7

ಮಯಂಕ್‌ ಹೆಜ್ಜೆ ಗುರುತು...

Published:
Updated:
ಮಯಂಕ್‌ ಹೆಜ್ಜೆ ಗುರುತು...

ಕರ್ನಾಟಕ ಕ್ರಿಕೆಟ್‌ ಲೋಕ ಕಂಡ ಪ್ರತಿಭಾನ್ವಿತ ಆಟಗಾರರಲ್ಲಿ ಮಯಂಕ್‌ ಅಗರವಾಲ್‌ ಕೂಡ ಒಬ್ಬರು. ಎಳವೆಯಿಂದಲೇ ಕ್ರಿಕೆಟ್‌ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದ ಅವರು ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಶಾಲಾ ದಿನಗಳಲ್ಲೇ ಆಟದ ಪಾಠಗಳನ್ನು ಕಲಿತು ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ಮೋಡಿ ಮಾಡಿದ್ದರು.

2008–09ರ ಕೂಚ್‌ ಬೆಹಾರ್‌ ಟ್ರೋಫಿ, ಮಯಂಕ್‌ ವೃತ್ತಿ ಬದುಕಿಗೆ ತಿರುವು ನೀಡಿತ್ತು. ಆ ಟೂರ್ನಿಯಲ್ಲಿ ಐದು ಪಂದ್ಯಗಳಿಂದ 54ರ ಸರಾಸರಿಯಲ್ಲಿ 432ರನ್‌ ಗಳಿಸಿ ತಮ್ಮ ಪ್ರತಿಭೆಯನ್ನು ಜಗಜ್ಜಾಹೀರು ಮಾಡಿದ್ದರು.

2009ರಲ್ಲಿ ಹೋಬರ್ಟ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 19 ವರ್ಷದೊಳಗಿನವರ ಏಕದಿನ ಪಂದ್ಯದಲ್ಲೂ ಮಯಂಕ್‌ ಜಾದೂ ಮಾಡಿದ್ದರು. 160ರನ್‌ ಗಳಿಸಿದ್ದ ಅವರು ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.

2010ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದ ಮಯಂಕ್‌ ಕ್ರಿಕೆಟ್‌ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು, ಆ ಟೂರ್ನಿಯಲ್ಲಿ ಭಾರತದ ಪರ ಹೆಚ್ಚು ರನ್‌ ದಾಖಲಿಸಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ (ಐಪಿಎಲ್‌) ಆಡಿ ಸೈ ಎನಿಸಿಕೊಂಡಿದ್ದಾರೆ.

ನವೆಂಬರ್‌ 1ರಂದು ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಅಜೇಯ ತ್ರಿಶತಕ ದಾಖಲಿಸಿದ್ದ ಅವರು ಈ ಸಾಧನೆ ಮಾಡಿದ ರಾಜ್ಯದ ಮೂರನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. ಹೋದ ವಾರ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಡೆದಿದ್ದ ದೆಹಲಿ ವಿರುದ್ಧದ ಹಣಾಹಣಿಯಲ್ಲೂ ಮಯಂಕ್‌ ಬ್ಯಾಟಿಂಗ್‌ ಸೊಬಗು ಅನಾವರಣಗೊಂಡಿತ್ತು. ಈ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಸತತ ಎರಡು ರಣಜಿ ಪಂದ್ಯಗಳಲ್ಲಿ ತ್ರಿಶತಕ ಮತ್ತು ಶತಕ ಬಾರಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು.

ಈ ಸಾಧನೆ ಮಾಡಿದ ಕರ್ನಾಟಕದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ರಣಜಿಯಲ್ಲಿ ಚೊಚ್ಚಲ ತ್ರಿಶತಕ ಸಿಡಿಸಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ?

ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ತ್ರಿಶತಕ ಬಾರಿಸುತ್ತೇನೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದರಿಂದ ಹೆಚ್ಚು ರನ್‌ ಗಳಿಸಲೇಬೇಕು ಎಂದು ತೀರ್ಮಾನಿಸಿದ್ದೆ. ಎರಡನೇ ದಿನದಾಟದಲ್ಲಿ ದ್ವಿಶತಕ ಸಿಡಿಸಿದ್ದರಿಂದ ನಿರಾಳನಾಗಿದ್ದೆ. ಹೀಗಾಗಿ ಆ ದಿನ ರಾತ್ರಿ ನಿಶ್ಚಿಂತೆಯಿಂದ ಮಲಗಿದೆ. ಮರು ದಿನ ಯಾವುದೇ ಒತ್ತಡ ಇಲ್ಲದೆಯೇ ಅಂಗಳಕ್ಕಿಳಿದಿದ್ದೆ. 300 ರನ್‌ ಗಳಿಸಿದ ಬಳಿಕ ಕ್ರೀಸ್‌ನ ಇನ್ನೊಂದು ಬದಿಯಲ್ಲಿದ್ದ ಸಿ.ಎಂ.ಗೌತಮ್ ಅಪ್ಪಿಕೊಂಡು ಅಭಿನಂದಿಸಿದರು. ಆಗ ಸಂತಸದಿಂದ ಕಣ್ಣುಗಳು ತುಂಬಿ ಬಂದಿದ್ದವು.

* ಕ್ರಿಕೆಟ್‌ ಪಯಣ ಶುರುವಾಗಿದ್ದು ಹೇಗೆ?

ಎಳವೆಯಿಂದಲೂ ಕ್ರಿಕೆಟ್‌ ಬಗ್ಗೆ ಆಸಕ್ತಿ ಇತ್ತು. ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕರ ಶಾಲೆಯಲ್ಲಿ ಓದುತ್ತಿದ್ದಾಗ ಶಾಲಾ ಲೀಗ್‌ಗಳಲ್ಲಿ ಆಡುತ್ತಿದ್ದೆ. ಇದು ಆಟದಲ್ಲಿ ನೈಪುಣ್ಯ ಸಾಧಿಸಲು ನೆರವಾಯಿತು.

* ಈ ಬಾರಿಯ ರಣಜಿ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದೀರಿರಲ್ಲವೇ?

ಅಸ್ಸಾಂ ಮತ್ತು ಹೈದರಾಬಾದ್‌ ವಿರುದ್ಧದ ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕ ಹಾಗೆ ಆಡಿರಲಿಲ್ಲ. ಹೀಗಾಗಿ ಬೇಸರವಾಗಿತ್ತು. ಹಾಗಂತ ವಿಶ್ವಾಸ ಕಳೆದುಕೊಳ್ಳಲಿಲ್ಲ. ಆಟದಲ್ಲಿ ಏಳು ಬೀಳು ಸಾಮಾನ್ಯ. ಪ್ರತಿ ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಅದು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತಿದ್ದೇನೆ. ಈ ಮೂಲಕ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳುವತ್ತ ಚಿತ್ತ ಹರಿಸುತ್ತಿದ್ದೇನೆ.

*ನೀವು ಆಕ್ರಮಣಕಾರಿ ಮನೋಭಾವದ ಆಟಗಾರ ಎಂದೇ ಗುರುತಿಸಿಕೊಂಡವರು. ಮಹಾರಾಷ್ಟ್ರ ಎದುರು ಸುಮಾರು 12 ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದಿರಿ. ಅದು ಹೇಗೆ ಸಾಧ್ಯವಾಯಿತು?

ಟಿ–20 ಮಾದರಿಯಲ್ಲಿ ಆಕ್ರಮಣಕಾರಿ ಆಟ ಆಡುವುದು ಅತ್ಯಗತ್ಯ. ಟೆಸ್ಟ್‌ ಮಾದರಿಯಲ್ಲಿ ಶಾಂತ ಚಿತ್ತದಿಂದ ಆಡಬೇಕು ಎಂಬುದನ್ನು ಅರಿತಿದ್ದೆ. ತಂಡದ ಯೋಜನೆಗೆ ಅನುಗುಣವಾಗಿ ಬ್ಯಾಟಿಂಗ್‌ ಮಾಡಬೇಕು ಎಂಬುದೂ ಗಮನದಲ್ಲಿತ್ತು. ಹೀಗಾಗಿ ಕೆಟ್ಟ ಹೊಡೆತಗಳಿಗೆ ಕೈ ಹಾಕದೆ, ಸುದೀರ್ಘ ಇನಿಂಗ್ಸ್‌ ಕಟ್ಟಲು ನಿಶ್ಚಯಿಸಿದೆ. ಎಲ್ಲವೂ ಅಂದುಕೊಂಡಂತೆಯೇ ಆಯಿತು.

* ಆರ್‌.ಸಮರ್ಥ್‌ ಜೊತೆಗಿನ ಹೊಂದಾಣಿಕೆ ಬಗ್ಗೆ ಹೇಳಿ?

ಶಾಲಾ ದಿನಗಳಿಂದಲೂ ನಾವು ಜೊತೆಯಾಗಿ ಆಡುತ್ತಾ ಬಂದಿದ್ದೇವೆ. ಹೀಗಾಗಿ ಉತ್ತಮ ಹೊಂದಾಣಿಕೆ ಇದೆ. ಸಮರ್ಥ್‌ ಜೊತೆ ಆಡುವುದು ಹೆಚ್ಚು ಖುಷಿ ನೀಡುತ್ತದೆ. ನಾವು ಪ್ರತಿ ಪಂದ್ಯದಲ್ಲೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಗುರಿಯೊಂದಿಗೆ ಅಂಗಳಕ್ಕಿಳಿಯುತ್ತೇವೆ. ಹೀಗಾಗಿ ಉತ್ತಮ ಜೊತೆಯಾಟಗಳು ಮೂಡಿಬರುತ್ತಿವೆ. ತಂಡಕ್ಕೆ ಉತ್ತಮ ಆರಂಭ ನೀಡಿದರೆ ನಂತರ ಬರುವ ಆಟಗಾರರು ನಿರಾತಂಕವಾಗಿ ರನ್ ಪೇರಿಸಬಹುದು. ಇದರಿಂದ ತಂಡಕ್ಕೆ ಹೆಚ್ಚು ಲಾಭವಾಗುತ್ತದೆ. ಜೊತೆಗೆ ಎದುರಾಳಿಗಳ ಮೇಲೂ ಒತ್ತಡ ಹೇರಬಹುದು.

* ಈ ಬಾರಿ ತಂಡದ ಗುರಿ?

ಒಂದು ತಂಡವಾಗಿ ಎಲ್ಲರೂ ಕಠಿಣ ಪರಿಶ್ರಮ ಪಡುತ್ತಿದ್ದೇವೆ. ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿಯುತ್ತಿದ್ದೇವೆ. ಈ ಬಾರಿ ಪ್ರಶಸ್ತಿ ಗೆಲ್ಲಬೇಕೆಂಬ ಗುರಿ ಇದೆ.

* ನಾಯಕ ವಿನಯ್‌ ಕುಮಾರ್‌ ಬಗ್ಗೆ ಹೇಳಿ?

ವಿನಯ್‌, ಅತ್ಯುತ್ತಮ ನಾಯಕ. ಅವರು ಭಾರತ ತಂಡದಲ್ಲಿ ಆಡಿದ ಅನುಭವಿ. ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಾಗ ಬೆಂಬಲವಾಗಿ ನಿಂತರು. ಒಂದೆರಡು ಪಂದ್ಯದಲ್ಲಿ ರನ್‌ ಗಳಿಸದಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡ. ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡು ಎಂದು ಪ್ರೋತ್ಸಾಹಿಸಿದರು.

* ಜೀವನದ ಗುರಿ?

ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಬೇಕೆಂಬ ಕನಸಿದೆ. ಈ ಹಾದಿಯಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದೇನೆ.

* ಫಿಟ್‌ನೆಸ್‌ಗಾಗಿ ಏನು ಮಾಡುತ್ತೀರಿ?

ದೂರ ಅಂತರದ ಓಟಕ್ಕೆ ಹೆಚ್ಚು ಒತ್ತು ನೀಡುತ್ತೇನೆ. 5ರಿಂದ 6 ಕಿಲೊ ಮೀಟರ್ಸ್‌ ಓಡಿದರೆ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಪಂದ್ಯದ ವೇಳೆ ರನ್‌ಗಾಗಿ ಓಡುವಾಗ ಮತ್ತು ಚೆಂಡನ್ನು ಲೀಲಾಜಾಲವಾಗಿ ಬಾರಿಸಲು ಇದು ನೆರವಾಗುತ್ತದೆ. ಜಿಮ್‌ನಲ್ಲೂ ಸಾಕಷ್ಟು ಕಸರತ್ತು ಮಾಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry