ಸೋಮವಾರ, ಮಾರ್ಚ್ 8, 2021
24 °C
ಮೂರು ತಿಂಗಳ ಗಡುವು: ಪಾಲಿಸದ ಸಂಸ್ಥೆಗಳಿಗೆ ಬೀಗ ಹಾಕಲು ನಿರ್ಧಾರ

ಹೋಟೆಲುಗಳಿಗೆ ಪರವಾನಗಿ ಕಡ್ಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಹೋಟೆಲುಗಳಿಗೆ ಪರವಾನಗಿ ಕಡ್ಡಾಯ

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಹೋಟೆಲುಗಳು ಮತ್ತು ರೆಸ್ಟೋರೆಂಟುಗಳಿಗೆ ಪರವಾನಗಿ ಪಡೆದುಕೊಳ್ಳಲು ಮೂರು ತಿಂಗಳ ಗಡುವನ್ನು ಎಫ್‌ಎಸ್‌ಎಸ್‌ಐ ನೀಡಿದೆ. ಈ ಅವಧಿಯಲ್ಲಿ ಪರವಾನಗಿ ಪಡೆದುಕೊಳ್ಳದ ಹೋಟೆಲುಗಳು ಮತ್ತು ರೆಸ್ಟೋರೆಂಟುಗಳನ್ನು ಮುಚ್ಚಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದೆ.

‘ದೇಶದಲ್ಲಿರುವ ಶೇ 30–40ರಷ್ಟು ಹೋಟೆಲುಗಳು ಮತ್ತು ರೆಸ್ಟೋರೆಂಟುಗಳಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲ. ಇದು ಸ್ವೀಕಾರಾರ್ಹವೇ’ ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ಹವಣಾಧಿಕಾರಿ ಪವನ್‌ ಕುಮಾರ್‌ ಅಗರ್‌ವಾಲ್‌ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಾಗಾಗಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗುವುದು. ಗಡುವಿನ ಬಳಿಕವೂ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದುಕೊಳ್ಳದ ಹೋಟೆಲು ಮತ್ತು ರೆಸ್ಟೋರೆಂಟ್‌ಗಳನ್ನು ರಾಜ್ಯ ಸರ್ಕಾರಗಳು ಮುಚ್ಚಿಸಬೇಕು ಎಂದು ಅಗರ್‌ವಾಲ್‌ ಹೇಳಿದ್ದಾರೆ.

ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮೂರು ತಿಂಗಳಲ್ಲಿ ಎಲ್ಲ ಹೋಟೆಲುಗಳು ಮತ್ತು ರೆಸ್ಟೋರೆಂಟ್‌ಗಳು ಪರವಾನಗಿ ಪಡೆಯಲೇಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‍ಪೂರೈಸುವ ಆಹಾರಕ್ಕೆ ಹಣ ಪಡೆಯುವುದಿಲ್ಲ ಎಂದಾದರೂ ಆಹಾರ ಪೂರೈಸುವವರು ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಅನ್ನದಾನ ನಡೆಸುತ್ತಿರುವ ದೇವಸ್ಥಾನಗಳೂ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆಯಬೇಕು ಅಥವಾ ನೋಂದಣಿ ಮಾಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ಬೇರೆ ಆಯ್ಕೆಯೇ ಇಲ್ಲ ಎಂದು ಅಗರ್‌ವಾಲ್‌ ಹೇಳಿದ್ದಾರೆ.

ಪರವಾನಗಿ ಪಡೆದುಕೊಳ್ಳುವುದರ ಜತೆಗೆ, ಆಹಾರ ಸುರಕ್ಷತೆ ನಿರ್ವಹಣಾ ಯೋಜನೆ ಸಲ್ಲಿಕೆಯಂತಹ ಇತರ ನಿಯಮಗಳನ್ನೂ ಪಾಲಿಸಬೇಕು.

ಅನ್ನುದಾನಕ್ಕೂ ಅನುಮತಿ

* ಉಚಿತವಾಗಿ ಆಹಾರ ಪೂರೈಸುವ ಸ್ಥಳಗಳಿಗೂ ಅನ್ವಯ (ಧಾರ್ಮಿಕ ಸ್ಥಳಗಳೂ ಇದರಲ್ಲಿ ಸೇರುತ್ತವೆ)

* ಸಣ್ಣ ಮಟ್ಟದಲ್ಲಿ ಆಹಾರ ತಯಾರಿಸುವವರು, ಚಿಲ್ಲರೆ ಮಾರಾಟಗಾರರು ಮತ್ತು ತಿರುಗಾಡಿ ವ್ಯಾಪಾರ ಮಾಡುವವರಿಗೆ ವಿನಾಯಿತಿ

* ಪರವಾನಗಿ ಪಡೆಯುವುದು ಕಡ್ಡಾಯ ಎಂಬ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಗಳಿಗೆ ಸಲಹೆ

* ಆಹಾರ ಪೂರೈಸುವ ಸ್ಥಳಿಗಳಿಗೆ ‘ನಿರ್ಮಲ’ ಮತ್ತು ‘ಅತಿ ನಿರ್ಮಲ’ ಎಂಬ ಎರಡು ಶ್ರೇಣಿ ನೀಡಲು ನಿರ್ಧಾರ. ಶೀಘ್ರ ಜಾರಿ

**

ಕಾಯ್ದೆ ಏನನ್ನುತ್ತದೆ?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ, ಪರವಾನಗಿ ಇಲ್ಲದೆ ಯಾವುದೇ ವ್ಯಕ್ತಿ ಆಹಾರ ತಯಾರಿ ಅಥವಾ ಪೂರೈಕೆ ಉದ್ಯಮ ಮಾಡುವಂತಿಲ್ಲ. 

ಲಾಭದ ಉದ್ದೇಶ ಹೊಂದಿರುವ ವ್ಯಾಪಾರ ಅಥವಾ ಲಾಭರಹಿತ ಆಹಾರ ಪೂರೈಕೆ, ಸಾರ್ವಜನಿಕ ಅಥವಾ ಖಾಸಗಿ ಎಲ್ಲವೂ ಕಾಯ್ದೆಯ ವ್ಯಾಪ್ತಿಯಲ್ಲಿ ಸೇರುತ್ತವೆ. ಆಹಾರ ತಯಾರಿಯ ಎಲ್ಲ ಹಂತಗಳೂ ಇದರಲ್ಲಿ ಒಳಗೊಂಡಿವೆ. ಆಹಾರ ಸಂಸ್ಕರಣೆ, ಪ್ಯಾಕ್‌ ಮಾಡುವುದು, ಸಂಗ್ರಹಿಸಿ ಇರಿಸುವುದು, ಸಾಗಾಟ, ವಿತರಣೆ, ಆಮದು, ಕೇಟರಿಂಗ್‌ ಸೇವೆ, ಆಹಾರ ಅಥವಾ ಅದಕ್ಕೆ ಸಂಬಂಧಿಸಿದ ಪದಾರ್ಥಗಳ ಮಾರಾಟ ಎಲ್ಲವೂ ಈ ವ್ಯಾಪ್ತಿಗೆ ಬರುತ್ತವೆ.

**

ಮೇಲ್ವಿಚಾರಕನ ನೇಮಕ ಕಡ್ಡಾಯ

ಆಹಾರ ಉದ್ಯಮದಲ್ಲಿ ತೊಡಗಿರುವ ಪ್ರತಿಯೊಂದು ಸಂಸ್ಥೆಯೂ ಕನಿಷ್ಠ ಒಬ್ಬ ಆಹಾರ ಸುರಕ್ಷತಾ ಮೇಲ್ವಿಚಾರಕನನ್ನು ನೇಮಿಸುವುದನ್ನು ಶೀಘ್ರವೇ ಕಡ್ಡಾಯಗೊಳಿಸಲಾಗುವುದು. ಹೀಗೆ ನೇಮಕಗೊಳ್ಳುವ ವ್ಯಕ್ತಿ ಎಫ್‌ಎಸ್‌ಎಸ್‌ಎಐ ಪಠ್ಯಕ್ರಮದಲ್ಲಿ ತರಬೇತಿ ಮತ್ತು ಪ್ರಮಾಣಪತ್ರ ಪಡೆದಿರಬೇಕು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.

**

ಏನೇನಿರಬೇಕು:

* ಪರವಾನಗಿಯನ್ನು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಪ್ರದರ್ಶಿಸಬೇಕು

* ಗ್ರಾಹಕ ಸೇವೆಯ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸಬೇಕು

* ಸ್ಥಳೀಯ ಆಹಾರ ನಿರೀಕ್ಷಕರ ದೂರವಾಣಿ ಸಂಖ್ಯೆಯನ್ನೂ ಅಲ್ಲಿ ‍ಪ್ರಕಟಿಸಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.