7

ಹೊಂಜು: ಹಳೆ ಮದ್ದು ಪರಿಹಾರವಲ್ಲ

ಶೇಖರ್‌ ಗುಪ್ತ
Published:
Updated:
ಹೊಂಜು: ಹಳೆ ಮದ್ದು ಪರಿಹಾರವಲ್ಲ

ನಮ್ಮ ಮನೆಯಲ್ಲಿ ಪುಟ್ಟ ನಾಯಿ ಮರಿ ಇದೆ. ಪುಸ್ತಕ ಕಪಾಟಿನ ಕೆಳಭಾಗದಲ್ಲಿ ಇರುವ ಪುಸ್ತಕಗಳನ್ನು ಚೂರು ಮಾಡಲು ಮುಂದಾಗುವುದನ್ನು ಬಿಟ್ಟರೆ ಅದು ಯಾವತ್ತೂ ಆಹಾರಕ್ಕಾಗಿ ಬೇಟೆ ಆಡುವುದಿಲ್ಲ. ಯಾರಿಗೂ ತೊಂದರೆಯನ್ನೂ ಕೊಡುವುದಿಲ್ಲ. ರಾತ್ರಿಯಾಗುತ್ತಿದ್ದಂತೆ ಅಡುಗೆ ಮನೆಯಲ್ಲಿ ಅಪರೂಪಕ್ಕೆ ಕಾಣಸಿಗುವ ಇಲಿ ಜತೆ ಚೆಲ್ಲಾಟ ಆಡಲು ಮಾತ್ರ ಮುಂದಾಗುತ್ತದೆ. ಇಲಿ ಕಣ್ಣಿಗೆ ಬೀಳುತ್ತಿದ್ದಂತೆ ಅದರ ಹಿಂದೆ ಓಡುತ್ತದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಇಲಿ ಅಡುಗೆ ಅನಿಲ ಸಿಲಿಂಡರ್‌ನ ಹಿಂದೆ ಅವಿತುಕೊಳ್ಳುತ್ತದೆ. ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗುವ ನಾಯಿ ಮರಿ, ಗಾಬರಿಯಿಂದ ಒದ್ದಾಡುವ ಇಲಿ ತನ್ನ ಹಿಡಿತದಿಂದ ಪಾರಾಗಿ ಹೋಗಲು ಅವಕಾಶ ಮಾಡಿಕೊಡುವುದನ್ನು ನೋಡಿ ನಮಗೆ ಅಚ್ಚರಿಯಾಗುತ್ತದೆ. ಅದರ ತಂತ್ರಗಾರಿಕೆಯು ನಮ್ಮನ್ನೆಲ್ಲ ರಂಜಿಸುತ್ತದೆ. ಈಗ ‘ಇಲಿ ಬಂತು’ ಎಂದ ಕೂಡಲೇ ನಾಯಿ ಮರಿ ನೇರವಾಗಿ ಸಿಲಿಂಡರ್‌ ಹಿಂದೆ ಹೋಗಿ ತನ್ನ ಬೇಟೆಯನ್ನು ಹುಡುಕುತ್ತದೆ. ಈ ಮೂಕ ಪ್ರಾಣಿಯಂತೆ ಯಾರಾದರೂ ವರ್ತಿಸುವುದನ್ನು ಕಂಡಾಗ, ಹಾಗೆ ಮಾಡುವುದು ತಪ್ಪು ಎಂದು ಹೇಳುವುದೇ ನನ್ನ ಉದ್ದೇಶವಾಗಿದೆ. ನಾಯಿ ಮರಿಯು ಅದೇ ಜಾಗದಲ್ಲಿ ಇಲಿಗಾಗಿ ಹುಡುಕಿದಂತೆ, ಒಂದು ಸವಾಲು (ಹೊಂಜಿನ ಸಮಸ್ಯೆ) ಎದುರಾದಾಗ ಮತ್ತದೇ ಹಳೆಯ (ಸರಿ ಬೆಸ ಸಂಖ್ಯೆಗಳ ವಾಹನ ಬಳಕೆ) ಪರಿಹಾರ ಕಂಡುಕೊಳ್ಳಲು ಹೋಗಬೇಡಿ ಎಂದು ಹೇಳಲು ನಾನು ಈ ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.

ದೆಹಲಿಯಲ್ಲಿ ಅಧಿಕಾರದಲ್ಲಿ ಇರುವ ಆಮ್‌ ಆದ್ಮಿ ಪಾರ್ಟಿ (ಎಎಪಿ) ಸರ್ಕಾರವು ಆರಂಭಿಸಿದ್ದ ಸರಿ – ಬೆಸ ಸಂಖ್ಯೆಗಳ ಖಾಸಗಿ ವಾಹನಗಳು ದಿನ ಬಿಟ್ಟು ದಿನ ರಸ್ತೆಗೆ ಇಳಿಯುವ ಮೊದಲ ಪ್ರಯೋಗವು ಅಷ್ಟೇನೂ ಯಶಸ್ವಿಯಾಗದಿದ್ದರೂ ಈಗ ಮತ್ತೆ ಅದನ್ನೇ ಪುನರಾವರ್ತಿಸಲು ಮುಂದಾಗಿದೆ. ಈ ನಿರ್ಧಾರವು, ಸಾಕಿದ ನಾಯಿ ಮರಿಯು ಅಡುಗೆ ಮನೆಯಲ್ಲಿನ ಇಲಿ ಬೆನ್ನಟ್ಟಿ ಗಾಬರಿಗೊಳಿಸಿ ಬಿಡುವಂತೆ ಇದೆ. ಇದರಿಂದ ನಗರದ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆ ಏನೂ ಆಗಿರಲಿಲ್ಲ ಎನ್ನುವುದನ್ನು ಎಲ್ಲ ಅಂಕಿ ಅಂಶಗಳು ಬೊಟ್ಟು ಮಾಡಿ ತೋರಿಸುತ್ತವೆ.

ಆದರೆ, ರಾಜಕೀಯವಾಗಿ ಅದು ಪಕ್ಷಕ್ಕೆ ಭಾರಿ ಯಶಸ್ಸು ತಂದುಕೊಟ್ಟಿತ್ತು. ದೆಹಲಿಯ ಬಹುತೇಕ ನಾಗರಿಕರಿಗೂ ಇದು ಮೆಚ್ಚುಗೆಯಾಗಿತ್ತು. ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿದವರಂತೂ, ಪರಿಸರ ಮಾಲಿನ್ಯಕ್ಕೆ ಕೊನೆಗೂ ಒಂದು ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆಯಲ್ಲ ಎಂದು ಭಾವಿಸಿದ್ದರು. ಅವರೆಲ್ಲರೂ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದಲೇ ಕೈಜೋಡಿಸಿದ್ದರು. ಈ ಅಂಕಣದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಈ ವರ್ಷ ಪಟಾಕಿಗಳ ಬಳಕೆ ಮೇಲೆ ನಿಷೇಧ ವಿಧಿಸಿದ ಕೋರ್ಟ್‌ ತೀರ್ಮಾನವು ನಗೆಪಾಟಲಿಗೆ ಈಡಾದ ವಿಷಯವನ್ನು ಚರ್ಚಿಸಲಾಗಿತ್ತು. ಚಳಿಗಾಲ ಕಾಲಿಡುತ್ತಿದ್ದಂತೆ ನಗರದಲ್ಲಿನ ಉಸಿರಾಡುವ ಗಾಳಿಯೇ ವಿಷವಾಗುವುದನ್ನು ತಗ್ಗಿಸಲು ‘ನನಗೂ ಕೂಡ ಏನನ್ನಾದರೂ ಮಾಡಬೇಕಾಗಿದೆ’ ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸಬೇಕಾಗಿದೆ.

ಸರ್ಕಾರದ ಈ ಆಲೋಚನೆಗೆ ಟೆಲಿವಿಷನ್‌ ಚಾನೆಲ್‌ಗಳೂ ಉತ್ತಮ ಬೆಂಬಲ ನೀಡಿದ್ದವು. ನಾವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಇದೊಂದು ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯ ಯಶಸ್ವಿ ಕ್ರಮ ಎಂದೇ ಚಾನೆಲ್‌ಗಳು ಉಸಿರುಬಿಡದೇ ಭರ್ಜರಿ ಪ್ರಚಾರ ನೀಡಿದ್ದವು. ಹೈಬ್ರಿಡ್‌ ಕಾರ್‌ ಮತ್ತು ಮನೆಗಳಲ್ಲಿ ಶುದ್ಧ ಗಾಳಿ ಒದಗಿಸುವ ಏರ್‌ ಪ್ಯೂರಿಫೈಯರ್‌ ತಯಾರಕರ ಪ್ರಾಯೋಜಿತ ಕಾರ್ಯಕ್ರಮಗಳು ನಿರಂತರವಾಗಿ ಬಿತ್ತರಗೊಂಡಿದ್ದವು. ಇವೆಲ್ಲವು ಉಳ್ಳವರು ಮಾತ್ರ ಅನುಸರಿಸಬಹುದಾದ ಕ್ರಮಗಳಾಗಿದ್ದವು. ಎರಡು ಚಳಿಗಾಲದ ನಂತರ ಎಎಪಿ ಸರ್ಕಾರವು ಈಗ ಮತ್ತೆ ಅಡುಗೆಮನೆಯಲ್ಲಿನ ಇಲಿಯನ್ನು ಹೊರತೆಗೆದು ಬೆದರಿಸಲು ಮುಂದಾಗಿದೆ.‘ಎಎಪಿ’ಯು ದೇಶದ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ. ಇತರ ಜನಪ್ರಿಯ ಮತ್ತು ಸರ್ವಾಧಿಕಾರ ಮನೋಭಾವದ ರಾಜಕೀಯ ಪಕ್ಷಗಳಲ್ಲಿ ಕಂಡುಬರದ ಅಭಿಪ್ರಾಯ ಭೇದ ಮತ್ತು ಬುದ್ಧಿವಂತಿಕೆ ಈ ಪಕ್ಷದಲ್ಲಿ ಮಾತ್ರ ಕಂಡು ಬರುತ್ತಿದೆ. ಪಕ್ಷದ ಪಂಜಾಬ್‌ ಮುಖಂಡ ಸುಖ್‌ಪಾಲ್ ಸಿಂಗ್‌ ಖೈರಾ ಅವರು ಕೃಷಿ ತ್ಯಾಜ್ಯ ಸುಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕೃಷಿ ತ್ಯಾಜ್ಯವನ್ನು ಹೊಲಗಳಿಂದ ಬೇರೆಡೆ ಸಾಗಿಸುವ ವೆಚ್ಚ ಭರ್ತಿ ಮಾಡಿಕೊಡಲು ಸರ್ಕಾರವು ಹಣ ನೀಡುವವರೆಗೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ಮುಂದುವರೆಸಿ ಎಂದು ಅಪ್ಪಣೆ ಕೊಡಿಸಿದ್ದರು.

ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಅವರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ಹೊಂಜು ನಿರ್ಮಾಣವಾಗಿರುವುದನ್ನು ತಡೆಗಟ್ಟಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಅವರ ಜತೆ ಭೇಟಿಗೆ ಅವಕಾಶ ಮಾಡಿಕೊಡಲು ಮನವಿ ಮಾಡಿಕೊಂಡ ಸಂದರ್ಭದಲ್ಲಿಯೇ ಈ ಘಟನೆ ನಡೆದಿತ್ತು. ಇದನ್ನೆಲ್ಲ ನೋಡಿ ನೀವು ನಗಬಹುದು, ಅಳಬಹುದು ಇಲ್ಲವೇ ಕೋಪೋದ್ರಿಕ್ತರಾಗಿ ಕೂಗಾಡಲೂಬಹುದು. ಇಲ್ಲವೇ ನಿಮ್ಮ ಅಹಂ ಅನ್ನು ನುಂಗಿಕೊಂಡು ಆರೋಗ್ಯಕ್ಕೆ ಅಹಿತಕರವಾದ ಗಾಳಿಯನ್ನೇ ಜೋರಾಗಿ ಉಸಿರೆಳೆದುಕೊಂಡು ಸುಮ್ಮನಾಗಬಹುದು.

ಬರೀ ದೆಹಲಿಯ ಪರಿಸರ ಮಾತ್ರ ಮಲಿನಗೊಂಡಿದೆಯೇ ಎನ್ನುವ ಇನ್ನೊಂದು ಮಹತ್ವದ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಇಲ್ಲ, ಇಡೀ ದೇಶದಲ್ಲಿನ ಗಾಳಿ ಗುಣಮಟ್ಟವೇ ಗಮನಾರ್ಹವಾಗಿ ತಗ್ಗಿದೆ. ಹಾಗಿದ್ದರೆ ಬರೀ ದೆಹಲಿ ಬಗ್ಗೆ ಮಾತ್ರ ಇಂತಹ ಆತಂಕ ಏಕೆ ಕಂಡುಬರುತ್ತಿದೆ? ಈ ಪ್ರಶ್ನೆ ತುಂಬ ಸಮಂಜಸವಾಗಿದೆ. ದೇಶದ ಅತ್ಯಂತ ಪ್ರಭಾವಿ ಜನರೆಲ್ಲ ಇಲ್ಲಿಯೇ ವಾಸಿಸುತ್ತಿದ್ದಾರೆ. ಪ್ರಧಾನಿ ಸೇರಿದಂತೆ ಪರಿಸರ ಸಚಿವ, ಪರಿಸರ ಕಾರ್ಯದರ್ಶಿ ಒಳಗೊಂಡಂತೆ ನಾಗರಿಕ ಅಧಿಕಾರಿಗಳು, ಪರಿಸರ ಪೀಠದಲ್ಲಿ ಇರುವವರೂ ಸೇರಿದಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು, ಪ್ರಮುಖ ರಾಜಕಾರಣಿಗಳು, ಸಂಸದರು, ರಾಜತಾಂತ್ರಿಕರು ಮತ್ತು ಮಾಧ್ಯಮದ ದಾದಾಗಳೂ ಇಲ್ಲಿಯೇ ನೆಲೆಸಿದ್ದಾರೆ. ತಮ್ಮ ಸ್ವಂತ ಸಮಸ್ಯೆಯನ್ನೇ ಸಮರ್ಪಕವಾಗಿ ಬಗೆಹರಿಸಿಕೊಳ್ಳದ ಇವರಿಗೆ ದೇಶದ ಮುಂದಿರುವ ದುರ್ವಾಸನೆ ಬೀರುವ ಗಾಳಿ, ಸಾಯುತ್ತಿರುವ ನದಿಗಳು, ಕೆರೆ–ಕೊಳ್ಳಗಳಲ್ಲಿನ ಮಾಲಿನ್ಯದ ನೊರೆ, ಕಣ್ಣೆದುರೇ ಪುಡಿಪುಡಿಯಾಗುತ್ತಿರುವ ಬೆಟ್ಟಗಳ ಸಮಸ್ಯೆಗಳನ್ನು ಬಗೆಹರಿಸಲು ಪುರುಸೊತ್ತಾದರೂ ಎಲ್ಲಿದೆ?

ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಇವರೆಲ್ಲ ಪ್ರಯತ್ನ ಪಡುತ್ತಿಲ್ಲ ಎಂದೂ ಇದರರ್ಥವಲ್ಲ. ಅವರಲ್ಲಿಯ ಅನೇಕರು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನಗಳು ನಾನು ಸಾಕಿರುವ ನಾಯಿ ಮರಿಯು ಅಡುಗೆಮನೆಯಲ್ಲಿ ಇಲಿಯನ್ನು ಹಿಡಿದು ಬೆದರಿಸಿ ಬಿಟ್ಟುಕೊಡುವ ರೀತಿಯಲ್ಲಿಯೇ ಸೀಮಿತವಾಗಿವೆ. ಗೌರವಾನ್ವಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಬರೀ ದೆಹಲಿ ಬಗ್ಗೆ ಮಾತ್ರ ಹೆಚ್ಚು ಗಮನ ಕೇಂದ್ರೀಕರಿಸಿರುವಂತೆ ಭಾಸವಾಗುತ್ತದೆ. ಹೀಗಾಗಿ ಅದಕ್ಕೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ಹಸಿರು ನ್ಯಾಯಮಂಡಳಿ ಎಂದೇ ಮರುನಾಮಕರಣ ಮಾಡಬೇಕು ಎಂದೇ ನಾನು ವಿನಯಪೂರ್ವಕವಾಗಿ ಹೇಳಲು ಬಯಸುತ್ತೇನೆ.

‘ಎನ್‌ಜಿಟಿ’ ಹೊರಡಿಸುವ ಯಥೇಚ್ಛ ಫರ್ಮಾನುಗಳು ತುಘಲಕ್‌ನೂ ಹೆಮ್ಮೆಪಡುವಂತೆ ಇವೆ. ಜಂತರ್‌ ಮಂತರ್‌ನಲ್ಲಿ ಇದ್ದ ದೆಹಲಿಯ ಪುಟ್ಟ ಸಾರ್ವಜನಿಕ ಪ್ರತಿಭಟನಾ ಸ್ಥಳವನ್ನು ಬೇರೆಡೆ ಸ್ಥಳಾಂತರಿಸುವ ಇತ್ತೀಚಿನ ಅದರ ಇನ್ನೊಂದು ನಿರ್ಧಾರ ನೋಡಿದರೆ, ಪ್ರತಿಭಟನೆಯ ಸದ್ದು ಕೂಡ ಆಡಳಿತಗಾರರಿಗೆ ತೊಂದರೆ ಕೊಡಬಾರದು ಎನ್ನುವ ಆಶಯ ಅದಕ್ಕೆ ಇರುವಂತೆ ಭಾವನೆ ಮೂಡಿಸುತ್ತದೆ. ತಮ್ಮ ಬೇಡಿಕೆಗಳಿಗೆ ಆಡಳಿತಗಾರರು ಕಿವಿಗೊಡಲಿ ಎನ್ನುವುದೇ ಪ್ರತಿಭಟನೆ ನಡೆಸುವವರ ಮುಖ್ಯ ಉದ್ದೇಶವಾಗಿರುತ್ತದೆ.

ನಗರದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ನಿರ್ಬಂಧಿಸಿ ‘ಎನ್‌ಜಿಟಿ’ಯು ಇತ್ತೀಚೆಗೆ ಮತ್ತೊಮ್ಮೆ ಆದೇಶ ಹೊರಡಿಸಿದೆ. ಪರಿಸರ ಮಾಲಿನ್ಯ ಕೈಮೀರುತ್ತಿರುವುದನ್ನು ತಡೆಗಟ್ಟಲು ಇದೊಂದು ಉತ್ತಮ ಆಲೋಚನೆಯಾಗಿದೆ ಎಂದು ಕೆಲವರು ಹೇಳಿಕೊಳ್ಳಬಹುದು. ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸುವುದು ಪರಿಸರ ಮಾಲಿನ್ಯ ವಿರುದ್ಧ ಹೋರಾಟ ನಡೆಸುವ ಸರಿಯಾದ ವಿಧಾನ ಆಗಿರಲಾರದು. ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಿದರೂ, ಗುತ್ತಿಗೆದಾರರು ಕಾರ್ಮಿಕರಿಗೆ ಕೂಲಿ ಕೊಡುವುದನ್ನು ನಿಲ್ಲಿಸಲು ಸಾಧ್ಯವಾಗಲಾರದು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಒಬ್ಬನೇ ಒಬ್ಬ ಗುತ್ತಿಗೆದಾರನನ್ನು ನನಗೆ ತೋರಿಸಿ. ಎನ್‌ಜಿಟಿಯ ಈ ಮೊದಲಿನ ಆದೇಶವಾದ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ಕೈಬಿಟ್ಟಿರುವ ಒಬ್ಬನೇ ಒಬ್ಬ ಭತ್ತದ ಬೆಳೆಗಾರನನ್ನೂ ಕಂಡು ಹಿಡಿಯುವುದು ಸಾಧ್ಯವಾಗಲಾರದು.

ಈ ವಿಷಯದಲ್ಲಿ ಮಾನವ ಹಕ್ಕುಗಳ ಆಯೋಗವೂ ಹಿಂದೆ ಬಿದ್ದಿಲ್ಲ. ಈ ಸಂಬಂಧ ಆಯೋಗವು ಹಲವಾರು ನೋಟಿಸ್‌ಗಳನ್ನು ಜಾರಿ ಮಾಡಿದೆ. ಕೆಲ ರಾಜ್ಯ ಸರ್ಕಾರಗಳ ಸಹಯೋಗದಲ್ಲಿಯೇ ಗೋವು ರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಗೆ ಕಡಿವಾಣ ಹಾಕುವುದಕ್ಕಿಂತ ಪರಿಸರ ಮಾಲಿನ್ಯವೇ ಇದಕ್ಕೆ ಮುಖ್ಯವಾಗಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಭುರೇಲಾಲ್ ಸಮಿತಿಯು ಕೋರ್ಟ್‌ನ 17 ಮುಖ್ಯ ನ್ಯಾಯಮೂರ್ತಿಗಳ ಅಧಿಕಾರ ಅವಧಿ ಉದ್ದಕ್ಕೂ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ದೆಹಲಿಯಲ್ಲಿ ಸಂಚರಿಸುವ ಸಮೂಹ ಸಾರಿಗೆಯ ವಾಹನಗಳು ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ ಜಿ) ಕಡ್ಡಾಯವಾಗಿ ಬಳಸುವಂತೆ ಬಹಳ ಹಿಂದೆಯೇ ಜಾರಿಗೆ ತಂದಿರುವುದು ಅದರ ಇದುವರೆಗಿನ ಅತಿ ದೊಡ್ಡ ಸಾಧನೆಯಾಗಿದೆ. ಇಂತಹ ಅನಾರೋಗ್ಯಕರ ವಾತಾವರಣದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನದಲ್ಲಿ ನಾಯಿ – ಇಲಿ ಆಟ ಆಡುತ್ತಲೇ ಇದ್ದಾರೆ. ಕೇಳುಗರನ್ನು ಮಂತ್ರಮುಗ್ಧಗೊಳಿಸುವಂತೆ ಆಕರ್ಷಕ ಶೈಲಿಯಲ್ಲಿ ಭಾಷಣ ಮಾಡುವುದು ಯಾವುದೇ ಪರಿಹಾರ ಒದಗಿಸುವುದಿಲ್ಲ. ಮೊದಲಿಗೆ, ನಾವೆಲ್ಲರೂ ಸೇವಿಸುವ ಗಾಳಿ ವಿಷವಾಗಿರುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಎಲ್ಲರೂ ತಮ್ಮಿಂದ ಸಾಧ್ಯವಿರುವ ಮಟ್ಟಿಗೆ ತಮ್ಮ ತಮ್ಮ ನೆಲೆಯಲ್ಲಿ ಈ ಪರಿಸ್ಥಿತಿ ಸುಧಾರಿಸಲು ಪ್ರಯತ್ನಸಬೇಕಾಗಿದೆ. ರಾಜಕಾರಣಿಗಳು, ನ್ಯಾಯಮೂರ್ತಿಗಳು, ಸಾಮಾಜಿಕ ಕಾರ್ಯಕರ್ತರು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ. ಮೂರನೇಯದಾಗಿ ಇಂತಹ ಪರಿಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಒಬ್ಬರು ಇನ್ನೊಬ್ಬರನ್ನು ದೂಷಿಸಬಾರದು. ಪರಿಸರ ಮಾಲಿನ್ಯ ವಿರುದ್ಧದ ಹೋರಾಟಕ್ಕೆ ರಾಜಕೀಯವನ್ನೂ ಬೆರೆಸಬಾರದು.

ಇಂತಹ ನಿರ್ಧಾರಕ್ಕೆ ಬಂದ ನಂತರ ನಾವೀಗ ವಸ್ತುಸ್ಥಿತಿಯತ್ತ ಗಮನ ಹರಿಸೋಣ. ಎಎಪಿ ಮುಖಂಡ ಆತೀಶ್‌ ಮರ್ಲೆನಾ ಅವರು ನೀಡಿದ ಮಾಹಿತಿ ಪ್ರಕಾರ, ಇದು ಬರೀ ದೆಹಲಿಯ ಸಮಸ್ಯೆಯಲ್ಲ. ಇಡೀ ಉತ್ತರ ಭಾರತದಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ. ದೇಶದ ರಾಜಧಾನಿಯಲ್ಲಿ ನಿರ್ಮಾಣವಾಗಿರುವ ಹೊಂಜಿನ ವಾತಾವರಣ ಸಂದರ್ಭದಲ್ಲಿ ಇದೊಂದು ವಿವೇಚನಾಯುಕ್ತ ಹೇಳಿಕೆಯಾಗಿದೆ. ಎಎಪಿಯಲ್ಲಿ ಇರುವವರ ಬುದ್ಧಿಮತ್ತೆಯೂ ವೈವಿಧ್ಯಮಯವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿದೆ.ಉತ್ತರಕ್ಕೆ ಹೋದಂತೆ ಪಾಕಿಸ್ತಾನದ ಬಹುಭಾಗದಲ್ಲಿ ಕೂಡ ಇದೇ ಬಗೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಶ್ಮೀರ ಸಮಸ್ಯೆ ಬಗೆಹರಿಯುವ ತನಕ ಈ ವಿಷಯದಲ್ಲಿ ಪಾಕಿಸ್ತಾನದ ಜತೆ ಕೈಜೋಡಿಸುವುದು ಸವಾಲಿನ ಕೆಲಸ ಆಗಿದೆ ಬಿಡಿ. ಆದರೆ, ದೆಹಲಿ, ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಸಭೆ ಕರೆಯಲು ಪ್ರಧಾನಿಗೆ ಮನವಿ ಮಾಡಿಕೊಳ್ಳಬಹುದು. ಇನ್ನೊಬ್ಬರ ಮೇಲೆ ಹೊಣೆಗಾರಿಕೆ ಜಾರಿಸುವ, ಕೆಲವರ ಒರಟಾಗಿ ನಡೆದುಕೊಳ್ಳುವ ಪ್ರವೃತ್ತಿಯನ್ನು ನಿರ್ಲಕ್ಷಿಸಿ ಈ ನಿಟ್ಟಿನಲ್ಲಿ ಮುಂದುವರೆಯಬೇಕಾಗಿದೆ.

ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚದಂತೆ ಮಾಡಲು ರೈತರಿಗೆ ಪರಿಹಾರ ನೀಡಬೇಕಾಗಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ನಗರ ಪ್ರವೇಶಿಸುವ ಲಾರಿಗಳ ಮೇಲೆ ವಿಧಿಸುವ ಪ್ರವೇಶ ತೆರಿಗೆಯಿಂದ ಸಂಗ್ರಹವಾಗುವ ಮೊತ್ತವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಪೇಪರಮೆಂಟ್‌ ಚೀಪುವುದರ ಮೂಲಕ, ಅಗರಬತ್ತಿ ಹಚ್ಚುವುದರಿಂದ ಮಾರಣಾಂತಿಕ ಉಬ್ಬಸ ರೋಗ ವಾಸಿ ಮಾಡಬಹುದು ಎಂದು ಭಾವಿಸುವುದು ಬರೀ ಭ್ರಮೆ ಅಷ್ಟೆ.

ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರದ (ಇಪಿಸಿಎ) ವರದಿಯನ್ನು ನಾವಿಲ್ಲಿ ಪರಿಗಣನೆಗೆ ತೆಗೆದುಕೊಳ್ಳೋಣ. ಪ್ರಾಧಿಕಾರದ ಪ್ರಕಾರ, ದೆಹಲಿಯಲ್ಲಿ ನಿರ್ಮಾಣವಾಗುವ ಹೊಂಜಿನಲ್ಲಿ ಶೇ 38ರಷ್ಟು ಪ್ರಮಾಣವು ದೂಳಿನಿಂದ ಬರುತ್ತದೆ. ದೂಳಿನ ಹಾವಳಿ ತಗ್ಗಿಸಲು ರಸ್ತೆಗಳಿಗೆ ನೀರು ಚಿಮುಕಿಸುವ, ಗಿಡ ಮರಗಳಿಗೆ ಅಗ್ನಿಶಾಮಕದಳದವರು ನೀರಿನ ಸ್ನಾನ ಮಾಡಿಸುವ ಮೂರ್ಖತನದ ಆಲೋಚನೆಗಳನ್ನು ಕೈಬಿಡಬೇಕು. ರಸ್ತೆಗಳಲ್ಲಿನ ದೂಳು ಹೀರಿಕೊಳ್ಳುವ ಯಂತ್ರಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು. 2016ರಲ್ಲಿಯೇ ಇವುಗಳನ್ನು ಖರೀದಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದು ಇದುವರೆಗೂ ಕಾರ್ಯಗತಗೊಂಡಿಲ್ಲ, ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಹಳೆಯ ಬಸ್‌ಗಳ ಬಳಕೆ ನಿಲ್ಲಿಸಬೇಕು. ಹೊಸ ಬಸ್‌ಗಳನ್ನು ಖರೀದಿಸಲು ಸರ್ಕಾರದ ಬಳಿ ಹಣ ಇಲ್ಲವೇ? ಹಾಗಿದ್ದರೆ ದೆಹಲಿಯ ಮತದಾರರನ್ನು ಖರೀದಿಸಲು ರಿಯಾಯ್ತಿ ದರದಲ್ಲಿ ನೀರು ಮತ್ತು ವಿದ್ಯುತ್‌ ಒದಗಿಸುವ ಮುನ್ನ ಎರಡೆರಡು ಬಾರಿ ಆಲೋಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ.

ಈ ಕ್ರಮಗಳು, ದಿನಬಿಟ್ಟು ದಿನ ಸರಿ ಬೆಸ ಸಂಖ್ಯೆಯ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಅಥವಾ ನಿಷೇಧ ವಿಧಿಸುವ ನಿರ್ಧಾರಗಳ ಮುಂದೆ ತುಂಬ ಸಪ್ಪೆಯಾಗಿ ಕಾಣಬಹುದು. ಆದರೆ, ಇಂತಹ ಕ್ರಮಗಳೇ ಉದ್ದೇಶಿತ ಗುರಿ ಸಾಧನೆಗೆ ನೆರವಾಗಲಿವೆ. ಪ್ರತಿ ಬಾರಿ ಹೊಂಜು ನಿರ್ಮಾಣವಾದಾಗಲ್ಲೆಲ್ಲ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸುವುದು ತಮಾಷೆಯಾಗಿ ಕಾಣಬಹುದು.(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry