ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್‌ಗೆ ಆಘಾತ ನೀಡಿದ ಗೊಫಿನ್

ಎಟಿಪಿ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿ: ಗಾಯದಿಂದ ಬಳಲಿದ ರಫಾ
Last Updated 14 ನವೆಂಬರ್ 2017, 19:52 IST
ಅಕ್ಷರ ಗಾತ್ರ

ಲಂಡನ್‌: ಎಟಿಪಿ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮಂಗಳವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಸ್ಪೇನ್‌ನ ಆಟಗಾರ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ರಫೆಲ್‌ ನಡಾಲ್‌ ರೌಂಡ್‌ ರಾಬಿನ್‌ ಲೀಗ್‌ ಹಂತದ ಮೊದಲ ಪಂದ್ಯದಲ್ಲೇ ನಿರಾಸೆ  ಅನುಭವಿಸಿದರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಪೀಟ್‌ ಸಾಂಪ್ರಾಸ್‌ ಗುಂಪಿನ ಸಿಂಗಲ್ಸ್‌ ಹಣಾಹಣಿಯಲ್ಲಿ ಬೆಲ್ಜಿಯಂನ ಡೇವಿಡ್‌ ಗೊಫಿನ್‌ 7–6, 6–7, 6–4ರಲ್ಲಿ ನಡಾಲ್‌ಗೆ ಆಘಾತ ನೀಡಿದರು. 48 ವರ್ಷಗಳ ನಂತರ ಎಟಿಪಿ ಫೈನಲ್ಸ್‌ಗೆ ಅರ್ಹತೆ ಗಳಿಸಿದ ಬೆಲ್ಜಿಯಂನ ಮೊದಲ ಆಟಗಾರ ಎಂಬ ಹಿರಿಮೆ ಹೊಂದಿದ್ದ ಗೊಫಿನ್‌ ರೋಚಕ ಘಟ್ಟದಲ್ಲಿ ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನ ಹೊಂದಿದ್ದ ಗೊಫಿನ್‌, ಆರಂಭದಿಂದಲೇ ಮಿಂಚಿನ ಆಟವಾಡಿದರು. ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡ ಅವರು ಎರಡು ಬಾರಿ ನಡಾಲ್‌ ಸರ್ವ್‌ ಮುರಿದು ಮುನ್ನಡೆ ಗಳಿಸಿದರು. ಈ ಹಂತದಲ್ಲಿ ‘ರಫಾ’ ಪುಟಿದೆದ್ದರು. ಸತತ ಎರಡು ಗೇಮ್‌ಗಳಲ್ಲಿ ಗೆದ್ದ ಅವರು 5–5ರಲ್ಲಿ ಸಮಬಲ ಮಾಡಿಕೊಂಡರು. ಗೊಫಿನ್‌, ಮ್ಯಾಚ್‌ ಪಾಯಿಂಟ್‌ ಕೈಚೆಲ್ಲಿದರು. ಆ ನಂತರದ ಎರಡು ಗೇಮ್‌ಗಳಲ್ಲಿ ಉಭಯ ಆಟಗಾರರು ಸರ್ವ್‌ ಉಳಿಸಿಕೊಂಡಿದ್ದರಿಂದ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಸಂದಿಗ್ಧ ಪರಿಸ್ಥಿತಿಯಲ್ಲಿ ನಡಾಲ್‌ ಒತ್ತಡ ಮೀರಿ ನಿಲ್ಲಲು ವಿಫಲರಾದರು. ಹಲವು ತಪ್ಪುಗಳನ್ನು ಮಾಡಿದ ಅವರು ಎದುರಾಳಿಯ ಜಯದ ಹಾದಿ ಸುಲಭ ಮಾಡಿದರು.

ಎರಡನೇ ಸೆಟ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ನಡಾಲ್‌ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರವೇಗದ ಸರ್ವ್‌ಗಳನ್ನು ಗೊಫಿನ್‌ ನಿಖರವಾಗಿ ಹಿಂತಿರುಗಿಸುತ್ತಿದ್ದರು. ಬೇಸ್‌ ಲೈನ್‌ ಮತ್ತು ಗ್ರೌಂಡ್‌ ಸ್ಟ್ರೋಕ್‌ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಹೀಗಾಗಿ ಸೆಟ್‌ ಮತ್ತೊಮ್ಮೆ ‘ಟೈ ಬ್ರೇಕರ್‌’ಗೆ ಸಾಗಿತು. ಈ ಅವಕಾಶದಲ್ಲಿ ನಡಾಲ್‌ ಯಾವುದೇ ತಪ್ಪು ಮಾಡಲಿಲ್ಲ. ಅಮೋಘ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಅವರು 1–1ರಲ್ಲಿ ಸಮಬಲ ಮಾಡಿಕೊಂಡರು.

ಹೀಗಾಗಿ ಮೂರನೇ ಮತ್ತು ನಿರ್ಣಾಯಕ ಸೆಟ್‌ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸೆಟ್‌ನಲ್ಲಿ ನಡಾಲ್‌ ಗಾಯಗೊಂಡರು. ಅವರ ಮೊಣಕಾಲಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಆದರೂ  ವಿಶ್ವಾಸ ಕಳೆದುಕೊಳ್ಳದ ಅವರು ಅಂತಿಮ ಕ್ಷಣದವರೆಗೂ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿ ಸೋಲೊಪ್ಪಿಕೊಂಡರು. ಈ ಹೋರಾಟ 2 ಗಂಟೆ 37 ನಿಮಿಷ ನಡೆಯಿತು.

ಡಿಮಿಟ್ರೊವ್‌ಗೆ ಜಯ: ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ಜಯಿಸಿದರು.  ಮೊದಲ ಸುತ್ತಿನಲ್ಲಿ ಡಿಮಿಟ್ರೊವ್‌ 6–3, 5–7, 7–5ರಲ್ಲಿ ಡಾಮಿನಿಕ್‌ ಥೀಮ್‌ ಅವರನ್ನು ಸೋಲಿಸಿದರು.

ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ಅಮೆರಿಕದ ಬಾಬ್‌ ಮತ್ತು ಮೈಕ್‌ ಬ್ರಯಾನ್‌ 7–5, 6–7, 10–8ರಲ್ಲಿ ಬ್ರಿಟನ್‌ನ ಜೆಮಿ ಮರ‍್ರೆ ಮತ್ತು ಬ್ರೆಜಿಲ್‌ನ ಬ್ರುನೊ ಸೋರೆಸ್‌ ಎದುರೂ, ಪೋಲೆಂಡ್‌ನ ಲುಕಾಸ್‌ ಕುಬೊಟ್‌ ಮತ್ತು ಬ್ರೆಜಿಲ್‌ನ ಮಾರ್ಷೆಲೊ ಮೆಲೊ 7–6, 6–4ರಲ್ಲಿ ಕ್ರೊವೇಷ್ಯಾದ ಇವಾನ್‌ ದೊಡಿಗ್‌ ಮತ್ತು ಸ್ಪೇನ್‌ನ ಮಾರ್ಷೆಲೊ ಗ್ರಾನೊಲ್ಲರ್ಸ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT