ಭಾನುವಾರ, ಮಾರ್ಚ್ 7, 2021
31 °C

ಸಿಂದಗಿ: ಖಾಸಗಿ ಆಸ್ಪತ್ರೆಗಳಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಖಾಸಗಿ ಆಸ್ಪತ್ರೆಗಳಿಗೆ ಬೀಗ

ಸಿಂದಗಿ: ‘ಖಾಸಗಿ ವೈದ್ಯಕೀಯ ಕ್ಷೇತ್ರದ ಮೇಲೆ ಮಾತ್ರ ಸರ್ಕಾರ ಸರ್ವಾಧಿಕಾರಧೋರಣೆ ಅನು ಸರಿಸುತ್ತಲಿದೆ’ ಎಂದು ಆರೋಪಿಸಿ ನಗರದ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಬೀಗ ಹಾಕಿ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಭಾರತೀಯ ವೈದ್ಯಕೀಯ ಸಂಘ, ವೃತ್ತಿಪರ ವೈದ್ಯಕೀಯ ಸಂಘ ತಾಲ್ಲೂಕು ಘಟಕಗಳ ನೇತೃತ್ವದಲ್ಲಿ ಸಿಂದಗಿ ನಗರದ 38 ವೈದ್ಯರು ಬೆಳಗಾವಿ ಪ್ರತಿ ಭಟನೆಯಲ್ಲಿರುವುದಾಗಿ ಜಂಟಿ ಸಂಘಗಳ ಅಧ್ಯಕ್ಷರಾದ ಡಾ.ಗಿರೀಶ ಕುಲಕರ್ಣಿ, ಡಾ.ಚನ್ನವೀರ ಮನಗೂಳಿ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘ ತಾಲ್ಲೂಕು ಘಟಕ ಕರಪತ್ರ ಹೊರಡಿಸಿ ಸರ್ಕಾರದ 25 ಕರಾಳ ಶಾಸನಗಳನ್ನು ವಿರೋಧಿಸಿದೆ. ಖಾಸಗಿ ಆಸ್ಪತ್ರೆಗಳಿಗೆ ಬೀಗ: ನಗರದ ಗಾಯತ್ರಿ ಮಹಿಳಾ ಆಸ್ಪತ್ರೆ, ಧನ್ವಂತರಿ ಆಸ್ಪತ್ರೆ, ಮನಗೂಳಿ ಆಸ್ಪತ್ರೆ, ವೆಂಕಟೇಶ್ವರ ಮಕ್ಕಳು ಮತ್ತು ಮಹಿಳಾ ಆಸ್ಪತ್ರೆ, ಅಶ್ವಿನಿ ಕ್ಲಿನಿಕ್ ಹೀಗೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸೋಮವಾರ ಬೀಗ ಹಾಕಲಾಗಿತ್ತು.

ಅಶ್ವಿನಿ ಕ್ಲಿನಿಕ್ ಎದುರು ಯಂಕಂಚಿ ಗ್ರಾಮದ ಭಾಗಮ್ಮ ಬಿರಾದಾರ ಎಂಬ ಮಹಿಳೆ ಮಗುವನ್ನು ಎತ್ತಿಕೊಂಡು ವೈದ್ಯ ರಿಗಾಗಿ ಕಾದು ಕುಳಿತಿದ್ದರು. ಮಹಿಳೆಗೆ ವೈದ್ಯರ ಪ್ರತಿಭಟನೆ ಗೊತ್ತಿರಲಿಲ್ಲ. ವೈದ್ಯರ ಮುಷ್ಕರ ವಿಷಯ ಮಹಿಳೆಗೆ ತಿಳಿಸಿದಾಗ ಮರಳಿ ಗ್ರಾಮಕ್ಕೆ ಹೋದರು.

‘ಖಾಸಗಿ ಹೆರಿಗೆ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ತಪಾಸಣೆ ಮಾಡಿಸಿದ್ದು ಹೆರಿಗೆ ದಿನ ತಿಳಿಸಿಯೂ ವೈದ್ಯೆ ಸಿಗಲಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ಅಣ್ಣನ ಮಗಳು ಸುಮಾ ಎಚ್ಚರಸ್ವಾಮಿ ಅವಳ ಹೆರಿಗೆ ಆಗಿದೆ’ ಎಂದು ಈರಣ್ಣ ಬಡಿಗೇರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಶೇ 70ರಷ್ಟು ರೋಗಿಗಳ ಸಂಖ್ಯೆ ಹೆಚ್ಚಿದೆ. 24 ಗಂಟೆಗಳ ಕಾಲ 14 ಜನ ಸ್ಟಾಪ್ ನರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂವರು ವೈದ್ಯರು ನಿರಂತರ ಸೇವೆಯಲ್ಲಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಮಕೃಷ್ಣ ಇಂಗಳೆ ಹೇಳಿದರು.

‘ಖಾಸಗಿ ವೈದ್ಯರು ಮುಷ್ಕರದಲ್ಲಿದ್ದ ಕಾರಣ ಚಟ್ಟರಕಿ ಗ್ರಾಮದಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು ರೋಗಿಗಳ ಸಂಖ್ಯೆ ಹೆಚ್ಚಿರುವದರಿಂದ ತುಂಬಾ ಸಮಯವಾದರೂ ವೈದ್ಯರು ಸಿಗುತ್ತಿಲ್ಲ’ ಎಂದು ಹಣಮಂತ ಪೂಜಾರಿ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.