ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಲ್ಲದೆ ಪರದಾಡಿದ ರೋಗಿಗಳು

Last Updated 14 ನವೆಂಬರ್ 2017, 5:47 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದರಿಂದ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಯಿತು. ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು, ‘ಬೆಳಗಾವಿ ಚಲೋ’ ಹೋರಾಟಕ್ಕೆ ತೆರಳಿದ್ದರಿಂದ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದವು.

ಹೊರರೋಗಿಗಳ ವಿಭಾಗ, ತುರ್ತು ನಿಗಾ ಘಟಕ, ಹೊಸ ರೋಗಿಗಳ ಪ್ರವೇಶಾತಿ ಹಾಗೂ ಆಸ್ಪತ್ರೆಯೊಳಗಿನ ಔಷಧ ಅಂಗಡಿಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದವು. ಒಳ ರೋಗಿಗಳಿಗೆ ಕಿರಿಯ ವೈದ್ಯರು ಹಾಗೂ ಶುಶ್ರೂಷಕಿಯರು ಆರೈಕೆ ಮಾಡುತ್ತಿದ್ದರು. ಆಸ್ಪತ್ರೆಗಳು, ಕ್ಲಿನಿಕ್‌ ಮತ್ತು ಲ್ಯಾಬ್‌ಗಳ ಮುಂದೆ ಬಂದ್‌ ಕುರಿತು ಸೂಚನೆಗಳನ್ನು ಅಂಟಿಸಲಾಗಿತ್ತು.

ಬಂದ್‌ ಬಗ್ಗೆ ಮಾಹಿತಿ ಇಲ್ಲದೆ ಬೆಳಿಗ್ಗೆಯಿಂದಲೇ ಆಸ್ಪತ್ರೆಗೆ ಬಂದ ರೋಗಿಗಳು ಹಾಗೂ ಅವರ ಕುಟುಂಬದವರು ಹತಾಶೆಯಿಂದ ಸರ್ಕಾರಿ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದ ದೃಶ್ಯ ಕಂಡುಬಂತು. ಚಾಮರಾಜನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ಭಾಗಗಳ ವ್ಯಾಪ್ತಿಯಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಕೆಲವು ಡಯೊಗ್ನೊಸ್ಟಿಕ್‌ ಕೇಂದ್ರಗಳು ಮತ್ತು ಲ್ಯಾಬೊರೇಟರಿಗಳು ಮುಚ್ಚಿದ್ದರೆ, ಇನ್ನು ಕೆಲವು ಎಂದಿನಂತೆ ಕಾರ್ಯನಿರ್ವಹಿಸಿದವು. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಹಾಗೂ 100ಕ್ಕೂ ಹೆಚ್ಚು ಕಿನ್ಲಿಕ್‌ಗಳಿವೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಮಂಗಳವಾರವೂ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

‘ಭಾನುವಾರ ಸಂಜೆಯೇ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಹೊಸ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದೇವೆ. ಒಳ ರೋಗಿಗಳಿಗೆ ಕಿರಿಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಬಸವರಾಜೇಂದ್ರ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ದಿನಗಳ ಹಿಂದೆ ಆಸ್ಪತ್ರೆಗೆ ರಕ್ತ ಪರೀಕ್ಷೆ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಿಸಿದ್ದೆ. ವೈದ್ಯರು ಸೋಮವಾರ ಎಲ್ಲ ವರದಿ ತೆಗೆದುಕೊಂಡು ಬನ್ನಿ, ಮುಂದಿನ ಚಿಕಿತ್ಸೆ ನೀಡುತ್ತೇನೆ ಎಂದಿದ್ದರು. ಅದರಂತೆ ಈಗ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲ ಎನ್ನುತ್ತಿದ್ದಾರೆ. ಏನೂ ಮಾಡುವುದು ತಿಳಿಯುತ್ತಿಲ್ಲ’ ಎಂದು ವೆಂಕಯ್ಯಛತ್ರದ ಪೂರ್ಣಿಮಾ ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT