ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎನ್‌ಜಿ ಸಂಪರ್ಕ: ರಸ್ತೆ ದುರಸ್ತಿಗೊಳಿಸದ ಗೇಲ್‌

Last Updated 13 ನವೆಂಬರ್ 2017, 20:15 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಅನಿಲ ಪ್ರಾಧಿಕಾರವು (ಗೇಲ್‌) ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಪೂರೈಕೆ ಮಾಡಲು ಅಗೆದಿರುವ ರಸ್ತೆಗಳನ್ನು ದುರಸ್ತಿಗೊಳಿಸಿಲ್ಲ.

‘ಹೆಬ್ಬಾಳ, ಯಲಹಂಕ, ಸಂಜಯನಗರ, ಜಾಲಹಳ್ಳಿ, ಮುನೇಶ್ವರನಗರ ಸೇರಿ ಕೆಲವೆಡೆ ಅನಿಲ ಪೂರೈಕೆಗೆ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಗುಂಡಿಗಳನ್ನು ಈವರೆಗೂ ಮುಚ್ಚಿಲ್ಲ. ಇದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಈ ಸಂಬಂಧ ಪಾಲಿಕೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಗೇಲ್‌ಗೆ ಪತ್ರ ಬರೆದಿದ್ದರು.

‘ಅಗೆದಿರುವ ರಸ್ತೆಗಳನ್ನು 15 ದಿನಗಳಲ್ಲಿ ಮುಚ್ಚಬೇಕು. ಅಲ್ಲಿಯವರೆಗೆ ಬೇರೆ ಕಡೆಗಳಲ್ಲಿ ರಸ್ತೆ ಅಗೆಯಬಾರದು’ ಎಂದು ಸೂಚಿಸಿದ್ದರು. ಆದರೆ, ಇದಕ್ಕೆ ಗೇಲ್‌ ಅಧಿಕಾರಿಗಳು ಸ್ಪಂದಿಸಿಲ್ಲ.

‘ಮನೆಗೆ ಪಿಎನ್‌ಜಿ ಸಂಪರ್ಕ ಪಡೆದಿದ್ದೇವೆ. ಇದು ಹೆಚ್ಚು ಸುರಕ್ಷಿತ ಹಾಗೂ ದರವೂ ಕಡಿಮೆ. ಆದರೆ, ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆಯನ್ನು ಅಗೆದು ಮಣ್ಣು ಮುಚ್ಚಿದ್ದಾರೆ. ಈವರೆಗೂ ಡಾಂಬರು ಹಾಕಿಲ್ಲ. ಕೆಲವೆಡೆ ಪೈಪ್‌ಗಳು ಹೊರಗೆ ಚಾಚಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ’ ಎಂದು ಸಂಜಯನಗರದ ನಿವಾಸಿ ವಿ.ಪವಿತ್ರಾ ದೂರಿದರು.

‘ನಗರದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ರಸ್ತೆಗಳನ್ನು ದುರಸ್ತಿಗೊಳಿಸಲು ಸಾಧ್ಯವಾಗಿರಲಿಲ್ಲ. ರಸ್ತೆಗಳನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ಗೇಲ್‌ನ ಪ್ರಧಾನ ವ್ಯವಸ್ಥಾಪಕ (ಯೋಜನೆ) ಪಾರ್ಥ ಜಾನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT