7

ಮಂಗಳವಾರ, 14–11–1967

Published:
Updated:

ತಿಂಗಳೊಳಗೆ ವಿಧಾನ ಮಂಡಲ ಕರೆಯದಿದ್ದರೆ ಪ್ರತಿಭಟನೆ

ಬೆಂಗಳೂರು, ನ. 13– ತಾವು ಮಾಡುವ ಒತ್ತಾಯದಂತೆ ನವೆಂಬರ್ ಅಂತ್ಯದೊಳಗೆ ವಿಧಾನಮಂಡಲ ಅಧಿವೇಶನವನ್ನು ಕರೆಯದಿದ್ದರೆ ಡಿಸೆಂಬರ್ ಮೊದಲನೇ ವಾರದಲ್ಲಿ ರಾಜ್ಯಾದ್ಯಂತ ‘ಪ್ರತಿಭಟನಾವಾರ’ವನ್ನು ಆಚರಿಸುವುದಾಗಿ ವಿರೋಧ ಪಕ್ಷದ ನಾಯಕ ಶ್ರೀ ಎಸ್. ಶಿವಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

**

ಮಕ್ಕಳ ಆರೋಗ್ಯ, ಆನಂದ ನೆಹರೂಗೆ ಅತ್ಯಂತ ಪ್ರಿಯ: ಡಾ. ಹುಸೇನ್

ನವದೆಹಲಿ, ನ. 13– ನೆಹರೂ ಅವರಿಗೆ ‘ನಮ್ಮ ಮಕ್ಕಳ ಆರೋಗ್ಯ ಹಾಗೂ ಸಂತೋಷ’ಕ್ಕಿಂತ ಹೆಚ್ಚು ಪ್ರಿಯವಾದುದು ಮತ್ತೊಂದಿರಲಿಲ್ಲ. ಭಾರತದ ಈ ಸತ್ಪುತ್ರನನ್ನು ಇಂದು ನೆನೆದು, ಅವರ ಆದರ್ಶಗಳ ಸಾಧನೆಗೆ ಶ್ರಮಿಸೋಣ ಎಂದು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ತಿಳಿಸಿದ್ದಾರೆ.

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಅವರು ನೀಡಿದ ಸಂದೇಶವೊಂದರಲ್ಲಿ, ‘ಪ್ರತಿ ವರ್ಷವೂ ನೆಹರೂರವರ ಜನ್ಮದಿನವನ್ನು ನಾವು ಮಕ್ಕಳ ದಿನವನ್ನಾಗಿ ಆಚರಿಸುತ್ತಿದ್ದೇವೆ. ನೆಹರೂರವರೇ ಅನೇಕ ವಿಷಯಗಳಲ್ಲಿ ಮಗುವಿನಂತಿದ್ದರು’ ಎಂದು ತಿಳಿಸಿದ್ದಾರೆ.

**

ಕಾಕನಕೋಟೆಯಲ್ಲಿ ಖೆಡ್ಡಾ ಕಾರ್ಯಕ್ರಮ

ಬೆಂಗಳೂರು, ನ. 13– ಮುಂದಿನ ಜನವರಿ ತಿಂಗಳಿನಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ಕಾರ್ಯಕ್ರಮ ನಡೆಯುವುದೆಂದು ಚಾಮರಾಜನಗರದ ಡಿವಿಜನಲ್ ಅರಣ್ಯಾಧಿಕಾರಿಯವರು ಪ್ರಕಟಣೆ ಹೊರಡಿಸಿದ್ದಾರೆ. ಖೆಡ್ಡಾ ಬಂಡೀಪುರದಲ್ಲಿ ನಡೆಯುವುದೆಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

**

ಹೊಚಿಮಿನ್‌ಗೆ ತೀವ್ರ ಅನಾರೋಗ್ಯ

ಓಸ್ಲೊ, ನ. 13– ಉತ್ತರ ವಿಯಟ್ನಾಮಿನ ಅಧ್ಯಕ್ಷ ಹೋಚಿಮಿನ್ನರು ತೀವ್ರ ಅಸ್ವಸ್ಥರಾಗಿರುವರೆಂದು ಹಾನಾಯ್‌ನಿಂದ ಇಂದು ವರದಿಯಾಗಿದೆ.

ಅಸ್ವಸ್ಥತೆಯ ಕಾರಣ ರಷ್ಯ ಕ್ರಾಂತಿಯ ಐವತ್ತನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಮಾಸ್ಕೊ ಆಹ್ವಾನವನ್ನು ಅವರು ಅಂಗೀಕರಿಸಿಲ್ಲವೆಂದು ಸಂಜೆ ಪತ್ರಿಕೆ ಡಾಗ್‌ಬ್ಲೇಡೆಟ್ ವರದಿ ಮಾಡಿದೆ.

**

ಇಂದಿರಾ ಸಂಪುಟದ ವಿರುದ್ಧ ಅವಿಶ್ವಾಸ ಸೂಚನೆಗಳ ಸುರಿಮಳೆ

ನವದೆಹಲಿ, ನ. 13– ಲೋಕಸಭೆಯು ನಾಳೆ ಸಮಾವೇಶಗೊಂಡಾಗ ಇಂದಿರಾಗಾಂಧಿ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚಿಸುವ ನಿರ್ಣಯಗಳನ್ನು ಎಡ ಹಾಗೂ ಬಲ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಎಸ್.ಎಸ್.ಪಿ. ಮಂಡಿಸುವ ನಿರೀಕ್ಷೆ ಇದೆ.

‘ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿನ ಕಾಂಗ್ರೇಸ್ಸೇತರ ಸರ್ಕಾರಗಳನ್ನು ಉರುಳಿಸಲು ಕೇಂದ್ರವು ನಡೆಸುತ್ತಿರುವ ಪ್ರಯತ್ನ’ಗಳನ್ನು ಖಂಡಿಸುವುದೇ ಈ ಅವಿಶ್ವಾಸ ಸೂಚನೆಗಳ ಮುಖ್ಯ ಉದ್ದೇಶವೆನ್ನಲಾಗಿದೆ.

**

ದೀನ ದಲಿತರ ದೂತ ಲೋಹಿಯಾಗೆ ಪ್ರಣಾಮ: ಲೋಕಸಭೆ ಮುಂದಕ್ಕೆ

ನವದೆಹಲಿ, ನ. 13– ಹಿಂದಿನ ಅಧಿವೇಶನಾನಂತರ ಇಂದಿನವರೆಗೆ ನಡುವಣ ಅವಧಿಯಲ್ಲಿ ಮಡಿದ ಡಾ. ರಾಮಮನೋಹರ ಲೋಹಿಯಾ ಮತ್ತಿತರ ಪ್ರಸ್ತುತ ಮೂವರು ಮತ್ತು ಐವರು ಮಾಜಿ ಸದಸ್ಯರಿಗೆ ಶ್ರದ್ಧಾಂಜಲಿ ಸಮರ್ಪಿಸಿ, ಇಂದು ತಾನೆ ಚಳಿಗಾಲದ ಅಧಿವೇಶನ ಪ್ರಾರಂಭಿಸಿದ ಲೋಕಸಭೆ ನಾಳೆವರೆಗೆ ಮುಂದೆ ಹೋಯಿತು.

ರಾಷ್ಟ್ರದ ಇಷ್ಟೊಂದು ಪ್ರಮುಖರಿಗೆ ಅಧಿವೇಶನದ ಮೊದಲ ದಿನದಂದೇ ಶೋಕ ವ್ಯಕ್ತಪಡಿಸಬೇಕಾದ ಸಂದರ್ಭ ಘಟಿಸಿದುದು ಪ್ರಾಯಶಃ ಇದೇ ಪ್ರಥಮ ಬಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry