ಮಂಗಳವಾರ, ಮಾರ್ಚ್ 2, 2021
23 °C

ಸರ್ಕಾರಿ ಆಸ್ಪತ್ರೆ: ಹೊರರೋಗಿಗಳು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಆಸ್ಪತ್ರೆ: ಹೊರರೋಗಿಗಳು ಹೆಚ್ಚಳ

ಬಾಗಲಕೋಟೆ: ಕೆ.ಪಿ.ಎಂ.ಇ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯಾದ್ಯಂತ ಮಂಗಳವಾರ ವೈದ್ಯಕೀಯ ವ್ಯವಸ್ಥೆ ಅಸ್ತವ್ಯಸ್ತ ಉಂಟಾಯಿತು.

ಸೋಮವಾರ ಪ್ರತಿಭಟನೆಯ ಬಿಸಿ ಅನುಭವಿಸಿದ್ದ ರೋಗಿಗಳು ಹಾಗೂ ಸಂಬಂಧಿಕರು ಖಾಸಗಿ ಆಸ್ಪತ್ರೆಗಳತ್ತ ತೆರಳದೆ ನೇರವಾಗಿ ಜಿಲ್ಲಾ ಆಸ್ಪತ್ರೆಯತ್ತ ಮುಖಮಾಡಿದರು. ಪರಿಣಾಮ ಹೊರ ರೋಗಿಗಳ ಸಂಖ್ಯೆಯಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿತು.

‘ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಮಂಗಳವಾರ 615 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಳರೋಗಿಗಳ ವಿಭಾಗಕ್ಕೆ 47 ಜನ ದಾಖಲಾಗಿದ್ದಾರೆ. 10 ಹೆರಿಗೆ ಮಾಡಿಸಲಾಗಿದೆ. ಅದರಲ್ಲಿ ಮೂರು ಸಿಸೇರಿಯನ್ ಕೂಡಾ ಸೇರಿವೆ. ಚಿಕ್ಕ ಮಕ್ಕಳ ವಾರ್ಡ್‌ಗೆ 14 ಮಕ್ಕಳು ದಾಖಲಾಗಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಅನಂತರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಹೊರ ರೋಗಿಗಳ ವಿಭಾಗದಲ್ಲಿ 755 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 64 ಜನ ಒಳರೋಗಿ ವಿಭಾಗಕ್ಕೆ ದಾಖಲಾಗಿದ್ದರು. ಏಳು ಹೆರಿಗೆ ಮಾಡಿಸಲಾಗಿದೆ. ಮೂರು ಜನರಿಗೆ ಸಿಸೇರಿಯನ್ ಮಾಡಲಾಗಿದೆ. ಚಿಕ್ಕಮಕ್ಕಳ ವಾರ್ಡ್‌ಗೆ ಏಳು ರೋಗಿಗಳು ದಾಖಲಾಗಿದ್ದವು ಎಂದು ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ 400 ರಿಂದ 500 ಮಂದಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಖಾಸಗಿ ವೈದ್ಯರ ಮುಷ್ಕರದಿಂದಾಗಿ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡಿಲ್ಲ. ರಜೆ ಮೇಲೆ ತೆರಳಿದವರನ್ನು ವಾಪಸ್ ಕರೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸಭೆಯಲ್ಲಿ ತಿಳಿಸಲಾಗಿದೆ’ ಎಂದು ಅನಂತರಡ್ಡಿ ಹೇಳಿದರು.

ಬಾದಾಮಿ ವರದಿ

ಹೆಚ್ಚಿದ ಒಳರೋಗಿಗಳ ಸಂಖ್ಯೆ

ಬಾದಾಮಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 6 ವರೆಗೂ ರೋಗಿಗಳು ಸರದಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದರು. ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿರುವ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು 800ಕ್ಕೂ ಅಧಿಕ ಮಂದಿ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರಿಗೆ ರಜೆ ಕೊಟ್ಟಿಲ್ಲ. ಆಸ್ಪತ್ರೆಯಲ್ಲಿ ಏಳು ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರೇವಣಸಿದ್ದಪ್ಪ ಪತ್ರಿಕೆಗೆ ಹೇಳಿದರು.

ವೈದ್ಯಕೀಯ ಸೇವೆ ಅಬಾಧಿತ

ರಬಕವಿ ಬನಹಟ್ಟಿ: ‘ಖಾಸಗಿ ವೈದ್ಯರ ಮುಷ್ಕರದಿಂದಾಗಿ ಜಮಖಂಡಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಸಮಸ್ಯೆ ಉಂಟಾಗಿಲ್ಲ. ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರಿಗೂ ರಜೆಯನ್ನು ನೀಡಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್‌.ಗಲಗಲಿ ತಿಳಿಸಿದರು.

ಸಮೀಪದ ಜಗದಾಳ ಗ್ರಾಮದಲ್ಲಿ ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಜಮಖಂಡಿ ಆಸ್ಪತ್ರೆಯಲ್ಲಿ 700 ಹೊರ ರೋಗಿಗಳು ಮತ್ತು 70ಕ್ಕೂ ಹೆಚ್ಚು ಒಳ ರೋಗಿಗಳು ದಾಖಲಾಗಿದ್ದರು. ಅದೇ ರೀತಿಯಾಗಿ ರಬಕವಿ –ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 350ಕ್ಕೂ ಹೆಚ್ಚು ಹೊರ ರೋಗಿಗಳು ಮತ್ತು 30ಕ್ಕೂ ಹೆಚ್ಚು ಒಳ ರೋಗಿಗಳು ದಾಖಲಾಗಿದ್ದಾರೆ’ ಎಂದರು.

‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಸಿಗೆ ಕೊರತೆ ಇದೆ. ಆದರೂ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಡಾ.ಗಲಗಲಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.