ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನದ ಬೊಬ್ಬೆಗೆ ಅರ್ಥವಿಲ್ಲ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ಖಾಸಗಿತನಕ್ಕೆ ಧಕ್ಕೆ ತರುತ್ತದೆಂಬ ಆರೋಪ ಹೊತ್ತಿರುವ ಆಧಾರ್‌ ಬೇಕೇ?
ಅನುಮಾನವೇ ಬೇಡ. ಆಧಾರ್ ಬೇಕೇ ಬೇಕು. ಇದರಲ್ಲಿ ಏನು ತಪ್ಪಿದೆ? ಪ್ರತಿಯೊಂದನ್ನೂ ತಪ್ಪು ಎನ್ನುವ ಮನಸ್ಥಿತಿ ಬಂದುಬಿಟ್ಟರೆ ಒಂದು ವ್ಯವಸ್ಥೆ ಮುಂದುವರಿಯುವುದಾದರೂ ಹೇಗೆ?

ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುವಾಗ ನಾವು ರಕ್ಷಣಾ ಇಲಾಖೆಗೆ ಎಷ್ಟು ಖರ್ಚು ಮಾಡುತ್ತಿದ್ದೇವೆ ಎಂಬುದನ್ನು ನೋಡಬೇಕು. ಇವತ್ತು ದೇಶಕ್ಕೆ ಯಾವ ದಿಕ್ಕಿನಲ್ಲಿ ಯಾವ ರೀತಿಯ ಗಂಡಾಂತರ ಇದೆ ಎಂದು ಹೇಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಆಧಾರ್ ಅತ್ಯಂತ ಅವಶ್ಯ.

* ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ ಮೇಲಾದರೂ ಸರ್ಕಾರ ನಿಲುವು ಬದಲಿಸಬಹುದಿತ್ತಲ್ಲವೇ?
ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಆದರೆ, ಖಾಸಗಿತನ ಎಂದರೆ ಏನು ಎಂಬುದೇ ಇನ್ನೂ ನಮ್ಮ ಮಿತಿಗೆ ದಕ್ಕಿಲ್ಲ. ಇವೆಲ್ಲಾ ಸಂಪೂರ್ಣ ಸಾಂದರ್ಭಿಕ ಜಿಜ್ಞಾಸೆಗೆ ಒಳಪಟ್ಟ ವಿಚಾರಗಳು. ಇದನ್ನೆಲ್ಲಾ ಇಂತಿಷ್ಟೇ ವ್ಯಾಪ್ತಿಯಲ್ಲಿ ಹೀಗೇ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಖಾಸಗಿತನ ಹಾಗೂ ಆಧಾರ್ ನಡುವೆ ಸಂಘರ್ಷವಿಲ್ಲ. ಖಾಸಗಿತನ ಎಂಬುದು ಸಮುದ್ರದಷ್ಟು ವಿಶಾಲವಾದುದು. ಒಳಗೆ ಹೋದ ಮೇಲೆಯೇ ಅದರಲ್ಲಿ ಏನೇನಿದೆ ಎಂಬುದು ಗೊತ್ತಾಗುತ್ತದೆ.

* ಮುಕ್ತ ಸ್ವಾತಂತ್ರ್ಯಕ್ಕೆ ಆಧಾರ್‌ ಧಕ್ಕೆ ತರುವುದಿಲ್ಲವೇ?
ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ನಮಗೆ ಇಷ್ಟವಿರಲಿ ಅಥವಾ ಬಿಡಲಿ ಇವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಧಾರ್‌ ಕೂಡಾ ಇಂತಹದೇ ಒಂದು ಅನಿವಾರ್ಯತೆ. ನೀವು ನನಗೊಂದು ದೂರವಾಣಿ ಕರೆ ಮಾಡುತ್ತೀರಿ. ಅದು ನಾಳೆ ಟ್ಯಾಪ್‌ ಆಗೋದಿಲ್ಲ ಎಂದು ಹೇಗೆ ಭಾವಿಸುತ್ತೀರಿ. ಖಾಸಗಿತನ ನಮ್ಮ ಮೂಲಭೂತ ಹಕ್ಕು. ಆ ಬಗ್ಗೆ ಯಾವ ಅನುಮಾನವೂ ಬೇಡ. ಆದರೆ, ಪ್ರತಿಯೊಂದಕ್ಕೂ ಖಾಸಗಿತನ, ಖಾಸಗಿತನ ಎಂದು ಬೊಬ್ಬೆ ಹಾಕುವುದು ಅರ್ಥವಿಲ್ಲದ್ದು. 

* ಯಾವ ಕಾರಣಗಳಿಂದ ಇದನ್ನು ಸಮರ್ಥಿಸುತ್ತೀರಿ?
ಆಧಾರ್‌ ಸಂಖ್ಯೆಯಿಂದ ಬಹಳಷ್ಟು ಪ್ರಯೋಜನವಿದೆ. ಅದು ನಮಗೆ ಅರ್ಥವಾಗುತ್ತಿಲ್ಲ. ಹಿಂದೆ ವಿಮಾನ ನಿಲ್ದಾಣಕ್ಕೆ ಹೋದರೆ ಗುರುತಿನ ಚೀಟಿ ಕೇಳುತ್ತಿದ್ದರು. ಈಗ ಅದ್ಯಾವುದೂ ಬೇಕಿಲ್ಲ. ನೀವು ಹೆಬ್ಬೆರಳು ತೋರಿಸಿದರೆ ಸಾಕು. ಅಗತ್ಯ ಮಾಹಿತಿ ಸಿಕ್ಕಿಬಿಡುತ್ತದೆ. ನೋಡಿ, ಪ್ರತಿ ನಾಗರಿಕನಿಗೆ ನೀಡುವ ಗುರುತಿನ ಸಂಖ್ಯೆಯಿಂದ ಎರಡು, ಮೂರು ಗುರುತಿನ ಚೀಟಿ ಇಟ್ಟುಕೊಂಡು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಬಹುದು.

* ಮನುಷ್ಯರ ಮುಕ್ತ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ಅನ್ನಿಸುವುದಿಲ್ಲವೇ?
ಇವೆಲ್ಲಾ ಸುಮ್ಮನೇ ಯಾರೊ ಕೆಲವರು ಸೃಷ್ಟಿಸಿರುವ ತಪ್ಪು ಕಲ್ಪನೆಗಳು. ನೀವೆಲ್ಲಾ ಶಾಲೆ ಕಾಲೇಜುಗಳಲ್ಲಿ, ಬ್ಯಾಂಕುಗಳಲ್ಲಿ, ಕೋರ್ಟ್‌, ಆಸ್ಪತ್ರೆಗಳಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಸಂಕೋಚ ಇಲ್ಲದೆ ಹಂಚಿಕೊಳ್ಳುವುದಿಲ್ಲವೇ? ಅದೇ ರೀತಿ ಇದೂ ಕೂಡಾ.

ಹಸುವನ್ನು ಒಂದು ಕೊಟ್ಟಿಗೆಯಿಂದ ಇನ್ನೊಂದು ಕೊಟ್ಟಿಗೆಗೆ ಕಟ್ಟಿದಾಗ ಅದು ಕೆಲವು ದಿನ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಕೊಸರಾಡುತ್ತದೆ. ಅದಕ್ಕೆ ಹಳೆಯ ಜಾಗದ ನೆನಪೇ ಕಾಡುತ್ತಿರುತ್ತದೆ. ಹೊಸ ಗೂಟಕ್ಕೆ ಹೊಂದಿಕೊಳ್ಳಲು ಕೆಲವು ದಿನ ಬೇಕಾಗುತ್ತದೆ. ಇದೂ ಕೂಡಾ ಹಾಗೆಯೇ...!

