7

ಕಲ್ಲು ಭೂಮಿಯಲ್ಲಿ ಕೃಷಿ

Published:
Updated:
ಕಲ್ಲು ಭೂಮಿಯಲ್ಲಿ ಕೃಷಿ

–ಕೋಡಕಣಿ ಜೈವಂತ ಪಟಗಾರ

ಕಲ್ಲುಗಳಿಂದಲೇ ತುಂಬಿರುವ ಭೂಮಿಯದು. ಮೇಲ್ಭಾಗದಲ್ಲಿ ಅರ್ಧ ಅಡಿಯಷ್ಟೇ ಮಣ್ಣಿನ ಹೊದಿಕೆ. ಕೆಳಭಾಗದಲ್ಲಿ ಪದರು ಪದರಾಗಿ ಒಂದರೊಳಗೊಂದು ನುಸುಳಿ ಕುಳಿತಿರುವ ಕಲ್ಲುಬಂಡೆಗಳು. ಆಳದ ಉಳುಮೆ ಸಾಧ್ಯವಿಲ್ಲ. ಹಿರಿಯರು ಕಷ್ಟದಿಂದ ಜೋಳ, ರಾಗಿ, ಶೇಂಗಾ ಬಿತ್ತಿ ಬೆಳೆ ಪಡೆದುಕೊಳ್ಳುತ್ತಿದ್ದ ಭೂಮಿ.

ಹಿರಿಯರಿಂದ ಸಿಕ್ಕ ಈ ಭೂಮಿಯನ್ನು ತೋಟಗಾರಿಕೆ ಕ್ಷೇತ್ರವನ್ನಾಗಿ ಮಾಡಬೇಕೆಂಬುದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ಶಿವಾನಂದ ಮಠಪತಿಯವರ ಹಂಬಲ. ಕಿರಾಣಿ ಅಂಗಡಿ ಹೊಂದಿದ್ದ ಇವರಿಗೆ ಕುಟುಂಬ ನಿರ್ವಹಣೆಗೆ ತೊಡಕಿರಲಿಲ್ಲ. ಆದರೆ ಕೃಷಿ ಬಗ್ಗೆ ಹೆಚ್ಚಿನ ಒಲವಿತ್ತು. ಊರಿನ ಹೊರವಲಯದಲ್ಲಿ ಅನತಿ ದೂರದಲ್ಲಿರುವ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಬೇಕೆಂದು ನಿರ್ಧರಿಸಿದರು.

ವ್ಯಾಪಾರದ ಜೊತೆ ಜೊತೆಗೆ ಆಗಾಗ ಕೃಷಿ ಭೂಮಿಯನ್ನೂ ಸುತ್ತು ಹಾಕಿ ಬರುತ್ತಿದ್ದರು. ಜಮೀನಿನ ಅಂಚಿನಲ್ಲಿ ನಿಂತು ಯಾವೆಲ್ಲಾ ಪರಿವರ್ತನೆ ಸಾಧ್ಯವಾಗಿಸಬಹುದು ಎಂದು ಆಲೋಚಿಸುತ್ತಿದ್ದರು. ಕಲ್ಲುಗಳ ರಾಶಿಯ ಮೇಲೆ ಹಸಿರು ಹೊದಿಕೆ ಹೊದಿಸುವ ಸವಾಲನ್ನು ಮೈಮೇಲೆ ಎಳೆದುಕೊಂಡರು.

ಹೊಲದ ಮೇಲ್ಭಾಗದಲ್ಲಿರುವ ಕಲ್ಲುಗಳನ್ನೆಲ್ಲ ಹೊತ್ತೊಗೆಯು ವುದೆಂದು ಶಿವಾನಂದ ಅವರು ನಿರ್ಧರಿಸಿದರು. ಆಧುನಿಕ ಯಂತ್ರೋಪಕರಣಗಳಿರಲಿಲ್ಲ. ರಟ್ಟೆ ಬಲದಲ್ಲಿ ಬದಿಗೆ ಸರಿಸ ಬೇಕು. ಬೆವರು ಹನಿಸಿ ಭೂಮಿ ಹಸನುಗೊಳಿಸಬೇಕು. ಕೆಲಸ ಆರಂಭಿಸಿಯೇಬಿಟ್ಟರು.

ನಲವತ್ತು ಜನ ಕೂಲಿಕಾರರ ಪಡೆ ಸಿದ್ಧಗೊಂಡಿತು. ಬಗೆದೆಡೆಯಲ್ಲೆಲ್ಲಾ ಕಲ್ಲುಗಳು. ಕಲ್ಲು ತೆಗೆದು ಒಂದೆಡೆ ಪೇರಿಸುವುದು, ಮುಳ್ಳು ಕಂಟಿಗಳನ್ನು ಕಡಿದೊಗೆದು ಭೂಮಿ ಹದಗೊಳಿಸುವುದು ಶ್ರಮದಾಯಕ ಮತ್ತು ವೆಚ್ಚದಾಯಕವೇ ಆಗಿತ್ತು. ಸಣ್ಣ ಸಣ್ಣ ಕಲ್ಲುಗಳು ಸರಳವಾಗಿ ಹೋದವು. ದೊಡ್ಡ ಬಂಡೆಗಳು ಚೂರು ಚೂರಾಗಿ ಖಾಲಿಯಾದವು. ಹತ್ತು ಎಕರೆ ಜಮೀನಿನ ಸುತ್ತ ನಾಲ್ಕು ಅಡಿ ಎತ್ತರದ ಗೋಡೆಗಳಾಗಿ ಜೋಡಿಸಲ್ಪಟ್ಟವು. ಭದ್ರವಾದ ಕಾಂಪೌಂಡ್ ರಚನೆಯಾಯಿತು.

ಊರಿನ ಮಧ್ಯದಲ್ಲಿರುವ ಮನೆಯನ್ನು ದೂರದ ಜಮೀನಿಗೆ ವರ್ಗಾಯಿಸಿದರು. ಸಣ್ಣ ಗುಡಿಸಲು ಕಟ್ಟಿಕೊಂಡು ದುಡಿಮೆಗಿಳಿದರು. ಕೊಳವೆಬಾವಿ ಕೊರೆಯಿಸಿದಾಗ ಎರಡು ಇಂಚು ನೀರು ಸಿಕ್ಕಿತು. ಹತ್ತಿ, ಜೋಳ ಬೆಳೆಯುತ್ತಿದ್ದ ಭೂಮಿಯನ್ನು ಹೂವಿನ ಕೃಷಿಗಾಗಿ ಸಿದ್ಧಪಡಿಸಿದರು. ಅರ್ಧ ಎಕರೆಯಲ್ಲಿ ಗುಲಾಬಿ, ಎರಡು ಎಕರೆಯಲ್ಲಿ ನಾಲ್ಕು ವಿಧದ ಮಲ್ಲಿಗೆ, ಅರ್ಧ ಎಕರೆ ಸುಗಂಧರಾಜ ಹೂವುಗಳನ್ನು ಬೆಳೆದರು. ಹಸನಾದ ಭೂಮಿ ಹುಲುಸಾಗಿ ಹೂವುಗಳನ್ನು ಕೊಯ್ಲಿಗೆ ಒದಗಿಸತೊಡಗಿತು. ಮಾಲೆ ಕಟ್ಟಿ ಮಾರಾಟಕ್ಕೆ ತೊಡಗಿದರು.

ರಾಮದುರ್ಗ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಸಂತೆ ಗಳಲ್ಲಿ ಮಾರಾಟಕ್ಕೆ ಸ್ವತಃ ಹೋಗಿ ಕುಳಿತರು. ಅವರದೇ ಆದ ಗ್ರಾಹಕರ ಬಳಗ ಸೃಷ್ಟಿಯಾಯಿತು. ಕನಕಾಂಬರ, ಸೂಜಿ ಮಲ್ಲಿಗೆ, ದುಂಡುಮಲ್ಲಿಗೆ, ಗುಲಾಬಿ, ಸೇವಂತಿಗೆ ಹೂವುಗಳು ಕಲ್ಲು ಎತ್ತಿ ಹಾಕುವಾಗ ಶ್ರಮಿಸಿದ ನೋವನ್ನು ಮರೆಯಿಸಿದವು. ಮಂದಹಾಸ ಮೂಡಿಸಿದವು. ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಕಷ್ಟದಲ್ಲಿ ಆದಾಯ ಗಳಿಸಬೇಕಿದ್ದ ಭೂಮಿಯಲ್ಲಿ ದಿನನಿತ್ಯ ಜೇಬು ತುಂಬಿಸುವಷ್ಟು ಹಣ ದೊರೆಯತೊಡಗಿತು. ಹದಿನೆಂಟು ವರ್ಷಗಳ ಕಾಲ ಹೂವು ಬದುಕು ಕಟ್ಟಿಕೊಟ್ಟಿತು.

