ಗುರುವಾರ , ಮಾರ್ಚ್ 4, 2021
19 °C

ಗೋಲುಪೆಟ್ಟಿಗೆ ಮುಂದಿನ ಗೋಡೆ ಸವಿತಾ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಗೋಲುಪೆಟ್ಟಿಗೆ ಮುಂದಿನ ಗೋಡೆ ಸವಿತಾ

‘ಮುಂದೊಂದು ದಿನ ನಾನು ಭಾರತ ತಂಡದಲ್ಲಿ ಆಡುತ್ತೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತೇನೆ’–

ಹತ್ತು ವರ್ಷಗಳ ಹಿಂದೆ  ಹುಡುಗಿಯೊಬ್ಬಳು ತನ್ನ ಡೈರಿಯಲ್ಲಿ ಬರೆದಿಟ್ಟಿದ್ದ ಸಾಲುಗಳಿವು. ಕಳೆದ ಒಂದು ದಶಕದಲ್ಲಿ ಈ ಸಾಲಿನ ಒಂದೊಂದು ಪದವೂ ಪದಕಗಳ ರೂಪ ಪಡೆದು ಆಕೆಯ ಕೊರಳು ಅಲಂಕರಿಸಿವೆ. ಭಾರತ ಮಹಿಳೆಯರ ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪುನಿಯಾ ಅವರೇ ಆ ಬಾಲಕಿ. ಒಟ್ಟು 148 ಅಂತರ

ರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಮಿಂಚಿದ್ದಾರೆ. ಎರಡು ಏಷ್ಯಾ ಕಪ್ ಟೂರ್ನಿಗಳು, ಒಲಿಂಪಿಕ್ಸ್‌ನಲ್ಲಿಯೂ ಆಡಿದ ಹೆಗ್ಗಳಿಕೆ ಅವರದ್ದು.

ಹೋದ ವಾರ ಜಪಾನಿನ ಜಿಫುವಿನಲ್ಲಿ ರಾಣಿ ರಾಂಪಾಲ್ ನಾಯಕತ್ವದ ಭಾರತ ತಂಡವು ಮಹಿಳೆಯರ ಏಷ್ಯಾ ಕಪ್ ಗೆದ್ದು ಸಂಭ್ರಮಿಸಿತ್ತು. 2018ರ ವಿಶ್ವಕಪ್ ಟೂರ್ನಿಗೂ ರಹದಾರಿ ಪಡೆದಿತ್ತು. ಈ ಸಾಧನೆಯ ಹಿಂದೆ ಸವಿತಾ ಅವರ ಆಟವೇ ಮಹತ್ವದ್ದಾಗಿತ್ತು. ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಚೀನಾ ಎದುರು ಶೂಟೌಟ್‌ನಲ್ಲಿ ಗೆಲ್ಲುವುದು ಸುಲಭದ ಮಾತಾಗಿರಲಿಲ್ಲ. ಆದರೆ ಗೋಲುಪೆಟ್ಟಿಗೆಯ ಮುಂದೆ ‘ಚೀನಾ ಗೋಡೆ’ಗಿಂತಲೂ ಗಟ್ಟಿಯಾಗಿ ನಿಂತ ಸವಿತಾ, ದೇಶಕ್ಕೆ ಗೆಲುವಿನ ಕಾಣಿಕೆ ನೀಡಿದರು.

1990ರಲ್ಲಿ ಹರಿಯಾಣದ ಸಿರ್ಸಾ ಸಮೀಪದ ಜೋಡಖಾನಾ ಗ್ರಾಮದಲ್ಲಿ ಜನಿಸಿದರು. ಫಾರ್ಮಾಸಿಸ್ಟ್ ಆಗಿದ್ದ ತಂದೆಯ ಆದಾಯದಿಂದಲೇ ಇಡೀ ಕುಟುಂಬದ ಜೀವನ ನಡೆಯುತ್ತಿತ್ತು. ಎಂಟು ವರ್ಷದ ಬಾಲಕಿಯ ಕೈಗೆ ಅಜ್ಜ ಮಹೇಂದರ್ ಸಿಂಗ್ ಅವರು ಹಾಕಿ ಸ್ಟಿಕ್ ಕೊಟ್ಟರು. ಅಷ್ಟೇ ಅಲ್ಲ; ಪ್ರಾಥಮಿಕ ಹಂತದ ಪಾಠವನ್ನೂ ಹೇಳಿಕೊಟ್ಟರು. ಮೊಮ್ಮಗಳು ಪ್ರತಿದಿನವೂ ಹಾಕಿ ಅಭ್ಯಾಸ ಮಾಡಲು ಪ್ರೇರೆಪಿಸಿದರು. ‘ಹುಡುಗಿಗೆ ಏಕೆ ಈ ಕಠಿಣ ಆಟ’ ಎಂದು ಪ್ರಶ್ನಿಸಿದ ಊರಿನ ಜನರಿಗೆ ಅಜ್ಜ ಮುಗುಳ್ನಗೆಯ ಉತ್ತರ ನೀಡಿ ಸುಮ್ಮನಾಗುತ್ತಿದ್ದರು. ಆದರೆ ಈಗ ಅದೇ ಊರಿನ ಜನರು ಸವಿತಾ ಅವರ ಹೆಸರನ್ನು ಹೆಮ್ಮೆಯಿಂದ ಹೇಳುತ್ತಾರೆ.

ಊರಿನಲ್ಲಿ ಹುಡುಗರೊಂದಿಗೆ ಹಾಕಿ ಆಡುತ್ತಿದ್ದ ಸವಿತಾಳ ಪ್ರತಿಭೆಯನ್ನು ನೋಡಿದವರು ಹಿಸ್ಸಾರ್‌ನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ವಸತಿ ನಿಲಯಕ್ಕೆ ಸೇರಿಸುವಂತೆ ಸಲಹೆ ನೀಡಿದರು. ಅವರ ಅದೃಷ್ಟಕ್ಕೆ ವಸತಿ ನಿಲಯದಲ್ಲಿ ಅವಕಾಶ ಸಿಕ್ಕಿತ್ತು. ಅದು ಸವಿತಾ ಜೀವನದ ಬಹುದೊಡ್ಡ ತಿರುವು. ಸುಂದರ್ ಸಿಂಗ್ ಖರಾಬ್ ಅವರ ಮಾರ್ಗದರ್ಶನದಲ್ಲಿ ಸವಿತಾ ಬಹಳಷ್ಟು ಪಾಠಗಳನ್ನು ಕಲಿತರು. ಚುರುಕು ನಡೆ, ಪಾದರಸದಂತಹ ಚಲನವಲನ ಮತ್ತು ಚುರುಕಾದ ದೃಷ್ಟಿಯು ಅವರ ವಿಶೇಷತೆಯಾಗಿತ್ತು. ಅದಕ್ಕಾಗಿಯೇ ಗೋಲ್‌ಕೀಪಿಂಗ್‌ನಂತಹ ಕಠಿಣ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸತೊಡಗಿದರು.

ಮೈಮೇಲೆ ರಕ್ಷಣಾ ಕವಚಗಳನ್ನು ತೊಟ್ಟು, ಹೆಲ್ಮೆಟ್‌ ಧರಿಸಿ ಎದುರಾಳಿ ಆಟಗಾರ್ತಿಯರಿಗೆ ಸಿಂಹಸ್ವಪ್ನರಾಗಿ ಬೆಳೆಯತೊಡಗಿದರು. ಇದರಿಂದಾಗಿ ಬಹುಬೇಗನೆ ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆದರು. 17ನೇ ವಯಸ್ಸಿಗೆ ಅವರಿಗೆ ಭಾರತ ಜೂನಿಯರ್ ತಂಡದಲ್ಲಿ ಅವಕಾಶ ಲಭಿಸಿತು. 2009ರಲ್ಲಿ ಜೂನಿಯರ್ ಏಷ್ಯಾ ಕಪ್‌ನಲ್ಲಿ ಆಡಿದ್ದ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

2013ರಲ್ಲಿ ಅವರು ಮಲೇಷ್ಯಾದಲ್ಲಿ ನಡೆದ ಸೀನಿಯರ್ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ್ದ  ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದರು. ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದ ಎರಡು ಪೆನಾಲ್ಟಿ ಶೂಟೌಟ್‌ಗಳಲ್ಲಿ ಗೋಲು ತಡೆದಿದ್ದರು. ಅದರಿಂದಾಗಿ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು.

ಆನಂತರದ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅವರ ಚಾಕಚಕ್ಯತೆಯ ಗೋಲ್‌ಕೀಪಿಂಗ್ ರಂಗೇರಿತ್ತು. ಅದರಲ್ಲೂ 2016ರಲ್ಲಿ  ಬೆಲ್ಜಿಯಂನಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಅವರ ಆಟ ನೆನಪಿನಲ್ಲಿ ಉಳಿಯುವಂಥದ್ದು. ಅವರ ವಿರೋಚಿತ ಹೋರಾಟದ ಬಲದಿಂದ ತಂಡವು ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದಿತ್ತು. ನಂತರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. 36 ವರ್ಷಗಳ ನಂತರ ಭಾರತದ ವನಿತೆಯರು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಕ್ಷಣ ಅದು. ವಿಶ್ವ ಹಾಕಿ ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಚಿಲಿ ವಿರುದ್ಧ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಹಾಕೀಸ್‌ ಬೇ ಕಪ್ ಟೂರ್ನಿಯಲ್ಲಿ ಅವರ ಮಿಂಚಿನ ಆಟದಿಂದ ತಂಡವು ಗೆಲುವಿನ ಸಂಭ್ರಮ ಆಚರಿಸಿತ್ತು.

2015ರಲ್ಲಿ ಅವರಿಗೆ ಹಾಕಿ ಇಂಡಿಯಾದಿಂದ ಬಲ್ಜೀತ್ ಸಿಂಗ್ ನೆನಪಿನ ವರ್ಷದ ಶ್ರೇಷ್ಠ ಗೋಲ್‌ಕೀಪರ್ ಗೌರವ ಒಲಿದಿತ್ತು.  ಅಲ್ಲದೇ ಕ್ರೀಡೆಗೆ ನೀಡಿದ ಕೊಡುಗೆಗಾಗಿ

₹ 1 ಲಕ್ಷ ವಿಶೇಷ ಬಹುಮಾನ ನೀಡಿ ಗೌರವಿಸಲಾಗಿದೆ. ಆದರೆ ದೊಡ್ಡಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನೂ ಅವರ ಮನೆ ಸೇರಿಲ್ಲ.

ಆದರೆ, ಅವರ ಇಷ್ಟೆಲ್ಲ ಸಾಧನೆಗಳಿಂದ ಹರಿಯಾಣ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಪ್ರಭಾವಿತಗೊಳ್ಳಲೇ ಇಲ್ಲ. ಆದ್ದರಿಂದಲೇ ಇದುವರೆಗೆ ಅವರಿಗೆ ನೌಕರಿ ನೀಡುವ ಗೋಜಿಗೆ ಹೋಗಿಲ್ಲ.

‘ನಾನು ಒಂಬತ್ತು ವರ್ಷಗಳಿಂದ ದೇಶದ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಉತ್ತಮ ಆಟದ ಮೂಲಕ ತಂಡಕ್ಕೆ ಜಯ ತಂದುಕೊಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಅದರಲ್ಲಿ ತಕ್ಕಮಟ್ಟಿಗೆ ಸಫಲತೆಯನ್ನೂ ಗಳಿಸಿದ್ದೇನೆ. ಆ ಬಗ್ಗೆ ನನಗೆ ತೃಪ್ತಿಯಿದೆ. ಆದರೆ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಒಲಿಂಪಿಕ್ಸ್‌ಗೂ ಮುನ್ನ ನನಗೆ ನೌಕರಿ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈವರೆಗೂ ಫಲಪ್ರದವಾಗಿಲ್ಲ. ನನ್ನ ಅಪ್ಪನ ಆದಾಯದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹಾಕಿ ಇಂಡಿಯಾದಿಂದ ಸಿಗುವ ನೆರವು ನನ್ನ ತರಬೇತಿ ಮತ್ತು ಖರ್ಚಿಗೆ ಸಾಕಾಗುತ್ತದೆ’ ಎಂದು ಈಚೆಗೆ ಏಷ್ಯಾ ಕಪ್‌ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಗೌರವ ಸ್ವೀಕರಿಸಿದ್ದ ಸವಿತಾ ಹೇಳಿದ್ದರು.

ಅವರ ಹೇಳಿಕೆಯು ಮಾಧ್ಯಮಗಳಲ್ಲಿ ವರದಿಯಾದ ನಂತರ, ಸಕಲ ನೆರವು ನೀಡುವುದಾಗಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದರು.

‘ಗೋಲ್‌ಕೀಪಿಂಗ್ ಮಾಡುವುದು ಯಾವುದೇ ಕಾಲಕ್ಕೂ ಕಠಿಣ ಕೆಲಸವೇ. ಈಗ ತಂತ್ರಜ್ಞಾನದ ನೆರವಿನಿಂದ ಸ್ವಲ್ಪ ಮಟ್ಟಿಗೆ ತಂತ್ರಗಳು ಸುಲಭವಾಗುತ್ತಿವೆ.  ಪೋಷಾಕುಗಳೂ ಉತ್ತಮ ಗುಣಮಟ್ಟದ್ದು ಮತ್ತು ಹಗುರವಾಗಿವೆ. ಆದರೆ  ಆಧುನಿಕ ಹಾಕಿಯು ವೇಗದಿಂದ ಕೂಡಿದೆ. ಪೆನಾಲ್ಟಿ ಕಾರ್ನರ್‌, ಶೂಟೌಟ್‌ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಗೋಲ್‌ಕೀಪರ್ ಜವಾಬ್ದಾರಿಯೂ ಹೆಚ್ಚಾಗಿದೆ’ ಎಂದು ಸವಿತಾ ಹೇಳುತ್ತಾರೆ.

ಸರ್ಕಾರ, ಸಂಘಸಂಸ್ಥೆಗಳು ಪುರಸ್ಕಾರ, ನೌಕರಿ ಕೊಡದಿದ್ದರೂ ಕಳೆದ ಒಂಬತ್ತು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿರುವ ಸವಿತಾ ಮುಂದಿನ ವಿಶ್ವಕಪ್‌ನಲ್ಲಿಯೂ ತಂಡಕ್ಕೆ ಆಸರೆಯಾಗುವ ಗುರಿಯೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.