ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ರುಚಿಯ ಕ್ಷತ್ರಿಯ ಕಬಾಬ್‌

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಅಣ್ಣ ಎಂಟು ಮಟನ್ ಬಿರಿಯಾನಿ, ನಾಕು ಕ್ಷತ್ರಿಯ, ನಾಕು ಗುಂಟೂರು...’ ಹೀಗೆ ಪ್ರತಿಯೊಬ್ಬರು ಮುಗಿಬಿದ್ದು ತಮಗೇನು ಬೇಕು ಎಂದು ಕೂಗಿ ಹೇಳುತ್ತಿದ್ದರು.

ಅದೊಂದು ಪುಟ್ಟ ಹೋಟೆಲ್. ‘ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು’ ಎನ್ನುವಂತೆ ಕಡಿಮೆ ಸ್ಥಳದಲ್ಲೇ ತುಂಬಿದ್ದ ಜನ. ಬಿಡುವಿಲ್ಲದಂತೆ ಓಡಾಡುವ ಸಪ್ಲೈಯರ್ ಹುಡುಗರು. ಒಬ್ಬರು ಏಳುವ ಮುಂಚೆಯೇ ಮತ್ತೊಬ್ಬರು ಅವರ ಹಿಂದೆ ನಿಂತು ಸೀಟಿಗಾಗಿ ಕಾಯುತ್ತಿದ್ದರು. ಇದು ಶ್ರೀನಗರದಲ್ಲಿರುವ ‘ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌’ ಹೋಟೆಲ್‌ನ ದೃಶ್ಯ.

ಎಂಟು ವರ್ಷಗಳ ಹಿಂದೆ ವಿಜಯನಗರದಲ್ಲಿ ‘ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌’ ಆರಂಭಿಸಿದ ನವೀನ್ ಮತ್ತು ಗಂಗಾಧರ್. ನಂತರದಲ್ಲಿ ಕೋರಮಂಗಲ, ಶ್ರೀನಗರದಲ್ಲಿ ಶಾಖೆ ತೆರೆದಿದ್ದಾರೆ. ಶ್ರೀನಗರದ ಈ ಹೋಟೆಲ್‌ನಲ್ಲಿ ನಿತ್ಯ ನೂರಾರು ಜನ ಊಟಮಾಡುತ್ತಾರೆ. ವಾರಾಂತ್ಯದಲ್ಲಿ ಸಂಖ್ಯೆ ಇನ್ನೂ ಹೆಚ್ಚು. ಕರ್ನಾಟಕ, ಮರಾಠ, ಆಂಧ್ರ ಶೈಲಿಯ ನಾಟಿ ಮಾಂಸಹಾರಿ ಖಾದ್ಯಗಳಿಗೆ ಈ ಹೋಟೆಲ್‌ ಹೆಸರುವಾಸಿ.

ದೊನ್ನೆ ಮಟನ್ ಬಿರಿಯಾನಿ: ಬಿಸಿ ಹಬೆಯಾಡುತ್ತಾ, ಜರ್ಬಿಯೊಂದಿಗೆ ಮಸಾಲೆ ಘಮ ಹೊತ್ತು ಮೊದಲಿಗೆ ಬಂದಿದ್ದು ಮಟನ್ ಬಿರಿಯಾನಿ. ಜಿಡ್ಡಿನಿಂದ ಕನಿಯುತ್ತಿದ್ದ ಬಿರಿಯಾನಿ ನೋಡುತ್ತಿದ್ದಂತೆ ಸ್ವಾದದ ಆಳ ನಾಲಿಗೆಗೆ ಅರ್ಥವಾಗಿತ್ತು. ಇಲ್ಲಿನ ಮಟನ್‌ ಬಿರಿಯಾನಿ ಜನಪ್ರಿಯವಾಗಲು ತಯಾರು ಮಾಡುವ ವಿಶೇಷ ವಿಧಾನವೂ ಕಾರಣ. ಒಂದು ದಿನಕ್ಕೆ ಎಷ್ಟು ಬೇಕೋ ಅಷ್ಟೂ ಬಿರಿಯಾನಿಯನ್ನು ಒಟ್ಟಿಗೆ ಮಾಡದೆ. 5 ಕೆ.ಜಿಯಷ್ಟೇ ಒಂದು ಬಾರಿ ತಯಾರಿಸುತ್ತಾರೆ. ಮೊದಲೇ 5 ಕೆ.ಜಿ. ಬಿರಿಯಾನಿ ಮಾಡಲು ಎಷ್ಟು ಮಸಾಲೆ ಬೇಕು ಎನ್ನುವುದನ್ನು ಲೆಕ್ಕ ಮಾಡಿ ಮಸಾಲೆ ಪುಡಿಯನ್ನು ಪುಟ್ಟಣಕಟ್ಟಿ ಸಿದ್ಧಮಾಡಿಕೊಂಡಿರುತ್ತಾರೆ. ಇದು ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಾಯುತ್ತದೆ.

ಬಿರಿಯಾನಿ ತಿನ್ನುವುದೂ ಕಲೆ ಎನ್ನುವ ಹೋಟೆಲ್‌ನವರು, ಬಿರಿಯಾನಿ ಮೇಲೊಂದು ಹೋಳು ನಿಂಬೆಹಣ್ಣು ಹಿಂಡಿಕೊಂಡು, ಸೇರ್ವಾ ಸೇರಿಸಿ ತಿನ್ನಬೇಕು ಎನ್ನುತ್ತಾರೆ. ಮಟನ್‌ ಬಿರಿಯಾನಿ ಘಮ ಬಂದಷ್ಟು ಮಸಾಲೆ ಹೆಚ್ಚಿರಲಿಲ್ಲ. ತುಸು ಸಪ್ಪೆಯಾಗಿತ್ತು. ಹೊರಗೆ ಸುರಿಯುತ್ತಿದ್ದ ಮಳೆಗೆ ಬಿಸಿಬಿಸಿಯಾಗಿ ಬಂದ ಮಟನ್‌ ಬಿರಿಯಾನಿ ಮತ್ತಷ್ಟು ಖಾರವಿದ್ದರೆ ಚೆನ್ನಾಗಿರೋದು.

ಕ್ಷತ್ರಿಯ ಕಬಾಬ್: ಮಸಾಲೆಯೊಂದಿಗೆ ಜಜ್ಜಿದ ಬೆಳ್ಳುಳ್ಳಿ ಎಸಳು, ಕೋಳಿ ಮಾಂಸದೊಂದಿಗೆ ಮಿಳಿತವಾಗಿ ಎಣ್ಣೆಯಲ್ಲಿ ಬೆಂದು ಕೆಂಪಗಾಗಿ ತಟ್ಟೆಯಲ್ಲಿ ಕೂತು ಬಂದಿತ್ತು. ನಾಲಿಗೆ ಚಪ್ಪರಿಸಿ ತಿನ್ನುವಂತೆ ಮಾಡುವ ಈ ಕಬಾಬ್ ಇಲ್ಲಿನ ಸ್ಟಾರ್‌ ಖಾದ್ಯ. ಕೋಳಿ ಮಾಂಸವನ್ನು ಸುತ್ತುವರಿದ ಮರಾಠಿ ಶೈಲಿಯ ಮಸಾಲೆ ಅದ್ಭುತ ರುಚಿಯನ್ನು ನೀಡುತ್ತದೆ.

ಈ ಕಬಾಬ್‌ ಮಾಡಲು ಹಸಿ ಮಸಾಲೆಯನ್ನು ಕೋಳಿ ಮಾಂಸದೊಂದಿಗೆ ಬೆರಸಿ ಗಂಟೆಗಟ್ಟಲೆ ನೆನೆಸುತ್ತಾರೆ. ಇದರಿಂದ ಕೋಳಿ ಮಾಂಸದ  ಪ್ರತಿ ಎಸಳೂ ಮಸಾಲೆ ಹೀರಿ ಸ್ವಾದ ಹೆಚ್ಚುತ್ತದೆ. ನಂತರ ಎಣ್ಣೆಯಲ್ಲಿ ಈ ಕೋಳಿ ತುಂಡುಗಳನ್ನು ಡೀಪ್‌ ಫ್ರೈ ಮಾಡುತ್ತಾರೆ. ಹೊರಗೆ ಗರಿಗರಿಯಾಗಿ ಬೆಂದರೂ ಒಳಗಿನ ಮಾಂಸ ತನ್ನ ಮೃದುತ್ವವನ್ನು ಉಳಿಸಿಕೊಂಡಿರುತ್ತದೆ. ಈ ವಿಧಾನಕ್ಕೆ ನಾಟಿ ಕೋಳಿ ಬಳಸಿದರೆ ಹೆಚ್ಚು ರುಚಿಯಾದರೂ ಫಾರಂ ಕೋಳಿ ಹೆಚ್ಚು ಮಾಂಸದಿಂದ ಕೂಡಿದ್ದು ಬಾಯಿ ತುಂಬಾ ತಿನ್ನಲು ಮಜವಾಗಿರುತ್ತದೆ. ಹಾಗೆ ಡೀಪ್‌ ಫ್ರೈ ಮಾಡಿರುವುದರಿಂದ ಈ ಕಬಾಬ್ ಮೂಳೆಗಳನ್ನೂ ತಿನ್ನಲು ರುಚಿಯಾಗಿರುತ್ತದೆ.

ಕೊನೆಯದಾಗಿ ಸವಿದಿದ್ದು ಚಿಕನ್ ಫ್ರೈ. ಇದು ಬೆಂಗಳೂರಿಗರಿಗೆ ಹೊಸದೇನಲ್ಲ. ಆದರೆ ಇಲ್ಲಿನ ರುಚಿ ಭಿನ್ನವಾಗಿದೆ. ಕೊತ್ತಂಬರಿ ಬೀಜದ ಕಂಪಿನೊಂದಿಗೆ ಇತರೆ ಮಸಾಲೆಗಳು ಮಿಶ್ರಣಗೊಂಡು ತೆಂಗಿನಕಾಯಿಯೊಂದಿಗೆ ಹದವಾಗಿ ಬೆ‌ರೆತಿರುತ್ತದೆ ಕೋಳಿ ಫ್ರೈ. ಇದು ಮೃದುವಾಗಿದ್ದು, ಚಪಾತಿ, ಪರೋಟ, ನಾನ್‌ನೊಂದಿಗೆ ಸವಿಯಲು ಚಂದ. ಇದರೊಂದಿಗೆ ದೊನ್ನೆ ಚಿಕನ್ ಬಿರಿಯಾನಿ, ದೊನ್ನೆ ಮೊಟ್ಟೆ ಬಿರಿಯಾನಿ, ಗುಂಟೂರು ಚಿಕನ್, ಚಿಕನ್ ಲಾಲಿಪಾಪ್, ಚಿಕನ್ ಪೆಪ್ಪರ್, ಚಿಕನ್ ಫ್ರೈ, ಮಟನ್ ಫ್ರೈ ಲಭ್ಯವಿದೆ.

‘ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್‌’ ಖಾದ್ಯಗಳನ್ನು ಸ್ವಾಗಿ (swggi) ಆ್ಯಪ್‌ ಮೂಲಕವೂ ತರಿಸಿಕೊಳ್ಳಬಹುದು. ಸ್ವಾಗಿಯಲ್ಲಿ ಹುಡುಕಬೇಕಾದ ಹೆಸರು – Chikpet Donne Biriyani House. ನೇರವಾಗಿ ಹೋಟೆಲ್‌ಗೆ ಫೋನ್ ಮಾಡಿ ಆರ್ಡರ್ ಮಾಡುವ ಅವಕಾಶವೂ ಇದೆ. 2 ಕಿ.ಮೀ ವ್ಯಾಪ್ತಿ ಒಳಗೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಸದಭಿರುಚಿಯ ಒಳಾಂಗಣ
ಹೋಟೆಲ್‌ ಒಳಾಂಗಣವನ್ನು ಸಾಹಿತಿಗಳು, ನಟರು, ಸಂಗೀತಗಾರರ ಚಿತ್ರಗಳಿವೆ. ಈ ಬಗ್ಗೆ ಮಾತನಾಡುವ ನವೀನ್ ‘ಕನ್ನಡಿಗರಿಗೆ ಸದಭಿರುಚಿಯ ವಾತಾವರಣ ಕಲ್ಪಿಸುವ ಉದ್ದೇಶ ನಮ್ಮದು. ಆಹಾರ ನಮ್ಮ ಸಂಸ್ಕೃತಿಯ ಪ್ರತೀಕ, ಇದರೊಂದಿಗೆ ನಮ್ಮ ದೇಶದ ಗಣ್ಯರನ್ನು ನೆನೆಯುವ ಕೆಲಸವೂ ಆಗಬೇಕು’ ಎನ್ನುತ್ತಾರೆ ನವೀನ್. ಇಲ್ಲಿ ರಜನಿಕಾಂತ್, ಅನಿಲ್ ಕುಂಬ್ಳೆ, ಸಿ.ಅಶ್ವತ್ಥ್, ಪಿ. ಲಂಕೇಶ್‌, ಡಾ. ರಾಜ್‌ಕುಮಾರ, ಅಂಬರೀಶ್, ಎಚ್.ಡಿ.ದೇವೇಗೌಡ ಹೀಗೆ ಹತ್ತಾರು ಗಣ್ಯರ ಫೋಟೊಗಳು ಹೋಟೆಲ್‌ ಗೋಡೆಯನ್ನು ಅಲಂಕರಿಸಿವೆ.

ಸ್ಥಳ: ನಂ.480/1, 50 ಅಡಿ ರಸ್ತೆ, ನಾಗೇಂದ್ರ ಬ್ಲಾಕ್, ಪಿ.ಇ.ಎಸ್ ಕಾಲೇಜು ಹತ್ತಿರ, ಶ್ರೀನಗರ. ದೂರವಾಣಿ: 080–6888 88344, 9880497573

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT