ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಭಾಷೆಯಾಗಿ ಬೆಳೆಯಬೇಕಿದೆ ಕನ್ನಡ

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

-ರಾಜಾರಾಮ ತೋಳ್ಪಾಡಿ ನಿತ್ಯಾನಂದ ಬಿ. ಶೆಟ್ಟಿ

**

ಎರಡು ಘಟನೆಗಳನ್ನು ಉಲ್ಲೇಖಿಸಿ ನಮ್ಮ ಓದು ಮತ್ತು ಭಾಷೆಗೆ ಬಂದಿರುವ ತೊಡಕುಗಳ ಕುರಿತು ಕೆಲವು ಮಾತುಗಳನ್ನು ಬರೆಯುತ್ತಿದ್ದೇವೆ. ಮೂರೂವರೆ ವರುಷಗಳ ಹಿಂದೆ ಯು.ಆರ್. ಅನಂತಮೂರ್ತಿಯವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ನರೇಂದ್ರ ಮೋದಿಯವರು ಪ್ರಧಾನಿಯಾದರೆ ನಾನು ಈ ದೇಶದಲ್ಲಿ ಇರುವುದಿಲ್ಲ’ ಎಂದಿದ್ದರು. ಫಲಿತಾಂಶ ಬಂದು ಮೋದಿಯವರು ಪ್ರಧಾನಿಯಾದಾಗ ನಮ್ಮಲ್ಲಿ ಕೆಲವರು ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಹೋಗುವ ವಿಮಾನದ ಟಿಕೆಟ್ ಕಳಿಸಿದ್ದರು.

ಯುದ್ಧದಲ್ಲಿ ಹುತಾತ್ಮನಾದ ತನ್ನ ತಂದೆಯ ಸಾವನ್ನು ಕಾರ್ಗಿಲ್ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಿಕೊಂಡ ಗುರ್‌ಮೆಹರ್ ಕೌರ್ ಎಂಬ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ‘ನನ್ನ ಅಪ್ಪನನ್ನು ಕೊಂದದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದಿದ್ದರು. ನಾವು ಅವರನ್ನು ಗೇಲಿ ಮಾಡಿದೆವು. ನಮ್ಮ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರಂತೂ ‘ಪಾಕಿಸ್ತಾನದ ವಿರುದ್ಧ ತ್ರಿಶತಕ ಹೊಡೆದದ್ದು ನಾನಲ್ಲ, ನನ್ನ ಬ್ಯಾಟು’ ಎಂದು ಕೌರ್‌ ಅವರನ್ನು ಹಂಗಿಸಿದ್ದರು.

ನಿದರ್ಶನಕ್ಕಾಗಿ ನಾವು ಆರಿಸಿಕೊಂಡಿರುವ ಈ ಪ್ರಸಂಗಗಳು ಮಾತಿಗೆ ಇರಬಹುದಾದ ಇನ್ನೊಂದು ಅರ್ಥವನ್ನು ಕೊಂದುಬಿಟ್ಟಿವೆ. ಮಾತಿಗಿರುವ ಹಲವು ಅರ್ಥಸಾಧ್ಯತೆಗಳನ್ನು ಕೊಲೆ ಮಾಡಿರುವ ನಾವು, ನಮ್ಮ ಸಾರ್ವಜನಿಕ-ರಾಜಕೀಯ ಬದುಕಿನ ಕುರಿತು ಯಾವುದೇ ಬಗೆಯ ಸ್ವ-ವಿಮರ್ಶೆಯ ಮಾತುಗಳನ್ನು ಸಹಿಸಲಾರೆವು ಎಂಬ ಅಸಹನೆಯ ಸಂದೇಶವನ್ನು ಈ ಮೂಲಕ ರವಾನಿಸಿದ್ದೇವೆ.

ಮಾತು-ಬರಹಗಳ ಮೂಲಕ ಸಾರ್ವಜನಿಕ ಸಂವಾದದಲ್ಲಿ ತೊಡಗಿರುವವರ ಮತ್ತು ಇವರನ್ನು ಓದುವ-ಕೇಳುವ ಜನಸಮುದಾಯದ ನಡುವೆ ನಮ್ಮ ಕಾಲದಲ್ಲಿ ಅಕರಾಳ ವಿಕರಾಳವಾದ ಸಂಬಂಧ ಯಾಕಿದೆ...? ಸಾರ್ವಜನಿಕ ಸಭ್ಯತೆಯ ಚೌಕಟ್ಟಿನಲ್ಲಿ ಬಂದ ಮಾತು-ಬರಹಗಳಿಗೇ ಹೀಗಾಗಬಹುದಾದರೆ ಸಾಂಪ್ರದಾಯಿಕತೆಯ, ಪ್ರಗತಿಪರತೆಯ, ಪ್ರಜಾಸತ್ತೆಯ ಅಹಂ ಅನ್ನು ಕೆಣಕುವ ಬೌದ್ಧಿಕ ಸೂಕ್ಷ್ಮತೆಯ ಮಾತುಗಳಿಗೆ ನಮ್ಮಲ್ಲಿ ಜಾಗವಿದೆಯೇ, ನಾವು ಅದಕ್ಕೆ ತಯಾರಿದ್ದೇವೆಯೇ ಎನ್ನುವ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡು ಯೋಚಿಸುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಸಂದರ್ಭ.

ಪ್ರಗತಿಪರರು ಮೆಚ್ಚುವ ಹಾಗೆ, ಬಲಪಂಥೀಯರು ಸಂಭ್ರಮಿಸುವ ಹಾಗೆ ಬರವಣಿಗೆಗೆ– ಮಾತುಗಾರಿಕೆಗೆ ತೊಡಗುವವರು ತಾವು ಉದ್ದೇಶಿಸುವ ಜನರನ್ನು ಒಟ್ಟು ಮಾಡುವುದಕ್ಕೆ; ಹಾಗೆಯೇ ತಮ್ಮವರು ಮೆಚ್ಚಿ ಉಘೇ ಉಘೇ ಎಂದು ಜಯಕಾರ ಮಾಡುವುದಕ್ಕಾಗಿ ಮಾತಾಡುತ್ತಾರೆ ಅಥವಾ ಬರೆಯುತ್ತಾರೆ. ಆದರೆ ನಮ್ಮ ಬೌದ್ಧಿಕ ಎದುರಾಳಿಯ, ರಾಜಕೀಯ ವಿರೋಧಿಯ ವಾದದಲ್ಲೂ ಕಿಂಚಿತ್ ಸತ್ಯ ಇರಬಹುದಲ್ಲವೇ ಎಂಬ ಅನುಮಾನ ನಮ್ಮಲ್ಲಿರದಿದ್ದರೆ ನಮ್ಮ ಮಾತು ಮತ್ತು ಬರಹಗಳು ಗರ್ಜನೆಯಾಗುತ್ತವೆ. ಅನಂತಮೂರ್ತಿಯವರ ಗಾಢ ವಿಷಾದವನ್ನು, ಗುರ್‌ಮೆಹರ್‌ ಕೌರ್‌ ಲೋಕಜ್ಞಾನವನ್ನು ಧಿಕ್ಕರಿಸಿದವರು ಯಾರೋ ಹೊರಗಿನವರಲ್ಲ, ಅವರು ನಮ್ಮವರೇ ಮತ್ತು ನಮ್ಮೊಳಗಿನವರೇ ಅಥವಾ ಅದು ನಾವೇ.

ನಮ್ಮ ಸಾಮಾಜಿಕ-ರಾಜಕೀಯ ವಾಗ್ವಾದಗಳಿಗೆ ಮತ್ತು ನಮ್ಮ ಬೌದ್ಧಿಕ ಚಿಂತನೆಗಳಿಗೆ ಈ ಅಪಹಾಸ್ಯದ ಅಪಾಯಗಳು ಎಲ್ಲಿಂದ ಬರುತ್ತಿವೆ? ‘ನಮಗೆ ಇಷ್ಟವಾಗುವ ಮಾತುಗಳನ್ನು ಮಾತ್ರ ಆಡು’ ಎಂದು ನಮ್ಮ ಕಾಲದ ಸಾಮಾಜಿಕ- ರಾಜಕೀಯ ವಲಯ ಒಂದೆಡೆ ನಮ್ಮನ್ನು ಬೆದರಿಸಿದರೆ, ಇನ್ನೊಂದೆಡೆ ‘ನಮಗೆ ಅರ್ಥವಾಗುವ ಮಾತುಗಳನ್ನು ಮಾತ್ರ ಆಡು’ ಎಂದು ನಮ್ಮ ಸುಶಿಕ್ಷಿತ ವಲಯ ನಮ್ಮನ್ನು ಗದರಿಸುತ್ತದೆ. ಮಾತು ಮತ್ತು ಬರವಣಿಗೆಯ ಈ ಇಷ್ಟಾರ್ಥ ಸಿದ್ಧಿಯ ಪ್ರಯತ್ನದಲ್ಲಿ ಸೊರಗಿ ಹೋಗಬಹುದಾದ ಕನ್ನಡದ ವಿಮರ್ಶಾ ದೃಷ್ಟಿಯನ್ನು ಹಾಗೂ ಕಳೆದುಹೋಗಬಹುದಾದ ಅದರ ವಿಶ್ವಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಓದು ಮತ್ತು ಬರಹದ ಕ್ರಿಯಾಚರಣೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಗುರುತಿಸುವುದು ಅರ್ಥಪೂರ್ಣ.

ನಮಗೆ ಗೊತ್ತಿರುವ ಕನ್ನಡದಲ್ಲಿ ನಮಗೆ ಅರ್ಥವಾಗುವ ಹಾಗೆ ಬರೆಯಬೇಕು ಮತ್ತು ಯಾವುದನ್ನು ನಾವು ಸತ್ಯವೆಂದು ಖಡಾಖಂಡಿತವಾಗಿ ಬಗೆದಿದ್ದೇವೆಯೋ ಅವುಗಳಿಗೆ ಭಿನ್ನವಾದ ಅಥವಾ ವಿರುದ್ಧವಾದ ಮಾತುಗಳನ್ನು ಹೇಳಕೂಡದು ಎಂದು ತಾಕೀತು ಮಾಡುವುದು ಬೌದ್ಧಿಕ ಅಸಹನೆಯ ಇನ್ನೊಂದು ಮುಖ. ಬಹುತೇಕ ಸಂದರ್ಭಗಳಲ್ಲಿ ನಾವು ‘ಅಸಹನೆ ಎನ್ನುವ ವಿಷಜಂತುವನ್ನು ನಮ್ಮ ವೈರಿಗಳು ಎಂದು ನಾವು ಗುರುತಿಸುವ ಸಿದ್ಧಾಂತದ ಪ್ರವರ್ತಕರಲ್ಲಿ ಅಥವಾ ಅವರನ್ನು ಅನುಮೋದಿಸುವ ಗುಂಪುಗಳಲ್ಲಿ ಮಾತ್ರ’ ಕಾಣುತ್ತೇವೆ. ಆ ವಿಷಜಂತು ನಮ್ಮಲ್ಲೂ ಇರಬಹುದೇ ಎಂಬ ಅನುಮಾನಕ್ಕೆ ನಾವು ಎಡೆ ಮಾಡಿಕೊಡುವುದಿಲ್ಲ. ನಮ್ಮ ವೈರಿ ಹೊರಗಡೆ ಇದ್ದಾನೆ ಎಂದು ತಿಳಿಯುವುದು ಅತ್ಯಂತ ಸಂತೃಪ್ತಿಯ ವಿಷಯ. ಆದರೆ ಆತ ನಮ್ಮೊಳಗಡೆಯೂ ಇರಬಹುದೇ ಎಂದು ಅನುಮಾನಿಸುವುದು ತುಂಬಾ ಕಿರಿಕಿರಿ ಉಂಟು ಮಾಡುವ ಸಂಗತಿ. ಹಾಗಾಗಿ, ನಮ್ಮೆಲ್ಲರ ಬೌದ್ಧಿಕ ಹಾಗೂ ರಾಜಕೀಯ ಪ್ರಯತ್ನಗಳು ನಮಗೆಂದೂ ಸಂಬಂಧಪಡದ, ನಾವೆಂದೂ ಜವಾಬ್ದಾರರಲ್ಲದ ಹೊರಗಿನ ವೈರಿಗಳನ್ನು ಗುರುತಿಸುವ ಕೆಲಸದಲ್ಲಿಯೇ ತಲ್ಲೀನವಾಗಿ ಸುಖಿಸುತ್ತಿವೆ.

ನಮ್ಮಲ್ಲಿ ಹುದುಗಿರುವ ಆದರೆ ನಾವು ಒಪ್ಪಿಕೊಳ್ಳಲು ಇಷ್ಟಪಡದ ಬೌದ್ಧಿಕ ಅಸಹನೆಯು ಭಾಷೆಯ ಮತ್ತು ವಿಚಾರಗಳ ಅನೇಕ ಸಾಧ್ಯತೆಗಳ ಕುರಿತು ಒಂದು ಜಾಣ ಕುರುಡುತನವನ್ನು ಅಥವಾ ಕಿವುಡುತನವನ್ನು ಪ್ರದರ್ಶಿಸುತ್ತದೆ. ಇದು ಕನ್ನಡದ ಭಾಷೆಯ ವಿಸ್ತಾರದ ಮತ್ತು ಅದು ಗಳಿಸಿಕೊಳ್ಳಬೇಕಾದ ಹೊಸ ವಿಶ್ವಾತ್ಮಕತೆಯ ಸಾಧ್ಯತೆಗಳನ್ನು ನಿರ್ಣಾಯಕವಾಗಿ ಮೊಟಕುಗೊಳಿಸುತ್ತದೆ. ‘ಇದು ಮಾತ್ರ ಕನ್ನಡ, ಈ ಪರಿಕಲ್ಪನೆಗಳು, ವಿಚಾರಗಳು, ಪದಗಳು ಅಥವಾ ನುಡಿಗಟ್ಟುಗಳು ಕನ್ನಡದ ಜಾಯಮಾನಕ್ಕೆ ಹೊರಗಿನವು, ಬುದ್ಧಿಜೀವಿಗಳು ಇಂಗ್ಲಿಷಿನಲ್ಲಿ ಚಿಂತಿಸಿ ಕನ್ನಡದಲ್ಲಿ ಬರೆಯುತ್ತಾರೆ’ ಎಂದೆಲ್ಲಾ ನಾವು ಮಾಡುವ ಆರೋಪಗಳು ‘ಒಂದು ಕಾಲದ ಕನ್ನಡ ಹೇಗಿದೆಯೋ ಅದನ್ನು ಹಾಗೇ ಇರಗೊಡಿ, ಅದಕ್ಕೆ ಏನನ್ನೋ ಸೇರಿಸುವ ಪ್ರಯತ್ನ ಮಾಡಬೇಡಿ, ಅದು ಈಗ ಹೇಗೆ ಇದೆಯೋ ಹಾಗೆಯೇ ಇರಬೇಕು’ ಎನ್ನುವ ಹಟಮಾರಿತನವನ್ನು ಪ್ರತಿಬಿಂಬಿಸುತ್ತವೆ.

ಭಾಷೆ, ಸಂಸ್ಕೃತಿ ಹಾಗೂ ಸಮಾಜಗಳು ಒಂದು ನಿರಂತರವಾದ ಗತಿಶೀಲತೆಯಲ್ಲಿ ರೂಪುಗೊಳ್ಳುವ ಹಾಗೂ ಮರು ನಿರೂಪಿತಗೊಳ್ಳುವ ವಿದ್ಯಮಾನಗಳು. ಅವು ತಮ್ಮ ಸುತ್ತಮುತ್ತಲಿನ ಇತರ ಅನೇಕ ಅನ್ಯಗಳ ಜೊತೆಗೆ ಸಂಭಾಷಿಸಿ, ಘರ್ಷಿಸಿ ಅವುಗಳನ್ನು ಒಂದು ದ್ವಂದ್ವಾತ್ಮಕತೆಯಲ್ಲಿ ಒಳಗೊಳ್ಳುತ್ತಾ ಬೆಳೆಯುತ್ತವೆ. ಭಾಷೆಯ ಕುರಿತಾದ ನಮ್ಮ ಅನೇಕ ಸಮಕಾಲೀನ ವಾಗ್ವಾದಗಳು ತಮ್ಮ ನಿರಂತರತೆಯಲ್ಲಿ ವಿಸ್ತಾರಗೊಳ್ಳುವ ಭಾಷೆಯ ಚಲನಶೀಲತೆಯ ಕುರಿತು ಅನೇಕ ಪ್ರಮುಖ ಚಿಂತನೆಗಳನ್ನು ನಮ್ಮ ಮುಂದಿರಿಸಿವೆ. ಈ ವಾಗ್ವಾದಗಳ ಬೆಳಕಿನಲ್ಲಿ ಕನ್ನಡದ ವರ್ತಮಾನದ ಸ್ಥಿತಿಗತಿಗಳನ್ನು ನಾವು ವಿಮರ್ಶಾತ್ಮಕವಾಗಿ ನೋಡಬೇಕಿದೆ.

ಕನ್ನಡದಲ್ಲಿ ವೈಚಾರಿಕ ಸಾಹಿತ್ಯ ಎನ್ನುವ ಹೆಸರಿನಲ್ಲಿ ರೂಪುಗೊಂಡ ಸಾಮಾಜಿಕ- ರಾಜಕೀಯ ಚಿಂತನೆ ಚಾರಿತ್ರಿಕವಾಗಿ ಕಾವ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆ ಮತ್ತು ಆಧುನಿಕ ಕಾಲದಲ್ಲಿ ಪತ್ರಕಾರಿಕೆಯ (ಪತ್ರಕರ್ತರ ಭಾಷೆ) ಭಾಷೆ ಸೃಷ್ಟಿಸಿದ ಪದಗುಚ್ಛಗಳನ್ನು ಮತ್ತು ನುಡಿಗಟ್ಟುಗಳನ್ನು ಆಧರಿಸಿ ಬೆಳೆದಿದೆ. ಕನ್ನಡದ ಅನೇಕ ಸಾಹಿತಿಗಳು ಮತ್ತು ಪತ್ರಕರ್ತ ದಿಗ್ಗಜರು ಕನ್ನಡದ ಸಾಮಾಜಿಕ-ರಾಜಕೀಯ ಚಿಂತನೆಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡವನ್ನು ಕಟ್ಟುವ ಅವರ ಈ ಮಹತ್ಕಾರ್ಯವನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ ಅವರ ಸಂಕಥನಗಳಿಂದ ಕನ್ನಡದ ವೈಚಾರಿಕತೆಯ ತತ್ವಜ್ಞಾನೀಯ ನೆಲೆಗಳು ಅಷ್ಟೇನೂ ವಿಸ್ತರಣೆಯಾಗಿಲ್ಲವೆಂದೇ ಹೇಳಬೇಕು. ಇದಕ್ಕೆ ಕನ್ನಡದಲ್ಲಿ ಸಾಮಾಜಿಕ ಶಾಸ್ತ್ರದ ಅಧ್ಯಯನಗಳು ಸರಿಯಾಗಿ ರೂಪುಗೊಳ್ಳದಿರುವುದೂಕಾರಣವಿರಬಹುದು. ಸಾಮಾಜಿಕ-ರಾಜಕೀಯ ಶಾಸ್ತ್ರಗಳ ಅಧ್ಯಾಪಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಮಾರುಕಟ್ಟೆ ಮಾರ್ಗದರ್ಶಿಗಳನ್ನು ಬರೆದರೇ ಹೊರತು ಕನ್ನಡವನ್ನು ಒಂದು ಜ್ಞಾನದ ಭಾಷೆಯಾಗಿ ಬೆಳೆಸುವುದಕ್ಕೆ ಹೆಚ್ಚು ಕೊಡುಗೆಗಳನ್ನು ನೀಡಲಿಲ್ಲ. ಈ ಗೈರುಹಾಜರಿಯಿಂದ ಸಮಕಾಲೀನ ಕನ್ನಡದ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಯ ಬರವಣಿಗೆ ಇಂದಿಗೂ ಬಹುಮಟ್ಟಿಗೆ ವರದಿಗಾರಿಕೆಯ ಮತ್ತು ಸಾಹಿತ್ಯ ವಿಮರ್ಶೆಯ ನುಡಿಗಟ್ಟುಗಳಿಂದ ರಾರಾಜಿಸುತ್ತಿದೆ.

ಬರವಣಿಗೆಯ ಈ ಮಾದರಿಯೇ ನಮಗೆ ಹಿತವಾಗಿರುವುದರಿಂದ ನಾವು ನಮ್ಮ ಭಾಷೆಯೊಳಗೆ ಸಾಮಾಜಿಕ- ರಾಜಕೀಯ ಚಿಂತನೆಯ ಪರಿಭಾಷೆ, ಪರಿಕಲ್ಪನೆಗಳನ್ನು, ತತ್ವಜ್ಞಾನೀಯ ನುಡಿಗಟ್ಟುಗಳನ್ನು ಒಳಗೊಳ್ಳಲು ನಿರಾಕರಿಸುತ್ತಿದ್ದೇವೆ. ಹಾಗಾಗಿ ‘ನಮಗೆ ಅರ್ಥವಾಗುವಂತೆ ಬರೆಯಬೇಕು’ ಎನ್ನುವ ಒತ್ತಾಯದ ಹಿಂದೆ ‘ನಾವು ಪರಿಚಯವಿಲ್ಲದ ಪದ ಪ್ರಯೋಗಗಳನ್ನು ಸ್ವೀಕರಿಸಲು ತಯಾರಿಲ್ಲ’ ಎನ್ನುವ ಧೋರಣೆ ಇದ್ದರೆ, ‘ನಮಗೆ ಒಪ್ಪಿಗೆಯಾಗುವಂತೆ ಬರೆಯಬೇಕು’ ಎನ್ನುವ ಕಟ್ಟಪ್ಪಣೆಯ ಹಿಂದೆ ‘ಹೊಸ ವಾಗ್ವಾದಗಳನ್ನು ಎದುರಿಸಿ ನಮ್ಮ ದಾರಿಯನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ’ ಎನ್ನುವ ದೃಷ್ಟಿಕೋನ ಕಾಣಿಸುತ್ತದೆ. ಭಿನ್ನ ಬಗೆಯ ಅನುಭವ ಮತ್ತು ವಿಚಾರಗಳ ಅಭಿವ್ಯಕ್ತಿಗೆ ಭಿನ್ನವಾಗಿರುವ ಭಾಷೆಯೂ ಬೇಕು ಎಂಬುದನ್ನು ಮನಗಾಣುವಲ್ಲಿ ನಾವು ಸೋತಿದ್ದೇವೆ.

ಈ ಪರಿಸ್ಥಿತಿ ಅತ್ಯಂತ ದುರದೃಷ್ಟಕರವಾದದ್ದು. ಭಾಷೆಯ ಬಗೆಗಿನ ಈ ಧೋರಣೆಗಳು ಸಮಕಾಲೀನ ಜಗತ್ತಿನಲ್ಲಿ ಸೆಣಸಾಡುವ ಶಕ್ತಿಯನ್ನು ಕನ್ನಡಕ್ಕೆ ನಿರಾಕರಿಸುತ್ತವೆ. ಅತ್ಯಂತ ಸಂಕೀರ್ಣವಾದ ಮತ್ತು ಸ್ಪರ್ಧಾತ್ಮಕವಾದ ನಮ್ಮ ಇಂದಿನ ಜಗತ್ತಿನಲ್ಲಿ ಕನ್ನಡವನ್ನು ಹೊಸ ರೀತಿಯಲ್ಲಿ ವಿಶ್ವಾತ್ಮಕಗೊಳಿಸುವ ಅಗತ್ಯವಿದೆ. ಕನ್ನಡ ಆಡುಭಾಷೆಯಾಗಿ, ನಾಡಭಾಷೆಯಾಗಿ, ಆಡಳಿತಭಾಷೆಯಾಗಿ, ಸಂವಹನದ ಭಾಷೆಯಾಗಿ ತನ್ನ ಸಂಸ್ಕೃತಿಯ ಸಂಭ್ರಮದಲ್ಲಿಯೇ ಸಂತೃಪ್ತಗೊಳ್ಳದೆ ಜ್ಞಾನದ ಭಾಷೆಯಾಗಿಯೂ ಬೆಳೆಯಬೇಕಾಗಿದೆ.

ಜೊತೆಗೆ ತತ್ವಜ್ಞಾನ-ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿಯೂ ವಿಸ್ತಾರಗೊಳ್ಳಬೇಕಾಗಿದೆ. ಹಾಗಾಗ ಬೇಕಾದರೆ ಒಂದು ವಿಶಿಷ್ಟ ಬಗೆಯ ಸಾಂಸ್ಕೃತಿಕ ಪ್ರಜಾತಂತ್ರದ ಪುನರುಜ್ಜೀವನ ಕನ್ನಡದಲ್ಲಿ ನಡೆಯಬೇಕಾಗಿದೆ. ಈ ಹೊಸ ಬಗೆಯ ಪುನರುಜ್ಜೀವನ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕನಸಾಗಿತ್ತು. ಅದು ಅಖಂಡ ಕರ್ನಾಟಕದ ಕನಸು ಕೂಡಾ ಹೌದು. ನಾವು ಪ್ರಸ್ತಾಪಿಸಿದ ಈ ಪುನರುಜ್ಜೀವನವು ಕನ್ನಡವನ್ನು ಭಾರತದ ಇತರ ದೇಶ ಭಾಷೆಗಳ ಜೊತೆಗೆ ಸಂವಾದಿಸಲು, ಸಹಬಾಳ್ವೆಯನ್ನು ನಡೆಸಲು ಮತ್ತು ವಿಶ್ವದ ಅನೇಕ ಭಾಷೆಗಳೊಂದಿಗೆ ಪ್ರಜಾತಾಂತ್ರಿಕ ಸಂಬಂಧಗಳನ್ನು ರೂಪುಗೊಳಿಸಲು ನೆರವಾಗುತ್ತದೆ.

ಇದನ್ನು ಕೆಲವು ಉದಾಹರಣೆಗಳೊಂದಿಗೆ ವಿವರಿಸಲು ಇಚ್ಚಿಸುತ್ತೇವೆ. ಇಂಗ್ಲಿಷ್‌ನ ‘ಪೇಟ್ರಿಯಾಟಿಸಂ’ ಎಂಬ ಪದಕ್ಕೆ ನಾವು ಕನ್ನಡದಲ್ಲಿ ‘ದೇಶಭಕ್ತಿ’ ಎನ್ನುತ್ತೇವೆ. ಆದರೆ ಮಲಯಾಳದಲ್ಲಿ ‘ದೇಶಸ್ನೇಹ’ ಎನ್ನುತ್ತಾರೆ. ಅನೇಕಾನೇಕ ಮಜಲುಗಳ ಸಂಬಂಧ ಹೊಂದಿರುವ ಭಕ್ತಿ ಎನ್ನುವ ಪದಕ್ಕಿಂತ ಪರಸ್ಪರ ಸಮಾನ ನೆಲೆಯಲ್ಲಿರುವ ಸ್ನೇಹ ಎಂಬ ಪದ ಹೆಚ್ಚು ಪ್ರಜಾತಾಂತ್ರಿಕವಾದುದು. ಹಾಗಾಗಿ ದೇಶಭಕ್ತಿ ಎನ್ನುವ ಶಬ್ದಕ್ಕಿಂತ ದೇಶಸ್ನೇಹ ಎನ್ನುವ ಶಬ್ದವನ್ನು ಕನ್ನಡ ತನ್ನ ಭಾಷಾ ವಿಶ್ವದಲ್ಲಿ ಸೇರಿಸಿಕೊಳ್ಳುವುದು ನಮಗೆ ಸೂಕ್ತವೆನಿಸುತ್ತದೆ.

ಇನ್ನೊಂದು ಉದಾಹರಣೆ. ಔದಾರ್ಯದ ಲವಲೇಶವೂ ಇಲ್ಲದ ‘ಲಿಬರಲಿಸಂ’ ಎಂಬ ಸೈದ್ಧಾಂತಿಕ ವಿದ್ಯಮಾನವನ್ನು ನಾವು ನಿರಾಳವಾಗಿ ಮತ್ತು ನಿರಾತಂಕವಾಗಿ ‘ಉದಾರವಾದ’ ಎಂದು ಕರೆಯುತ್ತೇವೆ. ಇದು ಕೂಡ ಕನ್ನಡದ ಬೌದ್ಧಿಕ ಬಡತನವನ್ನು ಬಿಂಬಿಸುವಂತಹುದು. ಹಾಗೆಯೇ ಇಂಗ್ಲಿಷ್‌ನ ‘ಫ್ರೀಡಂ, ಲಿಬರ್ಟಿ, ಇಂಡಿಪೆನ್‌ಡೆನ್ಸ್’ ಎಂಬ ಪ್ರತ್ಯ-ಪ್ರತ್ಯೇಕವಾದ ಮತ್ತು ನಿರ್ದಿಷ್ಟ ಸಾಂಸ್ಕೃತಿಕ ಅರ್ಥಗಳಿರುವ ಮೂರು ಪರಿಕಲ್ಪನೆಗಳಿಗೆ ನಾವು ‘ಸ್ವಾತಂತ್ರ್ಯ’ ಎಂಬ ಒಂದೇ ಪದವನ್ನು ಯಾವ ಸಂಕೋಚವೂ ಇಲ್ಲದೆ ಬಳಸುತ್ತೇವೆ. ಇದು ನಮ್ಮ ಭಾಷಾಕೋಶ ಸಂಕುಚಿತಗೊಂಡ ಫಲ ಎಂದು ನಾವು ಯೋಚಿಸಿಲ್ಲ.

ಅತ್ಯಂತ ಸಂಕೀರ್ಣವಾದ ‘ಸೆಕ್ಯುಲರ್‌ವಾದ’ ಎನ್ನುವ ತಾತ್ವಿಕ ವಿದ್ಯಮಾನವನ್ನು ನಾವು ಎಗ್ಗಿಲ್ಲದೆ ‘ಜಾತ್ಯತೀತತೆ’ ಎನ್ನುತ್ತೇವೆ. ಜಾತ್ಯತೀತತೆಗೂ ಸೆಕ್ಯುಲರ್‌ವಾದಕ್ಕೂ ಬಾದರಾಯಣ ಸಂಬಂಧವಿರಬಹುದಾದರೂ ಜಾತ್ಯತೀತತೆಯೇ ಸೆಕ್ಯುಲರ್‌ವಾದವಲ್ಲ. ಹಿಂದಿಯಲ್ಲಿ ವಿದ್ವಾಂಸರು ಬಳಸುವ ‘ಪಂಥನಿರಪೇಕ್ಷತೆ’ ಎನ್ನುವ ಪದ ಬಹುಮಟ್ಟಿಗೆ ಭಾರತೀಯ ಸೆಕ್ಯುಲರ್‌ವಾದಕ್ಕೆ ಸೂಕ್ತವಾಗಿದೆ.

ಭಾರತದ ಅನೇಕ ದೇಶಭಾಷೆಗಳಿಂದ ಕನ್ನಡ ಪಡೆದುಕೊಳ್ಳಬೇಕಿರುವುದು ಬಹಳವಿದೆ ಮತ್ತು ಕೊಡಬೇಕಾಗಿರುವುದೂ ಅಷ್ಟೇ ಇದೆ. ತನ್ನ ದೇಶಬಾಂಧವ ಭಾಷೆಗಳೊಂದಿಗೆ ನಿರಂತರವಾದ, ನಿಕಟವಾದ ಮತ್ತು ಸಮಾನತೆಯ ನೆಲೆಯ ಕೊಡು–ಕೊಳ್ಳುವಿಕೆಯ ಈ ಅನಿವಾರ್ಯ ಚಾರಿತ್ರಿಕ ಪ್ರಕ್ರಿಯೆಯನ್ನು ಲೋಹಿಯಾರಂತಹ ಸಂಸ್ಕೃತಿನಿಷ್ಠ ಚಿಂತಕರು ‘ಭಾಷೆಗಳ ಪ್ರಜಾತಾಂತ್ರಿಕ ಪುನರುಜ್ಜೀವನ’ ಎಂದು ಗುರುತಿಸಿದ್ದಾರೆ. ದೇಶಭಾಷೆಗಳ ಪುನರುಜ್ಜೀವನದ ಜೊತೆಜೊತೆಯಲ್ಲಿಯೇ ಕನ್ನಡದಂತಹ ಭಾಷೆಗಳು ವಿಶ್ವದ ಇತರ ಭಾಷೆಗಳ ಕಡೆಗೂ ಚಾಚಿಕೊಳ್ಳಬೇಕಾಗುತ್ತದೆ. ಸ್ವಂತಿಕೆಯನ್ನು ಕಳೆದುಕೊಳ್ಳದೆ ಸಮಾನತೆಯ ನೆಲೆಗಟ್ಟಿನಲ್ಲಿ ಪ್ರಜಾತಾಂತ್ರಿಕ ಸಂಬಂಧಗಳು ಗರಿಗೆದರಿದಾಗ ಕನ್ನಡ ವಿಶ್ವರೂ ಪಿಯಾಗುತ್ತದೆ ಮತ್ತು ಕನ್ನಡಿಗರೂ ವಿಶ್ವಮಾನವರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT