ಶುಕ್ರವಾರ, ಮಾರ್ಚ್ 5, 2021
21 °C
ಚೀನಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಡೆನ್ಮಾರ್ಕ್ ಜೋಡಿಗೆ ಪರಾಜಯ

ಮುಖ್ಯ ಸುತ್ತಿಗೆ ಅಶ್ವಿನಿ–ಸಾತ್ವಿಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಖ್ಯ ಸುತ್ತಿಗೆ ಅಶ್ವಿನಿ–ಸಾತ್ವಿಕ್‌

ಫುಜೌ, ಚೀನಾ: ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಅವರು ಚೀನಾ ಓಪನ್‌ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮುಖ್ಯ ಸು‌ತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಅರ್ಹತಾ ಸುತ್ತಿನ ಎರಡು ಹಣಾಹಣಿಗಳಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಮೋಡಿ ಮಾಡಿದರು. ಮೊದಲ ಹಣಾಹಣಿಯಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 21–16, 19–21, 22–20ರಲ್ಲಿ ಡೆನ್ಮಾರ್ಕ್‌ನ ನಿಕ್ಲಾಸ್‌ ನೊಹರ್‌ ಮತ್ತು ಸಾರಾ ತ್ಯಾಗೆಸನ್‌ ಅವರನ್ನು ಸೋಲಿಸಿದರು.

ಪ್ರಥಮ ಗೇಮ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಅಂಗಳದಲ್ಲಿ ಮಿಂಚು ಹರಿಸಿದ ಭಾರತದ ಜೋಡಿ ಎರಡನೇ ಗೇಮ್‌ನಲ್ಲಿ ನಿರಾಸೆ ಕಂಡಿತು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ರೋಚಕ ಘಟ್ಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಅಮೋಘ ಆಟ ಆಡಿ ಎದುರಾಳಿಗಳ ಸವಾಲು ಮೀರಿದರು.

ದಿನದ ಇನ್ನೊಂದು ಹೋರಾಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 24–22, 21–7ರಲ್ಲಿ ಚೀನಾ ತೈಪೆಯ ಲೀ ಜೆ ಹುಯಿ ಮತ್ತು ವು ತಿ ಜಂಗ್‌ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಎದು ರಾಳಿ ಗಳಿಂದ ತೀವ್ರ ಪೈಪೋಟಿ ಎದುರಿಸಿದ ಭಾರತದ ಜೋಡಿ ಎರಡನೇ ಗೇಮ್‌ನಲ್ಲಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿತು.

ಬುಧವಾರ ನಡೆಯುವ ಮುಖ್ಯ ಸುತ್ತಿನ ಮೊದಲ ಹೋರಾಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌, ಡೆನ್ಮಾರ್ಕ್‌ನ ಮಥಿಯಾಸ್‌ ಕ್ರಿಸ್ಟಿಯನ್‌ಸೆನ್‌ ಮತ್ತು ಕ್ರಿಸ್ಟಿನಾ ಫೆಡರ್‌ಸನ್‌ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಅವರೂ ಬುಧವಾರ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಕಿದಂಬಿ ಶ್ರೀಕಾಂತ್‌ ಗಾಯದ ಕಾರಣ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ ಎಚ್‌.ಎಸ್‌.ಪ್ರಣಯ್‌, ಬಿ.ಸಾಯಿ ಪ್ರಣೀತ್‌, ಅಜಯ್‌ ಜಯರಾಮ್‌, ಸಹೋದರರಾದ ಸೌರಭ್‌ ಮತ್ತು ಸಮೀರ್‌ ವರ್ಮಾ ಅವರು ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ, ಎನ್‌.ಸಿಕ್ಕಿ ರೆಡ್ಡಿ ಜೊತೆಗೂಡಿ ಆಡಲಿದ್ದಾರೆ. ಇವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.