7

ಭರವಸೆಯ ಬೆಳಕು ಸೂರಜ್‌...

Published:
Updated:
ಭರವಸೆಯ ಬೆಳಕು ಸೂರಜ್‌...

ರಾಜ್ಯ ಹಾಗೂ ರಾಷ್ಟ್ರ ಟೆನಿಸ್‌ಗೆ ಮೈಸೂರಿನ ಕೊಡುಗೆ ಅಪಾರ. 80ರ ದಶಕದಲ್ಲಿ ರಾಜ್ಯ ಟೆನಿಸ್‌ ತಂಡದಲ್ಲಿ ಈ ನಗರಿಯದ್ದೇ ಸಿಂಹಪಾಲು. ರಾಜಧಾನಿ ಬೆಂಗಳೂರಿಗಿಂತ ಹೆಚ್ಚು ಮಂದಿ ಟೆನಿಸ್ ಆಟಗಾರರನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಹೊಂದಿದೆ. ಖುಷಿಯ ವಿಚಾರವೆಂದರೆ ಈಗಲೂ ಹಿಂದಿನ ಪರಂಪರೆ ಉಳಿಸಿಕೊಂಡಿದೆ. ಈ ನಗರದಿಂದ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಆಟಗಾರರೇ ಅದಕ್ಕೆ ಸಾಕ್ಷಿ.

ಅಂಥವರಲ್ಲಿ ಸೂರಜ್‌ ಪ್ರಬೋಧ್‌ ಕೂಡ ಒಬ್ಬರು. ಮೈಸೂರಿನ ಈ ಆಟಗಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ವಿವಿಧ ವಯೋಮಿತಿಯ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಕೆಲ ದಿನಗಳ ಹಿಂದೆ ಒಡಿಶಾದ ಬರ್ಹಾಂಪುರದಲ್ಲಿ ನಡೆದ ಎಐಟಿಎ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಭಾರತದ ಅಗ್ರ ಐದು ಆಟಗಾರರಲ್ಲಿ ಒಬ್ಬರೆನಿಸಿರುವ ತಮಿಳುನಾಡಿನ ವಿಜೇಶ್‌ ಸುಂದರ್‌ ಅವರನ್ನು ಮಣಿಸಿದ್ದು ಮತ್ತಷ್ಟು ಸ್ಫೂರ್ತಿ ತುಂಬಿದೆ. ಅವರ ಗುರಿ ಭಾರತದ ಡೇವಿಸ್‌ ಕಪ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು. ಅದಕ್ಕಾಗಿ ಕಠಿಣ ಪ್ರಯತ್ನ ಹಾಕಿ ತಾಲೀಮು ನಡೆಸುತ್ತಿದ್ದಾರೆ.

ಹತ್ತನೇ ವಯಸ್ಸಿನಲ್ಲಿಯೇ ಸೂರಜ್‌ಗೆ ಟೆನಿಸ್‌ ಮೇಲೆ ಪ್ರೀತಿ ಮೂಡಿತು. 2009ರಲ್ಲಿ ಕಲಬುರ್ಗಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದ ಟೆನಿಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಆಗಲೇ ಅವರ ಪ್ರತಿಭೆ ಅನಾವರಣಗೊಂಡಿತ್ತು.

ಸೂರಜ್ ಅವರ ತಂದೆ ರೇಣುಕಾನಂದ ಪ್ರಬೋಧ್‌ ಹಾಗೂ ತಾಯಿ ತೇಜಾ. ಇವರಿಬ್ಬರು ಪುತ್ರನ ಟೆನಿಸ್‌ ಆಟಕ್ಕಾಗಿ ಮಾಡಿದ ತ್ಯಾಗ ಅಷ್ಟಿಷ್ಟಲ್ಲ. ‘ಪುತ್ರನ ಕನಸನ್ನು ಸಾಕಾರಗೊಳಿಸುವುದು ನಮ್ಮ ಜವಾಬ್ದಾರಿ. ಅದಕ್ಕೆ ಯಾವುದೇ ತ್ಯಾಗ ಮಾಡಲು ಸಿದ್ಧ’ ಎನ್ನುತ್ತಾರೆ ಅವರು.

22 ವರ್ಷ ವಯಸ್ಸಿನ ಸೂರಜ್‌ ಅವರು ಸದ್ಯ ಲೂದಿಯಾನ ಬಳಿಯ ಹಾರ್ವೆಸ್ಟ್‌ ಟೆನಿಸ್‌ ಅಕಾಡೆಮಿಯಲ್ಲಿ ಸರ್ಬಿಯಾದ ಕೋಚ್‌ ಮಿಲೋಸ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪುಣೆ ಓಪನ್‌ ಹಾಗೂ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಗಳಿಗೆ ಸಜ್ಜಾಗುತ್ತಿದ್ದಾರೆ. ಬೆಂಗಳೂರು ಓಪನ್‌ ಟೂರ್ನಿಯು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ ಅಂಗಳದಲ್ಲಿ ನವೆಂಬರ್‌ 20ರಂದು ಆರಂಭವಾಗಲಿದೆ.

‘ವಿದೇಶಗಳಲ್ಲಿ ಹೆಚ್ಚು ಹೆಚ್ಚು ಟೂರ್ನಿ ಆಡಿದರೆ ರ‍್ಯಾಂಕಿಂಗ್ ಹಾಗೂ ಕೌಶಲ ಸುಧಾರಿಸುತ್ತದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅದೇನೇ ಇರಲಿ, ರ‍್ಯಾಂಕಿಂಗ್ ಸುಧಾರಿಸಿಕೊಳ್ಳುವುದು ನನ್ನ ಸದ್ಯದ ಗುರಿ. ತರಬೇತಿಯು ಉತ್ತಮ ಹಾದಿಯಲ್ಲಿ ಸಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ವಿಶ್ವ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಸದ್ಯ ಅವರು 1400ನೇ ಸ್ಥಾನ ಹೊಂದಿದ್ದಾರೆ. ಕಳೆದ ಆರು ತಿಂಗಳಲ್ಲಿ 200 ಸ್ಥಾನ ಮೇಲೇರಿದ್ದಾರೆ. ಭಾರತದಲ್ಲಿ ಅಗ್ರ 20 ರ‍್ಯಾಂಕ್‌ನೊಳಗಿದ್ದಾರೆ.

‘ಹಾರ್ವೆಸ್ಟ್‌ ಅಕಾಡೆಮಿ ಸೇರಿದ ಮೇಲೆ ತಾಂತ್ರಿಕವಾಗಿ ಕೆಲ ಬದಲಾವಣೆ ಮಾಡಿಕೊಂಡಿದ್ದೇನೆ. ಹಿಂದೆ ನನ್ನ ತಂದೆಯೇ ಮಾರ್ಗದರ್ಶನ ನೀಡುತ್ತಿದ್ದರು. ಈಗ ವಿದೇಶಿ ಕೋಚ್‌ ಇದ್ದಾರೆ. ಅವರು ನನ್ನ ಆಟದಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ. ತಂದೆಯವರು ಮಾನಸಿಕವಾಗಿ ಧೈರ್ಯ ತುಂಬುತ್ತಾರೆ’ ಎಂದು ಸೂರಜ್‌ ಹೇಳುತ್ತಾರೆ.

ಈ ಹಿಂದೆ ಮೈಸೂರಿನವರೇ ಆದ ಪ್ರಜ್ವಲ್‌ ಜೊತೆಗೂಡಿ ಡಬಲ್ಸ್‌ನಲ್ಲಿಯೂ ಆಡುತ್ತಿದ್ದ ಸೂರಜ್‌ ಈಗ ಸಿಂಗಲ್ಸ್‌ನತ್ತ ಹೆಚ್ಚು ಚಿತ್ತ ಹರಿಸುತ್ತಿದ್ದಾರೆ.

‘ಈಚೆಗೆ ಮಲೇಷ್ಯಾದಲ್ಲಿ ನಡೆದ ಐಟಿಎಫ್‌ ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ಹಾಗೂ ಪ್ರೀ ಕ್ವಾರ್ಟರ್‌ ಫೈನಲ್‌ ತಲುಪಿದ್ದೆ. ಈಚೆಗೆ ನನ್ನ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry