7

ಪೇಟೆಯಲ್ಲಿ ಅನಿಶ್ಚಿತ ವಾತಾವರಣ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ವಾತಾವರಣವು ಕದಡಿದ್ದು ಪೇಟೆಗೆ ನಿರ್ದಿಷ್ಟವಾದ 'ಟ್ರೆಂಡ್' ಇಲ್ಲದೆ ಅನಿಶ್ಚಿತತೆಯಿಂದ ಮೆರೆಯುತ್ತಿದೆ. ಈ ವಾರದಲ್ಲಿ ಪ್ರಮುಖ ಬೆಳವಣಿಗೆ ಎಂದರೆ ಮತ್ತೊಮ್ಮೆ ಅಮೆರಿಕದ ಎಫ್‌ಡಿಎ ಭಾರತದ ಫಾರ್ಮಾ ವಲಯದ ಕಂಪನಿಗಳ ಮೇಲೆ ತನ್ನ ಸಾರ್ವಭೌಮತ್ವವನ್ನು ಪ್ರದರ್ಶಿಸಿದೆ.

ಫಾರ್ಮಾ ವಲಯದ ಅಗ್ರಮಾನ್ಯ ಕಂಪನಿ, ಸಂವೇದಿ ಸೂಚ್ಯಂಕದಲ್ಲಿ ಭಾಗಿಯಾಗಿರುವ ಲುಪಿನ್ ಲಿಮಿಟೆಡ್ ಕಂಪನಿಯ ಘಟಕಗಳಲ್ಲಿ ಲೋಪವಾಗಿದೆ ಎಂದು ಎಫ್‌ಡಿಎ ಎಚ್ಚರಿಕೆ ನೋಟಿಸ್ ನೀಡಿದ ಕಾರಣ ₹1,050 ರ ಸಮೀಪದಿಂದ ಏಕಮುಖವಾಗಿ ಇಳಿಕೆಯುತ್ತ ವಾರ್ಷಿಕ ಕನಿಷ್ಠ ₹829 ರವರೆಗೂ ಕುಸಿದು, ಹೂಡಿಕೆದಾರರ ಬಂಡವಾಳವನ್ನು ಕರಗಿಸಿತು.

ಇದೇ ಸಂದರ್ಭದಲ್ಲಿ ಮತ್ತೊಂದು ಅಂಶ ಗಮನಿಸಬೇಕಾಗಿರುವುದು, ಒಂದು ವರ್ಷದ ಹಿಂದೆ  ಅಂದರೆ ಸರಿಯಾಗಿ ನವೆಂಬರ್ 2016 ರಲ್ಲಿ, ಫಾರ್ಮಾ ವಲಯದ ದಿವೀಸ್ ಲ್ಯಾಬೊರೇಟರೀಸ್ ಷೇರಿನ ಬೆಲೆಯು ₹1,300 ರಲ್ಲಿದ್ದು  ಎಫ್‌ಡಿಎ ಕ್ರಮದಿಂದ ಆ ಕಂಪನಿಯ ಷೇರಿನ ಬೆಲೆಯು ಮೇ ತಿಂಗಳಲ್ಲಿ ₹533 ರ ಕನಿಷ್ಠಕ್ಕೆ ಕುಸಿದು, ಕೇವಲ ಮೂರು ತಿಂಗಳಲ್ಲಿ ಷೇರಿನ ಬೆಲೆಯು ಪುಟಿದೆದ್ದು ಮತ್ತೊಮ್ಮೆ ₹1,000 ರೂಪಾಯಿಗಳನ್ನು ದಾಟಿದೆ. ಅಂದರೆ ಉತ್ತಮವಾದ ಕಂಪನಿಗಳಲ್ಲಿ ಕೆಲವು ಕಾರಣಗಳಿಂದ ಭಾರಿ ಕುಸಿತ ಕಂಡರೆ ಅದು ಹೂಡಿಕೆದಾರರಿಗೆ ದೀರ್ಘಕಾಲೀನ ಹೂಡಿಕೆಗೆ ಅವಕಾಶ ಕಲ್ಪಿಸಿಕೊಟ್ಟಂತೆ.

ಈ ವಾರ ವಿದೇಶಿ ವಿತ್ತೀಯ ಸಂಸ್ಥೆಯೊಂದು  ಫಾರ್ಮಾ ಕಂಪನಿ ಕ್ಯಾಡಿಲ್ಲ ಹೆಲ್ತ್ ಕೇರ್ ಕಂಪನಿಯ ರೇಟಿಂಗ್ ಇಳಿಸದ ಕಾರಣ ಷೇರಿನ ಬೆಲೆಯು ₹510 ರಿಂದ ₹464 ರ ಸಮೀಪಕ್ಕೆ ಕುಸಿಯಿತು. ಕಳೆದ ಎರಡು ತಿಂಗಳಿಂದ ಸ್ಥಿರತೆಯಲ್ಲಿದ್ದ ಈ ಷೇರಿನ ಬೆಲೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

ಜಿಎಸ್‌ಟಿ ಮಂಡಳಿ ಶುಕ್ರವಾರ  ಹಲವಾರು ಗ್ರಾಹಕ ಬಳಕೆಯ ಸಾಮಗ್ರಿಗಳ ಮೇಲಿನ ಗರಿಷ್ಠ ತೆರಿಗೆ ಹಂತದಿಂದ ಇಳಿಸಿದೆ.  ಈ ಕ್ರಮದಿಂದ ಗ್ರಾಹಕ ಬಳಕೆ ಪದಾರ್ಥಗಳ ಕಂಪನಿಗಳಿಗೆ ಅನುಕೂಲಕರವಾಗಿ ಪರಿಣಮಿಸಬಹುದು. ವಿಶೇಷವಾಗಿ ಈ ವಲಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಐಟಿಸಿ ಕಂಪನಿ ಷೇರಿನ ಬೆಲೆಯು ಇತ್ತೀಚಿಗೆ ಹೆಚ್ಚು ಇಳಿಕೆ  ಕಂಡಿರುವುದರಿಂದ ಚೇತರಿಕೆಗೆ ಅವಕಾಶವಿದೆ. 

ಷೇರುಪೇಟೆಯು ಸದ್ಯಕ್ಕೆ ಯಾವುದೇ ಮೂಲಭೂತ ಅಂಶಗಳನ್ನು ಆಧರಿಸಿ ಏರಿಳಿತಗಳನ್ನು ಪ್ರದರ್ಶಿಸುತ್ತಿಲ್ಲ. ಕೇವಲ ವಾಣಿಜ್ಯ ಚಟುವಟಿಕೆಯನ್ನು ಪ್ರದರ್ಶಿಸಿ ಆಸಕ್ತರು ಹಣ ಮಾಡಿಕೊಳ್ಳುವಂತಹ ಅವಕಾಶ ಕಲ್ಪಿಸಿಕೊಡುತ್ತಿವೆ.  ಬುಧವಾರ ರೇನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಷೇರಿನ ಬೆಲೆಯೂ ₹321 ರ ಸಮೀಪದಿಂದ ಆರಂಭವಾಗಿ ದಿನದ ಮಧ್ಯಂತರದಲ್ಲಿ ಷೇರಿನ ಬೆಲೆಯು ₹292 ರ ಸಮೀಪಕ್ಕೆ ಕುಸಿಯಿತು. ನಂತರ ಆ ಷೇರು ಚೇತರಿಕೆ ಪಡೆದುಕೊಂಡು ₹351 ರವರೆಗೂ ಏರಿಕೆ ಕಂಡು ₹340 ರ ಸಮೀಪ ಕೊನೆಗೊಂಡಿತು.ಈ ರೀತಿಯ ಅಸಹಜ ಚಟುವಟಿಕೆಗೆ ಕಾರಣವಾಗಿದ್ದು, ಕಂಪನಿ ಪ್ರಕಟಿಸಿದ ಫಲಿತಾಂಶದ ಪ್ರಭಾವ.  ಈ ಷೇರಿನಲ್ಲಿ ವಹಿವಾಟು ನಡೆಸುವ ಮುನ್ನ ಗಮನದಲ್ಲಿರಿಸಬೇಕಾದ ಅಂಶವೆಂದರೆ ಈ ಷೇರಿನ ಬೆಲೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ನವೆಂಬರ್ 18 ರಂದು ₹43 ರಲ್ಲಿದ್ದು ಅಲ್ಲಿಂದ ₹394 ಕ್ಕೆ ಸರಿಯಾಗಿ ಒಂದು ವರ್ಷದಲ್ಲಿ ಪುಟಿದೆದ್ದಿದೆ.

ಅಂತರರಾಷ್ಟ್ರೀಯ ಪೇಟೆಗಳಲ್ಲಾಗುತ್ತಿರುವ ಕಚ್ಚಾ ತೈಲ ಬೆಲೆಯ ಏರಿಳಿತಗಳಿಗೆ ಅನುಗುಣವಾಗಿ ತೈಲ ಉತ್ಪಾದಕ  ಮತ್ತು ಮಾರಾಟದ ಕಂಪನಿಗಳ ಷೇರಿನ ಬೆಲೆಗಳು ಹೆಚ್ಚಿನ ಏರಿಳಿತ ಪ್ರದರ್ಶಿಸುತ್ತಿವೆ.  ಒಎನ್‌ಜಿಸಿ , ಆಯಿಲ್ ಇಂಡಿಯಾ ಷೇರಿನ ಬೆಲೆಗಳು ಏರಿಕೆ ಕಂಡಾಗ ಮಾರಾಟದ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ ಕಂಪನಿ ಷೇರುಗಳು ಇಳಿಕೆಗೊಳಪಡುತ್ತವೆ. 

ವಿದೇಶಿ ವಿತ್ತೀಯ ಸಂಸ್ಥೆಗಳು ₹4,043 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,880 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯವು ₹144.14 ಲಕ್ಷ ಕೋಟಿಗೆ ಇಳಿದಿತ್ತು.

ಒಟ್ಟಾರೆ ಸಂವೇದಿ ಸೂಚ್ಯಂಕ 371 ಅಂಶಗಳ ಕುಸಿದರೆ, ಮಧ್ಯಮ ಶ್ರೇಣಿ ಸೂಚ್ಯಂಕ 150 ಅಂಶಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 212 ಅಂಶಗಳ ಇಳಿಕೆಯೊಂದಿಗೆ ಜೊತೆಗೂಡಿದವು.

ಬೋನಸ್ ಷೇರು:  ಕ್ಯಾಸ್ಟ್ರಾಲ್ ಇಂಡಿಯಾ ಕಂಪನಿಯು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ವಕ್ರಾಂಗಿ ಲಿಮಿಟೆಡ್ ಕಂಪನಿಯು ಈ ತಿಂಗಳ 13 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹೊಸ ಷೇರು: ಪ್ರತಿ ಷೇರಿಗೆ ₹795 ರಂತೆ ಆರಂಭಿಕ ಷೇರು ವಿತರಿಸಿದ ದಿ ನ್ಯೂ ಇಂಡಿಯಾ ಆಶುರನ್ಸ್ ಕಂಪನಿ ಲಿಮಿಟೆಡ್ ಸೋಮವಾರ, 13 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ವಾರದ ವಿಶೇಷ: 

ಹೂಡಿಕೆದಾರರು ಸಾಮಾನ್ಯವಾಗಿ ದೀರ್ಘಕಾಲೀನ ಹೂಡಿಕೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಷೇರುಪೇಟೆ ಸೂಚ್ಯಂಕಗಳು, ಷೇರಿನ ಬೆಲೆಗಳು ಇಳಿಕೆಯಲ್ಲಿದ್ದಾಗ ದೀರ್ಘಕಾಲೀನ ಹೂಡಿಕೆಯನ್ನು ಯೋಚಿಸುವುದು ಸರಿಯಾದ ಕ್ರಮ. ಸೂಚ್ಯಂಕಗಳು ಸರ್ವಕಾಲೀನ ಗರಿಷ್ಠದಲ್ಲಿದ್ದಾಗ, ಷೇರಿನ ಬೆಲೆಗಳು ಉತ್ತುಂಗದಲ್ಲಿದ್ದಾಗ, ಉತ್ತಮ ಕಂಪನಿಗಳ ಷೇರಿನ ಬೆಲೆಗಳು ಇಳಿಕೆಕಂಡಾಗ ಹೂಡಿಕೆಮಾಡಿ ಲಾಭ ಗಳಿಸಿಕೊಳ್ಳುವುದು ಗುರಿಯಾಗಿದ್ದಲ್ಲಿ ಮಾತ್ರ ಹೂಡಿದ ಬಂಡವಾಳ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದು.

ಹಿಂದಿನ ವಾರದಲ್ಲಿ ಈ ಅಂಕಣದಲ್ಲಿ ಹಿಂದುಸ್ತಾನ್‌ ಕಾಪರ್, ಎಂಎಂಟಿಸಿ ಕಂಪನಿಗಳು ಚುರುಕಾದ ಚಟುವಟಿಕೆಗೊಳಪಡುವ ಸಾಧ್ಯತೆಯಿದೆ ಎಂದು ತಿಳಿಸಲಾಗಿತ್ತು. ಅದರಂತೆ ಇವು ಮತ್ತಷ್ಟು ಏರಿಕೆಯಿಂದ ಮತ್ತೊಮ್ಮೆ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿದವು. ಈ ಸಂದರ್ಭದಲ್ಲಿ ಹೂಡಿಕೆದಾರರ ಗಮನಕ್ಕೆ ಕೆಲವು ಅಂಶಗಳನ್ನು ತರಬಯಸುತ್ತೇನೆ.

ಷೇರುಪೇಟೆಯು ಬಹಳ ಸೂಕ್ಷ್ಮತೆಯಿಂದ ಕೂಡಿದೆ. ಇಲ್ಲಿ ಬದಲಾವಣೆಗಳ ವೇಗ ಅತಿ ಹೆಚ್ಚು. ಈ ಮಧ್ಯೆ ಘಟಿಸುವ ಕೆಲವು ಬೆಳವಣಿಗೆಗಳು, ಸರ್ಕಾರದ ನಿಲುವುಗಳು ಹೆಚ್ಚು ಪ್ರಭಾವಿಯಾಗಿ ರಭಸದ, ಅನಿರೀಕ್ಷಿತ ಮಟ್ಟದ ಏರಿಳಿತ ಉಂಟು ಮಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚಿಗೆ ಸರ್ಕಾರ ಪ್ರಕಟಿಸಿದ ಬ್ಯಾಂಕ್ ಗಳಿಗೆ ಬಂಡವಾಳ ಒದಗಿಸುವ ನಿರ್ಧಾರ. ಬ್ಯಾಂಕಿಂಗ್ ಷೇರುಗಳನ್ನು ಒಂದೇ ದಿನ ಶೇ20 ರಿಂದ ಶೇ40 ರವರೆಗೂ ಏರಿಕೆ ಕಾಣುವಂತೆ ಮಾಡಿತು. ಹಿಂದಿನ ವಾರದಲ್ಲಿ ಅಮೆರಿಕದ ಎಫ್‌ಡಿಎ ನೀಡಿದ ಎಚ್ಚರಿಕೆಯ ಕಾರಣ ಸಂವೇದಿ ಸೂಚ್ಯಂಕದ ಭಾಗವಾಗಿರುವ ಫಾರ್ಮಾ ಕಂಪನಿ ಲುಪಿನ್ ಲಿಮಿಟೆಡ್ ಶೇ25 ರಷ್ಟು ಕುಸಿತ ಕಂಡಿತು.

ಹಿಂದಿನ ವರ್ಷಗಳಲ್ಲಿ ಅಂದರೆ 2013 ರ  ಮಾರ್ಚ್ ನಲ್ಲಿ ಎಂಎಂಟಿಸಿ ಷೇರಿನ ಬೆಲೆಯು ಸುಮಾರು ಮೂರು ನೂರು   ರೂಪಾಯಿಗಳ ಸಮೀಪವಿತ್ತು.  ಆದರೆ ಕೇವಲ ಮೂರೇ ತಿಂಗಳಲ್ಲಿ ಷೇರಿನ ಬೆಲೆಯು ₹ 60 ರ ಸಮೀಪಕ್ಕೆ ಕುಸಿಯಿತು. ಇದಕ್ಕೆ ಕಾರಣ ಆಗ ಕೇಂದ್ರ ಸರ್ಕಾರ ಎಂಎಂಟಿಸಿ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಪ್ರತಿ ಷೇರಿಗೆ ₹ 70 ರಂತೆ ಮಾರಾಟ ಮಾಡುವ ಯೋಜನೆ ಪ್ರಕಟಿಸಿತು. ಇದರ ಪ್ರಭಾವದಿಂದ ಷೇರನ್ನು ಕೊಳ್ಳುವವರಿಲ್ಲದೆ, ದಿನ ನಿತ್ಯ ನಿರಂತರವಾಗಿ ಕೆಳಗಿನ ಅವರಣಮಿತಿಯಲ್ಲಿದ್ದು, ಷೇರುಗಳಿಂದ ಹೊರಬರುವ ಅವಕಾಶದಿಂದ ವಂಚಿತರನ್ನಾಗಿಸಿ, ಭಾರಿ ಕುಸಿತ ಕಂಡಿತು. ಈಗ ಈ ಷೇರು ಒಂದೇ ತಿಂಗಳಲ್ಲಿ ಶೇ75 ರಷ್ಟು ಏರಿಕೆ ಕಂಡಿರುವುದು ಅಚ್ಚರಿಯೇನಲ್ಲ.

(ಮೊ: 98863 13380, ಸಂಜೆ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry