ಮಂಗಳವಾರ, ಮಾರ್ಚ್ 2, 2021
31 °C
ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಅರ್ಧಶತಕದ ಪುಳಕ

ಲಂಕಾ ಭರ್ಜರಿ ‘ಅಭ್ಯಾಸ’

ಪಿಟಿಐ Updated:

ಅಕ್ಷರ ಗಾತ್ರ : | |

ಲಂಕಾ ಭರ್ಜರಿ ‘ಅಭ್ಯಾಸ’

ಕೋಲ್ಕತ್ತ: ಮಂಡಳಿ ಅಧ್ಯಕ್ಷರ ಇಲೆವನ್‌ ಎದುರು ಇಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ತಂಡದವರು ಉತ್ತಮ ಮೊತ್ತ ಪೇರಿಸಿದ್ದಾರೆ. ಮೊದಲ ದಿನದಾಟದ ಮುಕ್ತಾಯಕ್ಕೆ ತಂಡ 88 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 411 ರನ್‌ ಗಳಿಸಿದೆ. ನಾಲ್ವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಟಾಸ್ ಗೆದ್ದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಶ್ರೀಲಂಕಾದ ಆರಂಭಿಕ ಜೋಡಿ ಸದೀರ ಸಮರವಿಕ್ರಮ ಮತ್ತು ದಿಮುತ್ ಕರುಣರತ್ನೆ ಮಂಡಳಿ ಅಧ್ಯಕ್ಷರ ಇಲೆವನ್‌ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 134 ರನ್ ಸೇರಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಸದೀರ 77 ಎಸೆತಗಳಲ್ಲಿ 74 ರನ್‌ ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ ಒಟ್ಟು 13 ಬೌಂಡರಿಗಳು ಇದ್ದವು.

ದಿಮುತ್‌ ಕರುಣರತ್ನೆ 62 ಎಸೆತಗಳಲ್ಲಿ 50 ರನ್‌ ಗಳಿಸಿದರು. ಅವರು ಏಳು ಬೌಂಡರಿಗಳು ಬಾರಿಸಿದರು. ಆದರೆ ಈ ಸಂದರ್ಭದಲ್ಲಿ ಗಾಯಗೊಂಡು ಕ್ರೀಸ್ ತೊರೆದರು. ಲಾಹಿರು ತಿರಿಮನ್ನೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ನಂತರ ಬಂದ ಏಂಜೆಲೊ ಮ್ಯಾಥ್ಯೂಸ್‌ ಮಿಂಚಿದರು. ನಾಯಕ ದಿನೇಶ್ ಚಾಂದಿಮಲ್ ಜೊತೆಗೂಡಿ ಅವರು ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆದರೆ ಇವರಿಬ್ಬರೂ ಗಾಯಗೊಂಡು ಪೆವಿಲಿಯನ್‌ಗೆ ಮರಳಿದರು.

ಡಿಕ್ವೆಲ್ಲಾ ಸ್ಫೋಟಕ ಬ್ಯಾಟಿಂಗ್‌

ಎರಡು ವಿಕೆಟ್ ಕಳೆದುಕೊಂಡು, ಮೂವರು ಗಾಯಗೊಂಡು ವಾಪಸಾದಾಗ ಕ್ರೀಸ್‌ಗೆ ಬಂದ ವಿಕೆಟ್ ಕೀಪರ್‌ ನಿರೋಷನ್‌ ಡಿಕ್ವೆಲ್ಲಾ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಉತ್ತಮ ಮೊತ್ತದ ಕಾಣಿಕೆ ನೀಡಿದರು. 59 ಎಸೆತಗಳಲ್ಲಿ ಅವರು 73 ರನ್ ಗಳಿಸಿದರು. 13 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ದಿಲ್ರುವಾನ್ ಪೆರೇರ 44 ಎಸೆತಗಳಲ್ಲಿ 48 ರನ್ ಸಿಡಿಸಿದರು. ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು.

ಅಂಗಣಕ್ಕೆ ನುಗ್ಗಿದ ಬೀದಿ ನಾಯಿ

ಜಾಧವಪುರ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಡುವೆ ಬೀದಿ ನಾಯಿ ಅಂಗಣಕ್ಕೆ ನುಗ್ಗಿತ್ತು.

ಸಂಕ್ಷಿಪ್ತ ಸ್ಕೋರ್‌ 

ಶ್ರೀಲಂಕಾ: 88 ಓವರ್‌ಗಳಲ್ಲಿ 6ಕ್ಕೆ 411 (ಸದೀರ ಸಮರವಿಕ್ರಮ 74, ದಿಮುತ್ ಕರುಣರತ್ನೆ 50, ಏಂಜೆಲೊ ಮ್ಯಾಥ್ಯೂಸ್ 54, ನಿರೋಷನ್ ಡಿಕ್ವೆಲ್ಲಾ ಬ್ಯಾಟಿಂಗ್‌ 73, ದಿಲ್ರುವಾನ್ ಪೆರೇರ 48, ರೋಷನ್ ಸಿಲ್ವಾ ಬ್ಯಾಟಿಂಗ್‌ 36; ಸಂದೀಪ್ ವಾರಿಯರ್ 60ಕ್ಕೆ2, ಆಕಾಶ್‌ ಭಂಡಾರಿ 111ಕ್ಕೆ2).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.