ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ರಾಜಿ ಯತ್ನಕ್ಕೆ ಹುರುಪು

ಡಿ.6ರೊಳಗೆ ಸುಪ್ರೀಂ ಕೋರ್ಟ್‌ಗೆ ಸಂಧಾನ ಸೂತ್ರದ ಕರಡು ಪ್ರತಿ
Last Updated 12 ನವೆಂಬರ್ 2017, 19:23 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಸೀಮ್ ರಿಜ್ವಿ ಅಯೋಧ್ಯೆಯಲ್ಲಿ ಸಾಧು–ಸಂತರು ಮತ್ತು ಮಹಾಂತರನ್ನು ಭಾನುವಾರ ಭೇಟಿಯಾಗಿ ಚರ್ಚೆ ನಡೆಸಿದರು.

ಅಯೋಧ್ಯೆಯ ರಾಮಮಂದಿರ–ಬಾಬ್ರಿ ಮಸೀದಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ  ಸಂಧಾನ ಸೂತ್ರದ ಕರಡು ಪ್ರತಿಯನ್ನು ಡಿ.6ರೊಳಗೆಸುಪ್ರೀಂಕೋರ್ಟ್‌ಗೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಅಖಿಲ ಭಾರತ ಅಖಾಡ ಪರಿಷತ್‌ ಅಧ್ಯಕ್ಷ ನರೇಂದ್ರ ಗಿರಿ, ಧರಮ್‌ ದಾಸ್‌ ಮತ್ತು ನಿರ್ಮೋಹಿ ಅಖಾಡದ  ಸುರೇಶ ದಾಸ್‌ ಅವರು ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆ ವಿವಾದಗ್ರಸ್ತ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದ ಹಶೀಮ್‌ ಅನ್ಸಾರಿ ಅವರ ಮಗ ಇಕ್ಬಾಲ್‌ ಅನ್ಸಾರಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಂಧಾನದ ಮೂಲಕ ವಿವಾದಕ್ಕೆ ಇತ್ಯರ್ಥ ಯತ್ನಕ್ಕೆ ಅಗತ್ಯವಾದ ಎಲ್ಲ ಸಹಾಯ, ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ರಿಜ್ವಿ ತಿಳಿಸಿದ್ದಾರೆ.

ಆದರೆ, ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷರ ಈ ಯತ್ನಕ್ಕೆ ಸುನ್ನಿ ವಕ್ಫ್‌ ಮಂಡಳಿ ಯಾವ ರೀತಿಯ ಆಸಕ್ತಿಯನ್ನೂ ತೋರಿಸಿಲ್ಲ. ವಿವಾದದ ಸಂಬಂಧ ಸುನ್ನಿ ವಕ್ಫ್‌ ಮಂಡಳಿ ಕೂಡ ನ್ಯಾಯಾಲಯದಲ್ಲಿ ದಾವೆ ಹೂಡಿದೆ.

**

‘ಶ್ರೀ ಶ್ರೀ ಜತೆ ಸಂಧಾನಕ್ಕೆ ಸಹಕಾರ ಇಲ್ಲ’

ಅಯೋಧ್ಯೆ ರಾಮಜನ್ಮಭೂಮಿ–ಬಾಬ್ರಿ ಮಸೀದಿ ವಿವಾದ ಬಗೆಹರಿಸುವ ಮಧ್ಯಸ್ಥಿಕೆಗೆ ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಶ್ರೀ ಶ್ರೀ ರವಿಶಂಕರ್‌ ಸಾಧು–ಸಂತರಲ್ಲ. ಹೀಗಾಗಿ ಅವರನ್ನುಇದರಿಂದ ದೂರ ಇಡುವಂತೆ ಸಾಧು–ಸಂತರು ರಿಜ್ವಿ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ರಿಜ್ವಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಶ್ರೀ ಶ್ರಿ ರವಿಶಂಕರ್‌ ಅವರನ್ನು ಕಂಡು ಮಾತುಕತೆ ನಡೆಸಿದ್ದರು.

ಅಸಮಾಧಾನ: ರಿಜ್ವಿ ಇದುವರೆಗೂ ತಮ್ಮನ್ನು ಭೇಟಿಯಾಗಿಲ್ಲ ಎಂದು ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಿತ ಜಾಗದ ಒಡೆತನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಹಾಜಿ ಮೆಹಬೂಬ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT