ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು?

ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧ
Last Updated 13 ನವೆಂಬರ್ 2017, 20:22 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷಾಂತರ ಪರ್ವಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಂಟಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಅಣಿಯಾಗಿದ್ದಾರೆ.

ವಿಧಾನ ಮಂಡಲ ಅಧಿವೇಶನದ ವೇಳೆ ಮೊಗಸಾಲೆಯಲ್ಲಿ ಶಾಸಕರ ಮಧ್ಯ ನಡೆಯುತ್ತಿದ್ದ ಚರ್ಚೆ ಈ ವಿಷಯದ ಸುತ್ತ ಕೇಂದ್ರೀಕೃತವಾಗಿತ್ತು.

‘ಮುಂದೆ ನಾವೇ ಅಧಿಕಾರಕ್ಕೆ ಬರುವುದು. ನಮ್ಮ ಕಡೆ ಬನ್ನಿ’ ಎಂದು ಕಾಂಗ್ರೆಸ್‌, ಬಿಜೆಪಿ ಶಾಸಕರು ಪರಸ್ಪರರಿಗೆ ಆಹ್ವಾನ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಎಂಟಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಅಣಿಯಾಗಿದ್ದಾರೆ. ಗುಜರಾತ್‌ ಚುನಾವಣೆಯ ಫಲಿತಾಂಶದ ಬಳಿಕ ಅವರು ಪಕ್ಷ ಸೇರಲಿದ್ದಾರೆ. ಆಸಕ್ತ ಶಾಸಕರ ಜತೆಗೆ ಮಾತುಕತೆ ನಡೆಸಲು ಹಿರಿಯ ನಾಯಕರ ತಂಡ ರಚಿಸಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಯಾರು ಸೇರುತ್ತಾರೆ ಎಂಬುದನ್ನು ಬಹಿರಂಗಪಡಿಸದಂತೆ ಪಕ್ಷದ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಪ್ರಮುಖರೊಬ್ಬರು ತಿಳಿಸಿದರು.

ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದನ್ನು ಗಮನಿಸಿರುವ ಬೇರೆ ಪಕ್ಷದ ಶಾಸಕರು ಸೇರಲು ಒಲವು ತೋರಿದ್ದಾರೆ ಎಂದೂ ಅವರು ಹೇಳಿದರು.

ಬಿಜೆಪಿ ತೊರೆಯಲು ಸಿದ್ಧತೆ: ಬಿಜೆಪಿಯಲ್ಲಿ ಟಿಕೆಟ್‌ ನೀಡುವ ಜವಾಬ್ದಾರಿಯನ್ನು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ವಹಿಸಿಕೊಂಡಿದ್ದಾರೆ.  ಕೆಲವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಸ್ಥಿತಿ ಇದೆ. ಇದರ ಜತೆಗೆ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಮಾತನ್ನಷ್ಟೇ ಕೇಳುತ್ತಿದ್ದಾರೆ. ಹೀಗಾಗಿ ಅಲ್ಲಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇರುವುದರಿಂದ ಕೆಲವರು ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದಾರೆ. ಅವರ ಜತೆಯೂ ಮಾತುಕತೆ ನಡೆಯುತ್ತಿದೆ ಎಂದು ಆ ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

ಬಿಜೆಪಿಯತ್ತ ಪುಟ್ಟಣ್ಣ: ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಪುಟ್ಟಣ್ಣ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿರುವ ಅವರು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

‘ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ಡಿಸೆಂಬರ್ 25 ರಂದು ಕ್ರಿಸ್‌ಮಸ್‌ ಇದೆ. ಅಂದು ನಿರ್ಧರಿಸುತ್ತೇನೆ’ ಎಂದು ಪುಟ್ಟಣ್ಣ  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT