ಶುಕ್ರವಾರ, ಮಾರ್ಚ್ 5, 2021
27 °C

ತಪ್ಪು ಮಾಹಿತಿಯಿಂದ ಹೆಬ್ಬಾಳ ಆರೋಪ: ಪ್ರಿಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪ್ಪು ಮಾಹಿತಿಯಿಂದ ಹೆಬ್ಬಾಳ ಆರೋಪ: ಪ್ರಿಯಾಂಕ್

ಚಿತ್ತಾಪುರ: ’ಚಿತ್ತಾಪುರ ತಾಲ್ಲೂಕು ಮಾರಾಟ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ ಎಂದು ನಾನು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ಆದರೆ, ಕ್ಷೇತ್ರ ಮಾರಾಟ ಮಾಡಲು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ತಪ್ಪು ಮಾಹಿತಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಎಂ.ಖರ್ಗೆ ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾರ ವಿರುದ್ಧವೂ ವೈಯಕ್ತಿಕ ಟೀಕೆ, ಆರೋಪ ಮಾಡಿಲ್ಲ. ಹೆಬ್ಬಾಳ ಅವರ ಬಗ್ಗೆ ಗೌರವವಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದಾಖಲೆಯೊಂದಿಗೆ ಚರ್ಚೆಗೆ ಸಿದ್ಧ. ನಾಲ್ಕು ವರ್ಷದ ಅಭಿವೃದ್ಧಿ ಕುರಿತು ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬಂದರೆ ಉತ್ತಮ ಎಂದು ಅವರು ಹೇಳಿದರು.

ಜಾತ್ಯತೀತ ತತ್ವ, ಸಿದ್ಧಾಂತ ನಂಬಿಕೊಂಡು ಇಲ್ಲಿವರೆಗೆ ರಾಜಕಾರಣ ಮಾಡಿದ ಹೆಬ್ಬಾಳ ಮತ್ತು ಶ್ರೀನಿವಾಸ ಸಗರ ಅವರು ಕೋಮುವಾದಿ ಪಕ್ಷವನ್ನು ಅಪ್ಪಿಕೊಂಡಿದ್ದು ಅಚ್ಚರಿಯ ಬೆಳವಣಿಗೆ. ಎರಡು ತಿಂಗಳ ಹಿಂದೆಯಷ್ಟೆ ಅಭಿವೃದ್ಧಿಯ ಬಗ್ಗೆ ಹೊಗಳಿದವರು ಈಗ ಅಲ್ಲಗಳೆಯುವುದು ಮನಸ್ಥಿತಿಗೆ ಸಾಕ್ಷಿ. ಕಾಂಗ್ರೆಸ್ ಮುಕ್ತ ಚಿತ್ತಾಪುರ ಹೇಗೆ ಮಾಡುತ್ತಾರೋ ಅವರಿಗೆ ಗೊತ್ತು ಎಂದು ಅವರು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

‘ಬಿಜೆಪಿ ಪಕ್ಷದಿಂದ ಕತ್ತೆಗೆ ಟೀಕೆಟ್ ನೀಡಿದರೂ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಕ್ಷೇತ್ರದ ಜನತೆ ಪ್ರಬುದ್ಧರು, ಸ್ವಾಭಿಮಾನಿಗಳಾಗಿದ್ದು ಕತ್ತೆಯ ಆಳ್ವಿಕೆ ಬಯಸುವುದಿಲ್ಲ. ಜನರು ಕತ್ತೆಗೆ ಓಟು ಹಾಕಲು ಹುಚ್ಚರಾ?,  ಕತ್ತೆಯ ವಿರುದ್ಧ ಸೆಣೆಸುವುದೆಂದರೆ ನಮಗೂ ಅವಮಾನ’ ಎಂದು ವಾಗ್ದಾಳಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ ಸದಸ್ಯ ಶಿವರುದ್ರ ಭೀಣಿ, ತಾ.ಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಮುಖಂಡರಾದ ಎಂ.ಎ.ರಸೀದ್, ಮುಕ್ತಾರ ಪಟೇಲ್, ಶೀಲಾ ಕಾಶಿ, ಸಿದ್ಧು ಸಂಗಾವಿ, ಹಣಮಂತ ಸಂಕನೂರ, ಬಸವರಾಜ ಚಿನ್ನಮಳ್ಳಿ, ಜಫರುಲ್ ಹಸನ್, ಮಲ್ಲಿಕಾರ್ಜುನ ಮುಡಬೂಳಕರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.