ಸೋಮವಾರ, ಮಾರ್ಚ್ 8, 2021
24 °C

ಶ್ರುತಿ ಹೇಳಿದ ನೀಲಿ ಗುಳ್ಳೆನರಿ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರುತಿ ಹೇಳಿದ ನೀಲಿ ಗುಳ್ಳೆನರಿ ಕಥೆ

-ಶ್ರುತಿ ಹರಿಹರನ್‌

**

ಪುಟಾಣಿಗಳೇ,

ನಂಗೆ ಕಥೆಗಳು ಅಂದ್ರೆ ತುಂಬ ಇಷ್ಟ. ನನ್ನ ಅಜ್ಜಿ ನಂಗೆ ಪುರಾಣಗಳ ಕೃಷ್ಣ-ರಾಮನ ಕಥೆಗಳನ್ನು ತುಂಬಾ ತುಂಬಾ ಹೇಳ್ತಿದ್ರು. ನಮ್ಮ ಸ್ಕೂಲಲ್ಲಿ ರೇಣು ಆಂಟಿ ಅಂತ ಒಬ್ಬರು ಟೀಚರ್‌ ಇದ್ರು. ನಾನು ಕಲಿತ ಶಾಲೆಯಲ್ಲಿ ಟೀಚರ್‌ಗಳಿಗೆ 'ಆಂಟಿ' ಅಂತಲೇ ಕರೆಯುತ್ತಿದ್ದೆವು. ಆ ರೇಣು ಆಂಟಿ ನಮಗೆ ತರಗತಿ ಖಾಲಿ ಇದ್ದಾಗೆಲ್ಲ ಕಥೆ ಹೇಳ್ತಿದ್ರು. ಗ್ರೀಕ್‌ ಪುರಾಣ ಕಥೆಗಳ ಬಗ್ಗೆಯೆಲ್ಲ ಅವರಿಂದಲೇ ನಾನು ತಿಳಿದುಕೊಂಡಿದ್ದು. ಹೀಗೆ ತುಂಬ ಕಥೆಗಳನ್ನು ಕೇಳ್ಕೊಂಡೇ ನಾನು ಬೆಳ್ದಿದ್ದು.

ಇಂಥ ಕಥೆಗಳು ಹೇಳುವ ನೀತಿಪಾಠಗಳು ತುಂಬಾ ಮುಖ್ಯ. ಅವನ್ನು ನಾವೆಲ್ಲರೂ ಅರ್ಥಮಾಡ್ಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

ಈಗ ನಾನು ಹೇಳ್ತಿರೋದು ‘ನೀಲಿ ಗುಳ್ಳೆನರಿ ಕಥೆ’. ಇದನ್ನು ನಾನು ‘ಪಂಚತಂತ್ರದ ನೀತಿ ಕಥೆಗಳು’ ಪುಸ್ತಕದಲ್ಲಿ ಓದಿದ್ದು. ನಮ್ಮಲ್ಲಿ ‘ಅಲ್ಪನಿಗೆ ಅಧಿಕಾರ ಬಂದ್ರೆ ಅರ್ಧರಾತ್ರೀಲಿ ಕೊಡೆ ಹಿಡಿಸ್ಕೊಂಡ್ನಂತೆ’ ಅಂತೊಂದು ಗಾದೆ ಮಾತು ಇದೆಯಲ್ಲ. ಈ ಕಥೆಯೂ ಅಂಥದ್ದೇ ಘಟನೆಯ ಕುರಿತಾಗಿದ್ದು. ಸಾಮರ್ಥ್ಯ ಇಲ್ಲದವರಿಗೆ ಅಧಿಕಾರ ಸಿಕ್ಕರೆ ಅದರ ಪರಿಣಾಮ ಕೆಟ್ಟದಾಗಿಯೇ ಇರುತ್ತದೆ ಎಂಬುದು ಈ ಕಥೆಯ ನೀತಿ.

***

ಒಂದು ಗುಳ್ಳೆನರಿ ಕಾಡಿನಲ್ಲಿ ಒಂಟಿಯಾಗಿ ಬದುಕುತ್ತಿತ್ತು. ಅದು ತನ್ನೆಲ್ಲ ಬಳಗದಿಂದಲೂ ದೂರವಾಗಿತ್ತು. ಒಂದು ದಿನ ಅದು ಬೇಜಾರಿನಿಂದ ಮನಸ್ಸಿಗೆ ಬಂದಲ್ಲಿ ನಡೆದುಕೊಂಡು ಹೋಗುತ್ತಿತ್ತು. ಹಾಗೆ ನಡೆಯುತ್ತ ನಡೆಯುತ್ತ ಅದು ಕಾಡು ದಾಟಿ ನಾಡಿಗೆ ಬಂದುಬಿಡ್ತು. ಅಲ್ಲಿ ಅದನ್ನು ಕಂಡ ನಾಯಿಗಳು ಅಟ್ಟಿಸಿಕೊಂಡು ಬಂದವು. ನಾಯಿಗಳಿಂದ ತಪ್ಪಿಸಿಕೊಂಡು ಓಡಿ ಹೋಗುತ್ತ ದೋಭಿಯೊಬ್ಬನ ಮನೆಯೊಳಗೆ ನುಗ್ಗಿತು. ಅಲ್ಲಿ ದೋಭಿ ಒಂದು ದೊಡ್ಡ ಪಾತ್ರೆಯಲ್ಲಿ ಬಣ್ಣ ಇಟ್ಟು ಹೊರಗೆ ಹೋಗಿದ್ದ. ಈ ಗುಳ್ಳೆನರಿ ಓಡುತ್ತ ನೀಲಿ ಬಣ್ಣದ ಪಾತ್ರೆಯೊಳಕ್ಕೆ ಹೋಗಿ ಬಿದ್ದುಬಿಡ್ತು. ಅಲ್ಲಿಂದ ಹೇಗೋ ಎದ್ದು ಹೊರಬಂದಾಗ ಇಡೀ ಮೈ ನೀಲಿಬಣ್ಣ ಆಗಿ, ಗುಳ್ಳೆನರಿ ಎಂದು ಗುರ್ತೇ ಹಿಡಿಯಲಾಗದ ಸ್ಥಿತಿಯಲ್ಲಿತ್ತು. ಅದನ್ನು ನೋಡಿದ ನಾಯಿಗಳು ‘ಇದ್ಯಾವುದೋ ಬೇರೆ ಪ್ರಾಣಿ ಇರಬೇಕು’ ಎಂದು ಹೆದರಿ ಓಡಿಹೋದವು.

ನೀಲಿಬಣ್ಣದ ಗುಳ್ಳೆನರಿ ಕಾಡಿನೊಳಕ್ಕೆ ನಡೆದುಕೊಂಡುಬಂತು. ಅದನ್ನು ನೋಡಿದ ಎಲ್ಲ ಪ್ರಾಣಿಗಳು ‘ಅಯ್ಯೋ ಇದುವರೆಗೆ ಇಂಥ ಪ್ರಾಣಿಯನ್ನು ನೋಡಿಯೇ ಇಲ್ಲ. ಇದ್ಯಾವ್ದೋ ಬೇರೆ ಲೋಕದ ಪ್ರಾಣಿ ಇರಬೇಕು. ಎಷ್ಟು ಶಕ್ತಿವಂತನೋ ಏನೋ...’ ಎಂದು ಭಯಬಿದ್ದು ಓಡಿಹೋಗಲು ಶುರುಮಾಡಿದವು. ಇದನ್ನು ನೋಡಿದ ನರಿಯ ಮನಸಲ್ಲೊಂದು ಕೆಟ್ಟ ಆಲೋಚನೆ ಬಂತು.

ಓಡಿಹೋಗುತ್ತಿದ್ದ ಪ್ರಾಣಿಗಳನ್ನು ಕರೆದು ನಿಲ್ಲಿಸಿ ಅದು ಹೇಳಿತು. ‘ಎಲ್ಲರೂ ನಿಲ್ಲಿ. ಯಾರೂ ಭಯ ಬೀಳಬೇಕಾಗಿಲ್ಲ. ನಾನು ನಿಮಗೆ ಏನೂ ಅಪಾಯ ಮಾಡೋದಿಲ್ಲ. ಬ್ರಹ್ಮ ತನ್ನ ಕೈಗಳಿಂದ ನನ್ನನ್ನು ಸೃಷ್ಟಿ ಮಾಡಿದ್ದಾನೆ. ಭೂಮಿಯಲ್ಲಿ ಕಾಡನ್ನು ಆಳುವುದಕ್ಕೆ ಯಾರೂ ರಾಜ ಇಲ್ಲ. ನೀನು ಹೋಗಿ ಎಲ್ಲ ಪ್ರಾಣಿಗಳ ರಾಜನಾಗಿ ಅವರನ್ನು ನೋಡಿಕೋ ಎಂದು ಹೇಳಿ ಕಳಿಸಿದ್ದಾನೆ. ಇಂದಿನಿಂದ ನಾನು ನಿಮ್ಮೆಲ್ಲರ ರಾಜ. ನೀವು ನಾನು ಹೇಳಿದ ಹಾಗೆ ಕೇಳಬೇಕು’ ಎಂದು ಹೇಳಿತು. ನರಿಯ ಮಾತಿಗೆ ಎಲ್ಲ ಪ್ರಾಣಿಗಳೂ ಭಯದಿಂದಲೇ ಒಪ್ಪಿಗೆ ಸೂಚಿಸಿದವು.

ಅಂದಿನಿಂದ ನೀಲಿ ಗುಳ್ಳೆನರಿ ರಾಜನಾಗಿ ಬದುಕತೊಡಗಿತು. ಅದು ಎಲ್ಲಿಗೂ ಹೋಗುತ್ತಿರಲಿಲ್ಲ. ತನ್ನ ಮೈಬಣ್ಣದ ಗುಟ್ಟು ಗೊತ್ತಾದರೆ ಎಂಬ ಕಾರಣಕ್ಕೆ ಯಾವ ಪ್ರಾಣಿಗಳನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಕಾಡಿನ ಸಣ್ಣ ಸಣ್ಣ ಪ್ರಾಣಿಗಳು ಅದರ ಸೇವೆ ಮಾಡುತ್ತಿದ್ದವು. ಹುಲಿ, ಚಿರತೆಗಳಂಥ ಪ್ರಾಣಿಗಳು ದಿನವೂ ಬೇಟೆಯಾಡಿ ತಂದ ಮಾಂಸದಲ್ಲಿ ನರಿಗೂ ಪಾಲು ನೀಡುತ್ತಿದ್ದವು. ಹೀಗೆ ನರಿ ತುಂಬ ದಿನಗಳ ಕಾಲ ರಾಜನ ಹಾಗೆ ಬದುಕುತ್ತಿತ್ತು.

ಒಂದು ದಿನ ಸಂಜೆಯ ಹೊತ್ತಿಗೆ ಗುಹೆಯ ಮೇಲೆ ಕೂತಿದ್ದಾಗ ದೂರದಲ್ಲಿ ಒಂದಿಷ್ಟು ನರಿಗಳು ಒಟ್ಟಿಗೇ ಊಳಿಡುವ ಶಬ್ದ ಕೇಳಿತು. ಅದನ್ನು ಕೇಳಿದ ನೀಲಿ ನರಿಗೆ ತಾನೂ ಊಳಿಡಬೇಕು ಎಂಬ ಬಯಕೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ವೇಷ, ತಾನು ಇಷ್ಟು ದಿನ ಕಾಡಿನ ಪ್ರಾಣಿಗಳಿಗೆ ಮಾಡುತ್ತಿರುವ ಮೋಸ ಎಲ್ಲವನ್ನೂ ಮರೆತು ಜೋರಾಗಿ ಊಳಿಡತೊಡಗಿತು.

ಊಳಿಡುವುದು ಕೇಳಿ ಕಾಡಿನ ಉಳಿದ ಪ್ರಾಣಿಗಳಿಗೆಲ್ಲ ಇದು ಬೇರೆ ಲೋಕದ ಪ್ರಾಣಿ ಅಲ್ಲ, ಸಾಮಾನ್ಯ ಗುಳ್ಳೆನರಿ ಎಂದು ಗೊತ್ತಾಗಿಬಿಡ್ತು. ನರಿಗೆ ತನ್ನ ತಪ್ಪಿನ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ಉಳಿದ ಪ್ರಾಣಿಗಳಿಗೆ ಕೋಪ ಏರಿತ್ತು. ಎಲ್ಲರೂ ಸೇರಿಕೊಂಡು ಗುಳ್ಳೆನರಿಯನ್ನು ಚೆನ್ನಾಗಿ ಥಳಿಸಿ, ಸಮೀಪದ ನದಿಯ ನೀರಿನಲ್ಲಿ ತೊಳೆದವು. ನರಿಯ ಮೈಮೇಲಿನ ಬಣ್ಣ ಕರಗಿ ಮೊದಲಿನ ರೂಪಕ್ಕೆ ಬಂತು... ನರಿಗಳು ಕಾಡಿನಿಂದ ಗುಳ್ಳೆನರಿಯನ್ನು ಹೊರಗೆ ಹಾಕಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.