ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೂಯೆಪಡುವವರು ದೋನಿಯ ಬಗ್ಗೆ ಟೀಕಿಸುತ್ತಾರೆ: ರವಿಶಾಸ್ತ್ರಿ

Last Updated 11 ನವೆಂಬರ್ 2017, 6:35 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಸುತ್ತ ಅಸೂಯೆ ಪಡುವ ಜನರೆ ಹೆಚ್ಚಾಗಿದ್ದಾರೆ ಎಂದು ಮುಖ್ಯ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ದೋನಿ ಒಬ್ಬ ಉತ್ತಮ ಆಟಗಾರ ಹಾಗೂ ಯಶಸ್ವಿ ನಾಯಕ. ಆದರೆ ಅವರ ಸುತ್ತಲೂ ಅಸೂಯೆ ಪಡುವವರೇ ಇದ್ದಾರೆ. ಅವರು ದೋನಿ ವೃತ್ತಿ ಜೀವನ ಅಂತ್ಯಗೊಳಿಸುವುದನ್ನೇ ಕಾದು ನೋಡುತ್ತಿದ್ದಾರೆ. ಕ್ರಿಕೆಟ್‌ ಭವಿಷ್ಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದೋನಿ ಹೊಂದಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೋನಿ ಅವರ ವಿರುದ್ಧ ಕೇಳಿ ಬಂದಿರುವ ಟೀಕೆಗಳು ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ತಂಡದಲ್ಲಿ ದೋನಿಗೆ ನೀಡಿರುವ ಸ್ಥಾನ ಹಾಗೆಯೇ ಮುಂದುವರಿಯುತ್ತದೆ ಎಂದರು.

ಭಾರತ – ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟಿ–20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌, ಭಾರತಕ್ಕೆ 197 ರನ್‌ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತ ಪ್ರಮುಖ ವಿಕೆಟ್‌ಗಳನ್ನು ಕಳದುಕೊಂಡು 40ರನ್‌ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ದೋನಿ 49 (37 ಎಸೆತ) ರನ್‌ ಗಳಿಸಿದ್ದರು. ಆದರೆ ತಂಡಕ್ಕೆ ಹೆಚ್ಚು ರನ್‌ಗಳ ಅಗತ್ಯತೆ ಇರುವಾಗ ನಿಧಾನಗತಿಯಿಂದ ರನ್‌ ಗಳಿಸಿ ಟೀಕಾಕಾರ ಕೆಂಗಣ್ಣಿಗೆ ಗುರಿಯಾದ್ದರು.

ಇತ್ತೀಚಿಗೆ ಕ್ರಿಕೆಟಿಗ ವಿ.ವಿ.ಎಸ್‌ ಲಕ್ಷ್ಮಣ್‌, ದೋನಿ ಟಿ–20 ಕ್ರಿಕೆಟ್‌ಗೂ ವಿದಾಯ ಘೋಷಿಸಲಿ ಎಂದಿದ್ದರು. ಜತೆಗೆ,‘ಟಿ–20 ಕ್ರಿಕೆಟ್‌ನಲ್ಲಿ ದೋನಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬೇಕು ಎನ್ನುವುದನ್ನು ನಿರ್ಧರಿಸಲಿ’ ಎಂದು ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಅಭಿಪ್ರಾಯಪಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ವಿರಾಟ್‌ ಕೊಹ್ಲಿ, ‘ದೋನಿ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೂ ಟೀಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT