ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿಗಳಿಗೆ ಕೃತಕ ಬುದ್ಧಿಮತ್ತೆ ಸವಾಲು

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಿಂದೆಂದಿಗಿಂತಲೂ ಈಗ ಕೃತಕ ಬುದ್ಧಿಮತ್ತೆ (artificial intelligence) ಬಗ್ಗೆ ದೊಡ್ಡ ದೊಡ್ಡ ಕಂಪೆನಿಗಳು ತಲೆಕೆಡಿಸಿಕೊಳ್ಳಲಾರಂಭಿಸಿವೆ. ಮಾಹಿತಿ ತಂತ್ರಜ್ಞಾನದ ಕಂಪೆನಿಗಳಂತೂ ತಮ್ಮಲ್ಲಿ ಕೃತಕ ಬುದ್ಧಿಮತ್ತೆಯ (ಎಇ) ಯೋಜನೆಗಳನ್ನೇ ಹೊಂದಿವೆ. ಇದಕ್ಕಾಗಿ ಅವು ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿವೆ. ಇದರಿಂದ ಪಡೆಯಬಹುದಾದ ಎಲ್ಲ ಪ್ರಯೋಜನವನ್ನು ಬಾಚಿಕೊಳ್ಳಲೂ ಹವಣಿಸುತ್ತಿವೆ. ಆದರೆ, ಕೆಲವು ಕಂಪೆನಿಗಳಿಗೆ ಮಾತ್ರವೇ ಅತ್ಯುತ್ತಮ ಎಇ ತಂತ್ರಜ್ಞರು ದೊರೆಯುತ್ತಿದ್ದಾರೆ.

‘ಎಇ’ ಬಲ್ಲವರು ಇನ್ನೂ ಸಂಶೋಧನೆಯಲ್ಲಿ ತೊಡಗಿದ್ದರೂ, ಸದ್ಯದಲ್ಲೇ ಅಧ್ಯಯನ ಮುಗಿಸಿ ಕಾಲೇಜುಗಳಿಂದ ಬಂದವರಾಗಿದ್ದರೂ ಕಂಪೆನಿಗಳಲ್ಲಿ ಅವರಿಗೆ ಗಮನಾರ್ಹ ಬೇಡಿಕೆ ಇದೆ. ಎಐ ಯೋಜನೆಗಳಲ್ಲಿ ಕೆಲಸ ಮಾಡಿ ಪರಿಣತಿ ಪಡೆದು ಆ ಕಂಪೆನಿಯಿಂದ ಹೊರ ಹೋಗುವ ಉದ್ಯೋಗಿಗಳು ವೇತನ ರೂಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

ಹೀಗೆ ಉದಾರವಾಗಿ ಕೊಡಲಾಗುತ್ತಿರುವ ಕೋಟ್ಯಂತರ ರೂಪಾಯಿಗಳ ಸಂಬಳದ ಮೇಲೆ ನಿಯಂತ್ರಣ ಹೇರಬೇಕು. ಇಲ್ಲದಿದ್ದರೆ ಉದ್ಯಮಕ್ಕೆ ಕಷ್ಟ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೊಡ್ಡ ದೊಡ್ಡ ಕಂಪೆನಿಗಳು ‘ಎಐ‘ ಪರಿಣತರನ್ನು ಭಾರಿ ವೇತನ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಸಣ್ಣ ಸಣ್ಣ ಕಂಪೆನಿಗಳ ಪಾಡೇನು ಎಂದು ಕೆಲವರು ಪ್ರಶ್ನಿಸಿದ್ದಾರೆ.

2015ರಲ್ಲಿ ಉಬರ್‌ ಕಂಪೆನಿ ಕಾರ್ನಿಯೇಜ್‌ ಮೆಲ್ಲನ್‌ ವಿಶ್ವವಿದ್ಯಾಲಯದಿಂದ ಕೃತಕ ಬುದ್ಧಿಮತ್ತೆ ಕಾರ್ಯಕ್ರಮಗಳಿಗಾಗಿ 40 ಜನರನ್ನು ನೇಮಿಸಿಕೊಂಡಿತ್ತು. ಇವರನ್ನು ಸ್ವಯಂಚಾಲಿತ ಕಾರ್‌ ಯೋಜನೆಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿತ್ತು. ಇವರಲ್ಲಿ ನಾಲ್ವರು ‘ಎಐ’ ಸಂಶೋಧಕರು ಕಂಪನಿ ಬಿಟ್ಟು ಹೋದರು ಇಲ್ಲವೇ ರಜೆ ಪಡೆದರು. ಇದರಿಂದಾಗಿ ಕಂಪೆನಿಯ ಯೋಜನೆಗೆ ತೀವ್ರ ಹಿನ್ನಡೆಯಾಯಿತು.

‘ಎಐ’ ಎಂಜಿನಿಯರ್‌ಗಳನ್ನು ರೂಪಿಸಲು ಗೂಗಲ್‌ ಮತ್ತು ಫೇಸ್‌ಬುಕ್‌ಗಳು ತರಬೇತಿ ಕೇಂದ್ರಗಳನ್ನು ಆರಂಭ ಮಾಡಿವೆ. ಇದರಿಂದಾಗಿ ಪರಿಣತರ ಕೊರತೆ ಸ್ವಲ್ಪಮಟ್ಟಿಗೆ ನೀಗಬಹುದು ಎಂಬ ಆಲೋಚನೆ ಇವುಗಳದ್ದು.

ಗೂಗಲ್‌, ಫೇಸ್‌ಬುಕ್‌, ಮೈಕ್ರೊಸಾಫ್ಟ್‌ ಮತ್ತು ಇತರ ಹಲವು ಕಂಪೆನಿಗಳು ಟೊರಾಂಟೊ ಮತ್ತು ಮಾಂಟ್ರಿಯಲ್‌ನಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಗಾಲಯಗಳನ್ನು ತೆರೆದಿವೆ. ಇದರಿಂದಾಗಿ ಎಐ ಸಂಬಂಧಿತ ಪ್ರಯೋಗಗಳು ಕೇವಲ ಅಮೆರಿಕದಲ್ಲೇ ಕೇಂದ್ರಿಕರಣವಾಗುವುದನ್ನು ತಡೆಯಬಹುದಾಗಿದೆ. ಮೈಕ್ರೊಸಾಫ್ಟ್‌ನ ‍ಪ್ರಾಬಲ್ಯ ಇರುವ ಚೀನಾದಲ್ಲೂ ಗೂಗಲ್‌ ಹೆಚ್ಚಿನ ಪ್ರಯೋಗಗಳಿಗೆ ಮುಂದಾಗಿದೆ.

‘ಎಐ’ ತಜ್ಞರ ಸಮಸ್ಯೆಯನ್ನು ಕೆಲವೇ ವರ್ಷಗಳಲ್ಲಿ ನಿವಾರಿಸಬಹುದು ಎಂದು ಅನೇಕರು ಬಾವಿಸಿದ್ದಾರೆ,. ಆದರೆ ಬೇಡಿಕೆ ಪೂರೈಕೆಗಿಂತ ಜಾಸ್ತಿ ಇದೆ’ ಎನ್ನುತ್ತಾರೆ ಮಾಂಟ್ರಿಯಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಎಐ ಸಂಶೋಧಕ ಯೋಸುವಾ ಬೆಂಗಿಯೊ. ಕೃತಕಬುದ್ಧಿಮತ್ತೆಯ ಯಂತ್ರಗಳು ಇತರ ಕೃತಕ ಬುದ್ಧಿಮತ್ತೆಯ ಯಂತ್ರಗಳನ್ನು ನಿರ್ಮಿಸುವ ಕನಸನ್ನೂ ಸಂಶೋಧಕರು ಕಾಣುತ್ತಿದ್ದಾರೆ.

ಗೂಗಲ್‌ನ ಆಟೊ ಎಂಎಲ್‌ (AutoML) ಎಂಬ ಯೋಜನೆ ಬಗ್ಗೆ ಗೂಗಲ್‌ನ ಹಿರಿಯ ಎಂಜಿನಿಯರ್‌ ಜೆಫ್‌ ಡೀನ್‌ ಎಂಬುವವರು ಸಿಲಿಕಾನ್‌ ವ್ಯಾಲಿ ಮತ್ತು ಚೀನಾದಲ್ಲಿ ನೀಡಿದ ಉಪನ್ಯಾಸದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಎಂಎಲ್‌ ಎಂದರೆ machine learning ಎಂಬುದು. ಇಲ್ಲಿ ಯಂತ್ರವೇ ಎಲ್ಲವನ್ನು ಕಲಿತುಕೊಂಡು ಕೆಲಸ ಮಾಡುತ್ತದೆ. ಕಂಪ್ಯೂಟರ್‌ ಕ್ರಮಾವಳಿ (algorithms) ಗಳು ಕೆಲವು ನಿರ್ದಿಷ್ಟ ಪ್ರೋಗ್ರಾಂಗಳನ್ನು ಕಲಿತು ಅದರಂತೆ ಕೆಲಸ ಮಾಡುತ್ತವೆ. ಇದಕ್ಕಾಗಿ ಅವು ದತ್ತಾಂಶವನ್ನು ವಿಶ್ಲೇಷಣೆ ಮಾಡುತ್ತವೆ.

ಉದ್ದಿಮೆಗಳು ಭವಿಷ್ಯದಲ್ಲಿ ಒಳ್ಳೆಯ ಕಾಲ ಬರುತ್ತದೆ ಎಂದು ಕಾಯಲು ಸಿದ್ಧವಿಲ್ಲ. ಆದ್ದರಿಂದಲೇ ಅವು ತಮ್ಮ ಇತಿಮಿತಿಯಲ್ಲಿ ತಮ್ಮದೇ ಆದ ಕೃತಕ ಬುದ್ಧಿಮತ್ತೆ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗಿವೆ. ಇವುಗಳಲ್ಲಿ ಮುಖ ಮತ್ತು ಧ್ವನಿ ಗುರುತಿಸುವ ಸೇವೆ ಮತ್ತು ಆನ್‌ಲೈನ್‌ ಚಾಟ್‌ಬಾಟ್ಸ್‌ ಇರಬಹುದು.

‘ಆಟೊ ಎಂಎಲ್‌ ಸದ್ಯದ ದಿನಗಳಲ್ಲಿ ವಾಸ್ತವ ಅಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಇದು ಸಾಕಾರವಾಗುತ್ತದೆ’ ಎನ್ನುತ್ತಾರೆ ಕಾರ್ನಿಯೇಜ್‌ ಮೆಲ್ಲನ್‌ ವಿಶ್ವವಿದ್ಯಾಲಯದ ಸಂಶೋಧಕ ರೆನಾಟಪ್‌ ನೆಗ್ರಿನ್ಹೊ.

‘ಸದ್ಯಕ್ಕೆ ಕೃತಕ ಬುದ್ಧಿಮತ್ತೆ ಮತ್ತು ಆಟೊ ಎಂಎಲ್‌ಗಳಿಗೆ ಬೇಡಿಕೆ ಇದೆ’ ಎನ್ನುತ್ತಾರೆ ಚೀನಾದಲ್ಲಿ ಕಾರ್ಯನಿರ್ವಹಿಸುವ ಮಲಾಂಗ್ ಹೆಸರಿನ ಸ್ಟಾರ್ಟ್‌ಅಪ್‌ನ ಸಹ ಸಂಸ್ಥಾಪಕ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ ಮ್ಯಾಟ್ ಸ್ಕಾಟ್‌.

* 10,000 – ಕೃತಕಬುದ್ಧಿಮತ್ತೆ ಸಂಬಂಧಿತ ಸಂಶೋಧನೆಯನ್ನು ನಡೆಸಲು ಸದ್ಯ ಲಭ್ಯವಿರುವ ಪರಿಣತರು.

* ₹19 ಲಕ್ಷದಿಂದ ₹32 ಲಕ್ಷ ಎಐ ಪರಿಣಿತರು ಪಡೆಯುವ ವೇತನ.

*


ಹೆಚ್ಚಿನ ಜನರು ಮತ್ತು ಕಂಪೆನಿಗಳು ಕೃತಕ ಬುದ್ಧಿಮತ್ತೆ ಸಂಬಂಧಿತ ಯೋಜನೆಗಳಲ್ಲಿ ಪ್ರಯೋಗ ಮತ್ತು ಕೆಲಸ ಮಾಡಲು ಮುಂದಾದರೆ, ಅವುಗಳಿಗೆ ಅದರದೇ ಆದ ಸಂಶೋಧನೆಯಾಗಿ ಹೊರ ಹೊಮ್ಮಲಿದೆ. ಗೂಗಲ್‌ನ ಆಟೊ ಎಂಎಲ್‌ ಕಂಪೆನಿಗಳಿಗೆ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ತಜ್ಞರು ಬೇಕೆಂದೇ ಇಲ್ಲ. ಸದ್ಯದ ಅಂದಾಜಿನ ಪ್ರಕಾರ ಕೆಲವೇ ಸಾವಿರ ಕಂ‍ಪೆನಿಗಳು ಮಾತ್ರ ಎಐ ನಿರ್ಮಿಸುವ ಪ್ರತಿಭಾವಂತರನ್ನು ಹೊಂದಿವೆ.
–ಜೆಫ್‌ ಡೀನ್‌, ಗೂಗಲ್‌ನ ಹಿರಿಯ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT