ಗುರುವಾರ , ಫೆಬ್ರವರಿ 25, 2021
19 °C
ಮೂರು ದಿನಗಳ ಪರಿಷೆಗೆ ಚಾಲನೆ *ತರಹೇವಾರಿ ಕಡಲೆಕಾಯಿ

ಕಡಲೆಕಾಯಿ ಪರಿಷೆಗೆ ಹರಿದುಬಂದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲೆಕಾಯಿ ಪರಿಷೆಗೆ ಹರಿದುಬಂದ ಜನ

ಬೆಂಗಳೂರು: ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ತರಹೇವಾರಿ ಕಡಲೆಕಾಯಿ ರಾಶಿಗಳು. ಬಡವರ ಬಾದಾಮಿಯನ್ನು ಕೊಳ್ಳಲು ಮುಗಿಬಿದ್ದ ಜನರು. ಹಸಿ, ಹುರಿದ ಹಾಗೂ ಬೇಯಿಸಿದ ಕಡಲೆಕಾಯಿಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು. ಜಾತ್ರೆಗೆ ಜನಸಾಗರವೇ ಹರಿದು ಬಂತು.

ಬಸವನಗುಡಿಯ ದೊಡ್ಡ ಬಸವಣ್ಣನ ದೇವಸ್ಥಾನದ ಬಳಿ ಆಯೋಜಿಸಿರುವ ಕಡಲೆಕಾಯಿ ಪರಿಷೆಯಲ್ಲಿ ಕಂಡ ದೃಶ್ಯಗಳಿವು.

ರಾಮಕೃಷ್ಣ ಆಶ್ರಮದಿಂದ ಆರಂಭವಾಗಿ ಬಸವಣ್ಣನಗುಡಿ ರಸ್ತೆ, ಮೌಂಟ್‌ ಜಾಯ್‌ ರಸ್ತೆ, ಉದ್ಯಾನ ರಸ್ತೆ, ಕಬೀರ್‌ ಮಠದ ರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ ಕಡಲೆಕಾಯಿ ಮಳಿಗೆಗಳೇ ಹೆಚ್ಚು. ತಿಂಡಿ–ತಿನಿಸು, ಆಟಿಕೆ, ಅಲಂಕಾರಿಕ ವಸ್ತುಗಳ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಬೆಂಗಳೂರು ಸುತ್ತಮುತ್ತಲಿನ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಹಾಗೂ ತಮಿಳುನಾಡು, ಆಂಧ್ರಪ್ರದೇಶದ ವ್ಯಾಪಾರಸ್ಥರು ಕಡಲೆಕಾಯಿ ಮಾರಾಟದಲ್ಲಿ ತೊಡಗಿದ್ದರು.

(ಪರಿಷೆಯಲ್ಲಿ ವ್ಯಕ್ತಿಯೊಬ್ಬರು ಕಡಲೆಕಾಯಿ ಭಿಕ್ಷೆ ಬೇಡಿದರು)

ಒಂದು ಸೇರು ಹಸಿ ಕಡಲೆಕಾಯಿ ಬೆಲೆ ₹20ರಿಂದ ₹30 ಇತ್ತು. ಹುರಿದ ಕಡಲೆಕಾಯಿಗೆ ₹20ರಿಂದ ₹35 ಇತ್ತು. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೆಲ ಮಳಿಗೆಗಳ ಮಾಲೀಕರು ₹50ಕ್ಕೆ ಮೂರು ಸೇರು ಕಡಲೆಕಾಯಿ ಮಾರಾಟ ಮಾಡುತ್ತಿದ್ದರು. ಆದರೆ, ಗುಣಮಟ್ಟದ ಕಡಲೆಕಾಯಿಗೆ ಬೇಡಿಕೆ ಹೆಚ್ಚಿತ್ತು.

ಪರಿಷೆ ನೋಡಲೆಂದೇ ಮಂಡ್ಯದಿಂದ ಚೌಡೇಗೌಡ ಎಂಬುವರು ಬಂದಿದ್ದರು. 6–7 ವರ್ಷಗಳಿಂದ ಅವರು ಪರಿಷೆಯ ಕಾಯಂ ಅತಿಥಿ. ಬೆಂಗಳೂರಿನ ಕರಗವನ್ನೂ 30 ವರ್ಷಗಳಿಂದ ತಪ್ಪದೇ ನೋಡುತ್ತ ಬಂದಿದ್ದಾರೆ.

‘ಜಾತ್ರೆ, ಪರಿಷೆ, ಕರಗ ಇವೆಲ್ಲವೂ ಹಳ್ಳಿಯ ಸೊಗಡಿನ ಹಬ್ಬಗಳು. ಸಂಸ್ಕೃತಿಯ ಭಾಗವಾದ ಈ ಹಬ್ಬಗಳಲ್ಲಿ ಪಾಲ್ಗೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಇದೇ ಕಾರಣಕ್ಕೆ ನಾನು ಕಡಲೆಕಾಯಿ ಪರಿಷೆ, ಕರಗದಲ್ಲಿ ಪಾಲ್ಗೊಳ್ಳುತ್ತಿದ್ದೇನೆ’ ಎಂದು ಚೌಡೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸಕೆರೆಹಳ್ಳಿಯಲ್ಲಿ ಸಂಬಂಧಿಕರ ಮನೆ ಇದೆ. ಅಲ್ಲಿ ಉಳಿದುಕೊಳ್ಳುತ್ತೇನೆ. ಮೂರು ದಿನವೂ ಇಲ್ಲಿಗೆ ಬಂದು ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತೇನೆ. ಕಡಲೆಕಾಯಿ ಕೊಂಡು ಮನೆಗೆ ಹೋಗುತ್ತೇನೆ’ ಎಂದರು.

(ಪರಿಷೆಗೆ ಚಾಲನೆ ಬಳಿಕ ನೀಡಿದ ಕಡಲೆಕಾಯಿ ಪ್ರಸಾದಕ್ಕೆ ಮುಗಿಬಿದ್ದ ಭಕ್ತರು )

ಹೆಬ್ಬಾಳದ ಸುಜಾತಾ ಅವರು ತಮ್ಮ ಗೆಳತಿಯರೊಂದಿಗೆ ಪರಿಷೆಗೆ ಬಂದಿದ್ದರು. ಅವರಿಗಿದು ಮೊದಲ ಸಲದ ಅನುಭವ.

‘ಕಡಲೆಕಾಯಿ ಪರಿಷೆಗೆ ಬರಬೇಕೆಂದು 2–3 ಬಾರಿ ಪ್ರಯತ್ನಿಸಿದ್ದೆ. ಆದರೆ, ಬರಲು ಸಾಧ್ಯವಾಗಿರಲಿಲ್ಲ. ಪರಿಷೆ ನೋಡಲು ಗೆಳತಿಯರೂ ಉತ್ಸಾಹ ತೋರಿದರು. ಹೀಗಾಗಿ, ಇಲ್ಲಿಗೆ ಬಂದಿದ್ದೇವೆ. ಹಳ್ಳಿಯ ವಾತಾವರಣ ಕಂಡು ಖುಷಿ ಆಗಿದೆ. ಪರಂಪರೆಯನ್ನು ಉಳಿಸಿಕೊಂಡು ಹೋಗಲು ಪರಿಷೆಗಳು ಸಹಕಾರಿ’ ಎಂದು ಸುಜಾತಾ ತಿಳಿಸಿದರು.

ಪೀಣ್ಯ 2ನೇ ಹಂತದ ಪ್ರೇಮಾ, ‘ಬೆಂಗಳೂರಿನಲ್ಲಿ ವಾಸವಾಗಿದ್ದರೂ ಈ ಪರಿಷೆಯನ್ನು ನೋಡಿರಲಿಲ್ಲ. ಈ ಕೊರಗು ನನ್ನನ್ನು ಬಹಳ ದಿನಗಳಿಂದ ಕಾಡುತ್ತಿತ್ತು. ಅದು ಈಗ ದೂರವಾಯಿತು. 3–4 ವಿಧದ ಕಡಲೆಕಾಯಿಗಳನ್ನು ಕೊಂಡೊಯ್ಯುತ್ತಿದ್ದೇನೆ’ ಎಂದು ಸಂತಸದಿಂದ ನುಡಿದರು.

ಬಸವನಗುಡಿ ಸಮೀಪವೇ ಇರುವ ಶ್ರೀನಗರದ ಹೇಮಾ ಅವರಿಗೆ ಪರಿಷೆ ಹೊಸದಲ್ಲ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಅವರು, ಕಡಲೆಕಾಯಿ ರುಚಿಯನ್ನು ಸವಿಯುತ್ತಾ ಬಂದಿದ್ದಾರೆ. ಅವರ ಪ್ರಕಾರ ಪರಿಷೆಯ ಮೂಲ ಸ್ವರೂಪದಲ್ಲಿ ಅಂತಹ ಬದಲಾವಣೆ ಆಗಿಲ್ಲ. ಆದರೆ, ಪರಿಷೆಗೆ ಭೇಟಿ ನೀಡು ಜನರು ಹಾಗೂ ಮಳಿಗೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಅವರು ಗುರುತಿಸುತ್ತಾರೆ.

ಬಟ್ಟೆಚೀಲ ವಿತರಣೆ: ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಷೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಬಟ್ಟೆಚೀಲ ಹಾಗೂ ಕಾಗದದಿಂದ ಮಾಡಿದ ಚೀಲಗಳನ್ನು ವಿತರಿಸಲಾಗಿದೆ.

‘ಮೊದಲಿದ್ದ ವ್ಯಾಪಾರ ಈಗಿಲ್ಲ’

‘ನಾನು 30 ವರ್ಷಗಳಿಂದ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ಯಶವಂತಪುರ ಎಪಿಎಂಸಿಯಿಂದ ಕಡಲೆಕಾಯಿ ಕೊಂಡು ಇಲ್ಲಿಗೆ ತರುತ್ತೇವೆ. ಒಂದು ಸೇರಿಗೆ ₹5 ಲಾಭ ಬರುತ್ತದೆ. ಆದರೆ, ಗ್ರಾಹಕರು ಚೌಕಾಸಿಗೆ ಇಳಿಯುವುದರಿಂದ ಲಾಭಾಂಶ ಕಡಿಮೆಯಾಗಿದೆ’ ಎಂದು ಪೀಣ್ಯ ದಾಸರಹಳ್ಳಿಯ ಶಂಕರಪ್ಪ ತಿಳಿಸಿದರು.

‘ತಮಿಳುನಾಡಿನ ಧರ್ಮಪುರಿಯಿಂದ ಬಂದಿದ್ದೇವೆ. ಭಾನುವಾರ ವ್ಯಾಪಾರ ಕಡಿಮೆ ಇತ್ತು. ಈಗ ಚೇತರಿಕೆ ಕಾಣುತ್ತಿದೆ. ಆರು ಮೂಟೆ ಕಡಲೆಕಾಯಿ ತಂದಿದ್ದೇವೆ. ಅದು ಮಾರಾಟವಾದ ಬಳಿಕ ಮತ್ತಷ್ಟು ಮೂಟೆಗಳನ್ನು ತರಿಸುತ್ತೇವೆ. ಕಳೆದ ವರ್ಷ 10 ಮೂಟೆ ಕಡಲೆಕಾಯಿ ಮಾರಾಟವಾಗಿತ್ತು’ ಎಂದು ರಾಸ್‌ ಹೇಳಿದರು.

‘ಕುಡಿಯುವ ನೀರು, ಶೌಚಾಲಯ ಇಲ್ಲ’

‘ಕಡಲೆಕಾಯಿ ಪರಿಷೆಯಲ್ಲಿ ಮಳಿಗೆ ತೆರೆದಿರುವ ವ್ಯಾಪಾರಸ್ಥರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಚಾಮರಾಜಪೇಟೆಯ ಕನ್ನಡ ಸಂಸ್ಕೃತಿ ಕೇಂದ್ರದ ಕೆ.ವಿ.ರಾಮಚಂದ್ರ ಆರೋಪಿಸಿದರು.

‘ಮುಜರಾಯಿ ಇಲಾಖೆಯು ಮಳಿಗೆಗಳನ್ನು ಹರಾಜು ಹಾಕಿದೆ. ಪರಿಷೆ ನಡೆಯುವ ಜಾಗವು ಬಿಬಿಎಂಪಿಗೆ ಸೇರಿದ್ದು. ಜಾತ್ರೆಯಲ್ಲಿ ಉತ್ಪತ್ತಿಯಾಗುವ ಕಸವನ್ನೂ ಪಾಲಿಕೆಯೇ ತೆರವುಗೊಳಿಸುತ್ತಿದೆ. ಹೀಗಿರುವಾಗ ಮುಜರಾಯಿ ಇಲಾಖೆಗೆ ಹರಾಜು ಪ್ರಕ್ರಿಯೆ ನಡೆಸುವ ಅಧಿಕಾರ ಇಲ್ಲ’ ಎಂದರು.

(ರಾಸ್‌)

ಬಟ್ಟೆಚೀಲ ವಿತರಣೆ

ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಷೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಬಟ್ಟೆಚೀಲ ಹಾಗೂ ಕಾಗದದಿಂದ ಮಾಡಿದ ಚೀಲಗಳನ್ನು ವಿತರಿಸಲಾಗಿದೆ.

‘ವೃಷಭಾವತಿ ನದಿ ಪುನಶ್ಚೇತನ ಅಗತ್ಯ’

‘ವೃಷಭಾವತಿ ನದಿಯನ್ನು ಪುನಶ್ಚೇತನಗೊಳಿಸಬೇಕು. ಇದರ ನೀಲನಕ್ಷೆಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿಕೊಡಲಿ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸುತ್ತೇನೆ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ದೊಡ್ಡ ಬಸವಣ್ಣನ ಉತ್ಸವ ಮೂರ್ತಿಗೆ ಕಡಲೆಕಾಯಿ ತುಲಾಭಾರ ಹಾಗೂ ದೊಡ್ಡ ಬಸವಣ್ಣ ಮತ್ತು ದೊಡ್ಡ ಗಣೇಶನ ಮೂರ್ತಿಗಳಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗಿದೆ’ ಎಂದರು. ಇದೇ 14ರವರೆಗೆ ಪರಿಷೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.