ಗುರುವಾರ , ಮಾರ್ಚ್ 4, 2021
18 °C

ಮಕ್ಕಳಿಂದ ಮಕ್ಕಳಿಗಾಗಿ ಸುದ್ದಿ ವಾಹಿನಿ!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಮಕ್ಕಳಿಂದ ಮಕ್ಕಳಿಗಾಗಿ ಸುದ್ದಿ ವಾಹಿನಿ!

ಟಿ.ವಿ. ಆನ್‌ ಮಾಡಿ. ನಿಮಗಿಷ್ಟವಾದ ಸುದ್ದಿ ವಾಹಿನಿಯನ್ನು ವೀಕ್ಷಿಸಲು ಕುಳಿತುಕೊಳ್ಳಿ. ಜಿಎಸ್‌ಟಿ, ಕ್ರಿಕೆಟ್‌, ಮೋದಿ, ರಾಹುಲ್‌ ಗಾಂಧಿ, ಬಿಜೆಪಿ, ಕಾಂಗ್ರೆಸ್‌... ಹೀಗೆ ನೂರೆಂಟು ವಿಷಯಗಳ ಬಗ್ಗೆ ಸುದ್ದಿಗಳು, ಚರ್ಚೆಗಳು ಪ್ರಸಾರವಾಗುತ್ತಿರುತ್ತವೆ. ಅಲ್ಲವೇ? ‘ಹೌದು, ಸುದ್ದಿ ವಾಹಿನಿಗಳಲ್ಲಿ ಅದು ಸಹಜ’ ಎಂದು ಪ್ರತಿಕ್ರಿಯಿಸಬೇಡಿ.

ನೀವು ನೋಡುವ ವಾಹಿನಿಯಲ್ಲಿ ಮಕ್ಕಳ ಸುದ್ದಿ ಪ್ರಸಾರ ಆಗುತ್ತದೆಯೇ? ಮಕ್ಕಳಿಗೆ ಸಂಬಂಧಿಸಿದ ಸುದ್ದಿಗಳು ಪ್ರಸಾರ ಆದರೂ, ಅವು ಮಕ್ಕಳ ದೃಷ್ಟಿಕೋನದಿಂದ ಪ್ರಸಾರ ಆಗುತ್ತವೆಯೇ? ಮಕ್ಕಳಿಗಾಗಿ ಕಾರ್ಟೂನ್‌ ಧಾರಾವಾಹಿ, ಚಲನಚಿತ್ರಗಳನ್ನು ತೋರಿಸುವ ವಾಹಿನಿಗಳು ಇವೆ.

ಮಕ್ಕಳಿಗೆ ಸಂಬಂಧಿಸಿದ ಸುದ್ದಿಯನ್ನು ಮುಖ್ಯವಾಹಿನಿಯ ಸುದ್ದಿ ಚಾನೆಲ್‌ಗಳೂ ತೋರಿಸುತ್ತವೆ. ಆದರೆ, ಮಕ್ಕಳಲ್ಲಿ ಕುತೂಹಲ ಕೆರಳಿಸುವ ಸುದ್ದಿಗಳನ್ನು, ಮಕ್ಕಳನ್ನು ಕಾಡುವ ಸಮಸ್ಯೆಗಳನ್ನು ಮಕ್ಕಳಿಂದಲೇ ಹೇಳಿಸುವ ಕಾರ್ಯಕ್ರಮ ಯಾವ ಸುದ್ದಿವಾಹಿನಿಯಲ್ಲಿ ಇದೆ? ಇಂಥದ್ದೊಂದು ಸುದ್ದಿ ವಾಹಿನಿಯೋ ಕಾರ್ಯಕ್ರಮವೋ ಇದ್ದರೆ ಚೆನ್ನ, ಅಲ್ಲವೇ?!

‘ಗೋಯಿಂಗ್‌ ಟು ಸ್ಕೂಲ್‌’ ಎಂಬುದು ಲಾಭದ ಉದ್ದೇಶ ಇಲ್ಲದ ಒಂದು ಸ್ವಯಂಸೇವಾ ಸಂಸ್ಥೆ (ಎನ್‌ಜಿಒ). ಈ ಸಂಸ್ಥೆ ಈಗ ‘ಚಿಲ್ಡ್ರನ್ಸ್‌ ಸ್ಕ್ರ್ಯಾಪಿ ನ್ಯೂಸ್‌ ಸರ್ವಿಸ್‌’ ಎಂಬ ಸುದ್ದಿ ವಾಹಿನಿಯನ್ನು ಆರಂಭಿಸುತ್ತಿದೆ. ಇದು ನವೆಂಬರ್ 14ರಂದು ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದ್ದು, ವೆಬ್‌ಸೈಟ್‌ (scrappynews.com) ಹಾಗೂ ಯೂಟ್ಯೂಬ್‌ನಲ್ಲಿ ಲಭ್ಯವಿರಲಿದೆ. ‘ಸ್ಕ್ರ್ಯಾಪಿ ನ್ಯೂಸ್‌’ನ ಕೆಲವು ತುಣುಕುಗಳನ್ನು ಯೂಟ್ಯೂಬ್‌ ಮೂಲಕ ವೀಕ್ಷಿಸಬಹುದು (ಕೊಂಡಿ: goo.gl/rqzfgH)

ಸ್ಕ್ರ್ಯಾಪಿ ನ್ಯೂಸ್‌ ಸರ್ವಿಸ್‌ ವಾಹಿನಿಯು ವರದಿಗಾರಿಕೆಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು ಕೂಡ ವಿಭಿನ್ನವಾಗಿಯೇ ಇರುತ್ತವೆ. ಉದಾಹರಣೆಗೆ, ಬೆಂಗಳೂರು ಅಥವಾ ಭಾರತದ ಇನ್ಯಾವುದೇ ಮಹಾನಗರ ಎದುರಿಸುತ್ತಿರುವ ಕಸದ ಸಮಸ್ಯೆಯನ್ನು ದೊಡ್ಡವರ ಸುದ್ದಿ ವಾಹಿನಿಗಳು ತೋರಿಸುವುದು ಒಂದು ಬಗೆಯಲ್ಲಿ. ಆದರೆ, ಮಕ್ಕಳ ಸುದ್ದಿವಾಹಿನಿಯು, ‘ಗುಪ್ಪೆ ಬಿದ್ದಿರುವ ತ್ಯಾಜ್ಯದಿಂದಾಗಿ ಶಾಲೆಗೆ ಹೋಗುವಾಗ ಎಷ್ಟು ಕಷ್ಟವಾಗುತ್ತದೆ ಗೊತ್ತಾ’ ಎಂಬ ದೃಷ್ಟಿಕೋನದಿಂದ ವರದಿ ಮಾಡುತ್ತದೆ.

ಈ ಸುದ್ದಿ ವಾಹಿನಿಯ ಸ್ಟುಡಿಯೋ ಕೂಡ ವಿಭಿನ್ನ. ಬಳಸಿ ಎಸೆದ ಹಳೆಯ ಟೈರ್‌ಗಳು, ಬಟ್ಟೆ, ಗಾಜಿನ ಬಿರಡೆ, ಹಳೆಯ ಟೇಬಲ್‌ ಫ್ಯಾನ್‌, ಚೆಂಡು... ಹೀಗೆ ಬಗೆ ಬಗೆಯ ವಸ್ತುಗಳನ್ನು ಬಳಸಿಕೊಂಡು ಮಕ್ಕಳೇ ನಿರ್ಮಿಸಿರುವ ಸ್ಟುಡಿಯೋ ನಿರ್ಮಾಣವಾಗಿದೆ ಈ ವಾಹಿನಿಗಾಗಿ.

ಈ ಸುದ್ದಿ ವಾಹಿನಿಯ ವೈಶಿಷ್ಟ್ಯ ಎಂದರೆ, ಇಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವ ಮಕ್ಕಳೆಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸೇರಿದವರು. ‘ಇಲ್ಲಿ ಸುದ್ದಿ ಕಲೆ ಹಾಕುವವರು, ಕಾರ್ಯಕ್ರಮ ನಿರೂಪಕರಾಗಿ ಕೆಲಸ ಮಾಡುವವರು ಕೊಳೆಗೇರಿಗಳಲ್ಲಿ ವಾಸ ಮಾಡುವ ಮಕ್ಕಳು. ಶ್ರೀಮಂತ ಕುಟುಂಬದ ಒಂದೇ ಒಂದು ಮಗು ಇಲ್ಲಿಲ್ಲ’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ಪದ್ಮಿನಿ ವಿದ್ಯಾನಾಥನ್.

‘ಹಿಂದಿ, ಇಂಗ್ಲಿಷ್‌ ಮಾತ್ರವಲ್ಲದೆ ಕನ್ನಡ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ಮಕ್ಕಳು ಸುದ್ದಿ ಪ್ರಸಾರ ಮಾಡಲಿದ್ದಾರೆ. ಈ ರೀತಿಯ ಸುದ್ದಿ ವಾಹಿನಿಯೊಂದನ್ನು ಆರಂಭಿಸಲು ಕಾರಣವಾಗಿದ್ದು ಗೋಯಿಂಗ್‌ ಟು ಸ್ಕೂಲ್‌ ಸಂಸ್ಥೆಯ ಆಲೋಚನೆ. ವರದಿ ಸಿದ್ಧಪಡಿಸಿ, ಪ್ರಸಾರ ಮಾಡುವಂತೆ ಹೇಳುವ ಮೊದಲು ಮಕ್ಕಳಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ವರದಿಗಾರಿಕೆ, ಕಾರ್ಯಕ್ರಮ ನಿರೂಪಣೆ ಬಗ್ಗೆ ಅವರಿಗೆ ಮಾಹಿತಿ ಹಾಗೂ ಕಿರು ತರಬೇತಿ ನೀಡಲಾಗುತ್ತದೆ’ ಎಂದರು ಪದ್ಮಿನಿ.

ಈ ವಾಹಿನಿಯ ಮುಖ್ಯ ‘ಸುದ್ದಿಮನೆ’ ಮುಂಬೈನಲ್ಲಿ ಇರಲಿದೆ. ಬೆಂಗಳೂರು, ಮುಝಫ್ಫರ್‌ಪುರ ಮತ್ತು ಭಾಗಲ್ಪುರಗಳಲ್ಲೂ ಚಿಕ್ಕ ‘ಸುದ್ದಿಮನೆ’ಗಳು ಇರಲಿವೆಯಂತೆ! ದೊಡ್ಡವರ ವಾಹಿನಿಗಳಲ್ಲಿ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಈ ವಾಹಿತಿ ಎತ್ತಿಕೊಳ್ಳುತ್ತದೆ ಎಂದು ನಿರೀಕ್ಷಿಸಬಹುದೇನೋ.

ಕನ್ನಡದಲ್ಲೊಂದು ಪ್ರಯತ್ನ

ಮಕ್ಕಳಿಗಾಗಿ ಮಕ್ಕಳೇ ವರದಿ ಸಿದ್ಧಪಡಿಸುವ ಹಾಗೂ ಮಾಧ್ಯಮವೊಂದರ ಮೂಲಕ ಅದನ್ನು ಜನರಿಗೆ ತಲುಪಿಸುವ ಪ್ರಯತ್ನ ಕನ್ನಡದ ನೆಲದಲ್ಲಿ ಎರಡೂವರೆ ದಶಕಗಳ ಹಿಂದೊಮ್ಮೆ ನಡೆದಿತ್ತು. ಅದೊಂದು ಭಿತ್ತಿ ಪತ್ರಿಕೆ ಆಗಿತ್ತು. ಅದರ ಹೆಸರು ‘ಭೀಮ ಪತ್ರಿಕೆ’ ಎಂದಾಗಿತ್ತು. ಅದು ಒಂದು ಪುಟ ಇರುತ್ತಿತ್ತು. ಆ ಪತ್ರಿಕೆಯ ಸಂಪಾದಕರು ಮಕ್ಕಳೇ ಆಗಿರುತ್ತಿದ್ದರು. ತಮ್ಮ ಸಮಸ್ಯೆಗಳ ಬಗ್ಗೆ, ನಿರ್ದಿಷ್ಟ ಸಮಸ್ಯೆಯೊಂದರಿಂದ ಮುಕ್ತರಾಗುವ ಬಗೆಯ ಬಗ್ಗೆ ಮಕ್ಕಳೇ ಬರೆಯುತ್ತಿದ್ದರು. ಆದರೆ, ಬರವಣಿಗೆ ಹಾಗೂ ಪತ್ರಿಕೆಯ ವಿನ್ಯಾಸದಲ್ಲಿ ದೊಡ್ಡವರ ಮಾರ್ಗದರ್ಶನ ಇರುತ್ತಿತ್ತು.

ದುಡಿಯುವ ಮಕ್ಕಳ ಸಂಘಟನೆ ‘ಭೀಮ ಸಂಘ’ ಹಾಗೂ ಅದರ ಮಾತೃ ಸಂಸ್ಥೆ ‘ದಿ ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌’ (ಸಿಡಬ್ಲ್ಯೂಸಿ) ಸಂಸ್ಥೆಯು ಈ ಗೋಡೆಪತ್ರಿಕೆಯ ಹುಟ್ಟಿಗೆ ಕಾರಣವಾಗಿದ್ದವು. ‘1990ರಲ್ಲಿ ಬೆಂಗಳೂರಿನಲ್ಲಿ ಶುರುವಾದ ಈ ಪತ್ರಿಕೆಯನ್ನು ನಾವು ಕೆಲಸ ಮಾಡುತ್ತಿದ್ದ ಬೆಂಗಳೂರು, ಕುಂದಾಪುರ, ಶಿರಸಿ ಹಾಗೂ ಬಳ್ಳಾರಿಗೆ ತಲುಪಿಸುತ್ತಿದ್ದೆವು’ ಎಂದು ತಿಳಿಸಿದರು ಸಿಡಬ್ಲ್ಯೂಸಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ದಾಮೋದರ ಆಚಾರ್ಯ. ‘ಭೀಮ ಪತ್ರಿಕೆ’ ಈಗ ಇಲ್ಲ. ಐದು ವರ್ಷಗಳ ಹಿಂದೆ ಅದು ನಿಂತುಹೋಗಿದೆ.

‘ಪತ್ರಿಕೆ ಆರಂಭಿಸಿದಾಗ ಹಿರಿಯರ ಸಹಾಯ ಹೆಚ್ಚು ಇತ್ತು. ಕಾಲಕ್ರಮೇಣ ಮಕ್ಕಳೇ ಪತ್ರಿಕೆಯ ಬಹುತೇಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಮಕ್ಕಳದೇ ಆದ ಪತ್ರಿಕೆಯೊಂದು ಬೇಕು, ಅದರ ಹೂರಣ ಹೀಗೇ ಇರಬೇಕು ಎಂಬುದನ್ನು ತೀರ್ಮಾನಿಸುತ್ತಿದ್ದುದು ಮಕ್ಕಳೇ’ ಎನ್ನುತ್ತಾರೆ ಸಿಡಬ್ಲ್ಯೂಸಿಯ ಕವಿತಾ ರತ್ನಾ.

*

ಜಗತ್ತು ಗೋಜಲಾಗಿಬಿಟ್ಟಿದೆ. ಇದರ ನಡುವೆಯೇ ಮಕ್ಕಳು ಬೆಳೆಯುತ್ತಿದ್ದಾರೆ. ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ದೊಡ್ಡವರಿಗೆ ಸಮಯವಿಲ್ಲ. ಹಾಗಾಗಿ ನಾವು ಈ ಕೆಲಸಕ್ಕೆ ಕೈಹಾಕಿದ್ದೇವೆ. ಇದು ಮಕ್ಕಳು, ಮಕ್ಕಳಿಗಾಗಿ ರೂಪಿಸಿರುವ ಸುದ್ಧಿ ಸಂಸ್ಥೆ. ಇದರಲ್ಲಿ ಮೋಜು ಕೂಡ ಇದೆ.

–ಧೀರಜ್‌, ವಲೆಸ್ಕಾ (ಸ್ಕ್ರ್ಯಾಪಿ ನ್ಯೂಸ್‌ನ ಪುಟಾಣಿ ಸುದ್ದಿ ನಿರೂಪಕರು, ಮುಂಬೈ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.