ಮೂರು ಎಕರೆಯಲ್ಲಿ ಯಥೇಚ್ಛವಾಗಿ ಬೆಳೆಯುವ ಹೂವು ಗಳನ್ನು ಕೊಯ್ಲು ಮಾಡಿ ಮಾಲೆ ಕಟ್ಟುವುದು ಸುಲಭದ ಮಾತಲ್ಲ. 15-20 ಜನರ ಶ್ರಮ ಬೇಕು. ಕ್ರಮೇಣ ಕೆಲಸಕ್ಕೆ ಜನರು ಸಿಗದೇ ಇದ್ದುದು ಹೂವಿನ ಕೃಷಿ ಹೊರೆಯಾಗತೊಡಗಿತು. ಜನರಿಲ್ಲದೇ ಹೂವುಗಳನ್ನು ಕೊಯ್ಲು ಮಾಡಲಾಗದೆ ಗಿಡದಲ್ಲಿಯೇ ಒಣಗಿ ಹೋಗತೊಡಗಿದವು. ಕೆಲಸಗಾರರ ಅಲಭ್ಯತೆಯಿಂದ ಹೂವಿನ ಕೃಷಿ ಕೈಬಿಟ್ಟು ತೋಟಗಾರಿಕೆ ಬೆಳೆಗಳೆಡೆಗೆ ಮನಸ್ಸು ಹೊರಳಿತು.

ಶಿವಾನಂದ ಇವರಿಗೆ ಎದುರಾದ ಇನ್ನೊಂದು ತೊಡಕು ಜಮೀನಿನ ಅರ್ಧ ಅಡಿಯ ಕೆಳಭಾಗದಲ್ಲಿ ಕಲ್ಲಿನ ಹಾಸು ಇರುವುದು. ಮಾವಿನ ಗಿಡಗಳನ್ನು ಆಳದಲ್ಲಿ ನಾಟಿ ಮಾಡಬೇಕು. ಮಾವು, ಚಿಕ್ಕು, ನಿಂಬೆ ಗಿಡಗಳನ್ನು ನಾಟಿ ಮಾಡುವ ಉದ್ದೇಶದಿಂದ ಬಂಡೆಯಲ್ಲೇ ಮೂರು ಅಡಿ ಘನಗಾತ್ರದ ಗುಂಡಿಯನ್ನು ತೆಗೆದರು.

ಭೂಮಿಯೊಳಗಿನ ಕಲ್ಲು ತೆರವುಗೊಂಡ ಬಳಿಕ ಅದೇ ಗುಂಡಿಯಲ್ಲಿ ಫಲವತ್ತಾದ ಕೆರೆ ಮಣ್ಣು, ಬೇವಿನ ಹಿಂಡಿ, ಕಾಂಪೋಸ್ಟ್‌ ಗೊಬ್ಬರ ತುಂಬಿಸಿ ಗಿಡ ನಾಟಿ ಮಾಡಿದರು. ಸಾವಿರಕ್ಕೂ ಅಧಿಕ ಗುಂಡಿಗಳು ಸಿದ್ಧಗೊಂಡವು. ಕೆರೆ ಮಣ್ಣು, ಗೊಬ್ಬರದ ಮಿಶ್ರಣ ಭರ್ತಿಯಾದವು. ಹೀಗೆ ನಾಟಿ ಮಾಡಿದ ಗಿಡಗಳೀಗ ಮರಗಳಾಗಿವೆ. ಭರ್ತಿ ಇಳುವರಿ ನೀಡುತ್ತಿವೆ. ಮೂರು ಎಕರೆಯಲ್ಲಿನ ಮಾವು, ಎರಡು ಎಕರೆಯಲ್ಲಿನ ಚಿಕ್ಕು ಹಾಗೂ ನಿಂಬೆ ಗಿಡಗಳು ಫಲ ನಿಲ್ಲುತ್ತಿವೆ.

ನುಗ್ಗೆಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿರುವ ಕಾರಣ ಕಳೆದ ವರ್ಷ ಎರಡೂವರೆ ಎಕರೆಯಲ್ಲಿ ನುಗ್ಗೆ ಕೃಷಿ ಮಾಡಿದ್ದಾರೆ. ನಾಟಿ ಮಾಡಿದ ಆರು ತಿಂಗಳಿಗೆ ಇಳುವರಿ ಕೈ ಸಿಗತೊಡಗಿದೆ. ಮೊದಲ ವರ್ಷದಲ್ಲಿ ಎರಡು ಲಕ್ಷ ಆದಾಯ ಗಳಿಸಿಕೊಟ್ಟಿದೆ.

ಶಿವಾನಂದ ಅವರ ಹೊಲದಲ್ಲಿ ಬೆಳೆ ವೈವಿಧ್ಯ ತುಂಬಿದೆ. ಬೆಟ್ಟದ ನೆಲ್ಲಿ, ಹುಣಸೆ, ನೇರಳೆ, ಬೇವು, ತೆಂಗು, ಕರಿಬೇವು, ಪೇರಲ, ದಾಳಿಂಬೆ, ಶ್ರೀಗಂಧ, ಮಹಾಗನಿ ಹೀಗೆ ಹತ್ತು ಹಲವು ಮರಗಳು ಜಮೀನಿನುದ್ದಕ್ಕೂ ಅಲ್ಲಲ್ಲಿ ಬೆಳೆದುನಿಂತಿವೆ. ಬಯಲು ನಾಡಿನಲ್ಲಿ ಮಲೆನಾಡಿನ ಕಳೆ ನೀಡಿವೆ. ನೀರಿನ ಸಮರ್ಥ ಬಳಕೆಯಲ್ಲೂ ಈ ರೈತ ಪ್ರಾವೀಣ್ಯ ಸಾಧಿಸಿದ್ದಾರೆ. ಎರಡು ಲಕ್ಷ ಲೀಟರ್ ಸಾಮರ್ಥ್ಯದ ಕೃಷಿಹೊಂಡ ಮಾಡಿಕೊಂಡಿದ್ದಾರೆ.

ಎರಡು ಇಂಚು ನೀರು ಹೊರ ಸೂಸುವ ಎರಡು ಬೋರ್‌ವೆಲ್ ಇವೆ. ನೀರನ್ನು ಕೃಷಿ ಹೊಂಡಕ್ಕೆ ಹಾಯಿಸಿ ತುಂಬಿಸಿಕೊಳ್ಳುತ್ತಾರೆ. ಡ್ರಿಪ್ ಮೂಲಕ ಗಿಡ ಮರಗಳಿಗೆ ನೀರುಣಿಸುತ್ತಾರೆ. ಬಯೋಡೈಜೆಸ್ಟರ್ ತೊಟ್ಟಿ ರಚಿಸಿಕೊಂಡಿದ್ದಾರೆ. ಇದರಿಂದ ಬಸಿದು ಬರುವ ಗೋಮೂತ್ರ, ಸ್ಲರಿಯ ದ್ರಾವಣವನ್ನು ಸೋಸಿ ನೀರಿನೊಂದಿಗೆ ಬೆರೆಸಿ ಗಿಡಮರಗಳಿಗೆ ಹನಿಸುತ್ತಾರೆ.

ಮಳೆ ನೀರಿಂಗಿಸುವ ಜಾಣ್ಮೆ ಅಳವಡಿಸಿಕೊಂಡಿದ್ದಾರೆ ಈ ರೈತ. ಮಾವಿನ ಮರಗಳು ಮೂವತ್ತು ಅಡಿ ಅಂತರದಲ್ಲಿದ್ದು ನಾಲ್ಕು ಮರಗಳ ಮಧ್ಯೆ ಮೂರು ಅಡಿ ಆಳ ಅಗಲ ಹದಿನೈದು ಅಡಿ ಉದ್ದದ ಗುಂಡಿ ರಚಿಸಿದ್ದಾರೆ. ಜಮೀನಿನುದ್ದಕ್ಕೂ ಅಲ್ಲಲ್ಲಿ ಐದುನೂರಕ್ಕೂ ಅಧಿಕ ಗುಂಡಿಗಳಿವೆ. ಬಿದ್ದ ಮಳೆ ನೀರು ಗುಂಡಿಯಲ್ಲಿ ಸಂಗ್ರಹ ಗೊಳ್ಳುತ್ತದೆ. ಮಾವಿನ ತೋಟಕ್ಕೆ ನೀರುಣಿಸುವಾಗಲೂ ಗುಂಡಿ ತುಂಬಿಸುವ ತಂತ್ರ ಅನುಸರಿಸುತ್ತಾರೆ. ಮಾವಿನ ಮರಗಳು ಹೂ ಬಿಡುವ ಸಮಯದಲ್ಲಿ ಡಿಸೆಂಬರ್-ಜನವರಿ ವೇಳೆಗೆ ಒಮ್ಮೆ ಗುಂಡಿ ಯನ್ನು ತುಂಬಿಸಿಬಿಡುತ್ತಾರೆ. ಒಂದು ಬಾರಿ ಗುಂಡಿ ಪೂರ್ತಿ ನೀರು ತುಂಬಿದರೆ ಪುನಃ ಮೂರು ತಿಂಗಳು ನೀರು ಹಾಯಿಸುವುದಿಲ್ಲ.

ಕೃಷಿ ಫಸಲನ್ನು ಸ್ವತಃ ಮಾರಾಟ ಮಾಡುವ ರೂಢಿ ಬೆಳೆಸಿಕೊಂಡಿದ್ದಾರೆ. ಮಧ್ಯವರ್ತಿಗಳ, ವ್ಯಾಪಾರಸ್ಥರ ನೆರವು ಪಡೆದು ಬೆಳೆದ ಉತ್ಪನ್ನಗಳನ್ನು ವಿಕ್ರಯಿಸುವುದಕ್ಕೆ ಕಡ್ಡಾಯ ನಿಷೇಧ ಹೇರಿಕೊಂಡಿದ್ದಾರೆ. ತಾವೇ ಬೆಳೆದ ರತ್ನಗಿರಿ ಆಪೂಸ್, ತೋತಾಪುರಿ, ಧಾರವಾಡ ಆಪೂಸ್ ಮುಂತಾದ ತಳಿಯ ಮಾವಿನ ಹಣ್ಣುಗಳನ್ನು ರಾಮದುರ್ಗದಲ್ಲಿರುವ ಹಳೆ ಬಸ್ ನಿಲ್ದಾಣದ ಎದುರಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಅಲ್ಲದೇ ಸುತ್ತಲಿನ ಸಂತೆಗಳಿಗೆ ತೆರಳಿ ವಿಕ್ರಯಿಸುತ್ತಾರೆ. ಸಾವಯವ ಮಾದರಿಯ ಕೃಷಿಯಾಗಿದ್ದರಿಂದ ರುಚಿಯಲ್ಲಿ ವಿಭಿನ್ನ, ಗಾತ್ರದಲ್ಲಿ ಗಮನ ಸೆಳೆಯುವ, ನೈಸರ್ಗಿಕವಾಗಿ ಪಕ್ವಗೊಂಡಿರುವ ಮಾವಿನ ಹಣ್ಣುಗಳು ಇವರಲ್ಲಿ ಲಭ್ಯವಿರುತ್ತದೆ. ತಡವಿಲ್ಲದೇ ಮಾರಾಟವಾಗುತ್ತವೆ. ಡಜನ್ ಹಣ್ಣಿಗೆ ₹ 150- ₹ 500 ರವರೆಗೆ ದರ ಸಿಗುತ್ತದೆ.

ಚಿಕ್ಕು ವರ್ಷಕ್ಕೆ ಒಂದು ಲಕ್ಷ ಆದಾಯ ಗಳಿಸಿಕೊಡುತ್ತಿದೆ. ನಿಂಬೆ ಇಳುವರಿ 5-6 ಟನ್ ಸಿಗುತ್ತಿದೆ. ಹಾಗೆಯೇ ಸಂಗ್ರಹಿಸಿಟ್ಟರೆ ಒಂದು ತಿಂಗಳಾದರೂ ಹಾಳಾಗದ ಸಾವಯವ ನಿಂಬೆ ಹಣ್ಣುಗಳು ಕಿಸೆ ತುಂಬ ಹಣ ಗಳಿಸಿಕೊಡುತ್ತಿವೆ. ನುಗ್ಗೆ ಇಳುವರಿಯೂ ಯಥೇಚ್ಛ.

‘ಜಮೀನಿಗೇ ಬಂದು ಕೊಯ್ಲು ಮಾಡಿ ಒಯ್ಯುತ್ತೇವೆ. ಮಾರುಕಟ್ಟೆಯಲ್ಲಿ ದೊರೆಯುವ ದರವನ್ನೇ ಮನೆಬಾಗಿಲಿನಲ್ಲಿಯೇ ಕೊಡುತ್ತೇವೆ. ನಮಗೇ ಕೊಟ್ಟುಬಿಡಿ’ ಎಂದು ಬೆನ್ನುಬಿದ್ದ ವ್ಯಾಪಾರ ಸ್ಥರ ಸಂಖ್ಯೆ ಹೆಚ್ಚಿದೆ. ಅವರ ಮನವಿಗಳನ್ನು ಸಾರಾಸಗಟಾಗಿ ತಿರಸ್ಕರಿ ಸುವ ಅವರಿಗೆ, ‘ಕಷ್ಟವಾದರೂ ಗ್ರಾಹಕರಿಗೇ ನೇರವಾಗಿ ಬೆಳೆಗಳನ್ನು ಪೂರೈಸುತ್ತೇನೆ’ ಎನ್ನುವ ಹಟ.

ಆದಾಯ ಹೆಚ್ಚಿಸಿದ ಮೌಲ್ಯವರ್ಧನೆ

ಮಾವು ಹಾಗೂ ನಿಂಬೆಯ ಉಪ್ಪಿನಕಾಯಿ ತಯಾರಿಕೆಯ ಘಟಕವನ್ನೂ ಶಿವಾನಂದ ಅವರು ಆರಂಭಿಸಿದ್ದಾರೆ. ಇದರ ಆರಂಭದ ಹಿಂದೆ ಒಂದು ರೋಚಕ ಕಥೆಯಿದೆ.

ನಾಲ್ಕು ವರ್ಷದ ಹಿಂದಿನ ಮಾತು. ಅದೊಮ್ಮೆ ತಾವು ಬೆಳೆದ ಲಿಂಬೆ ಹಣ್ಣುಗಳನ್ನು ಮಾರುಕಟ್ಟೆಗೆ ಮಾರಲೆಂದು ಒಯ್ದಿದ್ದರು. ವ್ಯಾಪಾರಿಯೊಬ್ಬ ಒಂದು ಚೀಲ ನಿಂಬೆಹಣ್ಣಿಗೆ 30 ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದ. ದರವಿಲ್ಲ ಕೊಳ್ಳುವವರಿಲ್ಲ ಎಂದು ಸಬೂಬು ಹೇಳಿ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದ. ದಿಕ್ಕು ತೋಚದೇ ಮರಳಿ ಹೊತ್ತು ತರುವ ಬದಲು ಮಾರಾಟ ಮಾಡಿ ಬಂದಿದ್ದರು. ವಾಹನಕ್ಕೆ ತೆತ್ತ ಹಣ ಲೆಕ್ಕ ಹಾಕಿದರೆ ಕೈಯಲ್ಲಿ ಬಿಡಿಗಾಸು ಉಳಿದಿತ್ತು.

ವರ್ಷಾನುಗಟ್ಟಲೆ ವಿದ್ಯುತ್ ಕಣ್ಣು ಮುಚ್ಚಾಲೆ ನಡುವೆ ರಾತ್ರಿ ಯಲ್ಲೂ ಜಾಗ್ರತೆಯಿದ್ದು ನೀರು ಹಾಯಿಸಿ ಜತನದಿಂದ ಬೆಳೆದ ಬೆಳೆಯನ್ನು ಮೂರು ಕಾಸಿನ ಕಿಮ್ಮತ್ತಿಗೆ ಮಾರಿ ಬಂದೆನಲ್ಲಾ ಎಂದು ನೊಂದು ಕೊಂಡಿದ್ದರು. ಈ ಸಂಗತಿ ನಿದ್ದೆ ಮಾಡಲು ಬಿಡದೇ ಕಾಡಿತ್ತು.

ಅಂದೇ ತಾವು ಬೆಳೆದ ಫಸಲನ್ನು ಸ್ವತಃ ಮಾರಾಟ ಮಾಡುವ, ಮಾವು, ನಿಂಬೆಯ ಮೌಲ್ಯವರ್ಧನೆಯಲ್ಲಿ ತೊಡಗುವ ನಿರ್ಧಾರ ಕೈಗೊಂಡರು. ಉಪ್ಪಿನ ಕಾಯಿ ತಯಾರಿಸಲು ನಿರ್ಧರಿಸಿ ಮನೆಯಲ್ಲಿ ಈ ಯೋಜನೆ ತಿಳಿಸಿದರು. ಸಕಾರಾತ್ಮಕ ಪ್ರತಿಕ್ರಿಯೆ ಬಂತು.

ಹತ್ತು ಕ್ವಿಂಟಾಲ್‌ನಷ್ಟು ಲಿಂಬೆ ಕಾಯಿಗಳನ್ನು ಕೊಯ್ಲು ಮಾಡಿ ಹೆಚ್ಚಿ ಉಪ್ಪಿನಲ್ಲಿ ಹಾಕಿಟ್ಟರು. ತಿಂಗಳ ನಂತರ ನೋಡಿದರೆ, ಸಂಗ್ರಹಿಸಿದ ಪಾತ್ರೆಯಲ್ಲಿ ಹುಳುಗಳು ಮಿಜಿಗುಡುತ್ತಿದ್ದವು. ಉತ್ಸಾಹ ಠುಸ್ಸೆಂದಿತ್ತು. ಆದರೆ ಹಟ ಬಿಡಲಿಲ್ಲ. ಹಿರಿಯ ಮಗನನ್ನು ಧಾರವಾಡಕ್ಕೆ ತರಬೇತಿ ಗೆಂದು ಕಳುಹಿಸಿದರು. ತಂದೆಯ ಆಣತಿಯಂತೆ ಉಪ್ಪಿನ ಕಾಯಿ ತಯಾರಿಕೆಯ ಕೌಶಲ್ಯ ಕಲಿತು ಬಂದ ಮಗ ಮನೆ ಮಂದಿಯನ್ನೆಲ್ಲಾ ಕುಳ್ಳರಿಸಿಕೊಂಡು ವಿವಿಧ ಬಗೆಯ ಉಪ್ಪಿನ ಕಾಯಿ ತಯಾರಿಯ ಪಾಠವನ್ನು ಜತನದಿಂದ ಹೇಳಿಕೊಟ್ಟರು.

ಈ ಬಾರಿ 25 ಕ್ವಿಂಟಾಲ್ ಲಿಂಬೆ ಹಣ್ಣನ್ನು ಹೆಚ್ಚಿ ಸಂಗ್ರಹಿಸಿಟ್ಟರು. ಪ್ರಯೋಗ ಯಶಸ್ವಿಯಾಯಿತು. ಉಪ್ಪಿನ ಕಾಯಿ ಉದ್ಯಮ ಬೆಳೆದು ನಿಂತಿತು. ಇದನ್ನು ಆರಂಭಿಸಿ ಈಗ 4 ವರ್ಷಗಳಾಗಿವೆ. ವಾರ್ಷಿಕ 120 ಟನ್‌ ಉಪ್ಪಿನಕಾಯಿ ಮಾರಾಟ ಆಗುತ್ತದೆ. ವೀರಭದ್ರೇಶ್ವರ ಹೋಮ್ ಇಂಡಸ್ಟ್ರಿ ಎಂಬ ಬ್ರ್ಯಾಂಡ್ ಅಡಿಯಲ್ಲಿ ಮಾವು ಹಾಗೂ ನಿಂಬೆಯ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ ₹2 ಲಕ್ಷ ರೂಪಾಯಿ ಗಳಿಕೆಯ ಉದ್ಯಮ ಕಟ್ಟಿ ಬೆಳೆಸಿದ್ದಾರೆ. ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳಿಗೆ ಇವರ ವ್ಯಾಪಾರ ವ್ಯಾಪಿಸಿದೆ.

ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಅಗಸೆ ಚಟ್ನಿ, ಪುಟಾಣಿ ಚಟ್ನಿ ಇವರು ತಯಾರಿಸುತ್ತಿರುವ ಇತರೇ ಉತ್ಪನ್ನಗಳು. ಇದರೊಂದಿಗೆ ಗೋಮೂತ್ರದಿಂದ ತಯಾರಿಸಿದ ಅರ್ಕ, ದೇಸಿ ತಳಿಯ ಆಕಳ ಸೆಗಣಿಯಿಂದ ತಯಾರಿಸಿದ ವಿಭೂತಿ ಮಾರಾಟ ಮಾಡುತ್ತಾರೆ.

ಮನೆ ಮಂದಿಯೆಲ್ಲಾ ಕೂಡಿ ದುಡಿಯುವುದು ಇವರ ವಿಶೇಷತೆ. ಮೂವರು ಮಕ್ಕಳು, ಮೂವರು ಸೊಸೆಯಂದಿರು, ಪತ್ನಿ ಈರಮ್ಮ ಒಟ್ಟಿಗೆ ದುಡಿಯುತ್ತಾರೆ. ಇವರಲ್ಲಿ ಪ್ರತಿಯೊಬ್ಬರೂ ಮಾಲೀಕರು. ಪ್ರತಿಯೊಬ್ಬರೂ ದುಡಿಮೆಗಾರರು. ಯಾರು ಬೇಕಾದರೂ ಹಣಕಾಸಿನ ವ್ಯವಹಾರ ಮಾಡಬಹುದಾದ ಪಾರದರ್ಶಕತೆ ರೂಢಿಸಿಕೊಂಡಿದ್ದಾರೆ.

ದಿನನಿತ್ಯ ಸಾಯಂಕಾಲ ಇಂದಿನ ವ್ಯವಹಾರದ ಲೆಕ್ಕಾಚಾರ ಕಡ್ಡಾಯ ದಾಖಲಿಸುವ ನಿರ್ಣಯ ಅನುಪಾಲನೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ, ಸಂತೆಗಳಲ್ಲಿ ಕುಳಿತು ವ್ಯಾಪಾರ ಮಾಡುವ ಚಾಕಚಕ್ಯತೆಯನ್ನು ಮಕ್ಕಳಾದ ಈರಣ್ಣ, ಮಲ್ಲಯ್ಯ, ಬಸಯ್ಯ ಕರಗತ ಮಾಡಿಕೊಂಡಿದ್ದಾರೆ. ಉಪ್ಪಿನಕಾಯಿ ತಯಾರಿಯಲ್ಲಿ ಸೊಸೆಯಂದಿರಾದ ದಾಕ್ಷಾಯಣಿ, ವಿದ್ಯಾ, ಜ್ಯೋತಿ ಪಳಗಿದ್ದಾರೆ. ಮೊಮ್ಮಕ್ಕಳಿಗೂ ಶಿಕ್ಷಣದೊಂದಿಗೆ ಕೃಷಿ ಪಾಠ ನಡೆಯುತ್ತಲೇ ಇರುತ್ತದೆ.

ರಾಜ್ಯ ಸರ್ಕಾರ ಇವರಿಗೆ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. 2012ರಲ್ಲಿ ಸರ್ಕಾರದ ನೆರವಿನಿಂದ ಚೀನಾಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ತೆರಳಿ ಕೃಷಿ ಸೂಕ್ಷ್ಮ ಗಳನ್ನು ಅರಿತು ಬಂದಿದ್ದಾರೆ. ತಮ್ಮ ಸಾಧನೆ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನ ಇರುವುದನ್ನು ನೆನೆಯುತ್ತಾರೆ.

ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಕಾಂಪೋಸ್ಟ್‌ ಗೊಬ್ಬರ, ಜೀವಾಮೃತ ಬಳಸಿ ನೈಸರ್ಗಿಕ ಕೃಷಿಯಲ್ಲಿ ತೊಡಗಿ ರುವ ಇವರು ಬರಕ್ಕೂ ಬೆದರದೇ ಕೃಷಿಯಲ್ಲಿ ಗೆದ್ದಿದ್ದಾರೆ.

ಸಂಪರ್ಕಕ್ಕೆ: 8861796727.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry