7

ಬೇಡ ಸರ್ಜರಿ, ಸಾಕು ‘ಪಿಚಕಾರಿ’!

Published:
Updated:

ಕರ್ನಾಟಕ ಸರ್ಕಾರವು ಕೆಪಿಎಂಇ ಕಾಯ್ದೆಗೆ (Karnataka Private Medical Establishment Act) ತಿದ್ದುಪಡಿ ತರಲು ಉದ್ದೇಶಿಸಿದ್ದು ಖಾಸಗಿ ಕ್ಷೇತ್ರದ ವೈದ್ಯರು ಈ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಖಾಸಗಿ ವೈದ್ಯರ ಪರವಾಗಿ ಹಾಗೂ ವಿರುದ್ಧವಾಗಿ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮೂರು ಪ್ರಸಂಗಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ.

ಜ್ವರದಿಂದ ನರಳುತ್ತಿದ್ದ ಹುಡುಗನೊಬ್ಬನಿಗೆ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ದಾದಿಯೊಬ್ಬರು ಚುಚ್ಚುಮದ್ದು ನೀಡಿದ್ದರು. ಎಲ್ಲರಂತಿದ್ದ ಹುಡುಗ ಚುಚ್ಚುಮದ್ದು ಕೊಡಿಸಿದ ಮಾರನೆಯ ದಿನವೇ ನರಗಳ ಸೆಳತ ಮತ್ತು ಬಲಗಾಲು ನೋವಿನಿಂದ ನರಳಲಾರಂಭಿಸಿದ. ಅದಕ್ಕೆ ಮಾತ್ರೆ, ಮುಲಾಮುಗಳ ಉಪಚಾರವಾಯಿತು. ನೋವು ಕಡಿಮೆ ಆಗದೇ ಇದ್ದಾಗ ಮೂಳೆ ತಜ್ಞರ ಬಳಿ ಕಳಿಸಲಾಯಿತು. ಅಲ್ಲೂ ಉಪಯೋಗವಾಗಲಿಲ್ಲ. ಬಳಿಕ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ಕಳುಹಿಸಿಕೊಡಲಾಯತು. ಪೋಲಿಯೊ ಇರಬೇಕು ಎಂದು ಶಂಕಿಸಿ ರಾಷ್ಟ್ರೀಯ ಪೋಲಿಯೊ ಪರಿವೀಕ್ಷಣಾ ಕೇಂದ್ರಕ್ಕೂ ಕಳಿಸಿಕೊಡಲಾಯಿತು. ಹುಡುಗನಿಗೆ ಪೋಲಿಯೊ ಇಲ್ಲ ಎಂಬುದು ಅಲ್ಲಿ ಖಾತರಿ ಆಯಿತು. ಕೊನೆಗೆ ಚುಚ್ಚುಮದ್ದು ನೀಡುವಲ್ಲಿ ತೋರಿರುವ ನಿರ್ಲಕ್ಷ್ಯದಿಂದ ಸಿಯಾಟಿಕ್ ನರಕ್ಕೆ ಆಘಾತವಾಗಿರುವುದೇ ಹುಡುಗನ ಈ ಸ್ಥಿತಿಗೆ ಕಾರಣ ಎಂದು ಗೊತ್ತಾಗುವ ವೇಳೆಗೆ 6 ತಿಂಗಳು ಕಳೆದುಹೋಗಿತ್ತು.

ನಿಮ್ಹಾನ್ಸ್‌ನಲ್ಲಿ ಸಹ ‘ಇದನ್ನು ಗುಣಪಡಿಸಲು ಸಾಧ್ಯವಿಲ್ಲ, ಹುಡುಗ ಈ ಸಮಸ್ಯೆಯೊಂದಿಗೇ ಜೀವನಪರ್ಯಂತ ಬದುಕಬೇಕು’ ಎಂದು ಅಭಿಪ್ರಾಯ ನೀಡಿದಾಗ ಅವನ ತಂದೆ– ತಾಯಿ ತೀವ್ರ ಹತಾಶೆಗೆ ಒಳಗಾದರು. ಚುಚ್ಚುಮದ್ದು ನೀಡಿದ ರಿಜಿಸ್ಟರನ್ನೇ ಮಾಯ ಮಾಡಿದ್ದರಿಂದ ಆರೋಗ್ಯ ಇಲಾಖೆ, ಮಾನವ ಹಕ್ಕುಗಳ ಆಯೋಗ, ಗ್ರಾಹಕರ ವೇದಿಕೆ ಹೀಗೆ ಎಲ್ಲಾ ಕಡೆ ಸಹಾಯಕ್ಕಾಗಿ ಮೊರೆ ಇಟ್ಟರೂ ಏನೂ ಪ್ರಯೋಜನವಾಗಲಿಲ್ಲ.

ಕಳೆದ ವರ್ಷ ನಮ್ಮ ಅಮ್ಮ ತೀವ್ರ ಹೊಟ್ಟೆಯುಬ್ಬರ ಮತ್ತು ನೋವಿನಿಂದ ನರಳಲಾರಂಭಿಸಿದರು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಹಲವರ ಧೋರಣೆ ಮತ್ತು ನಿರ್ಲಕ್ಷ್ಯ ನಿಲುವುಗಳ ಬಗ್ಗೆ ಅರಿವಿದ್ದ ನಾವು ಅವರನ್ನು ತಿಪಟೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದೆವು. ಅಲ್ಲಿನ ವೈದ್ಯರು ಅದು ಅಪೆಂಡಿಸೈಟಿಸ್ ಎಂದು ಗುರುತಿಸಿ ಕೂಡಲೇ ಶಸ್ತ್ರಚಿಕಿತ್ಸೆಗೆ ಎಲ್ಲಾ ಸಿದ್ಧತೆ ಶುರು ಮಾಡಿದರು.

ನಾವು ಮತ್ತೊಬ್ಬ ವೈದ್ಯರ ಅಭಿಪ್ರಾಯ ಪಡೆಯುವ ಉದ್ದೇಶದಿಂದ ತುಮಕೂರಿನ ಮತ್ತೊಂದು ಆಸ್ಪತ್ರೆಗೆ ಅಮ್ಮನನ್ನು ದಾಖಲಿಸಿದೆವು. ಭಾನುವಾರವಾದ್ದರಿಂದ ಡ್ರಿಪ್ಸ್‌ ಹಾಕಿ ಆ್ಯಂಟಿಬಯೊಟಿಕ್ ಕೊಟ್ಟಿದ್ದು ಬಿಟ್ಟರೆ ಇಡೀ ದಿನ ಅಮ್ಮನಿಗೆ ಯಾವ ವಿಶೇಷ ಚಿಕಿತ್ಸೆಯೂ ಸಿಗಲಿಲ್ಲ. ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಯಿತು. ರಾತ್ರಿಯ ವೇಳೆಗೆ ಅಮ್ಮನಿಗೆ ನೋವು ಕಮ್ಮಿಯಾಗಿತ್ತು. ಆದರೂ ರಾತ್ರಿ ಪಾಳಿಗೆ ಬಂದ ವೈದ್ಯರು ಮರುದಿನ ಆಪರೇಷನ್ ಮಾಡಲೇಬೇಕು ಎಂದು ಘೋಷಿಸಿಬಿಟ್ಟರು. ಅಪೆಂಡಿಸೈಟಿಸ್ ಜೊತೆಗೆ ಗರ್ಭಕೋಶದಲ್ಲಿರುವ ಫೈಬ್ರಾಯ್ಡ್‌ ಅನ್ನೂ ತೆಗೆಯಬೇಕು ಎಂದರು. ಒಟ್ಟಾರೆ ಒಂದು ಲಕ್ಷ ರೂಪಾಯಿಗೂ ಮೀರಿ ವೆಚ್ಚವಾಗುವುದಾಗಿ ತಿಳಿಸಿದರು.

ನಮಗೆ ದಿಕ್ಕೇ ತೋಚಲಿಲ್ಲ. ಕೊನೆಗೆ ನಾವು ನಮ್ಮ ಫ್ಯಾಮಿಲಿ ವೈದ್ಯರ ಮೂಲಕ ತುಮಕೂರಿನ ಮತ್ತೊಬ್ಬ ಖಾಸಗಿ ವೈದ್ಯರನ್ನು ಸಂಪರ್ಕಿಸಿದೆವು. ಅವರ ಮೂಲಕ ಶಸ್ತ್ರಚಿಕಿತ್ಸೆ ತಡೆಹಿಡಿಸಿ, ಅವರ ಸಲಹೆ ಮೇರೆಗೆ ಮರುದಿನ ಮತ್ತೆ ಸ್ಕ್ಯಾನಿಂಗ್ ಮಾಡಿಸಿದಾಗ ಅಪೆಂಡಿಕ್ಸ್ ಸಾಮಾನ್ಯ ಸ್ಥಿತಿಯಲ್ಲಿತ್ತು. ಫೈಬ್ರಾಯ್ಡ್‌ ಅನ್ನು ಆಪರೇಷನ್ ಮೂಲಕ ತೆಗೆಯುವ ಅಗತ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಯ ಇನ್ನೊಬ್ಬ ವೈದ್ಯೆ ಹೇಳಿದರು. ನಾವು ಅಮ್ಮನನ್ನು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಮಾಡಿಸಿ ಕರೆತಂದೆವು.

ಇದು ಮತ್ತೊಂದು ಪ್ರಕರಣ. ನನ್ನ ತಂಗಿ ಸತತವಾಗಿ 15 ದಿನ ಜ್ವರದಿಂದ ನರಳುತ್ತಿದ್ದಾಗ ಅವಳಿಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ವೈದ್ಯರೇ ಚಿಂತಿತರಾಗಿ ಒಂದು ದಿನ ತಮ್ಮ ಆಸ್ಪತ್ರೆ ಮುಚ್ಚಿ, ಅವಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತಾವೇ ಕರೆದೊಯ್ದು ಎಲ್ಲಾ ರೀತಿಯ ತಪಾಸಣೆಗಳನ್ನು ಮಾಡಿಸಿ ಉತ್ತಮ ಚಿಕಿತ್ಸೆ ಕೊಡಿಸಿದರು. ಆ ಖಾಸಗಿ ವೈದ್ಯರ ಸಹಾಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಈಗ ಹೇಳಿ, ನಮ್ಮ ವ್ಯವಸ್ಥೆ ಎಲ್ಲಿ ಹಳಿ ತಪ್ಪಿದೆ ಎಂದು? ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಇಂದಿಗೂ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸಾಧ್ಯವಾಗುತ್ತಿಲ್ಲ. ಅವು ಖಾಸಗಿ ಆಸ್ಪತ್ರೆಗಳೊಂದಿಗೆ ಸ್ಪರ್ಧಿಸುವುದಂತೂ ದೂರದ ಮಾತು. ಅವುಗಳನ್ನು ಮೇಲ್ದರ್ಜೆಗೇರಿಸಿ ಉತ್ತಮ ಸೌಲಭ್ಯಗಳನ್ನು ನೀಡುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲ. ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯ ಎನ್ನುವಂತೆ ಸರ್ಕಾರಗಳೇ ಮಾಡಿಟ್ಟಿವೆ. ಇನ್ನು ಖಾಸಗಿ ಆಸ್ಪತ್ರೆಯ ಎಲ್ಲಾ ವೈದ್ಯರೂ ಕೆಟ್ಟವರು, ಹಣಪಿಪಾಸುಗಳು ಎನ್ನುವುದು ಮಾನವೀಯತೆ ಎನಿಸುವುದಿಲ್ಲ. ಸರ್ಕಾರಿ ವ್ಯವಸ್ಥೆಗೆ ರೋಸಿ ಹಲವರು ಅದರಿಂದ ಈಚೆ ಬಂದು ಖಾಸಗಿಯಾಗಿ ವೃತ್ತಿ ನಡೆಸುತ್ತಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕ್ಲಿನಿಕ್‌ಗಳನ್ನು ನಡೆಸುವ ಎಷ್ಟೋ ವೈದ್ಯರಿಗೆ ಸಾಕಷ್ಟು ಸಂಪಾದನೆಯೇ ಇಲ್ಲ. ಹಾಗೆಂದು ದೊಡ್ಡ ದೊಡ್ಡ ಆಸ್ಪತ್ರೆಗಳು, ಕಾರ್ಪೊರೇಟ್– ಹೈಟೆಕ್ ಆಸ್ಪತ್ರೆಗಳನ್ನು ನಡೆಸುವವರೆಲ್ಲರೂ ವೈದ್ಯವೃತ್ತಿಯನ್ನು ಸೇವೆಯನ್ನಾಗಿ ಉಳಿಸಿಕೊಂಡಿದ್ದಾರೆ ಎಂದು ಹೇಳುವುದೂ ತಪ್ಪಾಗುತ್ತದೆ. ಅವರಲ್ಲಿ ಅನೇಕರು ಅದನ್ನೊಂದು ವ್ಯಾಪಾರವಾಗಿ ನೋಡುತ್ತಿದ್ದಾರೆ. ಮಾತೆತ್ತಿದರೆ ಆಪರೇಷನ್, ಐಸಿಯು, ವೆಂಟಿಲೇಟರ್ ಎಂದು ಲಕ್ಷಾಂತರ ರೂಪಾಯಿ ಸುಲಿಯುತ್ತಿರುವುದೂ ಸುಳ್ಳಲ್ಲ.

ಕೆಪಿಎಂಇ ಕಾಯ್ದೆ ಎಲ್ಲ ವೈದ್ಯರಿಗೂ ಒಂದೇ ದಂಡ ಬೀಸಹೊರಟಿರುವುದು ನ್ಯಾಯವಲ್ಲ. ಆಸ್ಪತ್ರೆಯ ಸ್ವರೂಪ, ಕಟ್ಟಡ, ಅದರ ಆಡಳಿತ ಮಂಡಳಿ, ಅದರಲ್ಲಿರುವ ಸಲಕರಣೆಗಳು, ಅವುಗಳ ಆದಾಯ– ಸಾಲದ ಮೂಲ, ಅಲ್ಲಿ ನಡೆಯುತ್ತಿರುವ ವಹಿವಾಟು, ಆ ಆಸ್ಪತ್ರೆಯ ಕುರಿತ ಸಾರ್ವಜನಿಕ ಅಭಿಪ್ರಾಯ ಮೊದಲಾದ ಮಾಹಿತಿ ಸಂಗ್ರಹಿಸಿ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವುದೇ ಸರಿ! ಕೆಪಿಎಂಇಗೆ ‘ಬೇಡ ಸರ್ಜರಿ, ಸಾಕು ಪಿಚಕಾರಿ’ (ಚುಚ್ಚುಮದ್ದು!)

(ಲೇಖಕಿ ಹಾಸನದ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry