ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಪ್ರವೇಶಿಸಿದ ಬಿಳಿ ನೊಣಗಳ ಸೇನೆ !

ಕರಾವಳಿ ಪ್ರವೇಶಿಸಿದ ಮಧ್ಯ ಅಮೆರಿಕ ಮೂಲದ ಸಣ್ಣ ಗಾತ್ರದ ಬಿಳಿ ನೊಣ ಸೇನೆ!
Last Updated 12 ನವೆಂಬರ್ 2017, 13:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ತೆಂಗು, ಬಾಳೆ, ಹಣ್ಣು– ತರಕಾರಿಗಳ ಬೆಳೆ ಮತ್ತೊಮ್ಮೆ ಕೀಟ ಬಾಧೆಯ ಅಪಾಯಕ್ಕೆ ಸಿಲುಕಿದೆ. ಮಧ್ಯ ಅಮೆರಿಕ ಮೂಲದ ಸಣ್ಣ ಗಾತ್ರದ ಬಿಳಿ ನೊಣಗಳ ‘ದೊಡ್ಡ ಸೇನೆ’ಯೇ ರಾಜ್ಯದ ಕರಾವಳಿ ಪ್ರದೇಶದ ತೆಂಗು ಬೆಳೆಯನ್ನು ಆಕ್ರಮಿಸಿವೆ.

2016 ರಲ್ಲಿ ತಮಿಳುನಾಡಿಗೆ ಪ್ರವೇಶಿಸಿದ ಈ ನೊಣಗಳು ( Aleurodicus rugioperculatus) ಅಲ್ಲಿನ ಬಹುತೇಕ ತೆಂಗಿನ ಮರಗಳನ್ನು ಆವರಿಸಿವೆ. ಅದೇ ನೊಣಗಳು ಈಗ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೂ ಪ್ರವೇಶಿಸಿವೆ. ಇನ್ನು ಆರು ತಿಂಗಳಲ್ಲಿ ಇಡೀ ರಾಜ್ಯದ ತೆಂಗು, ಬಾಳೆ ಅಲ್ಲದೆ, ಹಣ್ಣು, ತರಕಾರಿಯ ಬೆಳೆಗಳನ್ನೂ ವ್ಯಾಪಿಸುವ ಸಾಧ್ಯತೆ ಇದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧೀನ ಸಂಸ್ಥೆ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ನಿರ್ದೇಶಕಿ ಡಾ. ಚಂದೀಶ್ ಆರ್‌. ಬಲ್ಲಾಳ್ ‘ಪ್ರಜಾವಾಣಿ’ಗೆ ಈ ಕುರಿತು ವಿವರ ನೀಡಿದ್ದಾರೆ.

‘ತೆಂಗಿನ ಮರಗಳು ಮತ್ತು ಇತರ ಹಣ್ಣು– ತರಕಾರಿ ಸಸ್ಯಗಳ ಮೇಲೆ ಬಿಳಿ ಹಿಟ್ಟು ಎರಚಿದಂತೆ ಕಾಣುವ ಈ ಕೀಟಗಳು ಅತ್ಯಂತ ಆಕ್ರಮಣಕಾರಿ. ಇವು ತ್ವರಿತಗತಿಯಲ್ಲಿ ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತಾ ಸಾಗುತ್ತವೆ. ಮಧ್ಯ ಅಮೆರಿಕದಿಂದ ತೆಂಗು ಮತ್ತು ಅಡಿಕೆ ಸಸ್ಯಗಳ ಮಾದರಿಯ ಅಲಂಕಾರಿಕ ಸಸ್ಯಗಳ ಮೂಲಕ ಈ ಕೀಟಗಳು ಭಾರತಕ್ಕೆ ಕಾಲಿಟ್ಟಿವೆ. ತಮಿಳುನಾಡಿನ ಪೊಲ್ಲಾಚಿಯಲ್ಲಿ ಮೊದಲು ಕಾಣಿಸಿಕೊಂಡಿವೆ’ ಎಂದು ಅವರು ತಿಳಿಸಿದರು.

‘ಈ ಕೀಟಗಳಿಗೆ  ಹೆಚ್ಚು ದೂರ ಹಾರುವ ಸಾಮರ್ಥ್ಯ ಇಲ್ಲದಿದ್ದರೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹರಡುತ್ತಿವೆ. ಇದಕ್ಕೆ ಕಾರಣ ಮುಂಗಾರು ಮತ್ತು ಆ ಬಳಿಕ ರಾಜ್ಯದಲ್ಲಿ ಪ್ರಬಲವಾಗಿ ಬೀಸುತ್ತಿರುವ ಗಾಳಿಯ ಮೂಲಕ ಹಬ್ಬುತ್ತಿವೆ’ ಎಂದು ಈ ಕುರಿತು ಅಧ್ಯಯನ ನಡೆಸಿರುವ ಕೃಷಿ ಕೀಟ ಸಂಪನ್ಮೂಲ ಬ್ಯೂರೊ ಪ್ರಧಾನ ಕೀಟ ವಿಜ್ಞಾನಿ ಡಾ. ಶೈಲೇಶ್‌ ವಿವರಿಸಿದರು.

‘ಈ ಕೀಟಗಳ ಆಕ್ರಮಣಕ್ಕೆ ಒಳಗಾಗುವ ತೆಂಗಿನ ಮರಗಳ ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವು ರಸ ಹೀರುವ ಕೀಟಗಳು. ಮರದ ಮೇಲೆ ಕಪ್ಪು ಬಣ್ಣದ ಬೂಸ್ಟ್‌ ಬೆಳೆಯುತ್ತದೆ. ಇದರಿಂದ ತೆಂಗಿನ ಮರದ ಮೂಲ ಸೊಗಸು ಕೆಟ್ಟು ಹೋಗುತ್ತದೆ. ಸದ್ಯಕ್ಕೆ ಎಳನೀರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದು ಕಂಡು ಬಂದಿಲ್ಲ. ಆದರೆ, ತೆಂಗಿನ ಮರ ತನ್ನ ಸ್ವರೂಪ ಕಳೆದುಕೊಳ್ಳುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದರು.

ಕೀಟ ನಾಶಕ ಬಳಸಬೇಡಿ: ‘ಇದೇ ಮಾದರಿಯ ಬಿಳಿ ಬಣ್ಣದ ನೊಣವೊಂದು ಈಗಾಗಲೇ ರಾಜ್ಯದಲ್ಲಿ ಇದೆ. ಈಗ ಬಂದಿರುವ ಬಿಳಿ ನೊಣ ಬೇರೆಯದು. ಕೃಷಿ ಇಲಾಖೆ ಅಧಿಕಾರಿಗಳು ಎರಡೂ ಒಂದೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದು ಸರಿಯಲ್ಲ. ಎರಡೂ ಬೇರೆ ಜಾತಿಯ ಕೀಟಗಳು. ಈ ಹರಡುತ್ತಿರುವ ಕೀಟಗಳಿಗೆ ಯಾವುದೇ ರೀತಿಯ ಕೀಟನಾಶಕಗಳನ್ನು ಬಳಸಬಾರದು. ಇದನ್ನು ಹತೋಟಿಗೆ ತರುವ ಎರಡು ವಿಶೇಷ ಬಗೆಯ ಕೀಟಗಳು (Encarsia dispersa ಮತ್ತು  Encarsia gudelopae) ಆ ನೊಣಗಳ ಜತೆಗೆ ಇವೆ. ಇವು ಪರಿಣಾಮಕಾರಿಯಾಗಿ ಹತೋಟಿ ಮಾಡಬಲ್ಲವು’ ಎಂದು ಶೈಲೇಶ್‌ ತಿಳಿಸಿದರು.

‘ಒಂದು ವೇಳೆ ಕೀಟ ನಾಶಕ ಬಳಸಿದರೆ, ಹತೋಟಿ ಮಾಡುವ ರೈತ ಮಿತ್ರ ಕೀಟಗಳು ನಾಶಗೊಳ್ಳುತ್ತವೆ. ಆಗ ನೊಣಗಳನ್ನು ಹತೋಟಿಗೆ ತರುವುದು ಕಷ್ಟ. ನೊಣಗಳು ಮತ್ತಷ್ಟು ವ್ಯಾಪಕಗೊಳ್ಳುತ್ತವೆ. ನೀರನ್ನು ಎರಚಿ ತೆಂಗಿನ ಮರಗಳಿಗೆ ಅಂಟಿರುವ ನೊಣಗಳನ್ನು ಸ್ವಚ್ಛಗೊಳಿಸುವುದು ಸೂಕ್ತ’ ಎಂದು ಬಲ್ಲಾಳ್‌ ಹೇಳಿದರು.

ವಿವರಗಳಿಗೆ ನ್ಯಾಷನಲ್‌ ಬ್ಯುರೊ ಆಫ್‌ ಅಗ್ರಿಕಲ್ಚರಲ್‌ ಇನ್‌ಸೆಕ್ಟ್‌ ರಿಸೋರ್ಸಸ್‌– ದೂರವಾಣಿ 080–23414220 ಸಂಪರ್ಕಿಸಬಹುದು.

***

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಮೀಕ್ಷೆ:

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ತಜ್ಞರು ತಣ್ಣೀರು ಬಾವಿ, ಪಣಂಬೂರು, ಸುರತ್ಕಲ್‌, ಮುಲ್ಕಿ, ಉಚ್ಚಿಲ, ಪಡುಬಿದ್ರಿ, ಮಲ್ಪೆ, ಬೈಂದೂರು, ಸೇಂಟ್‌ಮೇರಿಸ್‌ನಲ್ಲಿ ತೆಂಗು, ಬಾಳೆಗಳ ಸಮೀಕ್ಷೆ ನಡೆಸಿದ್ದು, ಬಿಳಿ ನೊಣಗಳ ಹಾವಳಿ ತೀವ್ರ ಸ್ವರೂಪದ್ದಾಗಿದೆ.

ಹಳೆ ಮೈಸೂರು ಭಾಗದ ಮೇಲೂ ನಿಗಾ:
ತೆಂಗು ಬೆಳೆಯುವ ಪ್ರದೇಶಗಳಾದ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ರಂಗನ ತಿಟ್ಟು, ಶ್ರೀರಂಗ ಪಟ್ಟಣ, ನಾಗನಹಳ್ಳಿ ಪ್ರದೇಶಗಳ ತೆಂಗಿನ ತೋಟಗಳ ಮೇಲೆ ನಿಗಾ ಇಡಲಾಗಿದೆ.

ಯಾವ್ಯಾವ ಬೆಳೆ ಮೇಲೆ ದಾಳಿ:
ತೆಂಗು, ಬಾಳೆ, ಮಾವು, ಸಪೋಟ, ಬಾದಾಮಿ, ಸೀಬೆ, ಹಲಸು, ಲಿಂಬೆ, ಅಲಂಕಾರಿಕ ಸಸ್ಯಗಳ ಮೇಲೆ ಕೀಟಗಳ ದಾಳಿ ತೀವ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT