ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ನಗರದಲ್ಲಿ ‘ಕೃಷಿ ಮೇಳ’

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ‌ ಭರದ ಸಿದ್ಧತೆ
Last Updated 14 ನವೆಂಬರ್ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಬರದ ಕಾರಣದಿಂದ ಕಳೆದ ವರ್ಷ ಮೇಳ ನಡೆದಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ದುಪ್ಪಟ್ಟು ಸಂಭ್ರಮದಲ್ಲಿ ಆಯೋಜನೆಗೊಳ್ಳುತ್ತಿದೆ. ವಿಶ್ವವಿದ್ಯಾಲಯದ ರಸ್ತೆಗಳು ಟಾರು ಹೊದ್ದುಕೊಂಡು ಬೀಗುತ್ತಿವೆ. ಮೇಳಕ್ಕಾಗಿ ಬೃಹತ್‌ ವೇದಿಕೆ ಸಿದ್ಧಗೊಳ್ಳುತ್ತಿದೆ. ಜಿಕೆವಿಕೆ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಮಂಗಳವಾರ ಕೊನೆಯ ಹಂತದ ಸಿದ್ಧತಾ ಕಾರ್ಯ ಮುಂದುವರಿದಿತ್ತು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್‌. ಶಿವಣ್ಣ, ‘ಈ ವರ್ಷ ಸುಮಾರು 12 ಲಕ್ಷ ಜನರು ಬರುವ ನಿರೀಕ್ಷೆ ಇದೆ’ ಎಂದರು.

‘ಸಿರಿಧಾನ್ಯಗಳ ಪರಿಚಯ, ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಹಾಗೂ ಸಮಗ್ರ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸಲು ಈ ಬಾರಿ ಆದ್ಯತೆ ನೀಡಿದ್ದೇವೆ’ ಎಂದರು.

‘16ರಂದು ಬೆಳಿಗ್ಗೆ 11ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮೇಳಕ್ಕೆ ಚಾಲನೆ ನೀಡುವರು. ಬಳಿಕ ರೈತರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಮಧ್ಯಾಹ್ನ 2.30ಕ್ಕೆ ತಾಂತ್ರಿಕ ಸಮಾವೇಶದಲ್ಲಿ ಕೃಷಿ ಮಿಷನ್‌ನ ಮಾಜಿ ಅಧ್ಯಕ್ಷ ಎಸ್‌.ಎ. ಪಾಟೀಲ್‌ ಪಾಲ್ಗೊಳ್ಳುತ್ತಾರೆ’ ಎಂದು ವಿವರಿಸಿದರು.

‘17ರಂದು ಮಧ್ಯಾಹ್ನ 2ಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್‌ ಅವರು ಪ್ರಶಸ್ತಿ ಪ್ರದಾನ ಮಾಡುವರು. ನಂತರ ನಬಾರ್ಡ್‌ ಪ್ರಾಧ್ಯಾಪಕ ಪೀಠದ ಮುಖ್ಯಸ್ಥ ಡಾ.ಎಸ್‌.ಅಯ್ಯಪ್ಪನ್‌ ತಾಂತ್ರಿಕ ಭಾಷಣ ಮಾಡುವರು.’

‘18ರಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ರೈತ ಪ್ರಶಸ್ತಿಗಳನ್ನು ಪ್ರದಾನ ಮಾಡುವರು. 19ಕ್ಕೆ ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ವಿವರಿಸಿದರು.

700 ಮಳಿಗೆಗಳು: ಸುಧಾರಿತ ಕೃಷಿ ಯಂತ್ರೋಪಕರಣಗಳ 175 ಮಳಿಗೆಗಳು, ಪಶು ಸಂಗೋಪನೆಯ 65 ಮಳಿಗೆಗಳು, ರಸಗೊಬ್ಬರ, ಬೀಜ, ವಿವಿಧ ತಳಿ, ಬೆಳೆ ಪ್ರಾತ್ಯಕ್ಷಿಕೆ, ರೈತ ಸಲಹಾ ಕೇಂದ್ರ ಸೇರಿದಂತೆ 700 ಮಳಿಗೆಗಳು ಮೇಳದಲ್ಲಿ ಇರಲಿವೆ.

ಸಾಂಸ್ಕೃತಿಕ ಮತ್ತು ಜನಪದ ಕಲೆ:  ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳ ಪ್ರದರ್ಶನ ಕೃಷಿ ಮೇಳದಲ್ಲಿ ನಡೆಯಲಿದ್ದು, ಮೇಳಕ್ಕೆ ಬರುವವರಿಗೆ ಸಾಂಸ್ಕೃತಿಕ ರಸದೌತಣ ನೀಡಲಿವೆ. ಕೋಲಾಟ, ಯಕ್ಷಗಾನ, ಗೊಂಬೆಯಾಟ, ತೊಗಲು ಗೊಂಬೆಯಾಟ, ಜನಪದ ಗೀತೆ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

8 ಸುಧಾರಿತ ತಳಿಗಳ ಬಿಡುಗಡೆ: ಕಬ್ಬು (ವಿಸಿಎಫ್ 0517)ತಳಿ, ಮೇವಿನ ಅಲಸಂದೆ (ಎಂಎಫ್ಸಿ-09.1), ಮುಸುಕಿನ ಜೋಳದ ಸಂಕರಣ ತಳಿ (ಎಂಎಎಚ್‌ 14.5), ತೊಗರಿ (ಬಿಆರ್‌ಜಿ 3), ಅಲಸಂದೆ (ಎವಿ 6), ಬೀಜದ ದಂಟು (ಕೆಬಿಜಿಎ 4), ನೇರಳೆ (ಚಿಂತಾಮಣಿ ಸೆಲೆಕ್ಷನ್‌ 1), ಸ್ವೀವಿಯ ರೆಬುಡಿನ: ಮಿಕ್ಸಾಪ್ಲೆ„ಡ್‌ ಎಂಬ ನೂತನ ಸುಧಾರಿತ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಹವಾಮಾನ ವೈಪರೀತ್ಯದ ಕೃಷಿ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕೃರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ ಪದ್ಧತಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿಗಳು, ಸಣ್ಣ ಸಣ್ಣ ಕೈತೋಟಗಳ ಪರಿಕರಗಳು, ಬಿತ್ತನೆ ಬೀಜ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟ, ಗಾರ್ಡನಿಂಗ್‌ ಸಸಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಉಚಿತ ಪ್ರವೇಶ:

ಕೃಷಿ ಮೇಳಕ್ಕೆ ಬರುವವರಿಗೆ ‍ಪ್ರವೇಶ ಉಚಿತವಾಗಿದೆ. ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ಕೃಷಿ ವಿಶ್ವವಿದ್ಯಾಲಯದ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಪ್ರತ್ಯೇಕ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಕೃಷಿಕ ಸಾಧಕರಿಗೆ ಪ್ರಶಸ್ತಿ:

ಕೃಷಿ ಮೇಳದಲ್ಲಿ ಈ ಬಾರಿ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ 145 ಕೃಷಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಅವರು ರಾಷ್ಟ್ರೀಯ ಮಟ್ಟದ ಡಾ. ಎಂ.ಎಚ್‌. ಮರಿಗೌಡ ಅತ್ಯುತ್ತಮ ತೋಟಗಾರಿಕಾ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.‌

ಸಿ.ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ರೈತ ಸಿ.ಆರ್‌. ರಾಧಾಕೃಷ್ಣ, ಎಂ.ಎಚ್‌. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಗೆ ಬೆಳಗಾವಿಯ ರಾಜು ಸತ್ತೆಪ್ಪಾ ಬೈರುಗೋಳ, ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜುನಾಥ್‌ ಹಾಗೂ ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಪ್ರಶಸ್ತಿಗೆ ಚನ್ನರಾಯಪಟ್ಟಣದ ಓಂಕಾರಮೂರ್ತಿ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಚಿಕ್ಕಬಳ್ಳಾಪುರದ ಶಾರದಮ್ಮ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT