ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಈಗ ಕೆಲವು ವರ್ಷಗಳ ಹಿಂದೆ ಅಮೆರಿಕದ ಇಲ್ಲಿನೋಯ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕರ್ನಾಟಕದ ವಿದ್ಯಾಸಂಸ್ಥೆಗಳ ಒಂದು ಅಧ್ಯಯನ ಮಾಡಲು ಬಂದಿದ್ದರು. ಅವರ ಅಧ್ಯಯನದ ಉದ್ದೇಶ ವಿದ್ಯಾಸಂಸ್ಥೆಗಳು ಎಷ್ಟು ಚೆನ್ನಾಗಿ ಅಥವಾ ಸಾಧಾರಣವಾಗಿ ಕೆಲಸ ಮಾಡುತ್ತಿವೆ ಎಂದು ನೋಡುವುದಲ್ಲ. ಬದಲಾಗಿ, ಈ ವಿದ್ಯಾಸಂಸ್ಥೆಗಳು ಒಟ್ಟಾರೆಯಾಗಿ ಯಾವ ರೀತಿಯ ಶೈಕ್ಷಣಿಕ ಪರಿಸರದಲ್ಲಿ ಕೆಲಸ ಮಾಡುತ್ತಿವೆ ಮತ್ತು ತಮ್ಮತಮ್ಮ ಶೈಕ್ಷಣಿಕ ಪರಿಸರದ ಕುರಿತು ಆ ಸಂಸ್ಥೆಗಳಿಗೆ ಎಷ್ಟು ತಿಳಿವಳಿಕೆ ಇದೆ ಎಂದು ನೋಡುವುದು.

ಅಂದರೆ, ತಮ್ಮ ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಅಗತ್ಯಗಳೇನು, ಅಂತಹ ಅಗತ್ಯಗಳನ್ನು ಪೂರೈಸುತ್ತಿರುವ ಎಷ್ಟು ವಿದ್ಯಾಸಂಸ್ಥೆಗಳು ಆ ಪ್ರದೇಶದಲ್ಲಿವೆ, ಆ ವಿದ್ಯಾಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದರೆ, ಅವರಿಗಿಂತ ಭಿನ್ನವಾಗುವ ರೀತಿ ಹೇಗೆ ಅಥವಾ ಪೈಪೋಟಿ ಮಾಡದೇ ಇದ್ದರೆ, ಅವುಗಳ ಕೆಲಸಕ್ಕೂ ನಮ್ಮ ಸಂಸ್ಥೆಯ ಕೆಲಸಕ್ಕೂ ಧ್ಯೇಯೋದ್ದೇಶಗಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳುವುದು ಹೇಗೆ, ನಮ್ಮ ವಿದ್ಯಾರ್ಥಿಗಳು ಯಾವ ರೀತಿಯ ಸಂಸ್ಥೆಗಳಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ ಮತ್ತು ಯಾವ ರೀತಿಯ ಉದ್ಯೋಗದ ಅಥವಾ ಉನ್ನತ ವ್ಯಾಸಂಗದ ಸಂಸ್ಥೆಗಳಿಗೆ ನಮ್ಮಲ್ಲಿಂದ ಹೋಗುತ್ತಿದ್ದಾರೆ.

ನಮ್ಮ ಪರಿಸರದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದಕ್ಕೆ ನಮಗೆ ಯಾವ ರೀತಿಯ ತಜ್ಞತೆ ಇರುವ ಶಿಕ್ಷಕರು ಬೇಕು, ನಮ್ಮ ಕ್ಷೇತ್ರದಲ್ಲಿ ನಮಗಿಂತ ಉತ್ತಮ ಸಂಸ್ಥೆಗಳು ಯಾವುದು ಮತ್ತು ನಮಗೆ ಆದರ್ಶಪ್ರಾಯವಾದ ಸಂಸ್ಥೆಗಳು ಯಾವುದು ಮತ್ತು ಆ ಎರಡೂ, ಅಂದರೆ ಉತ್ತಮ ಸಂಸ್ಥೆಗಳು ಮತ್ತು ಆದರ್ಶಪ್ರಾಯವಾದ ಸಂಸ್ಥೆಗಳು ಎರಡೂ ಒಂದೇ ಸಂಸ್ಥೆಗಳೋ ಅಥವಾ ಬೇರೆಬೇರೆ ಸಂಸ್ಥೆಗಳೋ ಮುಂತಾದ ಪ್ರಶ್ನೆಗಳ ಕುರಿತು ವಿದ್ಯಾಸಂಸ್ಥೆಗಳು ಏನು ಹೇಳುತ್ತಿವೆ ಎಂದು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು.

ಸಾಮಾನ್ಯವಾಗಿ ಇಂತಹ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವುದು ಒಂದು ಸಂಸ್ಥೆಯ ವಿಶನ್ ಡಾಕ್ಯುಮೆಂಟ್ ಎಂದು ಕರೆಯಬಹುದಾದ ಯೋಜನಾ ನಕ್ಷೆಯಲ್ಲಿ. ಅದರಲ್ಲಿ ಒಂದು ಸಂಸ್ಥೆಯ ವಿಶನ್, ಅಂದರೆ ತಾವು ಯಾವ ರೀತಿಯ ಸಂಸ್ಥೆ ಎನ್ನುವ ತಿಳಿವಳಿಕೆ ಮತ್ತು ಮಿಷನ್, ಎಂದರೆ ತಮ್ಮ ಉದ್ದೇಶಗಳೇನು ಎನ್ನುವ ತಿಳಿವಳಿಕೆ – ಈ ಎರಡೂ ಇರುತ್ತವೆ. ವಿಶನ್ ಏನೋ ಅದಕ್ಕೆ ತಕ್ಕಂತೆ ಮಿಶನ್ ಇರುತ್ತದೆ. ಮತ್ತು ಮಿಶನ್ ಏನೋ ಅದಕ್ಕೆ ತಕ್ಕಂತೆ ಕಾರ್ಯಯೋಜನೆಗಳಿರುತ್ತವೆ.

ಕಾರ್ಯಯೋಜನೆಗಳೇನೋ ಅದಕ್ಕೆ ತಕ್ಕಂತೆ ಎಷ್ಟು ವರ್ಷದಲ್ಲಿ ಏನು ಸಾಧಿಸಬೇಕು ಎನ್ನುವ ಮೈಲುಗಲ್ಲುಗಳಿರುತ್ತವೆ ಮತ್ತು ಮೈಲುಗಲ್ಲುಗಳ ಪ್ರಕಾರ ಅದನ್ನು ಸಾಧಿಸಲಾಗಿದೆಯೇ ಎಂದು ತಾಳೆ ಮಾಡಿನೋಡಲು ಮಾಪನಗಳಿರುತ್ತವೆ. ಆ ಮಾಪನಗಳ ಪ್ರಕಾರವೇ, ಒಂದು ಸ್ಥೂಲವಾದ ಹಣಕಾಸಿನ ಯೋಜನೆ ಇರುತ್ತದೆ ಮತ್ತು ಆ ಯೋಜನೆಯ ಪ್ರಕಾರ ಹಣದ ಮೂಲಗಳು ಯಾವುದು ಎನ್ನುವ ಸೂಚನೆಯೂ ಇರುತ್ತದೆ. ಮತ್ತು ಪ್ರತಿ ಹಂತದಲ್ಲೂ ಈ ಮೈಲುಗಲ್ಲುಗಳನ್ನು ಮುಟ್ಟಲು ಇರುವ ತೊಡಕುಗಳೇನು, ಬಾಧಕಗಳೇನು ಮತ್ತು ನಮಗೆ ಅನುಕೂಲಕರವಾಗಿರುವ ಅಂಶಗಳೇನು ಎನ್ನುವ ಚಿತ್ರಣವೂ ಇರುತ್ತದೆ.

ತೊಡಕುಗಳನ್ನು ಎದುರಿಸುವ ಬಗೆ ಮತ್ತು ಅನುಕೂಲಗಳನ್ನು ಬಳಸಿಕೊಳ್ಳುವ ಬಗೆ ಹೇಗೆ ಎನ್ನುವ ಉಪಾಯವೂ ಈ ಮೈಲುಗಲ್ಲುಗಳ ಚಿತ್ರಣದ ಜೊತೆಜೊತೆಗೇ ಇರುತ್ತದೆ. ಇಡೀ ಯೋಜನಾ ನಕ್ಷೆ ಹೀಗೆ ಒಂದು ಆಂತರಿಕವಾದ ತರ್ಕದ ಮೇಲೆ ನಿಂತಿರುತ್ತದೆ. ಪ್ರತಿ ಕೆಳಗಿನ ಹಂತವೂ, ಪ್ರತಿ ಮೇಲಿನ ಹಂತದಿಂದಲೇ ಬಂದಿರುತ್ತದೆ ಮತ್ತು ತನ್ನ ಕೆಳಗಿನ ಹಂತಕ್ಕೆ ದಾರಿಮಾಡಿಕೊಡುತ್ತದೆ. ಅಲ್ಲದೇ, ಇದರಲ್ಲಿ ಯಾವ ಹಂತದಲ್ಲಿ ತೊಡಕುಗಳಾದರೂ, ಅದರ ಮೇಲಿನ ಮತ್ತು ಕೆಳಗಿನ ಹಂತಗಳನ್ನು ತಿದ್ದುವ ಅವಕಾಶವಿರುತ್ತದೆ.

ಇದನ್ನೇ ಒಂದು ಉದಾಹರಣೆಯನ್ನು ತೆಗೆದುಕೊಂಡು ವಿವರಿಸುವುದಾದರೆ, ಈಗ ನಾವು ಯಾವುದೋ ಹಳ್ಳಿಗಾಡಿನಲ್ಲಿ ಒಂದು ವಿಶಿಷ್ಟವಾದ ಉನ್ನತ ವಿದ್ಯಾಭ್ಯಾಸದ ವಿದ್ಯಾಸಂಸ್ಥೆಯನ್ನು ಕಟ್ಟಬೇಕು ಎಂದುಕೊಳ್ಳಿ. ನಮ್ಮ ಉದ್ದೇಶ ಹಳ್ಳಿಗಾಡಿನ ಯುವಕರಿಗೆ ಸಂದರ್ಭೋಚಿತವಾದ, ಉಪಯುಕ್ತವಾದ ಜ್ಞಾನವನ್ನು ಕೊಡುವುದು. ಅಂದಮೇಲೆ, ಇದು ನಮ್ಮ ವಿಶನ್.

ಇದರ ಮಿಶನ್ ಹೇಗಿರಬೇಕು ಎಂದರೆ, ಒಂದು ಆಧುನಿಕವಾದ ಕೃಷಿವಿಜ್ಞಾನ ಮತ್ತು ಸಾಮಾನ್ಯಶಿಕ್ಷಣದ ಮಾದರಿ ಸಂಸ್ಥೆಯಾಗಿ ನಾವು ಇನ್ನು ಐದು ವರ್ಷದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು. ಅದಕ್ಕೆ ತಕ್ಕಂತೆ ನಾವು ಒಂದು ಘೋಷವಾಕ್ಯವನ್ನೂ ರೂಪಿಸಿಕೊಳ್ಳುತ್ತೇವೆ ಎಂದಿಟ್ಟುಕೊಳ್ಳಿ. ಆದರೆ ಆ ಘೋಷವಾಕ್ಯ ಕೃಷಿಗೆ ಸಂಬಂಧಿಸಿರಬೇಕು ಎನ್ನುವ ಕಾರಣಕ್ಕೆ ’ಉಳುವಾ ಯೋಗಿಯ ನೋಡಲ್ಲಿ’ ಎಂದಿದ್ದರೆ, ಪ್ರಯೋಜನವಿಲ್ಲ.

ಸಾಲೇನೋ ಚೆನ್ನಾಗಿದೆ; ಆದರೆ ನಮಗೆ ಬೇಕಿರುವುದು ನಮ್ಮ ಸಂಸ್ಥೆಯ ಸದಸ್ಯರು ದಿನವೂ ಪಾಲಿಸಬೇಕಿರುವ ಒಂದು ಆದರ್ಶವನ್ನು ಹೇಳುವ ಘೋಷವಾಕ್ಯ. ಭಾರತೀಯ ಸೇನೆಯ ಒಂದು ತುಕಡಿಯನ್ನು ಐಎಸ್‌ಓ ಸೇವಾ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿ ಒಂದು ಪ್ರಮಾಣಪತ್ರ ನೀಡಬೇಕಿತ್ತು. ಅದರ ಭಾಗವಾಗಿ ಆ ತುಕಡಿ ತನ್ನದೇ ಒಂದು ಘೋಷವಾಕ್ಯವನ್ನೂ ರೂಪಿಸಿಕೊಳ್ಳಬೇಕಿತ್ತು.

’ವಿ ಆರ್ ದ ರಿಯಲ್ ಮೆನ್’ ’ನಾವೇ ನಿಜವಾದ ಗಂಡಸರು’ ಎಂದು ಅವರು ಮಾಡಿಕೊಂಡಿದ್ದರು. ಅದನ್ನು ದಿಲ್ಲಿಯ ಅವರ ಕೇಂದ್ರಸ್ಥಾನದಲ್ಲಿ ಪ್ರಮುಖವಾಗಿ ಕಾಣುವಂತೆ ಜಾಹೀರು ಮಾಡಿದ್ದರು ಬೇರೆ. ಕೊನೆಗೆ ಕೆಲವರು ಲೇವಡಿ ಮಾಡಿದ ಮೇಲೆ ತೆಗೆದರು ಎನ್ನಿ! ಆದರೂ, ಇಂತಹ ಆಭಾಸಗಳಿಗೇನೂ ಕಡಿಮೆ ಇಲ್ಲ.

ಈಗ ನಮ್ಮ ಮಿಶನ್‌ನ ಪ್ರಕಾರ ನಾವು ಪರಮಾಣು ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಕೊಟ್ಟು ಹಳ್ಳಿಯ ಹೈದರನ್ನು ಅಮೆರಿಕದ ವಿಜ್ಞಾನಿಗಳಾಗಿ ರೂಪಿಸಿತ್ತೇವೆ ಎಂದು ಹೊರಡುವುದು ಮೂರ್ಖತನ. ಅಷ್ಟೇ ಅಲ್ಲ. ನಮ್ಮ ಮಿಶನ್‌ಗೆ ವಿರುದ್ಧವಾದ ನಡವಳಿಕೆ. ನಮ್ಮ ಕಾರ್ಯಯೋಜನೆಗಳೂ ನಮ್ಮ ಮಿಶನ್‌ನ ಪ್ರಕಾರವಾಗಿಯೇ ಇರಬೇಕು. ಹಾಗಾಗಿ, ನಾವು ಕೃಷಿವಿಜ್ಞಾನ, ಗ್ರಾಮೀಣ ಅರ್ಥಶಾಸ್ತ್ರ ಮತ್ತು ಜಾನಪದ ವೈದ್ಯ – ಇಂತಹ ವಿಚಾರಗಳಲ್ಲಿ ಪದವಿಗಳನ್ನು ಕೊಡಬೇಕು. ಅಂತೆಯೇ, ಸಾಮಾನ್ಯಶಿಕ್ಷಣದಲ್ಲಿ ‘ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತೇವೆ’ ಎಂದು ಶೇಕ್ಸ್‌ಪಿಯರನನ್ನೋ, ಅಥವಾ ಸಲ್ಮಾನ್ ರಶ್ದೀಯನ್ನೋ ಪಾಠ ಮಾಡುವ ದುಸ್ಸಾಹಸ ಅನಗತ್ಯ.

ನಮ್ಮ ಧ್ಯೇಯವಾಕ್ಯದ ಪ್ರಕಾರ, ನಮ್ಮ ಹಳ್ಳಿಗಾಡಿನ ಯುವಕರಿಗೆ ಬೇಕಿರುವುದು ಇಂಗ್ಲಿಷಿನಲ್ಲಿರುವ ಮಾಹಿತಿಯನ್ನು ಸ್ವಂತವಾಗಿ ಓದುವ ಸಾಮರ್ಥ್ಯವೇ ಹೊರತು ‘ಯಾವುದೋ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷನ್ನು ಹೀಗೆ ಹೇಳಿಕೊಡುತ್ತಾರೆ; ಆದ್ದರಿಂದ ನಾವೂ ಹೀಗೇ ಹೇಳಿಕೊಡುತ್ತೇವೆ’ ಎನ್ನುವ ಮಾದರಿಯ ಶಿಕ್ಷಣವಲ್ಲ. ಅಂತೆಯೇ, ನಮ್ಮ ಸುತ್ತಲಿನ ಪರಿಸರದಲ್ಲಿ ಹಲವಾರು ಶಾಲೆಗಳಿವೆ. ಆದರೆ ಅವು ಯಾವುದೂ ಕೃಷಿಗೆ ಸಂಬಂಧಿಸಿದ ಯಾವ ಜ್ಞಾನವನ್ನೂ ಹೇಳಿಕೊಡುವುದಿಲ್ಲ. ಮತ್ತು ಅವರು ಕಲಿಸುವ ವಿಜ್ಞಾನಕ್ಕೂ ಮತ್ತು ನಮಗೆ ಹಳ್ಳಿಯಲ್ಲಿ ಬೇಕಿರುವ ವಿಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ. ಹಾಗಾಗಿ, ನಾವು ಅನ್ವಯಿಕ ವಿಜ್ಞಾನದ ಕೋರ್ಸುಗಳನ್ನು ನಡೆಸುತ್ತೇವೆಯೇ ಹೊರತೂ, ಭೌತಶಾಸ್ತ್ರ, ರಸಾಯನಶಾಸ್ತ್ರ ಎನ್ನುವ ರೀತಿಯ ಶಾಸ್ತ್ರೀಯ ವಿಜ್ಞಾನಗಳನ್ನಲ್ಲ.

ಅಷ್ಟೇ ಅಲ್ಲದೇ, ನಮ್ಮ ಉದ್ದೇಶ ಕೃಷಿವಿಜ್ಞಾನಿಗಳನ್ನು ತಯಾರು ಮಾಡುವುದಲ್ಲ. ಅದಕ್ಕೆ ಬೇರೆ ಶಿಕ್ಷಣ ಸಂಸ್ಥೆಗಳಿವೆ. ಮತ್ತು ಅದನ್ನು ಮಾಡುವುದಕ್ಕೆ ಬೇರೆ ರೀತಿಯ ಮೂಲಭೂತ ವಿಜ್ಞಾನದ ಅಗತ್ಯವಿದೆ. ನಾವು ನೀಡುವುದು ಕೇವಲ ಅನ್ವಯಿಕವಾದ ಅಂದರೆ, ಇರುವ ವಿಜ್ಞಾನವನ್ನೇ ಬಳಸಿ, ಕಡಿಮೆ ಖರ್ಚಿನ ಮತ್ತು ಸಂದರ್ಭೋಚಿತವಾದ ಕೃಷಿತಂತ್ರಗಳ ಕುರಿತ ಶಿಕ್ಷಣವನ್ನು. ಹೀಗೇ ಇದನ್ನು ಬೆಳೆಸುತ್ತಾ ಹೋದರೆ, ಮೇಲೆ ಹೇಳಿದ ರೀತಿಯ ಒಂದು ವಿಶನ್ ಡಾಕ್ಯುಮೆಂಟ್‌ ಸಿದ್ಧವಾದೀತು. ಆಗ ನಮ್ಮ ಎಲ್ಲಾ ಕೆಲಸಗಳೂ ಆ ಯೋಜನಾ ನಕ್ಷೆಯ ಅನುಸಾರವಾಗಿಯೇ ಇರುತ್ತದೆ.

ಸ್ವಂತಿಕೆ ಬೇಕಲ್ಲವೇ!
ಸಾಮಾನ್ಯ ಶಿಕ್ಷಣದಲ್ಲಿ ‘ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತೇವೆ’ ಎಂದು ಶೇಕ್ಸ್‌ಪಿಯರನನ್ನೋ, ಅಥವಾ ಸಲ್ಮಾನ್ ರಶ್ದೀಯನ್ನೋ ಪಾಠ ಮಾಡುವ ದುಸ್ಸಾಹಸ ಅನಗತ್ಯ. ನಮ್ಮ ಧ್ಯೇಯವಾಕ್ಯದ ಪ್ರಕಾರ, ನಮ್ಮ ಹಳ್ಳಿಗಾಡಿನ ಯುವಕರಿಗೆ ಬೇಕಿರುವುದು ಇಂಗ್ಲಿಷಿನಲ್ಲಿರುವ ಮಾಹಿತಿಯನ್ನು ಸ್ವಂತವಾಗಿ ಓದುವ ಸಾಮರ್ಥ್ಯವೇ ಹೊರತು ‘ಯಾವುದೋ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷನ್ನು ಹೀಗೆ ಹೇಳಿಕೊಡುತ್ತಾರೆ; ಆದ್ದರಿಂದ ನಾವೂ ಹೀಗೇ ಹೇಳಿಕೊಡುತ್ತೇವೆ’ ಎನ್ನುವ ಮಾದರಿಯ ಶಿಕ್ಷಣವಲ್ಲ.

ಗುಣಮಟ್ಟ ಸುಧಾರಿಸಬೇಕು
ನಮ್ಮ ಯಾವ ವಿದ್ಯಾ ಸಂಸ್ಥೆಗಳಿಗೂ ತಮ್ಮ ಪರಿಸರಕ್ಕೆ ಪ್ರಸ್ತುತವಾದಂತೆ ತಾವು ಹೇಗೆ ಭಿನ್ನವಾಗಿರಬೇಕು ಎಂದು ತಿಳಿದಿರುವುದಿಲ್ಲ. ಸರ್ಕಾರ ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದರೂ ಒಂದೇ ಗುರಿ, ಎಲ್ಲೋ ಶಿಡ್ಲಘಟ್ಟದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದರೂ ಅದೇ ಗುರಿ ಎನ್ನುವ ಮನಃಸ್ಥಿತಿಯೇ ಇರುತ್ತದೆ. ಬೇರೆಬೇರೆ ಸಂದರ್ಭಕ್ಕೆ ಯಾವಯಾವ ರೀತಿಯ ತಜ್ಞತೆ ಇರಬೇಕು ಎನ್ನುವ ಪರಿಜ್ಞಾನವೂ ಇರುವುದಿಲ್ಲ. ಸುಮ್ಮನೆ ಯುಜಿಸಿ ಹೇಳುವ ಯಾವುದೋ ಒಂದು ಮಾಪಕದ ಪ್ರಕಾರ ಇಷ್ಟು ಅಂಕ ತೆಗೆದರೆ ಸಾಕು ಎನ್ನುವಂತ ರೀತಿಯಲ್ಲಿ ಒಂದಿಪ್ಪತ್ತು ಜನರನ್ನು ಸಂದರ್ಶನ ಮಾಡಿ ಅದರಲ್ಲಿ ಒಂದೈದು ಜನಕ್ಕೆ ಕೆಲಸಕ್ಕೆ ಕೊಡುತ್ತಾರೆ. ಇದು ಲಂಚ–ರುಷುವತ್ತಿನ ಮಾತಲ್ಲ. ಹಾಗೆಲ್ಲಾ ಲಂಚ–ರುಷುವತ್ತು ಇಲ್ಲದಿದ್ದರೂ, ಒಂದು ನಿರ್ದಿಷ್ಟ ಯೋಜನೆಯ ಕೊರತೆಯಿಂದಾಗಿ ಇವರು ನೇಮಕ ಮಾಡಿಕೊಂಡ ಶಿಕ್ಷಕರ ಗುಣಮಟ್ಟವೇನೂ ಸುಧಾರಿಸುವುದಿಲ್ಲ.

*


–ಎ.ಪಿ. ಅಶ್ವಿನ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT