7

‘ಓದು ನಟನೆ ಎರಡೂ ಇಷ್ಟ’

Published:
Updated:
‘ಓದು ನಟನೆ ಎರಡೂ ಇಷ್ಟ’

‘ಅಪ್ಪ– ಅಮ್ಮ ಬೈದ್ರು ಪರ್ವಾಗಿಲ್ಲ, ನಾನು ಆ್ಯಕ್ಟರೇ ಆಗೋದು, ಅವರು ಬೈದ್ರೇ ನಾನು ಅವರಿಗೆ ಹೊಡೆದು ಆ್ಯಕ್ಟರ್ ಆಗ್ತೀನಿ, ಹೀರೋ ಆಗೋದೆ ನನ್ನ ಕನಸು’ ಎಂದು ಮುದ್ದಾಗಿ ತನಗೆ ನಟನೆಯ ಮೇಲಿರುವ ವ್ಯಾಮೋಹವನ್ನು ಹಂಚಿಕೊಳ್ಳುವ ಈ ಹುಡುಗನಿಗೀಗ 8 ವರ್ಷ. 3ನೇ ತರಗತಿ ಓದುತ್ತಿರುವ ಇವನ ಹೆಸರು ನಿಶಾಂತ್‌. ಬಿಡುಗಡೆಗೆ ಸಿದ್ಧವಾಗಿರುವ ಮೂಕಹಕ್ಕಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಈತ ಕೆಲವು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾನೆ.

ವಿಜಯಪುರ ಮೂಲದ ನಿಶಾಂತ್ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಬಾಲ್ಯದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ನಾಟಕದಲ್ಲಿ  ಚಟುವಟಿಕೆಯಿಂದ ತೊಡಗಿಸಿಕೊಳ್ಳುತ್ತಿದ್ದ. ಈ ಆಸಕ್ತಿಯೇ ಅವನನ್ನು ಬೆಳ್ಳಿತೆರೆಯ ಅಂಗಳದಲ್ಲಿ ತಂದು ನಿಲ್ಲಿಸಿತು.

ನಿಶಾಂತ್‌ನ ಮೊದಲ ಸಿನಿಮಾ ‘ಮೂಕಹಕ್ಕಿ’. ಇದರಲ್ಲಿ ಇವನದ್ದು, ಕೋಲೆ ಬಸವನನ್ನು ಆಡಿಸುವ ಪಾತ್ರ. ‘ಸಿನಿಮಾದಲ್ಲಿ ನನ್ನ ಹೆಸರು ದುಗ್ಯಾ, ಸಿನಿಮಾದಲ್ಲಿ ನಟಿಸಿದ ಅನುಭವ ಚೆನ್ನಾಗಿತ್ತು. ಇನ್ನೂ ಚೆನ್ನಾಗಿ ನಟಿಸಬೇಕು ಎನ್ನಿಸುತ್ತಿತ್ತು. ನಮ್ಮ ತಂಡವರೆಲ್ಲ ತುಂಬಾ ಸಪೋರ್ಟ್ ಮಾಡಿದ್ರು. ಎಲ್ರೂ ಹೇಳಿಕೊಡ್ತಾ ಇದ್ರು. ನಾನು ಶಾಲೆಯಲ್ಲಿ ಡಾನ್ಸ್ ನಾಟಕ ಎಲ್ಲಾ ಮಾಡ್ತಾ ಇದ್ದೆ. ಹಾಗಾಗಿ ನಂಗೆ ನಟಿಸೋದು ಸುಲಭ ಆಯ್ತು’ ಎಂದು ಪಟಪಟನೆ ಹೇಳುತ್ತಾನೆ ಈ ಪುಟಾಣಿ.

‘ನಮ್ಮ ಮನೆ ಹತ್ರ ಯಾವಾಗಲೂ ಕೋಲೆ ಬಸವನನ್ನು ಆಡಿಸುವವರು ಬರ್ತಾ ಇದ್ರು, ನಾನು ಅವರನೆಲ್ಲಾ ಮಾತಾಡಿಸ್ತಿದ್ದೆ. ಅವರು ಹೇಗೆ ಮಾಡ್ತಾ ಇದ್ರೋ ಅದನೆಲ್ಲಾ ನೋಡ್ತಿದ್ದೆ. ಹಾಗಾಗಿ ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಲು ಸಾಧ್ಯವಾಯಿತು’ ಎಂದು ಸಿನಿಮಾದ ಅನುಭವ ಹಂಚಿಕೊಳ್ಳುತ್ತಾನೆ.

ಇವನಿಗೆ ನಟನೆ ಮತ್ತು ಓದು ಎರಡನ್ನೂ ನಿಭಾಯಿಸುವುದು ಎಂದೂ ಕಷ್ಟ ಎನಿಸಿಲ್ಲವಂತೆ. ’ಎರಡನ್ನೂ ಇಷ್ಟಪಟ್ಟು ಮಾಡುತ್ತೇನೆ’ ಎಂಬ ಜಾಣ ಉತ್ತರ ನೀಡುತ್ತಾನೆ.

ತಮ್ಮ ಮಗನ ಬಗ್ಗೆ ನಿಶಾಂತ್‌ ತಂದೆ–ತಾಯಿಗೆ ಹೆಮ್ಮೆ ಇದೆ. ‘ಅವನು ಸಿನಿಮಾದಲ್ಲಿ ನಟಿಸುವ ಜೊತೆಗೆ ಓದಿನಲ್ಲೂ ಚುರುಕು. ಆರನೇ ತರಗತಿ ಮುಗಿಸುವವರೆಗೂ ನಟನೆ ಓದು ಎರಡನ್ನು ನಿಭಾಯಿಸುತ್ತಾನೆ, ನಂತರ ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ನಮ್ಮ ಮನೆಯಲ್ಲಿ ಯಾರೂ ನಟರಿಲ್ಲ. ಇವನು ನಟಿಸುತ್ತಿರುವುದು ನಮಗೆ ಖುಷಿ. ಅವನು ಸಿನಿಮಾದಲ್ಲಿ ನಟಿಸಲು ಅಭಿನಯಿಸಲು ಶುರುಮಾಡಿದ ನಂತರ ಎಲ್ಲರೊಂದಿಗೆ ಬೆರೆಯಲು ಕಲಿತಿದ್ದಾನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ ನಿಶಾಂತ್‌ನ ತಾಯಿ ಚಂದ್ರಕಲಾ ಟಿ.ರಾಥೋಡ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry