಂಬುದು ನಮ್ಮ ಹೆಗ್ಗಳಿಕೆ’ ಎಂದರು.

‘ಕನ್ನಡ ಭಾಷೆಗೆ ಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಕನ್ನಡದ ಪ್ರಥಮ ರಾಷ್ಟ್ರಕವಿ ಎಂ.ಗೋವಿಂದ ಪೈ ಸಂಶೋಧನೆಯಿಂದ ಸ್ಪಷ್ಟಪಡಿಸಿದ್ದಾರೆ. ದೀರ್ಘಕಾಲದ ಭಾಷೆಯೇ ಸರ್ವ ಶ್ರೇಷ್ಠವಾಗಿದೆ. ಈ ನಾಡಿನ ಭಾಷೆ ಜನ ಗಡಿಯನ್ನು ಅವಲೇಕಿಸಿದಾಗ ಇತಿಹಾಸ ಪುಟಗಳು ತೆರೆದುಕೊಂಡು ಕಂಗೊಳಿಸುತ್ತವೆ’ ಎಂದರು.

‘ನೆಲ, ಕಲೆ, ಜನಪದ, ಸ್ಮಾರಕ, ಶಾಸನ, ಸಾಹಿತ್ಯ, ದಾರ್ಶನಿಕ ಪರಂಪರೆ, ಪ್ರಾಕೃತಿಕ ಸಂಪತ್ತು ವೈಜ್ಞಾನಿಕ ಸಾಕ್ಷಿಯಾಗಿ ಕಂಡು ಬರುತ್ತವೆ ಎಂಬುದನ್ನು ಕನ್ನಡ ಅಸಕ್ತರು ಮನವರಿಕೆ ಮಾಡಿಕೊಳ್ಳಬೇಕು. ನಮ್ಮ ನಾಡು ಕಟ್ಟಿ ಅಳ್ವಿಕೆ ನಡೆಸಿ ಶ್ರಿಮಂತಗೊಳಿಸಿದ ಅನೇಕ ರಾಜವಂಶಗಳು, ನಾಡ ಪ್ರಭುಗಳು, ಪಾಳೆಗಾರರು, ಅದಿಕವಿ ಪಂಪನಿಂದ ಕನ್ನಡದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದ ದಿಗ್ಗಜ ಸಾಹಿತಿಗಳವರೆಗೆ ಕನ್ನಡ ಭಾಷೆಯನ್ನು ಪೋಷಿಸಿದ್ದಾರೆ’ ಎಂದರು.

ಸಮಾನತೆಯ ಹರಿಕಾರರಾದ ನೂರಾರು ಶರಣರು ಮತ್ತು ದಾಸ ಶ್ರೇಷ್ಠರು ಮಾನವ ಸಮಾಜ ಅನುಸರಿಸಬೇಕದಾದ ನೀತಿ ಸಂಹಿತೆಯ ಮಾರ್ಗವನ್ನು ತೋರಿಸಿದ್ದಾರೆ. 12ನೇ ಶತಮಾನ ಕನ್ನಡ ಸಾಹಿತ್ಯದ ವೈಚಾರಿಕ ಚಿಂತನ ಪರ್ವ ಅಗಿತ್ತು ಎಂದು ಮೆಲುಕು ಹಾಕಿದರು.

ಸಾಹಿತಿಗಳ ಉತ್ಪಾದನಾ ಕೇಂದ್ರವಾಗಿರುವ ತಾಲ್ಲೂಕಿನಲ್ಲಿ ಡಿ.ವಿ.ಜಿ,ನಿಸಾರ್ ಅಹಮದ್, ಕಮಲಾ ಹಂಪನಾ, ಶಿಲ್ಪಿ ಹನುಮಂತಾಚಾರ್ಯ, ತ.ಪು ವೆಂಕಟರಾಮ್, ಅಬ್ದುಲ್ ಖಾಲಕ್, ಸಂಗೀತ ಗಾರುಡಿಗ ಸಿ .ಅಶ್ವಥ್‌ ಅವರಂಥ ಮಹಾನ್ ಸಾಹಿತಿಗಳು ಸಾಹಿತ್ಯಕೃಷಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. ಅನೇಕ ರಾಜಮನತನಗಳು ಅಳ್ವಿಕೆ ನಡೆಸಿವ ಎಂದು ಅವರು ಹೇಳಿದರು.

ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ವಿಮಾನನಿಲ್ದಾಣ ಅರಂಭಗೊಂಡ ನಂತರ ನೂರಾರು ಸಾವಿರಗಳಿದ್ದ ಭೂಮಿಬೆಲೆ ಕೋಟಿಯತ್ತ ಮುಖ ಮಾಡಿದೆ. ಕೃಷಿಯಿಂದ ನಳ ನಳಿಸುತ್ತಿದ್ದ ಭೂ ಪ್ರದೇಶ ವಸತಿ ಸಮುಚ್ಚಯ, ಕೈಗಾರಿಕೆ, ವಾಣಿಜ್ಯ ಹೋಟೆಲ್‌ ಮತ್ತು ಗಗನಚುಂಬಿ ಕಟ್ಟಡಗಳಿಂದ ಅನಾವರಣಗೊಳ್ಳುತ್ತಿದೆ. ಆಪ್ತವಾಗಿದ್ದ ಕೌಟುಂಬಿಕ ಸಂಬಂಧಗಳು ದಾಯಾದಿತನದಿಂದ ರುದ್ರಭೂಮಿಗಳಾಗುತ್ತಿರುವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅರ್ಥಿಕ ವಹಿವಾಟುಗಳನ್ನು ಮಾನವೀಯ ನೆಲೆಯಲ್ಲಿ ರೂಪಿಸಿಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳನ್ನು ಧನಾತ್ಮಕ ಹಾಗೂ ಸಕಾರಾತ್ಮಕ ನೆಲೆಯಲ್ಲಿ ಬಳಸಿಕೊಂಡರೆ ಅನುಕೂಲ.

ರೈತರಲ್ಲಿ ಚೈತನ್ಯ, ಉದ್ದಿಮೆಯಲ್ಲಿ ವೈಶಾಲ್ಯತೆ, ಉದ್ಯೋಗದಲ್ಲಿ ಹೆಚ್ಚು ಅವಕಾಶ, ಶಿಕ್ಷಣದಲ್ಲಿ ವೈವಿಧ್ಯತೆ, ಆರೋಗ್ಯದಲ್ಲಿ ಕಾಳಜಿ ಇಟ್ಟುಕೊಂಡು ಬದುಕು ಕಟ್ಟಿಕೊಂಡು ಮುಂದಿನ ಜನಾಂಗದ ಸುಂದರ ಕನಸು ಉಳಿಸಬೇಕು. ಆಧುನಿಕತೆ ಎಂದು ವಿಕೃತ ಮನಸ್ಥಿತಿಗೆ ಒಳಗಾಗಿ ನಡೆದರೆ ರುದ್ರ ಭೂಮಿಗೆ ಸಾಲುಗಟ್ಟಿ ನಿಲ್ಲಬೇಕಾಗುತ್ತಿದೆ ಎಂದು ಎಚ್ಚರಿಸಿದರು.

ಕನ್ನಡವೆಂಬುದು ವಿಶಾಲ ಮನಸ್ಸು ಮತ್ತು ಭಾವನೆಯ ಸಮ್ಮಿಲನವಾಗಿದೆ, ಕನ್ನಡ ಉಳಿಸಿ ಬೆಳೆಸಬೇಕಾದರೆ ಕನ್ನಡ ತಾಯಿ ಭುವನೇಶ್ವರಿಯನ್ನು ಅಂತರಾಳದಲ್ಲಿ ಆರಾಧಿಸಬೇಕು. ಕನ್ನಡ ಭಾಷೆಗೆ ಬಲವಾದ ಶಕ್ತಿ ಇದೆ. ಸರಳವಾಗಿ ಕಲಿಯಬಹುದಾದ ಭಾಷೆಗೆ ಕಲಿಕಾ ಆಸ್ತಕರನ್ನು ಜಾಗೃತಿಗೊಳಿಸಬೇಕಾಗಿದೆ. ಕನ್ನಡ ನಾಡಿನಲ್ಲಿ ಬದುಕಿರುವ ಪ್ರತಿಯೊಬ್ಬರೂ ಭಾಷೆ, ನೆಲ, ಜಲಕ್ಕೆ ಗೌರವ ನೀಡಿ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.