ಶುಕ್ರವಾರ, ಫೆಬ್ರವರಿ 26, 2021
28 °C
ಒಂಟಿ ಮನೆಗೆ ಮುಸುಕುಧಾರಿಗಳು

ನಕ್ಸಲರ ಶಂಕೆ: ಪೊಲೀಸರಿಂದ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಸಲರ ಶಂಕೆ: ಪೊಲೀಸರಿಂದ ತನಿಖೆ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಶುಕ್ರವಾರ ಒಂಟಿ ಮನೆಗೆ ಮುಸುಕುಧಾರಿ ವ್ಯಕ್ತಿಗಳು ಭೇಟಿ ನೀಡಿರುವುದು ಆತಂಕ ಸೃಷ್ಟಿಸಿದ್ದು, ನಕ್ಸಲ್‌ ಚಲನವಲನದ ಶಂಕೆಯ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಕರ್ರಗಿಹುಂಡಿ ಗ್ರಾಮದ ಕಾಂಗ್ರೆಸ್ ಮುಖಂಡ ಮಾದೇಶ್‌ ಅವರ ಮನೆಗೆ ಮಧ್ಯಾಹ್ನ ಮೂವರು ಮುಸುಕುಧಾರಿಗಳು ಬಂದಿದ್ದಾರೆ. ಈ ವೇಳೆ ಮನೆಯವರೆಲ್ಲರೂ ಸಮೀಪದ ಎಲಚಟ್ಟಿ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿ ಕೆಲಸಕ್ಕಿದ್ದ ಗಿರಿಜನ ಮಹಿಳೆ ಶಾಂತಿ ಬಳಿ ಮನೆಯ ಕೀಲಿಕೈ ಕೊಡುವಂತೆ ಕೇಳಿದ್ದಾರೆ. ತಮ್ಮ ಬಳಿ ಕೀ ಇಲ್ಲ. ಮಾಲೀಕರು ಬಂದ ನಂತರ ಬನ್ನಿ ಎಂದು ಅವರು ಪ್ರತಿಕ್ರಿಯಿಸಿದ ಬಳಿಕ ಹೊರಟು ಹೋಗಿದ್ದಾರೆ.

ಮನೆಗೆ ಮರಳಿದಾಗ ವಿಷಯ ತಿಳಿದ ಮಾದೇಶ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

‘ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಗಳು ಕಣ್ಣು ಮಾತ್ರ ಕಾಣಿಸುವಂತೆ ಮುಸುಕು ಹಾಕಿಕೊಂಡಿದ್ದರು. 5–10 ನಿಮಿಷ ಅಲ್ಲಿಯೇ ಇದ್ದು, ಮತ್ತೆ ಬರ್ತೀವಿ. ನಾವು ಬಂದಿದ್ದನ್ನು ಯಾರಿಗೂ ಹೇಳಬೇಡ ಎಂದು ಕಾಡಿನ ಭಾಗಕ್ಕೆ ತೆರಳಿದ್ದಾಗಿ ಕೆಲಸದಾಕೆ ತಿಳಿಸಿದಳು’ ಎಂದು ಮಾದೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ನಕ್ಸಲ್‌ ಚಟುವಟಿಕೆಗಳು ನಡೆಯುತ್ತಿವೆಯೇ ಎಂಬುದರ ಬಗ್ಗೆ ತಿಳಿದಿಲ್ಲ. ಕಳ್ಳತನ ಮಾಡಲು ಜಾಗ ನೋಡಿಕೊಂಡು ಹೋಗಲೂ ಬಂದಿರಬಹುದು. ಅವರ ಬಳಿ ಯಾವ ಮಾರಕಾಸ್ತ್ರಗಳೂ ಇರಲಿಲ್ಲವಂತೆ’ ಎಂದು ಅವರು ಹೇಳಿದರು.

‘ಮುಸುಕುಧಾರಿಗಳು ನಕ್ಸಲರು ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಆಯಾಮದಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಡಿವೈಎಸ್‌ಪಿ ಎಸ್‌.ಇ.ಗಂಗಾಧರಸ್ವಾಮಿ ತಿಳಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳು, ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.