* ಭಾರತ ಸರ್ಕಾರ ಅನುದಾನಗಳ ಸೋರಿಕೆ ತಡೆಗಟ್ಟಲು ಆಧಾರ್‌ ಬಳಸುತ್ತೇವೆ ಎಂದು ಹೇಳಿತ್ತು. ಆದರೆ ಈಗ ಇದನ್ನು ಮೊಬೈಲ್‌, ಬ್ಯಾಂಕು, ಆಹಾರ ಪಡಿತರ ಚೀಟಿ, ವಿಮೆ, ಆಸ್ತಿ ನೋಂದಣಿಗಳಂತಹ ಸಂಗತಿಗಳಿಗೂ ಲಿಂಕ್‌ ಮಾಡಲಾಗುತ್ತಿದೆಯಲ್ಲಾ?
ನಮಗೆ ಅರಿವಿಲ್ಲದೆಯೇ ನಾವು ಬೇಕಾದಷ್ಟು ಮಾಹಿತಿಯನ್ನು ಯಾವ್ಯಾವುದೊ ಕಡೆ ಹಂಚಿಕೊಂಡಿರುತ್ತೇವೆ. ಹೀಗಿರುವಾಗ ಕಾನೂನುಬದ್ಧವಾಗಿ ಒಬ್ಬ ವ್ಯಕ್ತಿಯ ದಾಖಲೆಗಳನ್ನು ಕೊಡಿ ಎಂದು ಸರ್ಕಾರ ಕೇಳುವುದರಲ್ಲಿ ತಪ್ಪೇನಿದೆ?

ಆರ್ಥಿಕ ಕಾರಣ ಮತ್ತು ಭದ್ರತೆಯ ದೃಷ್ಟಿಯಿಂದ ಆಧಾರ್ ತುಂಬಾ ಅವಶ್ಯವಿದೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇದು ಪ್ರತಿಯೊಬ್ಬರ ಗುರುತನ್ನು ನಿರ್ಧರಿಸುವಂತಹುದು. ನಾವಿಂದು ನಾಗಾಲೋಟದಲ್ಲಿ ಮುಂದುವರಿದಿದ್ದೇವೆ. ಕಾಲಕಾಲಕ್ಕೆ ಅನುಷ್ಠಾನಗೊಳ್ಳುವ ಕಾನೂನಾತ್ಮಕ ಬೆಳವಣಿಗೆ ಅಥವಾ ವ್ಯವಸ್ಥೆಗಳನ್ನು ಇತ್ತ ಎಡವೂ ಅಲ್ಲದ ಅತ್ತ ಬಲವೂ ಅಲ್ಲದ ಮಧ್ಯಮ ಮನಸ್ಥಿತಿಯಲ್ಲಿ ಒಪ್ಪಿಕೊಂಡು ಮುನ್ನಡೆಯಬೇಕು.

* ಇದು ದುರುಪಯೋಗ ಆಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ?
ಕಾನೂನು ಯಾವಾಗಲೂ ನಿಂತ ನೀರಲ್ಲ. ಸಂದರ್ಭಕ್ಕೆ ತಕ್ಕಂತೆ ಸುಧಾರಿಸುತ್ತಲೇ ಇರುತ್ತದೆ. ದುರುಪಯೋಗ ಆಗದೇ ಇರುವ ಯಾವುದಾದರೂ ವಸ್ತು, ವಿಷಯ ಇದ್ದರೆ ಹೇಳಿ ನೋಡೋಣ.

* ನೀವು ಹೇಳುವುದು ನೋಡಿದರೆ ನಮ್ಮ ಸ್ವಾತಂತ್ರ್ಯ ಎಲ್ಲಿ ಹರಣವಾಗುವುದೋ ಎಂಬ ಆತಂಕ ಕಾಡುತ್ತದೆ?
ಆ ಕಾಲ ಹೋಯಿತು... (ನಗು)...

* ಸರ್ಕಾರ ಹೇಳಿದ್ದೊಂದು ಮಾಡುತ್ತಿರುವುದೇ ಇನ್ನೊಂದು ಅಂತಾ ಅನ್ನಿಸುವುದಿಲ್ಲವೇ?
ಖಂಡಿತಾ ಹಾಗೇನಿಲ್ಲ. ಖಾಸಗಿತನವನ್ನು ನೀವು ಯಾವತ್ತೂ ಹೀಗೇ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೂ ಸಮುದ್ರವನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲವೊ ಅಲ್ಲಿಯವರೆಗೂ ಖಾಸಗಿತನವನ್ನೂ ವ್ಯಾಖ್ಯಾನಿಸಲು ಆಗುವುದಿಲ್ಲ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT