ಶನಿವಾರ, ಫೆಬ್ರವರಿ 27, 2021
31 °C

ಯುವತಿಯರ ಕಷ್ಟ ಕೇಳುವವರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವತಿಯರ ಕಷ್ಟ ಕೇಳುವವರಿಲ್ಲ

–ಅಮೂಲ್ಯ ಪಿ.ಎಲ್‌.

ಅದು ಹೆಬ್ಬಾಳ ಬಸ್‌ ನಿಲ್ದಾಣ. ಶಿವಾಜಿನಗರದತ್ತ ತೆರಳುವ ಬಸ್‌ ಬಹುಹೊತ್ತಿನಿಂದ ಬಂದೇ ಇರಲಿಲ್ಲ. ಕಾಯುತ್ತಿದ್ದ ಪ್ರಯಾಣಿಕರಲ್ಲಿ ಆಫೀಸಿಗೆ ತಡವಾಗುತ್ತಿದೆ ಎನ್ನುವ ದುಗುಡ. ಅದೋ ಬಸ್ ಬಂದೇಬಿಡ್ತು. ನಾಮುಂದು, ತಾಮುಂದು ಎಂದು ಓಡಿದವರಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಇದ್ದರು.

ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಕಂಡಕ್ಟರ್‌ ಕೂಡಾ ಓಡಾಡಲು ಕಷ್ಟಪಡಬೇಕಿತ್ತು. ಹಿಂದಿನ ಬಾಗಿಲಲ್ಲಿ ಹತ್ತಿಕೊಂಡ ಕಂಡಕ್ಟರ್ ಟಿಕೆಟ್ ವಿತರಿಸುತ್ತಾ ಮುಂದಕ್ಕೆ ಬಂದರು. ಹಿರಿಯ ಪುರುಷ ನಾಗರಿಕರಿಗೆ ಮೀಸಲಿರಿಸಿದ್ದ ಆಸನದಲ್ಲಿ ಕುಳಿತಿದ್ದ ಯುವಕನೊಬ್ಬ ಮುಂದಿನ ಸೀಟಿನ ಸಂದಿಯಲ್ಲಿ ಕೈ ತೂರಿಸಿ, ಯುವತಿಯ ಮೈ ಸವರುತ್ತಿದ್ದ. ಗಾಢ ನಿದ್ದೆಯಲ್ಲಿದ್ದ ಯುವತಿಗೆ ಯುವಕನ ಅಸಭ್ಯ ವರ್ತನೆಯ ತಿಳಿಯಲೇ ಇಲ್ಲ.

ಆ ಸೀಟಿನ ಸುತ್ತ ನಿಂತಿದ್ದವರು ಇದನ್ನು ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದರು. ಯಾರೊಬ್ಬರೂ ಆ ವಿಕೃತ ಕಾಮಿಯ ದುಸ್ಸಾಸಹವನ್ನು ತಡೆಯಲಿಲ್ಲ.

ಆ ಯುವಕನ ಬಳಿಗೆ ಬಂದ ಕಂಡಕ್ಟರ್‌ 'ಟಿಕೆಟ್ ಟಿಕೆಟ್' ಎಂದು ಕೂಗಿ ಅವನ ಗಮನ ಸೆಳೆದರು. ಅವನ ಕಳ್ಳಾಟ ಗಮನಿಸಿದರೂ ಕಂಡಕ್ಟರ್‌ ಬುದ್ಧಿ ಹೇಳಲಿಲ್ಲ. ಶಿವಾಜಿನಗರಕ್ಕೆ ಟಿಕೆಟ್ ಖರೀದಿಸಿ ಕಿಸೆಗೆ ಇಟ್ಟುಕೊಂಡ ಯುವಕ ಮತ್ತೆ ಯಥಾಪ್ರಕಾರ ಆಕೆಯ ಮೈಸವರುವುದು ಮುಂದುವರಿಸಿದ.

ಶಿವಾಜಿನಗರದ ಹತ್ತಿರಕ್ಕೆ ಬಸ್ ಬಂದಾಗ ಯುವತಿ ನಿದ್ದೆಯಿಂದ ಎಚ್ಚೆತ್ತಳು. ಆದರೆ ಕಾಮುಕ ಮಾತ್ರ ಇನ್ನೂ ಅದೇ ಮತ್ತಿನಲ್ಲಿ ಆಕೆಯ ಮೈಮೇಲೆ ಕೈಯಾಡಿಸುತ್ತಲೇ ಇದ್ದ.

ಹಿಂದಕ್ಕೆ ತಿರುಗಿದ ಯುವತಿ ತನ್ನ ಬ್ಯಾಗ್‌ನಿಂದ ಯುವಕನಿಗೆ ಹೊಡೆಯಲು ಆರಂಭಿಸಿದಳು. ಬಸ್‌ನ ಹಿಂದಿನ ಬಾಗಿಲಿನಿಂದ ಜಿಗಿದು ಓಡಲಾರಂಭಿಸಿದ ಯುವಕನನ್ನು ಬೆನ್ನಟ್ಟಿದ ಕಂಡಕ್ಟರ್‌ ಬಾಯಿಗೆ ಬಂದಂತೆ ಬೈಯ್ಯುತ್ತಾ ಹಿಗ್ಗಾಮುಗ್ಗಾ ಹೊಡೆದರು. ಆ ಯುವತಿಯೂ ಅಳುತ್ತಾ ಯುವಕನಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಳು. ಆದರೆ ಅಲ್ಲಿದ್ದ ನಾಗರಿರು ತಮಾಷೆ ನೋಡುತ್ತಿದ್ದರೇ ವಿನಃ ಆಕೆಯ ನೆರವಿಗೆ ಬರಲಿಲ್ಲ. ಯುವತಿಯು ಅಳುತ್ತಾ ತನ್ನ ಮನೆ ದಾರಿ ಹಿಡಿದಳು.

ಆ ಯುವಕನನ್ನು ಹಿಡಿದುಕೊಂಡಿದ್ದ ಕಂಡಕ್ಟರ್‌ ಬಳಿಗೆ ಬಂದ ಇತರ ಬಸ್‌ಗಳ ಸಿಬ್ಬಂದಿ ವಿಷಯ ತಿಳಿದು ತಾವೂ ಎರಡು ಏಟು ಹೊಡೆದರು. 'ಟಿಕೆಟ್ ಕೊಡಲು ಹೋದಾಗಲೇ ಇವನ ಕಳ್ಳಾಟ ಗಮನಿಸಿದ್ದೆ. ಆದರೆ ಇವರು ಪರಿಚಿತರೇನೋ ಅಂದುಕೊಂಡು ಸುಮ್ಮನಾದೆ. ಇಂಥವರನ್ನ ಬಿಡಬಾರದು, ಪೊಲೀಸರಿಗೆ ಒಪ್ಪಿಸಬೇಕು' ಎಂದು ಹೊಡೆಯುತ್ತಿದ್ದರು.

ಅಲ್ಲಿದ್ದ ಕೆಲ ಕಂಡಕ್ಟರ್‌ಗಳು ‘ಅಯ್ಯೋ ಇವನದ್ದು ಇದೇ ಆಯ್ತು, ನಮ್ ರೂಟ್ ಬಸ್‌ಗಳಿಗೂ ಬಂದು ಹೀಗೆ ಮಾಡ್ತಾನೆ. ಪೊಲೀಸರಿಗೆ ಹೇಳಿದ್ದೂ ಆಯ್ತು, ಅವರು ಇವನನ್ನು ಹಿಡಿದುಕೊಂಡು ಹೋದ ಶಾಸ್ತ್ರ ಮಾಡಿ ಬಿಟ್ಟು ಕಳಿಸಿದ್ದೂ ಆಯ್ತು. ಇವನ ಕಾಟ ಮಾತ್ರ ಹೆಣ್ಮಕ್ಕಳಿಗೆ ತಪ್ಪಿಲ್ಲ. ಅವನ ಕಥೆ ಬಿಡು, ನಿನ್ನದು ರೂಟ್ ಗಾಡಿ. ಲೇಟ್ ಆಗ್ತಿದೆ ಹೊರಡು' ಎಂದು ಬುದ್ಧಿ ಹೇಳಿದರು.

ಅರ್ಧ ಮುಕ್ಕಾಲು ಗಂಟೆಯವರೆಗೂ ಸಿನಿಮಾ ನೋಡುವಂತೆ ಎಲ್ಲವನ್ನೂ ನೋಡುತ್ತಿದ್ದ ಜನರು ತಮ್ಮಪಾಡಿಗೆ ತಾವು ಹೊರಟರು. ಕಾಮುಕ ಯುವಕ, ಕೈಬೀಸಿಕೊಂಡು ಏನೂ ಆಗಿಯೇ ಇಲ್ಲ ಎನ್ನುವಂತೆ ಹೊರಟ.

ಅದೇ ಬಸ್‌ನಲ್ಲಿದ್ದ ನನಗೆ ಇದನ್ನೆಲ್ಲಾ ನೋಡಿ ಹೇವರಿಕೆ ಎನಿಸಿತು. ಬೆಂಗಳೂರಿನಂಥ ಕೋಟ್ಯಂತರ ಜನರಿರುವ ಊರಿನಲ್ಲಿ, ಹಾಡಹಗಲೇ ಹೆಣ್ಣುಮಕ್ಕಳ ಮೇಲೆ ಈ ಪರಿ ದೌರ್ಜನ್ಯ ನಡೆದರೂ ನ್ಯಾಯ ಸಿಗುವುದಿಲ್ಲ. ಛೇ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.