ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವೈದ್ಯರ ಮೇಲೆ ಸವಾರಿ: ದುಡುಕಿನ ನಿರ್ಧಾರ

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿನ ಖಾಸಗಿ ವೈದ್ಯರು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ಆಸ್ಪತ್ರೆಗಳನ್ನು ಮುಚ್ಚಿ ಹೊರ ರೋಗಿಗಳ ಚಿಕಿತ್ಸೆಯನ್ನೂ ಸ್ಥಗಿತಗೊಳಿಸಿದ್ದರು. ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಇರುವ ಕೆಲವು ಅಂಶಗಳ ಬಗ್ಗೆ ಅವರಿಗೆ ಆಕ್ಷೇಪ ಇದೆ; ಅದಕ್ಕಿಂತ ಹೆಚ್ಚಾಗಿ ಆತಂಕ ಇದೆ. ಅದನ್ನು ಪರಿಹರಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಮೊದಲೇ ಆಗಬೇಕಾಗಿತ್ತು. ಆದರೆ ದುರದೃಷ್ಟವಶಾತ್‌ ಆಗಿಲ್ಲ. ಕೊನೆ ಕ್ಷಣದಲ್ಲಿ ಸೋಮವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಮತ್ತು ಭಾರತೀಯ ವೈದ್ಯಕೀಯ ಸಂಘದ ಪ್ರತಿನಿಧಿಗಳ ಮಧ್ಯೆ ಮಾತುಕತೆ ನಡೆದರೂ ವಿಫಲವಾಯಿತು. ಹೀಗಾಗಿ ವೈದ್ಯರ ಪ್ರತಿಭಟನೆ ಮುಂದುವರಿದಿದೆ. ಇದರ ಪರಿಣಾಮ ಏನು ಎಂಬುದು ಎರಡೇ ದಿನಗಳಲ್ಲಿ ಗೊತ್ತಾಗತೊಡಗಿದೆ. ಸರಿಯಾದ ಚಿಕಿತ್ಸೆ ಸಿಗದೆ ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ. ಸರ್ಕಾರ– ವೈದ್ಯರ ನಡುವಿನ ಜಟಾಪಟಿ ಇಂದಲ್ಲ ನಾಳೆ ಕೊನೆಗೊಳ್ಳಬಹುದು. ಆದರೆ ಹೋದ ಜೀವ ಬರಲು ಸಾಧ್ಯವೇ?

ಮಸೂದೆಯ ಕೆಲ ಅಂಶಗಳ ವಿಷಯದಲ್ಲಿ ಸರ್ಕಾರ ದುಡುಕಿದಂತೆ ಕಾಣಿಸುತ್ತಿದೆ. ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ಸಮಿತಿಯ ಶಿಫಾರಸಿನಲ್ಲಿ ತನಗೆ ಬೇಕಾದ ಅಂಶಗಳನ್ನಷ್ಟೇ ಆರಿಸಿಕೊಂಡು ಮಸೂದೆ ಸಿದ್ಧಪಡಿಸಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಕೆಂಗಣ್ಣು ಬೀರುವ ಈ ಮಸೂದೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸದೇ ಹೊರಗಿಡುವುದು ಸರಿಯಲ್ಲ. ತಪ್ಪು ಮಾಡುವ ವೈದ್ಯರು, ಆಸ್ಪತ್ರೆಗಳು ಯಾರೇ– ಯಾವುದೇ ಇದ್ದರೂ ಕಾನೂನು ಕ್ರಮ ಎದುರಿಸಬೇಕು. ಅದರಲ್ಲಿ ಸರ್ಕಾರಿ ವೈದ್ಯರಿಗೆ ವಿನಾಯಿತಿ ಯಾಕೆ? ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ, ರೋಗಿಗಳ ಬಗ್ಗೆ ನಿರ್ಲಕ್ಷ್ಯ, ರೋಗಿಗಳನ್ನು ಪೀಡಿಸುವ ಪ್ರವೃತ್ತಿ ಏನು ಕಡಿಮೆ ಇದೆಯೇ? ಅದನ್ನು ನಿಯಂತ್ರಿಸಲು ಸರ್ಕಾರಕ್ಕೆ ಯಾಕೆ ಆಗುತ್ತಿಲ್ಲ? ಮುಖ್ಯವಾಗಿ, ಖಾಸಗಿ ವೈದ್ಯರೆಲ್ಲ ಧನದಾಹಿಗಳು ಎಂದು ಖಳನಾಯಕರಂತೆ ಚಿತ್ರಿಸುವ ಸರ್ಕಾರದ ಧೋರಣೆಯೇ ಸರಿಯಲ್ಲ.

ನಮ್ಮ ರಾಜ್ಯದಲ್ಲಿ ಆರೋಗ್ಯ ಸೇವೆಯ ಶೇ 70ರಷ್ಟನ್ನು ಖಾಸಗಿ ವೈದ್ಯಕೀಯ ವ್ಯವಸ್ಥೆಯೇ ನಿಭಾಯಿಸುತ್ತಿದೆ. ಬಹುಪಾಲು ಸರ್ಕಾರಿ ಆಸ್ಪತ್ರೆಗಳ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಕಡಿಮೆ ಇದೆ ಎನ್ನುವುದು ವಾಸ್ತವ. ಅದೂ ಹೋಗಲಿ. ನಮ್ಮ ಜನಪ್ರತಿನಿಧಿಗಳು, ಸರ್ಕಾರಿ ನೌಕರರಿಗಾದರೂ ವಿಶ್ವಾಸ ಇದೆಯಾ? ಇಲ್ಲ. ಇವರೆಲ್ಲ ಮೊದಲು ಧಾವಿಸುವುದೇ ಖಾಸಗಿ ಆಸ್ಪತ್ರೆಗಳ ಕಡೆಗೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿಜವಾಗಿಯೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎನ್ನುವುದಾದರೆ ಮಂತ್ರಿಗಳು, ಶಾಸಕರು, ಸರ್ಕಾರಿ ಸಿಬ್ಬಂದಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಕಡೆ ಯಾಕೆ ಹೋಗಬೇಕು? ಇವರೆಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಆ ವೆಚ್ಚವನ್ನು ಭರಿಸುವುದಿಲ್ಲ ಎಂಬ ದಿಟ್ಟ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಹುದಲ್ಲ!

ವೈದ್ಯಕೀಯ ವೃತ್ತಿ ಎನ್ನುವುದು ಹಣ ದೋಚುವ ದಂಧೆ ಅಲ್ಲ ಎನ್ನುವುದನ್ನು ಖಾಸಗಿ ವೈದ್ಯರೂ ಅರಿಯಬೇಕು. ತಮ್ಮ ಲೋಪ ದೋಷಗಳನ್ನು ಸರಿಮಾಡಿಕೊಳ್ಳಬೇಕು. ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಬೇಕು. ‘ರೋಗಿಯ ಜೀವ ಉಳಿಸುತ್ತೇವೆ, ನೋವು ಕಡಿಮೆ ಮಾಡುತ್ತೇವೆ’ ಎಂದು ವೃತ್ತಿಗೆ ಕಾಲಿಡುವ ಸಂದರ್ಭದಲ್ಲಿ ಪ್ರತಿಜ್ಞೆ ತೆಗೆದುಕೊಂಡು ಪ್ರತಿಭಟನೆಯ ನೆಪದಲ್ಲಿ ಚಿಕಿತ್ಸೆಯನ್ನು ನಿರಾಕರಿಸುವುದು ವೃತ್ತಿ ಧರ್ಮಕ್ಕೆ ಮಾಡುವ ಅಪಚಾರ. ಸರ್ಕಾರದ ಮೇಲಿನ ಸಿಟ್ಟನ್ನು ಅಮಾಯಕ ರೋಗಿಗಳ ಮೇಲೆ ತೀರಿಸಿಕೊಳ್ಳುವುದು ಸಮರ್ಥನೀಯ ಅಲ್ಲ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತಿದೆ. ಮಸೂದೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಒಳಗೂ ವಿರೋಧ ಇದೆ; ಪ್ರತಿಪಕ್ಷಗಳಿಗಂತೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಒಂದು ಅಸ್ತ್ರವಾಗಿದೆ. ಆದ್ದರಿಂದ ತಮ್ಮ ಬೇಡಿಕೆ ಬಗ್ಗೆ ಸಹಾನುಭೂತಿ ಇರುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಎರಡೂ ಕಡೆಯವರು ಪ್ರತಿಷ್ಠೆ ಬದಿಗಿಟ್ಟು ಬೇಗ ತೀರ್ಮಾನಕ್ಕೆ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT