ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್ ಮೂಲಕ ನೀರು ಚಿಮುಕಿಸಲು ತೀರ್ಮಾನ

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದಟ್ಟ ಹೊಗೆ, ಮಂಜು ಮತ್ತು ವಾಯುಮಾಲಿನ್ಯದಿಂದಾಗಿ ಬಿಗಡಾಯಿಸಿರುವ ದೆಹಲಿಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು  ರಾಜಧಾನಿಯ ಮೇಲೆ ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್‌ ಮೂಲಕ ನೀರು ಚಿಮುಕಿಸುವ ತಂತ್ರಕ್ಕೆ ಸರ್ಕಾರ ಮೊರೆ ಹೋಗಿದೆ.

ಮಾಲಿನ್ಯಕ್ಕೆ ಪ್ರಮುಖ ಕಾರಣವಾದ ದೂಳಿನ ಕಣಗಳನ್ನು ನಿಯಂತ್ರಿಸಲು ಎಎಪಿಯ ದೆಹಲಿ ಸರ್ಕಾರ ಈಗಾಗಲೇ ಪವನ ಹನ್ಸ್‌ ಖಾಸಗಿ ವಿಮಾನಯಾನ ಸಂಸ್ಥೆಯ ಜತೆ ಮಾತುಕತೆ ನಡೆಸಿದೆ.

ನೀರು ಚಿಮುಕಿಸುವ ಸಾಧ್ಯತೆಗಳ ಬಗ್ಗೆ ಕೇಂದ್ರದ ವಿವಿಧ ಇಲಾಖೆ ಮತ್ತು ಪವನ ಹನ್ಸ್‌ ಸಂಸ್ಥೆಯ ಜತೆ ಮಾತುಕತೆ ನಡೆಸಿರುವುದಾಗಿ ಪರಿಸರ  ಸಚಿವ ಇಮ್ರಾನ್‌ ಹುಸೇನ್‌ ಟ್ವೀಟ್‌ ಮಾಡಿದ್ದಾರೆ.

ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ತನಗಿದೆ ಎಂದು ಪವನ ಹನ್ಸ್‌ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

ದೆಹಲಿ ಮಾಲಿನ್ಯ ನಿಯಂತ್ರಣ ಮತ್ತು ದೂಳು ಕಡಿಮೆ ಮಾಡಲು ಹೆಲಿಕಾಪ್ಟರ್‌ ಅಥವಾ ವಿಮಾನದ ಮೂಲಕ ಕೃತಕ ಮಳೆ ಅಥವಾ ಮೋಡ ಬಿತ್ತನೆಗೆ ಏಕೆ ಪ್ರಯತ್ನಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಇತ್ತೀಚೆಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿತ್ತು.

ಕಟ್ಟಡ ನಿರ್ಮಾಣ ಕಾಮಗಾರಿ, ಇಟ್ಟಿಗೆ ಭಟ್ಟಿಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ನಗರದೊಳಗೆ ಲಾರಿ ಹಾಗೂ ಇನ್ನಿತರ ಭಾರಿ ವಾಹನಗಳ ಪ್ರವೇಶ ನಿಷೇಧಿಸಿದೆ. ಆದರೂ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ಒಂದು ವಾರದಿಂದ ದಟ್ಟವಾದ ಹೊಗೆ, ಮಂಜು ಹಾಗೂ ಮಾಲಿನ್ಯದಿಂದ ದೆಹಲಿ ತತ್ತರಿಸಿದೆ. ಜನರು ಕಣ್ಣುರಿ, ಉಸಿರಾಟ ತೊಂದರೆ, ಚರ್ಮ ತುರಿಕೆಯಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

**

ಸುಧಾರಿಸದ ದೆಹಲಿ ಸ್ಥಿತಿ

ನವದೆಹಲಿ: ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ಮಂಗಳವಾರವೂ ಯಥಾರೀತಿ ಮುಂದುವರಿದಿದ್ದು, ಯಾವುದೇ ಸುಧಾರಣೆ ಕಂಡು ಬಂದಿಲ್ಲ.

ಕನಿಷ್ಠ ತಾಪಮಾನ 14.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಬುಧವಾರ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಇದರಿಂದ ಮಂಜು ಹೆಚ್ಚಾಗಲಿದ್ದು, ಹೊಗೆ ನಿಯಂತ್ರಣಕ್ಕೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

(ದೆಹಲಿ ಮಹಾನಗರ ಪಾಲಿಕೆ ಸಿಬ್ಬಂದಿ ದೂಳನ್ನು ನಿಯಂತ್ರಿಸಲು ಮಂಗಳವಾರ ನೀರು ಸಿಂಪಡಿಸಿದರು.)

10 ರೈಲು ಸಂಚಾರ ರದ್ದು

ಮಂದ ಬೆಳಕಿನಿಂದಾಗಿ ರೈಲ್ವೆ ಇಲಾಖೆ ಹತ್ತು ರೈಲುಗಳ ಸಂಚಾರ ರದ್ದು ಮಾಡಿದೆ. 73 ರೈಲುಗಳು ತಡವಾಗಿ ಸಂಚರಿಸಿದ್ದು, 34 ರೈಲುಗಳ ಸಮಯ ಬದಲಾಯಿಸಲಾಗಿದೆ.

ಮಂದ ಬೆಳಕಿನಿಂದಾಗಿ ಹಗಲು ಹೊತ್ತಿನಲ್ಲಿ ವಾಹನ ಚಾಲನೆ ಮಾಡುವುದು ಕಷ್ಟವಾಗಿದೆ. ವಿಮಾನ ಸಂಚಾರವೂ ವ್ಯತ್ಯಯವಾಗಿದೆ.

**

ಮ್ಯಾರಾಥಾನ್‌ ಮುಂದೂಡಲು ಮನವಿ

ಸುರಕ್ಷತೆ ದೃಷ್ಟಿಯಿಂದ ರಾಜಧಾನಿಯಲ್ಲಿ ಆಯೋಜಿಸಿರುವ ‘ದೆಹಲಿ ಹಾಫ್‌ ಮ್ಯಾರಥಾನ್‌’ ಮುಂದೂಡಲು ನಿರ್ದೇಶನ ನೀಡುವಂತೆ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ದೆಹಲಿಯಲ್ಲಿನ ಮಂದ ಬೆಳಕು ಮತ್ತು ವಾಯು ಮಾಲಿನ್ಯವು ಮ್ಯಾರಥಾನ್‌ ಸುರಕ್ಷತೆಗೆ ಸೂಕ್ತವಲ್ಲ ಎಂದು ಐಎಂಎ ಹೇಳಿದೆ.

ದೆಹಲಿ ಸರ್ಕಾರ, ಪೊಲೀಸರು ಮತ್ತು ಆಯೋಜಕರಿಗೆ ನೋಟಿಸ್ ನೀಡಿರುವ ಹೈಕೋರ್ಟ್‌,  ಇದೇ 16ರಂದು ವಿವರಣೆ ನೀಡುವಂತೆ ಸೂಚಿಸಿದೆ. ಇದೇ 19ರಂದು ದೆಹಲಿ ಹಾಫ್‌ ಮ್ಯಾರಥಾನ್‌ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT