6

ಗ್ರಾಮೀಣ ಪ್ರದೇಶಕ್ಕೂ ವಿಮೆ ವಿಸ್ತರಣೆ

Published:
Updated:
ಗ್ರಾಮೀಣ ಪ್ರದೇಶಕ್ಕೂ ವಿಮೆ ವಿಸ್ತರಣೆ

ಡಿಜಿಟಲ್‌ ಸೌಲಭ್ಯಗಳು ಹೆಚ್ಚಿರುವುದು ಮತ್ತು ಹಳ್ಳಿಗಳಿಗೂ ಮೊಬೈಲ್‌ ಸಂಪರ್ಕ ಬಂದಿರುವುದರಿಂದ ಜನರನ್ನು ಸಂಪರ್ಕಿಸುವುದು ಮತ್ತು ವಿಮೆಯ ಬಗ್ಗೆ ಜಾಗೃತಿ ಮೂಡಿಸುವುದು ಈಗ ಹೆಚ್ಚು ಸುಲಭವಾಗಿರುವುದನ್ನು ಇಲ್ಲಿ ವಿವರಿಸಲಾಗಿದೆ.

ಅನೇಕರು, ನಮ್ಮ ದೇಶವನ್ನು ಭಾರತ ಮತ್ತು ಇಂಡಿಯಾ ಎಂದು ಎರಡು ರೀತಿಯಲ್ಲಿ ಗುರುತಿಸಿತ್ತಾರೆ. ಅಭಿವೃದ್ದಿ ಹೊಂದುತ್ತಿರುವ ನಗರ ಪ್ರದೇಶವನ್ನು ‘ಇಂಡಿಯಾ’ ಎಂದೂ, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಗ್ರಾಮೀಣ ಪ್ರದೇಶವನ್ನು ‘ಭಾರತ’ ಎಂದೂ ಅವರು ಗುರುತಿಸುತ್ತಾರೆ. ಆದರೆ ಈಚಿನ ದಿನಗಳಲ್ಲಿ  ‘ಭಾರತ ಮತ್ತು ಇಂಡಿಯಾ’ಗಳ ನಡುವಣ ಅಂತರ ಕಡಿಮೆಯಾಗಿದೆ. ಅಥವಾ ಈಗ ಈ ವ್ಯತ್ಯಾಸವೇ ಕಾಣಿಸುತ್ತಿಲ್ಲ ಎಂದರೂ ತಪ್ಪಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಬಜೆಟ್‌ ಕುರಿತು ಭಾಷಣ ಮಾಡುವಾಗ ದೇಶದ ಜನಸಾಮಾನ್ಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಬಗ್ಗೆ ಮಾತನಾಡಿದ್ದರು. ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಬಹುಮುಖ್ಯ ಪಾತ್ರವಹಿಸುವುದು ವಿಮೆ. ಆದರೆ, ಸೌಲಭ್ಯಗಳ ಕೊರತೆ, ಸಾಂಪ್ರದಾಯಿಕವಾದ ಧೋರಣೆಗಳಿಂದಾಗಿ ಗ್ರಾಮೀಣ ಪ್ರದೇಶದವರೆಗೆ ವ್ಯಾಪಕ ಪ್ರಮಾಣದಲ್ಲಿ ವಿಮಾ ಕ್ಷೇತ್ರ ವಿಸ್ತರಿಸಲು ಈವರೆಗೆ ಸಾಧ್ಯವಾಗಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ವಿಮೆ ಹೊಂದಿರುವವರ ಪ್ರಮಾಣ ಕೇವಲ ಶೇ 0.7ರಷ್ಟಿದೆ ಎಂಬುದು ಇದಕ್ಕೆ ಸಾಕ್ಷಿ. ಈ ಉದ್ದಿಮೆ ತನ್ನ ಸಾಮರ್ಥ್ಯದ ಸಂಪೂರ್ಣ ಬಳಕೆ ಮಾಡಿಕೊಳ್ಳಲು ವಿಫಲವಾಗಿರುವುದರಿಂದ ದೇಶದ ಬಹುದೊಡ್ಡ ಸಮುದಾಯ ವಿಮಾ ವ್ಯಾಪ್ತಿಯಿಂದ ಹೊರಗುಳಿಯುವಂತಾಗಿದೆ.

ವಿಶೇಷವಾಗಿ ಅರೆ ನಗರಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ಜನರು ವಿಮೆಯಿಂದ ಹೊರಗುಳಿದಿದ್ದಾರೆ. ವಿತರಣಾ ಜಾಲವನ್ನು ಸರಿಪಡಿಸಿದರೆ ವಿಮಾ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೊಂದು ಅವಕಾಶಗಳಿವೆ ಎಂಬುದನ್ನು ಇದು ತೋರಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಹೆಚ್ಚಿನ ಜನರಿಗೆ ವಿಮೆ ಮಾಡಿಸುವುದಕ್ಕಿಂತಲೂ, ಕುಡಿಯಲು ಶುದ್ಧ ನೀರು ಪಡೆಯುವುದು, ವಾಸಿಸಲು ಒಂದು ಒಳ್ಳೆಯ ಮನೆ ನಿರ್ಮಿಸುವುದು ಹೆಚ್ಚಿನ ಆದ್ಯತೆಯ ವಿಚಾರಗಳಾಗಿರುತ್ತವೆ. ಇಲ್ಲಿ ವಿಮೆ ಮಾಡಿಸುವವರ ಸಂಖ್ಯೆ ಕಡಿಮೆ ಆಗಲು ಎರಡು ಕಾರಣಗಳಿವೆ. ಮೊದಲನೆಯದು ಜನರಿಗೆ ವಿಮೆ ಮಾಡಿಸುವುದರಿಂದ ಆಗುವ ಲಾಭದ ಬಗ್ಗೆ ತಿಳಿವಳಿಕೆ ಇಲ್ಲ.

ಎರಡನೆಯದಾಗಿ ವಿಮೆ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ವಿಮೆ ವಿತರಿಸುವ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಆದರೆ, ಈಗ ಸ್ಥಿತಿ ಬದಲಾಗುತ್ತಿದೆ. ಸರ್ಕಾರ ಹಾಗೂ ವಿಮಾ ಸಂಸ್ಥೆಗಳು ಸರಳ ತಂತ್ರಜ್ಞಾನ ರೂಪಿಸುವುದೂ ಸೇರಿದಂತೆ ಬೇರೆ ಬೇರೆ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಕ್ಕೂ ವಹಿವಾಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

ಹಿಂದೆಲ್ಲ ಫ್ರಾಂಚೈಸಿ ಅಥವಾ ಏಜೆನ್ಸಿಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಿಮೆಗಳನ್ನು ವಿತರಿಸಲಾಗುತ್ತಿತ್ತು. ಈಗ ಅನೇಕ ಹೊಸ ವಿಧಾನಗಳು ತೆರೆದುಕೊಂಡಿವೆ. ರಾಷ್ಟ್ರೀಯ ಇ–ಆಡಳಿತ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಲಾಗಿರುವ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಈ ನಿಟ್ಟಿನಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿವೆ.

ಈ ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿ ವಿಮೆ ವಹಿವಾಟನ್ನು ಹೆಚ್ಚಿಸಿವೆ. ಜತೆಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದೆ. ಅನೇಕ ಯುವಕರು ವಿಮಾ ಸಂಸ್ಥೆಗಳ ‘ಗ್ರಾಮೀಣ ಅಧಿಕೃತ ವ್ಯಕ್ತಿ’ (ಆರ್‌ಎಪಿ)ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಬ್ಯಾಂಕ್‌ ಹಾಗೂ ವಿಮಾ ಸಂಸ್ಥೆಗಳು ಸೇರಿಕೊಂಡು ಆರಂಭಿಸಿರುವ ‘ಬ್ಯಾಂಕ್‌ಅಶ್ಶೂರೆನ್ಸ್‌’ ಸಹ ಗ್ರಾಮಿಣ ಪ್ರದೇಶದ ಹೆಚ್ಚಿನ ಜನರಿಗೆ ವಿಮಾ ಉತ್ಪನ್ನಗಳನ್ನು ವಿತರಿಸಲು ಪರಿಣಾಮಕಾರಿ ಉಪಕ್ರಮವಾಗಿ ರೂಪುಗೊಂಡಿದೆ.

ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಬಲಿಷ್ಠವಾಗಿದೆ. ಜನರಿಗೆ ದೀರ್ಘ ಕಾಲದಿಂದ ಸೇವೆ ನೀಡಿರುವ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಜೊತೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿವೆ. ಗ್ರಾಹಕರ ಆರ್ಥಿಕ ಸ್ಥಿತಿಗತಿ, ಖರ್ಚು ಮಾಡುವ ಸಾಮರ್ಥ್ಯ, ಹೂಡಿಕೆ ಮತ್ತು ಖರೀದಿ ಸಾಮರ್ಥ್ಯ ಮುಂತಾದ ವಿಚಾರಗಳ ವಿವರಗಳೂ ಬ್ಯಾಂಕ್‌ಗಳ ಬಳಿ ಇರುತ್ತವೆ. ಇವುಗಳನ್ನು ಬಳಸಿಕೊಂಡು, ಗ್ರಾಹಕರಿಗೆ ಅನುಕೂಲವಾಗುವಂತಹ ವಿಮೆಗಳನ್ನು ರೂಪಿಸಿ ಮಾರಾಟ ಮಾಡಲು ಅವಕಾಶ ಇದೆ.

ಜನಧನದಿಂದಾಗಿ ಕುಗ್ರಾಮಗಳಿಗೂ ಬ್ಯಾಂಕಿಂಗ್‌ ವ್ಯವಸ್ಥೆ ವಿಸ್ತರಿಸಿದೆ. ಈ ಯೋಜನೆ ಕಡಿಮೆ ಆದಾಯದ ಗ್ರಾಹಕರಿಗೆ ಶೂನ್ಯ ಖಾತೆ ತೆರೆಯುವ, ಸಾಲ ಪಡೆಯುವ ಮತ್ತು ವಿಮೆ ಹಾಗೂ ಪಿಂಚಣಿ ಪಡೆಯುವ ಸೌಲಭ್ಯಗಳನ್ನೂ ಒದಗಿಸಿದೆ. ಆ ಮೂಲಕ ವಿಮಾ ಕ್ಷೇತ್ರಕ್ಕೂ ಗ್ರಾಮೀಣ ಪ್ರದೇಶಕ್ಕೆ ಸುಲಭ ಪ್ರವೇಶ ಸಿಕ್ಕಂತಾಗಿದೆ.

ದೊಡ್ಡ ಸವಾಲು: ದುರ್ಬಲ ವಿತರಣಾ ಜಾಲ ಮತ್ತು ಜನಸಂಪರ್ಕ ಸಾಧನಗಳ ಕೊರತೆಯಿಂದಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ವಿಮಾ ಯೋಜನೆಗಳನ್ನು ವಿತರಿಸುವುದು ದೊಡ್ಡ ಸವಾಲಾಗಿದೆ. ಒಬ್ಬೊಬ್ಬರನ್ನು ಭೇಟಿ ಮಾಡಿ ಉತ್ಪನ್ನ ಮಾರಾಟ ಮಾಡುವ ಹಳೆಯ ವಿಧಾನ ಒಂದು ಹಂತದ ನಂತರ ದುಬಾರಿಯಾಗುವುದರಿಂದ ಅದನ್ನು ಅನುಸರಿಸುವುದು ಕಷ್ಟ. ಆದರೆ, ಗ್ರಾಮೀಣ ಪ್ರದೇಶದಲ್ಲೂ ಡಿಜಿಟಲ್‌ ಸೌಲಭ್ಯಗಳು ಹೆಚ್ಚಿರುವುದು ಮತ್ತು ಹಳ್ಳಿಗಳಿಗೂ ಮೊಬೈಲ್‌ ಸಂಪರ್ಕ ಬಂದಿರುವುದರಿಂದ ಜನರನ್ನು ಸಂಪರ್ಕಿಸುವುದು ಮತ್ತು ವಿಮೆಯ ಬಗ್ಗೆ ಜಾಗೃತಿ ಮೂಡಿಸುವುದು ಸುಲಭವಾಗಿದೆ. ಸ್ಮಾರ್ಟ್‌ ಪೋನ್‌ ಹಾಗೂ ನಗದುರಹಿತ ವಹಿವಾಟು ಆ್ಯಪ್‌ಗಳನ್ನು ಹೊಂದಿರುವ ಸಿಬ್ಬಂದಿ ಈಗ ವಿಮಾ ಸೌಲಭ್ಯವನ್ನು ಜನಸಾಮಾನ್ಯರ ಬಳಿಗೆ ಒಯ್ಯುತ್ತಿದ್ದಾರೆ.

ಆಸಕ್ತಿಯ ವಿಚಾರವೆಂದರೆ, ಈ ಕ್ಷೇತ್ರ ಈಗ ಇಂಟರ್‌ನೆಟ್‌ ಮಾಧ್ಯಮವನ್ನೂ ಸಮರ್ಥವಾಗಿ ಬಳಸಿಕೊಳ್ಳಲು ಆರಂಭಿಸಿದೆ. ಮೊಬೈಲ್‌ಗಳ ಮೂಲಕವೇ ಇಂಟರ್‌ನೆಟ್‌ ಸಂಪರ್ಕ ಸಾಧಿಸುವ ಗ್ರಾಹಕರು ಆನ್‌ಲೈನ್‌ನಲ್ಲೇ ಪಾಲಿಸಿಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆದರೂ ಆನ್‌ಲೈನ್‌ನಲ್ಲಿ ವಿಮೆ ಖರೀದಿಸುವ ಪ್ರವೃತ್ತಿ ಜನಪ್ರಿಯಗೊಳ್ಳಲು ಇನ್ನಷ್ಟು ಕಾಲ ಬೇಕಾಗಬಹುದು.

ಕಡಿಮೆ ಆದಾಯ ಇರುವ ಜನರಿಗಾಗಿಯೇ ವಿಮಾ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ವಿಶೇಷ ಯೋಜನೆ ‘ಮೈಕ್ರೊ ಇನ್ಶುರೆನ್ಸ್‌’ಸಹ ಗ್ರಾಮಿಣ ಪ್ರದೇಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದಲ್ಲದೆ ಗ್ರಾಮೀಣ ಪ್ರದೇಶದ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವೂ ಕೆಲವು ವಿಮಾ ಉತ್ಪನ್ನಗಳನ್ನು ಘೋಷಿಸಿದೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನಾ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನಾ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ... ಮುಂತಾದವು ಗ್ರಾಮೀಣ ಜನರಲ್ಲೂ ವಿಮೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಐಆರ್‌ಡಿಎ ನಿಯಮಾವಳಿ ಪ್ರಕಾರ, ಪ್ರತಿ ವಿಮಾ ಸಂಸ್ಥೆಯೂ ಕಡ್ಡಾಯವಾಗಿ ಗ್ರಾಮಿಣ ಪ್ರದೇಶಕ್ಕೆ ಸೇವೆಯನ್ನು ಕೊಡಬೇಕು. ಪ್ರತಿ ಸಂಸ್ಥೆಯೂ ಮೊದಲ ತ್ರೈಮಾಸಿಕದ ಒಟ್ಟು ವಿಮಾ ಕಂತಿನ ಶೇ 2ರಷ್ಟನ್ನು, ಎರಡನೇ ತ್ರೈಮಾಸಿಕದ ವಿಮಾ ಕಂತಿನಲ್ಲಿ ಶೇ 3ರಷ್ಟನ್ನು ಹಾಗೂ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಶೇ 5ರಷ್ಟು ಕಂತನ್ನು ಗ್ರಾಮೀಣ ಪ್ರದೇಶದಿಂದಲೇ ಸಂಗ್ರಹಿಸಬೇಕು.

ಈ ಎಲ್ಲ ಉಪಕ್ರಮಗಳ ಮೂಲಕ ಸರ್ಕಾರ ಹಾಗೂ ವಿಮಾ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಜನರಲ್ಲೂ ವಿಮೆಯ ಅಗತ್ಯದ ಬಗ್ಗೆ ತಿಳಿವಳಿಕೆ ಹಾಗೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸುತ್ತಿವೆ. ವಿತರಣಾ ಜಾಲವನ್ನು ಬಲಪಡಿಸುವುದು, ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ ವಿಮಾ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿ ಗ್ರಾಮೀಣ ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲು ಅವಕಾಶ ಇದೆ.

–– ಟಿ.ಎ. ರಾಮಲಿಂಗಂ, (ಬಜಾಜ್‌ ಅಲಯನ್ಸ್‌ ಸಂಸ್ಥೆಯ ಹಿರಿಯ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry