ಮಂಗಳವಾರ, ಮಾರ್ಚ್ 2, 2021
23 °C

ಹಾಡಿ, ಕುಣಿಯುವ ಮುದ್ದು ಪ್ರಾನ್ಯ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಹಾಡಿ, ಕುಣಿಯುವ ಮುದ್ದು ಪ್ರಾನ್ಯ

‘ಸಂಭಾಷಣೆಯ ಭಾವಾರ್ಥ ಏನೆಂದು ತಿಳಿದುಕೊಳ್ಳುವ ವಯಸ್ಸೂ ಅಲ್ಲ ಅರ್ಥ ಹೇಳಿದರೂ ತಿಳಿಯುವುದಿಲ್ಲ, ಆದರೂ ಸಂಭಾಷಣೆಯ ಭಾವಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸುತ್ತಾ ನಗಿಸುವ ಪ್ರಾನ್ಯಳನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ...’

ಇದು ಕಲರ್ಸ್‌ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಜಾಭಾರತ’ ಕಾರ್ಯಕ್ರಮದಲ್ಲಿ, ಐದು ವರ್ಷದ ಪ್ರಾನ್ಯಳ ನಾಟಕ ಪ್ರದರ್ಶನ ಕಂಡು ತೀರ್ಪುಗಾರ, ನಿರ್ದೇಶಕ ಎಸ್‌. ನಾರಾಯಣ್‌ ಅವರು ಬೆರಗಾಗಿ ಹೇಳಿದ ಮಾತು.

ಇನ್ನೂ ಆರು ವರ್ಷ ಪೂರೈಸದಿದ್ದರೂ 24 ನಾಟಕ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನಗೆದ್ದಿದ್ದಾಳೆ ಪ್ರಾನ್ಯ. ಕೊರವಂಜಿ, ಮೊಲ, ಕಲ್ಪನಾ, ಬಡ್ಡಿ ಬಂಗಾರಮ್ಮ ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾಳೆ. ನಟನೆ ಅಷ್ಟೇ ಅಲ್ಲ ನೃತ್ಯ, ಹಾಡು ಕೂಡ ಗೊತ್ತು ಈ ಮಗುವಿಗೆ. ಭರತನಾಟ್ಯವಾದರೂ ಸರಿ, ಜನಪದ ಗೀತೆಯಾದರೂ ಸರಿ ಕುಣಿಯುತ್ತಾಳೆ, ಹಾಡುತ್ತಾಳೆ.

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಮತ್ತು ನಟಿ ಮಯೂರಿಯ ಮಗಳಾಗಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾದಲ್ಲಿ ನಟಿಸಿದ್ದಾಳೆ. ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್‌ ಕೂಡ ಮಾಡುತ್ತೆ ಈ ಪುಟಾಣಿ ಪ್ರತಿಭೆ.

‘ಪ್ರಾನ್ಯಗೆ ಚಿಕ್ಕಂದಿನಿಂದಲೂ ಅನುಕರಣೆ ಮಾಡುವ ಸ್ವಭಾವ, 3 ವರ್ಷದವಳಿದ್ದಾಗ ನರ್ಸರಿ ಶಾಲೆಗೆ ಸೇರಿಸಿದ್ದೆ. ಶಾಲೆಯಿಂದ ಬಂದ ಕೂಡಲೇ ಪಾಠ ಮಾಡುವ ಶಿಕ್ಷಕರ ವರ್ತನೆಯನ್ನು ಅನುಕರಿಸಿ ತೋರಿಸುತ್ತಿದ್ದಳು. ನನ್ನನ್ನೂ ಅನುಕರಿಸಿ ತೋರಿಸುತ್ತಾಳೆ’ ಎಂದು ಮಗಳ ಅನುಕರಣೆ ಸ್ವಭಾವದ ಬಗ್ಗೆ ಸಂತೋಷದಿಂದ ಹೇಳುತ್ತಾರೆ ತಾಯಿ ಸುಕನ್ಯಾ.

‘ಶಾಲೆಯಲ್ಲಿದ್ದಾಗ, ಸಿನಿಮಾ, ಶೂಟಿಂಗ್‌, ಹಾಡು, ಇತ್ಯಾದಿಗಳ ಕಡೆಗೆ ಅವಳ ಗಮನ ಇರುವುದಿಲ್ಲ. ಶೂಟಿಂಗ್ ಸ್ಪಾಟ್‌ಗೆ ಬಂದಾಗ ಶಾಲೆಯನ್ನು ನೆನಪಿಸಿಕೊಳ್ಳುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ತನ್ನ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ. ಹೋಮ್‌ ವರ್ಕ್‌ ಮುಗಿಯುತ್ತಿದ್ದಂತೇ ಕನ್ನಡಿ ಮುಂದೆ ನಿಂತು ಅಭಿನಯ ಅಭ್ಯಾಸ ಮಾಡುತ್ತಾಳೆ. ಅವಳ ಚುರುಕು ಸ್ವಭಾವಕ್ಕೆ ನಟಿ ಶ್ರುತಿ ಕೂಡ ಬೆರಗಾಗಿದ್ದಾರೆ. ಪ್ರಾನ್ಯಳೊಂದಿಗೆ ಜನ್ಮದಿನ ಆಚರಿಸಿ ಖುಷಿಪಟ್ಟರು’ ಇದಕ್ಕಿಂತ ತಾಯಿಗೆ ಸಂತೋಷವೇನಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

‘ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಶೂಟಿಂಗ್ ನಡೆಯುವುದರಿಂದ ಅವಳ ವಿದ್ಯಾಭ್ಯಾಸಕ್ಕೆ ಯಾವ ತೊಂದರೆಯೂ ಇಲ್ಲ. ಚೆನ್ನಾಗಿ ಓದಿ ಡಾಕ್ಟರ್‌, ಎಂಜಿನಿಯರ್‌ ಆಗಬೇಕೆಂದು ನಾನು ಒತ್ತಡ ಹಾಕುವುದಿಲ್ಲ. ಅವಳಿಗೆ ಇಷ್ಟವಾದುದನ್ನೇ ಚೆನ್ನಾಗಿ ಮಾಡಲಿ’ ಪ್ರಾನ್ಯ ಎಂದರೆ ವಿದ್ವಾಂಸೆ. ಅವಳು ಅದೇ ರೀತಿ ಆಗಬೇಕೆಂಬುದು ನನ್ನ ಅಭಿಲಾಷೆ ಎನ್ನುತ್ತಾರೆ ಅವರು.

ಸಂಪರ್ಕಕ್ಕೆ: ಪ್ರವೀಣ್‌ ಡಿ– 99028 26208

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.