6

ಕಲಾಪಕ್ಕೆ ಗೈರು: ಜನರಿಗೆ ಮಾಡುವ ಅವಮಾನ

Published:
Updated:
ಕಲಾಪಕ್ಕೆ ಗೈರು: ಜನರಿಗೆ ಮಾಡುವ ಅವಮಾನ

ವಿಧಾನಸಭೆಯ ಒಂದು ದಿನದ ಕಲಾಪಕ್ಕೆ ಆಗುವ ಖರ್ಚು ಸುಮಾರು ₹ 80 ಲಕ್ಷ. ಇದರಲ್ಲಿ ಶಾಸಕರ ದಿನಭತ್ಯೆ, ಪ್ರವಾಸ ಭತ್ಯೆ, ಊಟೋಪಚಾರದ ವೆಚ್ಚಗಳದ್ದೇ ದೊಡ್ಡ ಪಾಲು. ಇದು ತೆರಿಗೆದಾರರ ಹಣ. ನಾಗರಿಕರು ಬೆವರು ಸುರಿಸಿ ದುಡಿದು ಸರ್ಕಾರದ ಖಜಾನೆಗೆ ತೆರಿಗೆ ರೂಪದಲ್ಲಿ ತುಂಬುವ ಹಣ. ಇದನ್ನು ತುಂಬ ಎಚ್ಚರದಿಂದ, ನ್ಯಾಯೋಚಿತವಾಗಿ ವಿನಿಯೋಗ ಮಾಡಬೇಕಾಗುತ್ತದೆ. ಆದರೆ ಆ ಲಕ್ಷಣ ಕಾಣಿಸುತ್ತಿಲ್ಲ. ನಮ್ಮ ರಾಜ್ಯದ ವಿಧಾನಮಂಡಲದಲ್ಲಿ ನಡೆಯುವ ಕಲಾಪಗಳು, ಚರ್ಚೆಯ ಗುಣಮಟ್ಟ ಮತ್ತು ಶಾಸಕರ ಹಾಜರಾತಿಯ ಪ್ರಮಾಣ ನೋಡಿದರೆ ಬೇಸರವಾಗುತ್ತದೆ. ಸದನದಲ್ಲಿ ಹಾಜರಿರುವುದು, ಚರ್ಚೆಗಳಲ್ಲಿ ಭಾಗವಹಿಸುವುದು, ಶಾಸನಗಳನ್ನು ರೂಪಿಸುವುದು ಶಾಸನಸಭೆಗಳ ಸದಸ್ಯರ ಮುಖ್ಯವಾದ ಕರ್ತವ್ಯಗಳು. ಆದರೆ ನಮ್ಮ ಬಹಳಷ್ಟು ಶಾಸಕರು ಅದನ್ನೇ ಮರೆತುಬಿಟ್ಟಿದ್ದಾರೆ. ಸದನದಲ್ಲಿ ಕುಳಿತುಕೊಳ್ಳುವುದು ಎಂದರೆ ಅವರಲ್ಲಿ ಅನೇಕರಿಗೆ ಅಲರ್ಜಿ.

ವಿಧಾನಸಭೆಯಲ್ಲಿ ಕೋರಂಗೆ ಬೇಕಾಗಿರುವುದು ಬರೀ 23 ಸದಸ್ಯರು. ಆದರೂ ಎಷ್ಟೋ ಸಲ ಕೋರಂ ಭರ್ತಿ ಆಗದೆ ಕಲಾಪವನ್ನು ಮುಂದೂಡಿದ, ಅರ್ಧರ್ಧ ಗಂಟೆ ಕೋರಂ ಗಂಟೆ ಬಾರಿಸಿದ ಉದಾಹರಣೆಗಳಿವೆ. ಅನೇಕ ಪ್ರಮುಖ ಮಸೂದೆಗಳು ಚರ್ಚೆ ಇಲ್ಲದೆ ಅಂಗೀಕಾರವಾಗಿವೆ. ಅತ್ಯಂತ ಪ್ರಮುಖವಾದ ಬಜೆಟ್‌ ಮೇಲಿನ ಚರ್ಚೆಯಲ್ಲೂ ಶಾಸಕರ ನಿರಾಸಕ್ತಿ ಎದ್ದು ಕಾಣುತ್ತಿದೆ. ಈ ವಿಷಯದಲ್ಲಿ ಸಚಿವರೂ ಕಡಿಮೆ ಏನಿಲ್ಲ. ಸದನಕ್ಕೆ ಗೈರುಹಾಜರಾಗಲು ಪೈಪೋಟಿ ನಡೆಸುವಂತಿದೆ ಅವರ ನಡವಳಿಕೆ. ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ಅಧಿವೇಶನ ನಡೆಯಲೇಬೇಕು ಎಂಬ ನಿಯಮಕ್ಕೂ ನಮ್ಮ ಜನಪ್ರತಿನಿಧಿಗಳು ಕಿಮ್ಮತ್ತು ಕೊಡುತ್ತಿಲ್ಲ.

2013ರಿಂದ ಈಚಿನ ಅಂಕಿಅಂಶಗಳನ್ನೇ ನೋಡುವುದಾದರೆ ಯಾವ ವರ್ಷದಲ್ಲೂ ಕಲಾಪ 60 ದಿನ ನಡೆದೇ ಇಲ್ಲ. ವಿಧಾನಸಭಾ ಸಚಿವಾಲಯದಿಂದಲೇ ದೊರೆತ ಮಾಹಿತಿಗಳ ಪ್ರಕಾರ, ಹಾಲಿ ವಿಧಾನಸಭೆಯ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕಲಾಪ ನಡೆದದ್ದು ಬರೀ 218 ದಿನಗಳು. ಕಡೇ ಪಕ್ಷ ಕಲಾಪ ನಡೆದ ಅವಧಿಯಲ್ಲಾದರೂ ಸಚಿವರು, ಶಾಸಕರು ಸಕ್ರಿಯವಾಗಿ ಭಾಗವಹಿಸಬೇಕಾಗಿತ್ತು. ಆದರೆ ಅದೂ ಇಲ್ಲ. 225 ಶಾಸಕರ ಪೈಕಿ 27 ಮಂದಿ ಮಾತ್ರ 200ಕ್ಕೂ ಹೆಚ್ಚು ದಿನ ಹಾಜರಾಗಿದ್ದಾರೆ. ಸಚಿವರಾಗಿದ್ದ ಎಂ.ಎಚ್‌. ಅಂಬರೀಷ್‌ ಮತ್ತು ಸಂತೋಷ್‌ ಲಾಡ್‌ ಅವರಂತೂ ಬರೀ 4–5 ದಿನಗಳು ಮಾತ್ರ ಸದನಕ್ಕೆ ಹಾಜರಿ ಹಾಕಿದ್ದರು. ಹಾಗೆಂದು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿದ್ದರೂ ಯಾರೂ ಸಂಬಳ– ಭತ್ಯೆಗಳನ್ನು ಬಿಟ್ಟುಕೊಟ್ಟಿಲ್ಲ. ಇದು ಮತದಾರರಿಗೆ ಮಾಡಿದ ಅವಮಾನ. ತಮ್ಮ ಹೊಣೆಗಾರಿಕೆಯನ್ನು ಜನಪ್ರತಿನಿಧಿಗಳು ಹೇಗೆ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಒಂದು ನಿದರ್ಶನ. ಜನಸಾಮಾನ್ಯರಿಗೆ ಶಾಸಕಾಂಗ ವ್ಯವಸ್ಥೆಯ ಮೇಲೆ ಜುಗುಪ್ಸೆ ಮೂಡಲು ಇದೂ ಒಂದು ಕಾರಣ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸನ ಸಭೆಯ ಅಧಿವೇಶನ ಎನ್ನುವುದು ಜನಪ್ರತಿನಿಧಿಗಳಿಗೆ ಜನರ ಪರವಾಗಿ ಮಾತನಾಡುವ, ಜನರ ಹಿತ ಕಾಪಾಡುವ, ಜನಪರ ನೀತಿಗಳನ್ನು ರೂಪಿಸುವ, ಕಾರ್ಯಾಂಗ ತಪ್ಪು ಮಾಡಿದರೆ ಅದಕ್ಕೆ ಅಂಕುಶ ಹಾಕುವ ಅತ್ಯಂತ ಪರಿಣಾಮಕಾರಿ ವೇದಿಕೆ. ಅದು ಜನತಂತ್ರದ ಪವಿತ್ರ ಸ್ಥಳ. ಆದರೆ ಅದರ ಬಗ್ಗೆಯೇ ನಮ್ಮ ಜನಪ್ರತಿನಿಧಿಗಳಿಗೆ ಗೌರವ ಇಲ್ಲ ಎನ್ನುವುದು ತಲೆತಗ್ಗಿಸಬೇಕಾದ ಸಂಗತಿ. ಒಂದೋ ಗೈರುಹಾಜರಾಗುತ್ತಾರೆ, ಅಕಸ್ಮಾತ್‌ ಹಾಜರಿದ್ದರೆ ಕಲಾಪವೇ ನಡೆಯದಷ್ಟು ಗದ್ದಲ ಮಾಡುತ್ತಾರೆ. ಅಂತಹವರ ಸಂಖ್ಯೆಯೇ ಹೆಚ್ಚಿದೆ. ಸಾತ್ವಿಕ ಪ್ರತಿಭಟನೆಗೂ ಗಲಾಟೆಗೂ ವ್ಯತ್ಯಾಸ ಇದೆ ಎಂಬುದೇ ಇವರಿಗೆ ಮರೆತುಹೋಗಿದೆ.

ಈ ರೀತಿಯ ಅಶಿಸ್ತಿಗೆ ಅವಕಾಶ ಕೊಡಬಾರದು. ಇಂತಹ ವಿಚಾರಗಳಲ್ಲಿ ಶಾಸಕರು, ಸಚಿವರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ತಮ್ಮ ನಡವಳಿಕೆಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ದಿನಕ್ಕೆ ಎರಡು ಸಲ ಹಾಜರಿ ಹಾಕಲು ತಾವೇನು ಚಿಕ್ಕಮಕ್ಕಳಲ್ಲ ಎಂದು ಹೇಳುವವರು ತಮ್ಮ ವರ್ತನೆಯಲ್ಲಿ ಪ್ರಬುದ್ಧತೆ ಪ್ರದರ್ಶಿಸಬೇಕು. ಗೈರುಹಾಜರಿಗೂ ಭತ್ಯೆಯನ್ನು ತೆಗೆದುಕೊಳ್ಳುವ ಪ್ರವೃತ್ತಿ ಬಿಟ್ಟು ಕೊಟ್ಟು ಮೇಲ್ಪಂಕ್ತಿ ಹಾಕಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry