ಗುರುವಾರ , ಫೆಬ್ರವರಿ 25, 2021
20 °C

ಡೀಸೆಲ್‌ ವಾಹನ, ಉಷ್ಣ ಸ್ಥಾವರಕ್ಕೆ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

ಡೀಸೆಲ್‌ ವಾಹನ, ಉಷ್ಣ ಸ್ಥಾವರಕ್ಕೆ ನಿಷೇಧ

ನವದೆಹಲಿ : ದೆಹಲಿಯ ಮಾಲಿನ್ಯ ಪ್ರಮಾಣ ‘ತುರ್ತುಸ್ಥಿತಿ’ ತಲುಪಿದ ಸಂದರ್ಭದಲ್ಲಿ ಡೀಸೆಲ್‌ ವಾಹನಗಳ ಸಂಚಾರ ಮತ್ತು ಉಷ್ಣ ವಿದ್ಯುತ್‌ ಘಟಕಗಳ ಕಾರ್ಯನಿರ್ವಹಣೆಯನ್ನು ನಿಷೇಧಿಸಬೇಕು ಎಂದು ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಹೇಳಿದೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಈ ಸಮಿತಿಯು ತುರ್ತು ಸ್ಥಿತಿಗೆ ಪ್ರತಿಕ್ರಿಯೆ ನೀಡುವ ಹಲವು ಕ್ರಮಗಳ ಬಗ್ಗೆ ಶಿಫಾರಸು ಮಾಡಿದೆ. ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಯಾವ ಇಂಧನ ಬಳಸಲಾಗುತ್ತಿದೆ ಮತ್ತು ಎಷ್ಟು ವರ್ಷ ಹಳೆಯ ವಾಹನ ಎಂಬ ಮಾಹಿತಿ ಇರುವ ಸ್ಟಿಕರ್‌ಗಳನ್ನು ವಾಹನಗಳಿಗೆ ಅಂಟಿಸಬೇಕು. ಮಾಲಿನ್ಯದ ತುರ್ತುಸ್ಥಿತಿಯ ಸಂದರ್ಭಗಳಲ್ಲಿ ಈ ವಾಹನಗಳನ್ನು ರಸ್ತೆಗಿಳಿಯದಂತೆ ನೋಡಿಕೊಳ್ಳಲು ಇದು ಸಹಕಾರಿ ಎಂದು ಇಪಿಸಿಎ ಸಲಹೆ ಕೊಟ್ಟಿದೆ.

ಮುಂದೆ ಮಾಲಿನ್ಯ ಮಿತಿ ಮೀರಿದಾಗ ಅದನ್ನು ಬೇಗನೆ ಸರಿಪಡಿಸಬಹುದಾದ ಕ್ರಮಗಳನ್ನು ಇಪಿಸಿಎ ಪಟ್ಟಿ ಮಾಡಿದೆ. ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ಕುಸಿಯಲು ಬೆಳೆ ತ್ಯಾಜ್ಯ ಮಾತ್ರ ಕಾರಣ ಅಲ್ಲ, ಅದು ಒಂದು ಕಾರಣ ಅಷ್ಟೇ ಎಂದೂ ಪ್ರಾಧಿಕಾರ ತಿಳಿಸಿದೆ. ‌

ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ನಿಖರವಾಗಿಸುವ ಬಗ್ಗೆ ಗಮನ ಹರಿಸಬೇಕು. ಮಾಲಿನ್ಯ ತುರ್ತುಸ್ಥಿತಿ ಯಾವಾಗ ಉಂಟಾಗುತ್ತದೆ ಎಂಬುದು ಮೊದಲೇ ತಿಳಿದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸುಲಭವಾಗುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಭುರೆಲಾಲ್‌ ನೇತೃತ್ವದ ಸಮಿತಿಯು ಕೇಂದ್ರ ಪರಿಸರ ಸಚಿವಾಲಯಕ್ಕೆ ಮುಂದಿನ ವಾರ ಇನ್ನಷ್ಟು ಶಿಫಾರಸುಗಳನ್ನು ಸಲ್ಲಿಸಲಿದೆ.

‘ಸುಪ್ರೀಂ’ ನೋಟಿಸ್‌

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ಮಾಲಿನ್ಯಕ್ಕೆ ಸಂಬಂಧಿಸಿ ಬೇರೆ ಯಾವುದೇ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಪೀಠ ಹೇಳಿದೆ. ಸರಿ ಮತ್ತು ಬೆಸ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ ಯೋಜನೆ ಜಾರಿ, ಸೌರಶಕ್ತಿಯ ಬಳಕೆ ಹೆಚ್ಚಿಸಲು ಉತ್ತೇಜಕ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.

ಅಲ್ಪ ಸುಧಾರಣೆ:

ಅನುಷ್ಠಾನ ಸಂಸ್ಥೆಗಳ ಪ್ರಯತ್ನದಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಗಾಳಿಯಲ್ಲಿ ಮಾಲಿನ್ಯ ಕಣಗಳ ಪ್ರಮಾಣ ಇಳಿಕೆಯಾಗುತ್ತಿದೆ. ಈಗ ದೆಹಲಿಯ ಗಾಳಿಯ ಗುಣಮಟ್ಟ ‘ಅತ್ಯಂತ ಶೋಚನೀಯ’ ಸ್ಥಿತಿಯಲ್ಲಿದೆ. ಅದು ಶೀಘ್ರವೇ ‘ಶೋಚನೀಯ’ ಸ್ಥಿತಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಏರಿಳಿತ: ದೆಹಲಿಯ ಗಾಳಿಯ ಗುಣಮಟ್ಟದ ಮೇಲೆ ವಿಜ್ಞಾನಿಗಳು ನಿರಂತರ ನಿಗಾ ಇರಿಸಿದ್ದಾರೆ. ಎರಡು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ಏರಿಳಿತು ಕಂಡು ಬರುತ್ತಿದೆ ಎಂದು ದೆಹಲಿಯ ಸಚಿವ ಗೋಪಾಲ್‌ ರಾಯ್‌ ಹೇಳಿದ್ದಾರೆ.

ಹಸಿರುಪೀಠದಲ್ಲಿ ಇಂದು ವಿಚಾರಣೆ:

ಸಮ ಬೆಸ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ ಕೊಡುವ ಯೋಜನೆಗೆ ಸಂಬಂಧಿಸಿ 11ರಂದು ಕೊಟ್ಟ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿ ದೆಹಲಿಯ ಸರ್ಕಾರವು ಹಸಿರುಪೀಠಕ್ಕೆ ಅರ್ಜಿ ಸಲ್ಲಿಸಿದೆ.

ಈ ಯೋಜನೆ ಜಾರಿಗೆ ಹಸಿರುಪೀಠವು ಷರತ್ತುಬದ್ಧ ಒಪ್ಪಿಗೆ ನೀಡಿತ್ತು. ಅಧಿಕಾರಿಗಳು ಸೇರಿ ಯಾವುದೇ ವ್ಯಕ್ತಿಗೆ ವಿನಾಯಿತಿ ಕೊಡಬಾರದು ಮತ್ತು ದ್ವಿಚಕ್ರ ವಾಹನಗಳಿಗೂ ಇದು ಅನ್ವಯ ಆಗಬೇಕು ಎಂದು ಹಸಿರುಪೀಠ ಹೇಳಿತ್ತು. ಇದನ್ನು ಬದಲಾಯಿಸುವಂತೆ ದೆಹಲಿ ಸರ್ಕಾರ ಕೋರಿದೆ. ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.