7

ಕಣಿವೆ ಬಸಪ್ಪನ ಜಾತ್ರೆ ಮಹೋತ್ಸವ ಸಡಗರ

Published:
Updated:

ಅರಕಲಗೂಡು: ಜಾನುವಾರು ದೇವರು ಎಂದೇ ಹೆಸರಾದ ತಾಲ್ಲೂಕಿನ ಕಣಿವೆ ಬಸಪ್ಪನ ಜಾತ್ರಾ ಮಹೋತ್ಸವ ಸೋಮವಾರ ವೈಭವದಿಂದ ನೆರವೇರಿತು. ಕಾರ್ತಿಕ ಮಾಸದ ಕೊನೆ ಸೋಮವಾರ ನಡೆಯುವ ಜಾತ್ರೆ ತಾಲ್ಲೂಕಿನಲ್ಲಿ ನಡೆಯುವ ಮೊದಲ ಜಾನುವಾರು ಜಾತ್ರೆ ಎನಿಸಿದೆ.

ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಅರ್ಚನೆ, ಪೂಜೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಬಳಿಕ ಭಕ್ತರು ದೇವರಿಗೆ ಹಣ್ಣು–ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ಈ ವರ್ಷ ಉತ್ತಮ ಕೃಷಿ ಹಾಗೂ ಹೈನುಗಾರಿಕೆ ಆಗಲೆಂದು ಪ್ರಾರ್ಥಿಸಿದರು.

ಜಾತ್ರೆಯಲ್ಲಿ ರಾಸುಗಳ ಪ್ರದರ್ಶನ ಗಮನಸೆಳೆಯಿತು. ಅಲಂಕೃತ ರಾಸುಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಆಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ಮಂಡಕ್ಕಿ, ಸಿಹಿ ತಿನಿಸುಗಳು, ತಂಪು ಪಾನೀಯಗಳ ಅಂಗಡಿಗಳು ಗಮನಸೆಳೆದವು.

ಕಣಿವೆ ಕಾಡಿನಲ್ಲಿ ನೆಲೆಸಿರುವ ಕಣಿವೆ ಬಸಪ್ಪ (ನಂದಿ) ಜಾನುವಾರು ದೇವರು ಎಂದೇ ಈ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರಾಗಿದೆ. ಜಾನುವಾರುಗಳನ್ನು ರೋಗ ರುಜಿನಗಳಿಂದ ಹಾಗೂ ಕಾಡು ಪ್ರಾಣಿಗಳಿಂದ ಬಸಪ್ಪ ರಕ್ಷಿಸುತ್ತಾನೆ ಎಂಬ ನಂಬಿಕೆ ಹೈನುಗಾರಿಕೆ ಅವಲಂಬಿಸಿರುವ ರೈತರದು.

ಹಸು ಅಥವಾ ಎಮ್ಮೆ ಕರು ಹಾಕಿದರೆ ಮೊದಲ ಹಾಲಿನಲ್ಲಿ ಗಿಣ್ಣು ತಯಾರಿಸಿ ರೊಟ್ಟಿಯೊಂದಿಗೆ ಬಸಪ್ಪನಿಗೆ ತಳಿಗೆ ಅರ್ಪಿಸಿದ ಬಳಿಕವೆ ಮಾರಾಟ ಹಾಗೂ ಕುಟುಂಬಕ್ಕೆ ಹಾಲನ್ನು ಬಳಕೆ ಮಾಡುತ್ತಾರೆ. ಜಾನುವಾರುಗಳಿಗೆ ಕಾಯಿಲೆ ಬಂದರೆ, ಕಾಡು ಪ್ರಾಣಿಗಳ ದಾಳಿ ನಡೆದರೆ ಮೊದಲು ಬಸಪ್ಪನಿಗೆ ಹರಕೆ ಹೊತ್ತು ನಂತರ ವೈದ್ಯಕೀಯ ಚಿಕಿತ್ಸೆ ನಡೆಸುವುದು ವಾಡಿಕೆಯಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry