ಗುರುವಾರ , ಮಾರ್ಚ್ 4, 2021
18 °C

ಫೆಡರೇಷನ್‌ ಕಪ್‌ ಟೆನಿಸ್‌ ಟೂರ್ನಿ: ಬೆಲಾರಸ್‌ಗೆ ನಿರಾಸೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫೆಡರೇಷನ್‌ ಕಪ್‌ ಟೆನಿಸ್‌ ಟೂರ್ನಿ: ಬೆಲಾರಸ್‌ಗೆ ನಿರಾಸೆ

ಮಿನ್‌ಸಕ್‌: ಅಮೆರಿಕ ಮಹಿಳಾ ತಂಡದವರು 18ನೇ ಫೆಡರೇಷನ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅಮೆರಿಕ 3–2 ರಲ್ಲಿ ಬೆಲಾರಸ್‌ ತಂಡವನ್ನು ಪರಾಭವಗೊಳಿಸಿತು.

ನಿರ್ಣಾಯಕ ಎನಿಸಿದ್ದ ಡಬಲ್ಸ್‌ ಹೋರಾಟದಲ್ಲಿ ಅಮೆರಿಕದ ಕೊಕೊ ವೆಂಡೆವೆಘೆ ಮತ್ತು ಶೆಲ್ಬಿ ರೋಜರ್ಸ್‌ ಮೋಡಿ ಮಾಡಿದರು.

ಈ ಜೋಡಿ 6–3, 7–6ರ ನೇರ ಸೆಟ್‌ ಗಳಿಂದ ಬೆಲಾರಸ್‌ನ ಅಲಿಯಾಕ್ಸಾಂಡ್ರ ಸಸನೊವಿಚ್‌ ಮತ್ತು ಆರ್ಯನಾ ಸಬಲೆಂಕಾ ಸವಾಲು ಮೀರುತ್ತಿದ್ದಂತೆ ಅಮೆರಿಕ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಮೊದಲ ಸೆಟ್‌ ನಲ್ಲಿ ಹೊಂದಾಣಿಕೆಯಿಂದ ಆಡಿದ ಕೊಕೊ ಮತ್ತು ಶೆಲ್ಬಿ ಆರಂಭದ ಆರು ಗೇಮ್‌ ಗಳಲ್ಲಿ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿದರು. ಆ ನಂತರ ಅಮೆರಿಕದ ಜೋಡಿ ಮಿಂಚಿನ ಆಟ ಆಡಿ ಗೆಲುವು ಒಲಿಸಿಕೊಂಡಿತು.

ಪ್ರಶಸ್ತಿಯ ಕನಸು ಜೀವಂತವಾಗಿರಬೇಕಾದರೆ ಬೆಲಾರಸ್‌ನ ಅಲಿಯಾಕ್ಸಾಂಡ್ರಾ ಮತ್ತು ಆರ್ಯನಾ ಅವರು ಎರಡನೇ ಸೆಟ್‌ ನಲ್ಲಿ ಗೆಲ್ಲಲೇಬೇಕಿತ್ತು. ಇದನ್ನು ಅರಿತಿದ್ದ ಅವರು ಆರಂಭದಿಂದಲೂ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ 6–6ರ ಸಮಬಲ ಕಂಡುಬಂತು. ಆದರೆ ‘ಟೈ ಬ್ರೇಕರ್‌’ ನಲ್ಲಿ ಶೆಲ್ಬಿ ಮತ್ತು ಕೊಕೊ ಅಮೋಘ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಈ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು 2–2ರಲ್ಲಿ ಸಮಬಲ ಸಾಧಿಸಿದ್ದವು. ಶನಿವಾರ ನಡೆದಿದ್ದ ಸಿಂಗಲ್ಸ್‌ ವಿಭಾಗದ ಮೊದಲ ಹಣಾಹಣಿಯಲ್ಲಿ ವೆಂಡೆವೆಘೆ 6–4, 6–4ರಲ್ಲಿ ಅಲಿಯಾಕ್ಸಾಂಡ್ರ ಸಸನೊವಿಚ್‌ ಅವರನ್ನು ಮಣಿಸಿದ್ದರು.

ಎರಡನೇ ಪಂದ್ಯದಲ್ಲಿ ಬೆಲಾರಸ್‌ ನ ಆರ್ಯನಾ ಸಬಲೆಂಕಾ 6–3, 3–6, 6–4ರಲ್ಲಿ ಸ್ಲೊವಾನೆ ಸ್ಟೀಫನ್ಸ್‌ ಸವಾಲು ಮೀರಿದ್ದರು. ಹೀಗಾಗಿ 1–1ರ ಸಮಬಲ ಕಂಡುಬಂದಿತ್ತು.

ಭಾನುವಾರ ನಡೆದ ಮೊದಲ ರಿವರ್ಸ್‌ ಸಿಂಗಲ್ಸ್‌ ಹಣಾಹಣಿಯಲ್ಲಿ ವೆಂಡೆವೆಘೆ 7–6, 6–1ರಲ್ಲಿ ಆರ್ಯನಾ ಅವರನ್ನು ಮಣಿಸಿ ಅಮೆರಿಕಕ್ಕೆ 2–1ರ ಮುನ್ನಡೆ ತಂದುಕೊಟ್ಟರು.

ನಂತರದ ಹೋರಾಟದಲ್ಲಿ ಅಲಿಯಾಕ್ಸಾಂಡ್ರ 4–6, 6–1, 8–6ರಲ್ಲಿ ಸ್ಲೊವಾನೆ ಸ್ಟೀಫನ್ಸ್‌ ಅವರನ್ನು ಮಣಿಸಿ ಸಮಬಲಕ್ಕೆ ಕಾರಣರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.