ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿ; ಫೆಡರರ್‌ ಗೆಲುವಿನ ಆರಂಭ

Last Updated 13 ನವೆಂಬರ್ 2017, 20:42 IST
ಅಕ್ಷರ ಗಾತ್ರ

ಲಂಡನ್‌: ಎಟಿಪಿ ಟೂರ್‌ ಫೈನಲ್ಸ್‌ ಟೆನಿಸ್ ಟೂರ್ನಿಯಲ್ಲಿ ಏಳನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಈ ಹಾದಿಯಲ್ಲಿ ಭರವಸೆಯ ಹೆಜ್ಜೆ ಇಟ್ಟಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಬೋರಿಸ್‌ ಬೆಕರ್‌ ಗುಂಪಿನ ಮೊದಲ ಹಣಾಹಣಿಯಲ್ಲಿ ಫೆಡರರ್‌ 6–4,7–6ರ ನೇರ ಸೆಟ್‌ಗಳಿಂದ ಅಮೆರಿಕದ ಜಾಕ್‌ ಸಾಕ್‌ ಅವರನ್ನು ಮಣಿಸಿದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್‌ ಶರವೇಗದ ಸರ್ವ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು. ಜೊತೆಗೆ ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಮೋಡಿ ಮಾಡಿದರು.

ಆರಂಭದಲ್ಲಿ ಫೆಡರರ್‌ ತಂತ್ರಕ್ಕೆ ಪ್ರತಿ ತಂತ್ರ ಹೆಣೆದ ಜಾಕ್‌, ಆಕ್ರಮಣಕಾರಿ ಆಟ ಆಡಿದರು. ಉಭಯ ಆಟಗಾರರೂ ಸರ್ವ್‌ ಉಳಿಸಿಕೊಂಡು ಸಾಗಿದ್ದರಿಂದ ಮೊದಲ ಎಂಟು ಗೇಮ್‌ಗಳಲ್ಲಿ ಸಮ ಬಲದ ಹೋರಾಟ ಕಂಡುಬಂತು.

ಆ ನಂತರ ರೋಜರ್‌ ಅಬ್ಬರಿಸಿದರು. ಮನೋಹಕ ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ ಲೈನ್‌ ಹೊಡೆತಗಳ ಮೂಲಕ ಗೇಮ್‌ ಜಯಿಸಿದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು. ಆರಂಭಿಕ ನಿರಾಸೆಯಿಂದ ಜಾಕ್‌ ಸಾಕ್‌ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ಅವರು ಗುಣಮಟ್ಟದ ಆಟ ಆಡಿ ಎದುರಾಳಿಗೆ ತಿರುಗೇಟು ನೀಡುವ ಸೂಚನೆ ನೀಡಿದ್ದರು. ಆದರೆ ಫೆಡರರ್‌ ಇದಕ್ಕೆ ಅವಕಾಶ ನೀಡಲಿಲ್ಲ. ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಆದರೆ ಅನುಭವಿ ಆಟಗಾರ ಫೆಡರರ್‌ ಅಮೋಘ ಆಟ ಆಡಿ ಎದು ರಾಳಿಯ ಜಯದ ಕನಸಿಗೆ ತಣ್ಣೀರು ಸುರಿದರು.

ಜ್ವೆರೆವ್‌ ಮಿಂಚು: ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಗೆಲುವಿನ ಸಿಹಿ ಸವಿದರು. ಜ್ವೆರೆವ್‌ 6–4, 3–6, 6–4ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರನ್ನು ಸೋಲಿಸಿ ಎಟಿ‍ಪಿ ಟೂರ್‌ ಫೈನಲ್ಸ್‌ನಲ್ಲಿ ಆಡಿದ ಚೊಚ್ಚಲ ಪಂದ್ಯವನ್ನು ಸ್ಮರ ಣೀಯ ವಾಗಿಸಿಕೊಂಡರು.

ಒಂಬತ್ತು ವರ್ಷಗಳ ಬಳಿಕ ಟೂರ್ನಿಗೆ ಅರ್ಹತೆ ಗಳಿಸಿದ್ದ ಕಿರಿಯ ಆಟಗಾರ ಎಂಬ ಹಿರಿಮೆ ಹೊಂದಿದ್ದ ಜ್ವೆರೆವ್‌ ಆರಂಭದಿಂದಲೇ ಅಬ್ಬರಿಸಿದರು. ಈ ಮೂಲಕ 3–1ರ ಮುನ್ನಡೆ ತಮ್ಮದಾಗಿಸಿಕೊಂಡರು.  ಜ್ವೆರೆವ್‌ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಬಿರುಗಾಳಿ ವೇಗದ ಸರ್ವ್‌ಗಳನ್ನು ಹಿಂತಿರುಗಿಸಲು ಸಿಲಿಕ್‌ ವಿಫಲರಾದರು. ಜೊತೆಗೆ ಸ್ವಯಂಕೃತ ತಪ್ಪುಗಳನ್ನು ಮಾಡಿ ಹಿನ್ನಡೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT