ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ: ಹಲವೆಡೆ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತ

ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ವಿರೋಧ
Last Updated 13 ನವೆಂಬರ್ 2017, 9:01 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಂಡಿದೆ.

ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ಧಾರವಾಡದ ಎಲ್ಲಾ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಆಗಿವೆ. ವೈದ್ಯರು ಮುಷ್ಕರ ನಡೆಸಲು ಬೆಳಗಾವಿಗೆ ಹೋಗಿದ್ದಾರೆ. ಇದರಿಂದಾಗಿ ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬಂದಿರುವ ಜನರು ವಾಪಸ್ ಹೋಗುತ್ತಿದ್ದಾರೆ. ಸೋಮವಾರ ಆಗಿರುವುದರಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿದೆ.

ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಆಗಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬೆಳಿಗ್ಗೆ 11.30ರವರೆಗೆ 260 ಹೊರರೋಗಿಗಳು ಭೇಟಿ ನೀಡಿದ್ದಾರೆ. 33 ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.



ತುಮಕೂರಿನಲ್ಲೂ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಹಳ್ಳಿಗಳಿಂದ ಬಂದ ಗರ್ಭಿಣಿಯರು, ಬಾಣಂತಿಯರ ಹಾಗೂ ತುರ್ತು ವೈದ್ಯಕೀಯ ಸೇವೆ ಅಗತ್ಯ ಇರುವವರನ್ನು ವೈದ್ಯರು ತಪಾಸಣೆ ನಡೆಸಿದರು.

ಆಸ್ಪತ್ರೆಯ ಹೊರ ಭಾಗದ ಇದ್ದ ಬಂದ್ ನಾಮಫಲಕ ನೋಡಿ ಕೆಲವು ರೋಗಿಗಳು ವಾಪಸ್ ಹೋಗಿದ್ದಾರೆ. ಕೆಲವು ಆಸ್ಪತ್ರೆಗಳ ಬಾಗಿಲು ಅರ್ಧ ತೆರೆದಿದ್ದವು.

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದ ಮೈಸೂರಿನಲ್ಲಿ ವೈದ್ಯಕೀಯ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ಬಂದ್ ಆಗಿದೆ. ತುರ್ತು ನಿಗಾ ಘಟಕ ಹಾಗೂ ಒಳ ರೋಗಿ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೆ.ಆರ್. ಆಸ್ಪತ್ರೆ ಹಾಗೂ ಜೆಎಸ್ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ತೆರೆದಿವೆ. ಆಸ್ಪತ್ರೆಗೆ ಬಂದ ರೋಗಿಗಳು ಪರದಾಡುತ್ತಿದ್ದಾರೆ. ಬುಧವಾರ ಬರುವಂತೆ ಸೂಚಿಸಿ ರೋಗಿಗಳನ್ನು ಕಳಿಸಲಾಗುತ್ತಿದೆ.

ಮುಷ್ಕರದಿಂದಾಗಿ ಹುಬ್ಬಳ್ಳಿ ನಗರದ ವಿವೇಕಾನಂದರ ಜನರಲ್ ಆಸ್ಪತ್ರೆಯ ಗೇಟ್ ಬಂದ್ ಮಾಡಲಾಗಿದೆ. ಆಸ್ಪತ್ರೆಗೆ ‌ಬಂದಿದ್ದ ರೋಗಿಗಳನ್ನು‌ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತು.

ದಾವಣಗೆರೆಯಲ್ಲಿ ‌ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಮುಷ್ಕರದ ನಡುವೆಯೂ ನಗರದ ಕೆಲ ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆದು ವೈದ್ಯಕೀಯ ಸೇವೆ ನೀಡುತ್ತಿವೆ.

ಕೊಪ್ಪಳದ 10 ಪ್ರಮುಖ ಖಾಸಗಿ ಆಸ್ಪತ್ರೆಗಳು, ಗಂಗಾವತಿಯ ಖಾಸಗಿ ನರ್ಸಿಂಗ್‌ ಹೋಂಗಳು ಸೋಮವಾರ ಸೇವೆ ಸ್ಥಗಿತಗೊಳಿಸಿವೆ. ಈಗಾಗಲೇ ದಾಖಲಾಗಿರುವ ಗಂಭೀರ ಸ್ವರೂಪದ ಒಳರೋಗಿಗಳನ್ನು ಹೊರತುಪಡಿಸಿ ಉಳಿದ ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಮುಷ್ಕರ ಮುಕ್ತಾಯಗೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ನಾವು ಯಾವುದೇ ರೋಗಿಗಳನ್ನು ಇರಿಸಿಕೊಳ್ಳುತ್ತಿಲ್ಲ ಎಂದು ನಗರದ ಆಸ್ಪತ್ರೆಯೊಂದರ ಸಿಬ್ಬಂದಿ ತಿಳಿಸಿದರು.

ಆಸ್ಪತ್ರೆಯ ಸ್ವಚ್ಛತೆ, ತುರ್ತು ನಿರ್ವಹಣಾ ಸಿಬ್ಬಂದಿ ಹೊರತುಪಡಿಸಿ ಉಳಿದವರೆಲ್ಲರಿಗೂ ರಜೆ ನೀಡಲಾಗಿದೆ. ಆಸ್ಪತ್ರೆಗೆ ಹೊಂದಿಕೊಂಡಿರುವ ಔಷಧ ಅಂಗಡಿಗಳೂ, ಪ್ರಯೋಗಾಲಯಗಳು ಕೂಡಾ ಬಂದ್‌ ಆಗಿವೆ. ಸಹಜವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿದೆ. ಗ್ರಾಮೀಣ ಹಾಗೂ ಹೋಬಳಿ ಪ್ರದೇಶಗಳ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ದಾದಿಯರ ತಂಡವನ್ನು ಸಜ್ಜಾಗಿ ಇರಿಸಲಾಗಿದೆ. ಯಾವುದೇ ತುರ್ತುಪರಿಸ್ಥಿತಿ ನಿಭಾಯಿಸಲು ಇಲಾಖೆ ಸಿದ್ಧವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರದ ಅರಿವಿಲ್ಲದ ಗ್ರಾಮೀಣ ಪ್ರದೇಶದ ಜನ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿರುವುದು ಕಂಡುಬಂದಿತು. ಸಣ್ಣಪುಟ್ಟ ಕ್ಲಿನಿಕ್‌ಗಳಲ್ಲಿ ವೈದ್ಯರು ತುರ್ತು ಸೇವೆ ನೀಡುತ್ತಿದ್ದದ್ದು ಕಂಡುಬಂದಿತು.

ಈ ಮಧ್ಯೆ, ಬೆಳಗಾವಿಯ ಸುವರ್ಣ ವಿಧಾನಸೌಧದ ಸಮೀಪದಲ್ಲಿ  ಪ್ರತಿಭಟನೆ ನಡೆಸುತ್ತಿರುವ ವೈದ್ಯರನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದರು. ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಅವರು, ಎಲ್ಲ ಅಸ್ಪತ್ರೆಗಳಲ್ಲೂ ಒಂದೇ ರೀತಿಯ ಚಿಕಿತ್ಸಾ ವೆಚ್ಚ ನಿಗದಿಪಡಿಸುವುದು ಸರಿಯಲ್ಲ ಎಂದರು.

ಚಿಕ್ಕಬಳ್ಳಾಪುರದಲ್ಲಿ ‘ಬೆಳಗಾವಿ ಚಲೊ’ ಬೆಂಬಲಿಸಿ ಸೋಮವಾರ ಎಲ್ಲ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದವು. 

ಭಾನುವಾರವೇ ನಗರದಿಂದ ಐಎಂಎ ಜಿಲ್ಲಾ ಘಟಕದ 71 ಸದಸ್ಯರು ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ನಗರದಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲ ತಪಾಸಣೆಗಳನ್ನು ಸ್ಥಗಿತಗೊಳಿಸಿದ್ದವು. ಡಯಾಗ್ನೋಸ್ಟಿಕ್ ಕೇಂದ್ರಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಕಂಡುಬಂತು. ಬಂದ್‌ನಿಂದ ರೋಗಿಗಳಿಗೆ ತೊಂದರೆ ಉಂಟಾದ ವರದಿಯಾಗಿಲ್ಲ.

‘ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿದೆ. ಇದೇ ಕಾರಣಕ್ಕಾಗಿ ವೈದ್ಯರ ರಜೆ ರದ್ದು ಮಾಡುವ ಜತೆಗೆ ರಜೆ ಮೇಲಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಸಹ ವಾಪಸ್‌ ಕರೆಯಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಡಿ.ರವಿಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT