7

‘ರಕ್ತಹೀನತೆ’ ಎಂಬ ಕಹಿಸತ್ಯ, ಅಭಿವೃದ್ಧಿಗೆ ‘ಮಸಿ’

Published:
Updated:
‘ರಕ್ತಹೀನತೆ’ ಎಂಬ ಕಹಿಸತ್ಯ, ಅಭಿವೃದ್ಧಿಗೆ ‘ಮಸಿ’

ಭಾರತದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚಿದೆ. 2017ರ ಜಾಗತಿಕ ಪೌಷ್ಟಿಕತೆ ವರದಿಯಿಂದ ಈ ಅಂಶ ಮತ್ತೊಮ್ಮೆ ಸ್ಪಷ್ಟವಾದಂತಾಗಿದೆ. ಅದರಲ್ಲೂ ಸಂತಾನೋತ್ಪತ್ತಿ ವಯೋಮಾನದ (15ರಿಂದ 49 ವರ್ಷ) ಗುಂಪಿಗೆ ಬರುವ ಶೇ 51ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ಆತಂಕಕಾರಿ. ಈ ವಯೋಮಾನದ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆಗೆ ರಕ್ತಹೀನತೆ ಇರುತ್ತದೆ ಎಂಬುದು ಸಣ್ಣ ಸಂಗತಿಯಲ್ಲ. ಕಳೆದ ವರ್ಷದ ವರದಿಯ ಪ್ರಕಾರ ರಾಷ್ಟ್ರದ ಶೇ 48ರಷ್ಟು ಮಹಿಳೆಯರಿಗೆ ರಕ್ತಹೀನತೆ ಇತ್ತು. ಈಗ ಈ ಪ್ರಮಾಣ ಇನ್ನಷ್ಟು ಏರಿದಂತಾಗಿದೆ.

ರಕ್ತಹೀನತೆಯ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಲಾಗದು. ರಕ್ತಹೀನತೆಯಿಂದ ಬಳಲುವ ತಾಯಿ, ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಾಳೆ. ಸತ್ತ ಮಗುವಿಗೆ ಜನ್ಮ ನೀಡುವ ಸ್ಥಿತಿಯೂ ಎದುರಾಗಬಹುದು. ಹೆರಿಗೆಯಲ್ಲಿ ಸಾಯುವ ತಾಯಂದಿರ ಪ್ರಮಾಣ ಈಗಲೂ ಭಾರತದಲ್ಲಿ ಅತಿ ಹೆಚ್ಚೇ ಇದೆ. ಈ ತಾಯಂದಿರ ಶೇ 20ರಷ್ಟಾದರೂ ಸಾವುಗಳಿಗೆ ರಕ್ತಹೀನತೆಯೇ ನೇರ ಕಾರಣವಾಗಿರುತ್ತದೆ. ಇನ್ನೂ ಶೇ 50ರಷ್ಟು ಸಾವುಗಳಿಗೆ ರಕ್ತಹೀನತೆಗೆ ಸಂಬಂಧಪಟ್ಟ ತೊಂದರೆಗಳೇ ಕಾರಣವಾಗಿರುತ್ತವೆ ಎಂಬುದು ಈ ಸಮಸ್ಯೆಯ ವ್ಯಾಪಕತೆಯನ್ನು ಸೂಚಿಸುತ್ತದೆ.

ನಮ್ಮಲ್ಲಿ ಮಹಿಳೆಯ ಕುರಿತಾದ ಯೋಜನೆಗಳಿಗೇನು ಬರವೆ? ಮಹಿಳಾ ಆರೋಗ್ಯ ಹಾಗೂ ಪೌಷ್ಟಿಕತೆಗೆ ಸಂಬಂಧಿಸಿದಂತೆ ಎಷ್ಟೆಲ್ಲಾ ಯೋಜನೆಗಳು ಜಾರಿಯಲ್ಲಿವೆ? ಹೀಗಿದ್ದೂ ಮಕ್ಕಳನ್ನು ಹೆರುವಂತಹ ವಯೋಮಾನ ವರ್ಗದಲ್ಲಿರುವ ಅರ್ಧದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಸರ್ಕಾರದ ಯೋಜನೆಗಳು, ಆರ್ಥಿಕ ಪ್ರಗತಿ, ಸರ್ಕಾರೇತರ ಸಂಸ್ಥೆಗಳ ಜಾಗೃತಿ ಕಾರ್ಯಕ್ರಮಗಳು ಏನೇನೂ ಪರಿಣಾಮ ಬೀರಲಿಲ್ಲವೆ? ಈ ಕಾರ್ಯಕ್ರಮಗಳು ಅಥವಾ ಕಾರ್ಯಕ್ರಮ ಅನುಷ್ಠಾನದಲ್ಲಿರಬಹುದಾದ ದೋಷಗಳೇನು?– ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾದ ಅಗತ್ಯ ಇದೆ.

ಅಪೌಷ್ಟಿಕತೆ ಎಂಬುದು ‘ರಾಷ್ಟ್ರೀಯ ಅವಮಾನ’ ಎಂದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕರೆದಿದ್ದರು. ಅಪೌಷ್ಟಿಕತೆ ಸಮಸ್ಯೆಗೆ ಆಹಾರ ಆಧಾರಿತ ಕಾರ್ಯಕ್ರಮಗಳ ಮೂಲಕವಷ್ಟೇ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆಯೆ? ರಕ್ತಹೀನತೆ ಸಮಸ್ಯೆಗೆ ಕಬ್ಬಿಣಾಂಶವಿರುವ ಆಹಾರ ಪೂರೈಕೆಯಾದರಷ್ಟೇ ಸಾಕೆ? ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲೂ ಈ ಸಮಸ್ಯೆಯ ಬೇರುಗಳಿರುವುದನ್ನು ನಾವು ನಿರ್ಲಕ್ಷಿಸಲಾಗದು.

ಮೊದಲೇ ಹೆಣ್ಣು ಹುಟ್ಟುವುದು ಬೇಡ ಎಂದು ಆಶಿಸುವ ಸಮಾಜ ನಮ್ಮದು. ಇತ್ತೀಚೆಗಷ್ಟೇ ಕಲಬುರ್ಗಿಯ 82 ವರ್ಷದ ಶರಣಬಸಪ್ಪ ಅಪ್ಪ ಅವರ ಎರಡನೇ ಪತ್ನಿಗೆ ಗಂಡುಮಗು ಜನಿಸಿದ ವಿಚಾರವನ್ನು ಸಂಭ್ರಮಿಸಿದ ರೀತಿ ಏನನ್ನು ಹೇಳುತ್ತದೆ? ಗಂಡು ಸಂತಾನ ಬಯಸುವವರಿಗಾಗಿ ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಪ್ರಚಾರ ಮಾಡುತ್ತಿದ್ದ ಪುತ್ರ ಜೀವಕ್ ಬೀಜ್ (ಗಂಡು ಸಂತಾನ ಗುಳಿಗೆ) ವಿವಾದವಾಗಿದ್ದನ್ನು ಸ್ಮರಿಸಬಹುದು. ವಂಶೋದ್ಧಾರಕ ಹುಟ್ಟದಿದ್ದರೆ ಜನ್ಮ ಸಾರ್ಥಕವಾಗದೆಂದು ಭಾವಿಸುವ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಕುಟುಂಬದಲ್ಲಿ ಸಿಗುವ ಪೋಷಣೆ ಎಂತಹದಿರುತ್ತದೆ ಎಂಬುದನ್ನು ಊಹಿಸಬಹುದು. ಕುಟುಂಬದೊಳಗೆ ಗಂಡು– ಹೆಣ್ಣುಮಕ್ಕಳ ಮಧ್ಯೆ ಮಾಡುವ ತಾರತಮ್ಯದ ವಿಚಾರಗಳು ಸಾಕಷ್ಟು ಬಾರಿ ಚರ್ಚೆಯಾಗುತ್ತಲೇ ಇವೆ. ಹುಷಾರು ತಪ್ಪಿದಾಗ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಚಾರ ಇರಬಹುದು, ಒಳ್ಳೆಯ ಶಾಲೆಗೆ ಸೇರಿಸುವ ವಿಚಾರ ಇರಬಹುದು... ಇಲ್ಲೆಲ್ಲಾ ತಾರತಮ್ಯಗಳು ಎದ್ದುಕಾಣುತ್ತಿರುತ್ತವೆ. ‘ಹಾಲು, ಮೊಸರು, ತುಪ್ಪವೆಲ್ಲಾ... ಕುಲದೀಪಕನಾಗಿ ಬೆಳೆಯಬೇಕಾದ ಗಂಡುಮಕ್ಕಳಿಗೆ’, ‘ಹೆಣ್ಣುಮಕ್ಕಳೇನು... ತಿಪ್ಪೆ ಬೆಳೆದಂಗೆ ಬೆಳೆದುಬಿಡುತ್ತಾರೆ’ ಎಂಬಂತಹ ಮಾತುಗಳು ಇದಕ್ಕೆ ಸಾಕ್ಷಿ.

ಅನೇಕ ಮನೆಗಳಲ್ಲಿ ಈಗಲೂ ಹೆಣ್ಣುಮಕ್ಕಳು ಊಟ ಮಾಡುವುದು, ಮನೆಯ ಪುರುಷರ ಊಟವಾದ ನಂತರವೇ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಪದ್ಧತಿ ಇದು. ಎಷ್ಟು ಆಹಾರ ಉಳಿದಿರುತ್ತದೋ ಅಷ್ಟನ್ನೇ ತಿನ್ನುವುದು ಹೆಣ್ಣಿಗೆ ಮಾಮೂಲು. ಕೆಲವೊಮ್ಮೆ ಅದು ಹೊಟ್ಟೆ ತುಂಬಾ ಊಟವೂ ಆಗದಿರಬಹುದು. ಇಂತಹ ಸಂಪ್ರದಾಯಗಳೂ ಹೆಣ್ಣುಮಕ್ಕಳಲ್ಲಿನ ರಕ್ತಹೀನತೆ, ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಸುವುದು ಹೇಗೆ?

ಹೆಣ್ಣಿನ ಕುರಿತಾಗಿ ಬೇರೂರಿರುವ ಸಂಪ್ರದಾಯಗಳನ್ನು ಜಗ್ಗುವುದು ಅಷ್ಟು ಸುಲಭವಲ್ಲ. ಇತ್ತೀಚೆಗೆ ರಾಜಸ್ಥಾನದ ಶಿಕ್ಷಣ ಇಲಾಖೆ ಮಾಡಿದ ಎಡವಟ್ಟು ಗಮನಿಸಬಹುದು. ಈ ಇಲಾಖೆ ಶಾಲಾ ಶಿಕ್ಷಕರಿಗೆಂದೇ ‘ಶಿವಿರಾ’ ಮಾಸಪತ್ರಿಕೆ ಪ್ರಕಟಿಸುತ್ತದೆ. ಶಿಕ್ಷಣ, ಸಾಧಕರು ಅಥವಾ ಸಾಮಾನ್ಯ ಆಸಕ್ತಿಯ ವಿಚಾರಗಳ ಕುರಿತಾದ ಲೇಖನಗಳು ಇಲ್ಲಿರುತ್ತವೆ. 52 ಪುಟಗಳ ನವೆಂಬರ್ ತಿಂಗಳ ಸಂಚಿಕೆಯಲ್ಲಿ ಹಲವು ಲೇಖನಗಳ ಜೊತೆಗೆ ‘ಸ್ವಸ್ಥ್ ರಹನೇ ಕೆ ಸರಳ್ ಉಪಾಯ್’ ಎಂಬ ಶೀರ್ಷಿಕೆ ಅಡಿ ಆರೋಗ್ಯ ಕಾಪಾಡಿಕೊಳ್ಳಲು 14 ಸಲಹೆಗಳನ್ನು ನೀಡಲಾಗಿದೆ. ಬೆಳಗಿನ ವಾಯುವಿಹಾರ, ಓಟ, ಸೈಕ್ಲಿಂಗ್, ಕುದುರೆ ಸವಾರಿ, ಈಜು ಅಥವಾ ಯಾವುದೇ ಬಗೆಯ ಆಟ ಆರೋಗ್ಯಕ್ಕೆ ಒಳ್ಳೆಯದು ಎಂಬಂಥ ಸಲಹೆಗಳು ಇಲ್ಲಿವೆ. ಇವು ಸರಿಯಾದದ್ದೇ. ಆದರೆ, ಇದರ ಜೊತೆಗೇ ರುಬ್ಬುವುದು, ನೀರು ತುಂಬಿಸುವುದು, ಮನೆ ಗುಡಿಸಿ ಒರೆಸುವಂತಹ ಮನೆಗೆಲಸಗಳು ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಗೆ ಸಹಕಾರಿ ಎಂದೂ ಹೇಳಲಾಗಿದೆ.

ಹೆಣ್ಣಿನ ಕುರಿತಾಗಿ ಇರುವ ಪಡಿಯಚ್ಚಿನ ಪಾತ್ರಗಳನ್ನೇ ಮತ್ತೆ ಶಿಕ್ಷಣ ಇಲಾಖೆ ಪುಷ್ಟೀಕರಿಸಲು ಹೊರಟಿದ್ದು ಸಹಜವಾಗಿಯೇ ಟೀಕೆಗೊಳಗಾಗಿದೆ. ಮನೆಗೆಲಸವೇ ಹೆಣ್ಣಿನ ಮುಖ್ಯ ಕೆಲಸ ಎಂಬಂಥ ಮೌಲ್ಯವನ್ನು ಬಿತ್ತಿ ಬೆಳೆಸುವ ಪಾಠಗಳು ಪಠ್ಯಪುಸ್ತಕಗಳಲ್ಲಿ ಇರಬಾರದು ಎಂಬಂಥ ಚರ್ಚೆ ಶುರುವಾಗಿ ಯಾವುದೋ ಕಾಲವಾಗಿದೆ. ಶಿಕ್ಷಣ ಇಲಾಖೆಯ ವಿವಿಧ ಮಜಲುಗಳಲ್ಲಿ ಲಿಂಗ ವ್ಯವಸ್ಥೆಯ ನ್ಯಾಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳೂ ಆರಂಭವಾಗಿ ಈಗಾಗಲೇ ಎಷ್ಟೋ ಕಾಲವಾಗಿದೆ. ಸಮಾಜದಲ್ಲಿ ಲಿಂಗ ವ್ಯವಸ್ಥೆಯ ನ್ಯಾಯವ್ಯವಸ್ಥೆಯನ್ನು ರೂಢಿಸಲು ಮೊದಲಿಗೆ ಶಿಕ್ಷಣ ಕ್ಷೇತ್ರದಲ್ಲೇ ಮೂಡಬೇಕಾದ ಜಾಗೃತಿ ಬಹಳ ಮುಖ್ಯವಾದದ್ದು ಎಂಬುದು ಇಲ್ಲಿರುವ ಆಶಯ. ಆದರೆ ಮಹಿಳಾ ಮುಖ್ಯಮಂತ್ರಿ (ವಸುಂಧರಾ ರಾಜೇ) ನೇತೃತ್ವದ ಸರ್ಕಾರದಡಿ ಕೆಲಸ ಮಾಡುವ ಶಿಕ್ಷಣ ಇಲಾಖೆಗೆ ಇದು ನೆನಪಾಗಲಿಲ್ಲವೆ? ಎಂಬುದು ಅಚ್ಚರಿಯ ಸಂಗತಿ.

‘ನಿರ್ದಿಷ್ಟವಾಗಿ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಮನೆಗೆಲಸಗಳನ್ನು ಮಹಿಳೆಯರಿಗೆ ಸೂಚಿಸಿದ ರೀತಿ ಸರಿಯಲ್ಲ’ ಎಂದು ಈಗ ಸೆಕೆಂಡರಿ ಶಿಕ್ಷಣ ನಿರ್ದೇಶಕ ಹಾಗೂ ಮ್ಯಾಗಝೀನ್ ಮುಖ್ಯ ಸಂಪಾದಕ ಒಪ್ಪಿಕೊಂಡಿದ್ದಾರೆ. ಆದರೆ ‘ನಮ್ಮ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಹೀಗೇ ನಡೆದುಬಂದಿದೆ. ಬಹುಶಃ ಆ ಪ್ರಭಾವಕ್ಕೆ ಲೇಖಕ ಒಳಗಾಗಿರಬಹುದು. ಆದರೆ ಇದರ ಹಿಂದೆ ತಾರತಮ್ಯ ಉದ್ದೇಶ ಇಲ್ಲ ಎಂದು ಸ್ಪಷ್ಟ ಪಡಿಸುತ್ತೇನೆ ’ ಎಂದೂ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ಸ್ಪಷ್ಟೀಕರಣಗಳಾಚೆ ಬದಲಾಗದ ಮನಸ್ಥಿತಿಗಳಿರುವುದು ಕಟುವಾಸ್ತವ.

ಮಹಾರಾಷ್ಟ್ರದಲ್ಲಿ ಆಯುರ್ವೇದ ಪದವಿಯ (ಬಿಎಂಎಸ್) ಪಠ್ಯದಲ್ಲಿ ‘ಗಂಡು ಮಗುವಿಗೆ ಜನ್ಮ ನೀಡುವುದು ಹೇಗೆ’ ಎಂಬಂಥ ಪಾಠ ಸೇರ್ಪಡೆಯಾಗಿದ್ದ ವಿಚಾರವೂ ವಿವಾದವಾಗಿತ್ತು. ಪದವಿಯ ಮೂರನೇ ವರ್ಷದ ಪಠ್ಯದಲ್ಲಿ ಗಂಡು ಮಗು ಪಡೆಯಲು ಮಹಿಳೆಯರು ಅನುಸರಿಸಬೇಕಾದ ಕ್ರಮಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಗರ್ಭಧಾರಣೆ ಪೂರ್ವ ಹಾಗೂ ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ಬಳಕೆ ನಿಯಂತ್ರಣ (ಪಿಸಿ ಅಂಡ್ ಪಿಎನ್‌ಡಿಟಿ ) ಕಾಯ್ದೆಯ ಜಿಲ್ಲಾ ಮೇಲ್ವಿಚಾರಣೆ ಮಂಡಳಿಯ ಸದಸ್ಯ ಗಣೇಶ್‌ ಬೊರ್ಹಾಡೆ ಅವರು ಈ ಪಠ್ಯದ ಬಗ್ಗೆ ದೂರು ನೀಡಿದ ನಂತರವಷ್ಟೇ ಈ ವಿಚಾರ ಈ ವರ್ಷ ಮೇ ತಿಂಗಳಲ್ಲಿ ಬೆಳಕಿಗೆ ಬಂದಿತ್ತು.

ಹಾಗೆಯೇ ಇದೇ ವರ್ಷ ಜೂನ್ 21ರ ‘ಯೋಗ ದಿನ’ ಆಚರಣೆಗೆ ಮುಂಚೆಯೇ, ಆಯುಷ್ ಸಚಿವಾಲಯದ ವ್ಯಾಪ್ತಿಗೆ ಬರುವ ಯೋಗ ಹಾಗೂ ಪ್ರಕೃತಿಚಿಕಿತ್ಸೆ ಸಂಶೋಧನೆ ಕೇಂದ್ರೀಯ ಮಂಡಳಿ ಪ್ರಕಟಿಸಿದ್ದ ‘ತಾಯಿ ಮತ್ತು ಮಗು ಪೋಷಣೆ’ ಕುರಿತಾದ ಪುಸ್ತಕವೂ ವಿವಾದಕ್ಕೊಳಗಾಗಿದ್ದನ್ನು ನೆನಪಿಸಿಕೊಳ್ಳಬಹುದು. ‘ಮಾಂಸ ತಿನ್ನಬೇಡಿ, ಕೆಟ್ಟ ಸಹವಾಸ ಬೇಡ, ಆಧ್ಯಾತ್ಮಿಕ ಚಿಂತನೆಗಳಿರಲಿ, ಆರೋಗ್ಯವಂತ ಶಿಶುವಿನ ಚಿತ್ರ ನಿಮ್ಮ ಕೋಣೆಯಲ್ಲಿರಲಿ...’ ಮುಂತಾದ ಸಲಹೆಗಳನ್ನು ಗರ್ಭಿಣಿಯರಿಗೆ ಈ ಪುಸ್ತಕದಲ್ಲಿ ನೀಡಲಾಗಿತ್ತು. ಹೇರಳ ಕಬ್ಬಿಣಾಂಶ ಹಾಗೂ ಪ್ರೊಟೀನ್ ಆಗರಗಳಾದ ಮಾಂಸಾಹಾರ ಮತ್ತು ಮೊಟ್ಟೆ ಸೇವನೆ ಬಿಡಬೇಕೆನ್ನುವುದು ವೈಜ್ಞಾನಿಕವಾಗಿ ಎಷ್ಟು ಸರಿ? ಅದೂ ರಕ್ತಹೀನತೆಯಿಂದ ಮಹಿಳೆಯರು ಬಳಲುತ್ತಿರುವ ರಾಷ್ಟ್ರದಲ್ಲಿ...!

ರಾಷ್ಟ್ರದ ನಮ್ಮ ನೀತಿ ನಿರೂಪಕರು ಜಾತಿ ಹಾಗೂ ಧರ್ಮ ರಾಜಕಾರಣದ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ. ಎಂಬುದು ಮೇಲಿನ ಉದಾಹರಣೆಗಳಿಂದ ವ್ಯಕ್ತ. ಇಂತಹದೊಂದು ರಾಜಕಾರಣದಲ್ಲಿ ಅಭಿವೃದ್ಧಿ ಗುರಿಗಳ ಸಾಧನೆ ಕಾಟಾಚಾರದ ಕ್ರಿಯೆಯಾಗುತ್ತಿರುವುದು ಸ್ಪಷ್ಟ. ಈ ಕಸರತ್ತುಗಳ ಮಧ್ಯೆ ಜನರ ಆರೋಗ್ಯದ ಬಗ್ಗೆ ಗಮನ ಹರಿಸದಿರುವುದು ಕಳವಳಕಾರಿ.

ರಕ್ತಹೀನತೆ ಎಂಬುದು ಗಂಭೀರವಾದ ಆರೋಗ್ಯ ಸಮಸ್ಯೆ ಎಂಬುದನ್ನು ಸರ್ಕಾರ ತೀವ್ರವಾಗಿ ಪರಿಗಣಿಸಬೇಕಿದೆ. ಅಪೌಷ್ಟಿಕತೆಯನ್ನು ಅದರ ಎಲ್ಲಾ ಸ್ವರೂಪಗಳಲ್ಲಿ ನಿರ್ವಹಿಸಬೇಕಿರುವುದು ಸದ್ಯದ ತುರ್ತು. ಅಪೌಷ್ಟಿಕತೆ ನಿವಾರಣೆಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ 2030ರ ಒಳಗೆ ಸುಸ್ಥಿರ ಅಭಿವೃದ್ಧಿಯ ಜಾಗತಿಕ ಗುರಿಯನ್ನು ನಾವು ತಲುಪುವುದು ಅಸಾಧ್ಯ. ಹೀಗಾಗಿ, ಬಡತನ ನಿವಾರಣೆ, ಕಾಯಿಲೆಗಳು, ಶಿಕ್ಷಣ ಮಟ್ಟ ಹೆಚ್ಚಳ ಹಾಗೂ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಗಳಲ್ಲಿ ಪೌಷ್ಟಿಕ ಆಹಾರ ವಿಚಾರ ಕೇಂದ್ರಬಿಂದುವಾಗಿರಬೇಕಾದುದು ಅವಶ್ಯ.

ಗುಜರಾತ್ ವಿಧಾನಸಭೆ ಚುನಾವಣೆ ಸನಿಹದಲ್ಲಿದೆ. ನಾವು ಗಮನಿಸುತ್ತಿರುವ ಹಾಗೆ ವಿವಿಧ ಬಣಗಳ ರಾಜಕೀಯ ಅಥವಾ ಆರ್ಥಿಕ ಅಭಿವೃದ್ಧಿ ವಿಚಾರಗಳೇ ಚುನಾವಣೆ ಪ್ರಚಾರಗಳಲ್ಲಿ ಮೇಲುಗೈ ಸಾಧಿಸುತ್ತವೆ. ಅಪೌಷ್ಟಿಕತೆಯಂತಹ ವಿಚಾರಗಳು ಹೆಚ್ಚು ಮಹತ್ವ ಪಡೆಯುವುದಿಲ್ಲ. 2012ರಲ್ಲಿ ಆಗಿನ್ನೂ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ‘ವಾಲ್‌ ಸ್ಟ್ರೀಟ್ ಜರ್ನಲ್‌’ಗೆ ನೀಡಿದ್ದ ಸಂದರ್ಶನದಲ್ಲಿ ಅಪೌಷ್ಟಿಕತೆ ಕುರುತು ಹೇಳಿದ್ದ ಮಾತುಗಳು ವಿವಾದವಾಗಿದ್ದವು. ಮಹಿಳೆಯರ ಸೌಂದರ್ಯ ಪ್ರಜ್ಞೆ ಕುರಿತಾದ ಕಾಳಜಿಯೇ ರಕ್ತಹೀನತೆಯಿಂದ ಬಳಲುವ ಮಹಿಳೆಯರ ಪ್ರಮಾಣ ಗುಜರಾತ್‌ನಲ್ಲಿ ಜಾಸ್ತಿ ಇರುವುದಕ್ಕೆ ಕಾರಣ ಎಂದು ಮೋದಿ ವ್ಯಾಖ್ಯಾನಿಸಿದ್ದರು. ಹೀಗೆ ಮಹಿಳೆಗೆ ಸಂಬಂಧಿಸಿದ ಗಂಭೀರವಾದ ವಿಚಾರಗಳೂ ಲಘು ಧಾಟಿಯ ಮಾತುಗಳಲ್ಲಿ ತೇಲಿ ಹೋಗಿಬಿಡುವುದು ಈಗಲೂ ಮುಂದುವರಿದೇ ಇದೆ.

ಆದರೆ ಹೆಣ್ಣುಮಕ್ಕಳು ತೆಳ್ಳಗೆ ಬೆಳ್ಳಗೆ ಇರಬೇಕೆಂಬ ಸೌಂದರ್ಯ ಪ್ರಜ್ಞೆ ಸೃಷ್ಟಿಯ ಹಿಂದೆಯೂ ಇರುವ ಲಿಂಗತ್ವ ಪೂರ್ವಗ್ರಹಗಳನ್ನು ಹೆಣ್ಣುಮಕ್ಕಳು ಮೆಟ್ಟಿನಿಲ್ಲಬೇಕಾದ ಅಗತ್ಯವನ್ನು ನಮ್ಮ ಸಾಮಾಜಿಕ ಅಥವಾ ಸಾಂಸ್ಕೃತಿಕ ಪರಿಸರ ಕಟ್ಟಿಕೊಡುತ್ತಿಲ್ಲ.

ಐದು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿನ ಕುಠಿತ ಬೆಳವಣಿಗೆ ಸಮಸ್ಯೆ ಪರಿಶೀಲಿಸುವಲ್ಲಿ ಭಾರತ ಒಂದಿಷ್ಟು ಪ್ರಗತಿ ಸಾಧಿಸಿದೆ. ಆದರೆ ರಕ್ತಹೀನ ಮಹಿಳೆಯರ ಸಮಸ್ಯೆ ನಿರ್ವಹಿಸುವಲ್ಲಿ ಈಗಲೂ ಭಾರತ ಹಿಂದುಳಿದಿದೆ ಎಂಬುದು ಎಚ್ಚರಿಕೆ ಗಂಟೆಯಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry