ಬುಧವಾರ, ಫೆಬ್ರವರಿ 24, 2021
23 °C

ಮಧ್ಯರಾತ್ರಿಯಿಂದಲೇ ನಾಲೆಗಳಿಗೆ ಹರಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧ್ಯರಾತ್ರಿಯಿಂದಲೇ ನಾಲೆಗಳಿಗೆ ಹರಿದ ನೀರು

ಶಿವಮೊಗ್ಗ: ಭದ್ರಾ ಬಲ ಮತ್ತು ಎಡ ನಾಲೆಗೆ ಶುಕ್ರವಾರ (ನ. 10) ಮಧ್ಯರಾತ್ರಿಯಿಂದಲೇ ನೀರು ಹರಿಸಲಾಗಿದೆ. ತೋಟಗಾರಿಕಾ ಬೆಳೆಗಳಿಗೆ ಅನುಕೂಲ ಮಾಡಿಕೊಡಲು ಎಡನಾಲೆಗೆ 15 ದಿನ ನಿತ್ಯ 380 ಕ್ಯುಸೆಕ್‌ ಹಾಗೂ ಬಲ ನಾಲೆಗೆ 10 ದಿನ ನಿತ್ಯ 2,650 ಕ್ಯುಸೆಕ್ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿತು.

ಅಧಿಕ ಅಚ್ಚುಕಟ್ಟು ಪ್ರದೇಶ ಒಳಗೊಂಡಿರುವ ಬಲ ನಾಲೆಯ ವ್ಯಾಪ್ತಿಯಲ್ಲಿ ತೋಟಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಎರಡೂ ಜಿಲ್ಲೆಗಳ ರೈತ ಮುಖಂಡರು, ಜನ ಪ್ರತಿನಿಧಿಗಳು ಒತ್ತಾಯಿಸಿದರು. ನ. 10ರಿಂದ 20ರವರೆಗೆ ನೀರು ಹರಿಸಲು ಸಮಿತಿ ಒಪ್ಪಿಗೆ ಸೂಚಿಸಿತು.

ಜನವರಿ ಒಳಗೆ ನೀರು ಹರಿಸಲು ಆರಂಭದಲ್ಲಿ ದಾವಣಗೆರೆ ಭಾಗದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಈಗ ನೀರು ಹರಿಸಿದರೆ ಬೇಸಿಗೆ ಭತ್ತಕ್ಕೆ ತೊಂದರೆಯಾಗುತ್ತದೆ. ಹಾಗಾಗಿ, ಈಗ ನೀರು ಬೇಡ ಎಂದು ರೈತ ಮುಖಂಡ ಹನುಮಂತಪ್ಪ, ಬಸವರಾಜಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಜಲಾಶಯದಲ್ಲಿ ಪ್ರಸ್ತುತ 55.184 ಟಿಎಂಸಿ ನೀರಿದೆ. ಕುಡಿಯುವ ಯೋಜನೆಗಳಿಗೆ 7 ಟಿಎಂಸಿ, ಡೆಡ್‌ ಸ್ಟೋರೇಜ್‌ 13 ಟಿಎಂಸಿ ನೀರು ಹೊರತುಪಡಿಸಿದರೆ ಇನ್ನೂ 44 ಟಿಎಂಸಿ ನೀರಿದೆ. ಈಗ 10 ದಿನ ನೀರು ಹರಿಸಿದರೂ, ಬೇಸಿಗೆ ಬೆಳೆಗೆ 125 ದಿನ ನೀರು ದೊರೆಯುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕಾಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ವಿವರ ನೀಡಿದರು.

ಬೇಸಿಗೆ ಭತ್ತಕ್ಕೆ 120 ದಿನ ತಡೆರಹಿತ ನೀರು: ಬೇಸಿಗೆ ಭತ್ತದ ಬೆಳೆಗೆ ಜನವರಿ 5ರಿಂದ ತಡೆ ರಹಿತವಾಗಿ 120 ದಿನ ನೀರು ಹರಿಸಲು ಸಮಿತಿ ಒಪ್ಪಿಗೆ ನೀಡಿತು.

ಸಭೆಯ ಆರಂಭದಲ್ಲಿ ಕೆಲವರು ನಿರಂತರವಾಗಿ ನೀರು ಹರಿಸಲು ಆಕ್ಷೇಪ ವ್ಯಕ್ತಪಡಿಸಿದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಮಧ್ಯದಲ್ಲಿ ಸ್ವಲ್ಪ ಸಮಯ ನಿಲುಗಡೆ ಮಾಡಬೇಕು.

ನಂತರ ನೀರು ಹರಿಸಬೇಕು ಎಂದು ಸಲಹೆ ನೀಡಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಸದಸ್ಯ ತೇಜಸ್ವಿ ವಿ. ಪಟೇಲ್, ಮಧ್ಯೆ ನೀರು ನಿಲುಗಡೆ ಮಾಡಿದರೆ ಕೊನೆಯ ಭಾಗದ ರೈತರಿಗೆ ತಲುಪುವುದು ವಿಳಂಬವಾಗುತ್ತದೆ. ಈಗಾಗಲೇ 2 ಬೆಳೆ ಕಳೆದುಕೊಂಡಿರುವ ರೈತರು ಮತ್ತೊಂದು ಬೆಳೆಗೂ ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಬೀಜ ಚೆಲ್ಲುವ ಮೊದಲೇ ನಾಲ್ಕು ದಿನ ವಿಳಂಬ ಮಾಡಿ, ಆದರೆ, ಒಮ್ಮೆ ಹರಿಸಿದ ನಂತರ ನಿಲುಗಡೆ ಮಾಡಬೇಡಿ ಎಂದು ಹಲವು ಸದಸ್ಯರು ಸಲಹೆ ನೀಡಿದರು. ಕೊನೆಗೆ ಜ. 5ರಿಂದ 120 ದಿನ ನಿರಂತರ ನೀರು ಹರಿಸಲು ಒಪ್ಪಿಗೆ ದೊರೆಯಿತು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂ‍ರ‍್ಯಾನಾಯ್ಕ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಎಚ್‌.ಆರ್. ಬಸವರಾಜಪ್ಪ, ವೈ.ಜಿ. ಮಲ್ಲಿಕಾರ್ಜುನ್, ರಘುನಾಥ್, ಕಲ್ಲಳ್ಳಿ ಶೇಖರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.