ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಸಿಗದೆ ಎಂಟು ರೋಗಿಗಳ ಸಾವು

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರಿಂದ ರೋಗಿಗಳ ಪರಿಸ್ಥಿತಿ ಬಿಗಡಾಯಿಸಿತ್ತು. ರೋಗಿಗಳು ತುರ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಮುಗಿ ಬೀಳುವ ಸ್ಥಿತಿ ನಿರ್ಮಾಣವಾಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಿದವು.

ಮಧುಮೇಹದಿಂದ ಬಾಲಕಿ ಸಾವು:

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಇಂಗಳಗಾಂವ ಗ್ರಾಮದ ಬಾಲಕಿ ಕಲ್ಲವ್ವ ಶ್ರೀಶೈಲ ಅಂಬಿ (12) ತುರ್ತು ಚಿಕಿತ್ಸೆ ಲಭಿಸದೆ ಮಂಗಳವಾರ ಮೃತಪಟ್ಟಿದ್ದಾಳೆ. ಹುಟ್ಟಿನಿಂದಲೇ ಬರುವ ಮಧುಮೇಹದಿಂದ ಬಳಲುತ್ತಿದ್ದ ಆಕೆ, ಸೋಮವಾರ ರಾತ್ರಿ ತೀವ್ರ ರಕ್ತದೊತ್ತಡದಿಂದಾಗಿ ಅರೆಪ್ರಜ್ಞಾವಸ್ಥೆ ತಲುಪಿದ್ದಳು. ಸಕಾಲಕ್ಕೆ ಯಾವ ವೈದ್ಯರೂ ಸಿಗಲಿಲ್ಲ. ತಡರಾತ್ರಿ ಅಥಣಿಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಳು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಸಂಜುಕುಮಾರ ಗುಂಜಿಗಾಂವಿ ತಿಳಿಸಿದರು.

ಬಾಗಲಕೋಟೆ ಜಿಲ್ಲೆ ಇಳಕಲ್ಲಿನ ಎ.ಪಿ.ಎಂ.ಸಿ ವರ್ತಕ ಶೇಖಪ್ಪ ಗ್ಯಾನಪ್ಪ ಜಕ್ಕಲಿ ಮಂಗಳವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಸುಕಿನ ಜಾವ ಶೇಖಪ್ಪ ಅವರಿಗೆ ರಕ್ತದೊತ್ತಡ ಕಡಿಮೆಯಾಗಿ, ತೀವ್ರ ಎದೆನೋವು ಕಾಣಿಸಿಕೊಂಡಿದೆ. ನಗರದ ಖಾಸಗಿ ಆಸ್ಪತ್ರೆಗಳು ಬಂದ್‌ ಇದ್ದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ಶಾಲೆಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿ ಬಸವರಾಜ ದಿಡಗೂರ (16), ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ.

ಡೆಂಗಿ ಜ್ವರದಿಂದ ಬಳಲುತ್ತಿದ್ದಳು ಎನ್ನಲಾದ ಧಾರವಾಡದ ವೈಷ್ಣವಿ ಜಾಧವ (9) ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾಳೆ. ಬಾಲಕಿಯನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ನಿರಾಕರಿಸಿದ್ದರಿಂದ ಸೋಮವಾರ ತಡರಾತ್ರಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ರಾತ್ರಿಯೇ ಮೃತಪಟ್ಟಿದ್ದಾಳೆ.

ಸತತ ಮೂರು ದಿನಗಳಿಂದ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದ ಬ್ಯಾಡಗಿ ತಾಲ್ಲೂಕಿನ ನಯನಾ (2), ಮಂಗಳವಾರ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಒಯ್ಯುವಾಗ ಮೃತಪಟ್ಟಿದ್ದಾಳೆ.

ಪಿಡಿಒ ಸಾವು:

ಹೃದಯಾಘಾತಕ್ಕೆ ಒಳಗಾಗಿದ್ದ ಗಂಗಾವತಿ ತಾಲ್ಲೂಕಿನ ಮುಕ್ಕುಂಪಿ ಗ್ರಾಮದ ಪಿಡಿಒ ಗ್ಯಾನಪ್ಪ ಬುಡ್ನಾಳ್ (56) ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಮಂಗಳವಾರ ಮೃತಪಟ್ಟಿದ್ದಾರೆ.

ಹಾಸನದಲ್ಲಿ 3 ತಿಂಗಳ ಮಗುವಿನ ಸಾವು:

ಹಾಸನ ನಗರದಲ್ಲಿ ಮೂರು ತಿಂಗಳ ಮಗು ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದೆ. ಇಲ್ಲಿನ ಸಿದ್ದಯ್ಯನಗರದ ನದೀಂ-ಫರ್ಹಾನಾ ದಂಪತಿ ಪುತ್ರ ಇಬ್ರಾಹಿಂ, ನಾಲ್ಕು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹೆರಿಗೆಗೆಂದು ತವರೂರು ತುಮಕೂರು ಜಿಲ್ಲೆಯ ತಿಪಟೂರಿಗೆ ತೆರಳಿದ್ದ ಫರ್ಹಾನಾ, ಅಲ್ಲಿಯೇ ಚಿಕಿತ್ಸೆ ಕೊಡಿಸಿದ್ದರು.

ಆದರೆ ಮಗು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಹಾಸನಕ್ಕೆ ಕರೆತರಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದ ಸರಿಯಾದ ಚಿಕಿತ್ಸೆ ದೊರಕಲಿಲ್ಲ. ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಗುವನ್ನು ವಾಪಸು ತಿಪಟೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ, ತಿಪಟೂರಿನಿಂದ ಸಾರಿಗೆ ಬಸ್ ನಲ್ಲಿ ಬೆಳಿಗ್ಗೆ ಹಾಸನಕ್ಕೆ ಮರಳಿ ಕರೆತರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ.

ತುಮಕೂರಿನಲ್ಲಿ ವಿದ್ಯಾರ್ಥಿನಿ ಸಾವು:

ತುಮಕೂರು ನಗರದ ವರದರಾಜ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ (23) ಹೃದಯ ಸಂಬಂಧಿ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

‘ಕಾಲೇಜಿಗೆ ತೆರಳುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದಳು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಜ್ಯೋತಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು’ ಎಂದು ಸ್ನೇಹಿತೆಯರು ತಿಳಿಸಿದ್ದಾರೆ.

‘ನಮ್ಮ ಮಗಳು ಹೃದ್ರೋಗದಿಂದ ಬಳಲುತ್ತಿದ್ದಳು. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು’ ಎಂದು ಮೃತರ ಪೋಷಕರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಮಂಗಳವಾರವೂ ಮುಚ್ಚಿದ್ದವು.  ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದಲೇ ರೋಗಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ರೋಗಿಗಳ ಸಂಖ್ಯೆ ದುಪ್ಪಟ್ಟು:
ಹಾವೇರಿ ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಂಗಳವಾರ ರೋಗಿಗಳ ದಟ್ಟಣೆ ಹೆಚ್ಚಾಗಿತ್ತು. ‘ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಐವರು ಗರ್ಭಿಣಿಯರು ಸೋಮವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಒಟ್ಟಾರೆ, ಸೋಮವಾರ 20 ಹಾಗೂ ಮಂಗಳವಾರ ಸಂಜೆ ತನಕ 13 ಸೇರಿದಂತೆ 33 ಹೆರಿಗೆ ಮಾಡಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ನಾಗರಾಜ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT