ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದಲ್ಲಿ 600 ಸಹಕಾರ ಸಂಘ

Last Updated 15 ನವೆಂಬರ್ 2017, 6:30 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯಲ್ಲಿ ನಷ್ಟದಲ್ಲಿ ಇರುವ 600 ಸಹಕಾರ ಸಂಘಗಳ ಪುನಃಶ್ಚೇತನಕ್ಕೆ ಯೋಜನೆ ರೂಪಿಸಬೇಕು’ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಸಲಹೆ ನೀಡಿದರು.

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು ಇವೆ. ಇವುಗಳಲ್ಲಿ ಸುಮಾರು 400 ಸಂಘಗಳು ಮಾತ್ರ ಲಾಭದಲ್ಲಿ ಇವೆ’ ಎಂದು ತಿಳಿಸಿದರು. ‘ನಷ್ಟದಲ್ಲಿ ಇರುವ ಸಹಕಾರ ಸಂಘಗಳ ಬಗೆಗೆ ಚಿಂತನ-ಮಂಥನ ನಡೆಯಬೇಕಿದೆ. ಅವುಗಳಿಗೆ ಮರು ಜೀವ ನೀಡಿ ಇನ್ನೂ ಹೆಚ್ಚು ಜನರಿಗೆ ನೆರ ವಾಗುವ ಕೆಲಸ ಆಗಬೇಕಿದೆ’ ಎಂದರು.

‘ಸಹಕಾರ ಸಂಘಗಳ ಪ್ರಗತಿಯಲ್ಲಿ ಆಡಳಿತ ಮಂಡಳಿಗಳ ಪಾತ್ರ ಮಹತ್ವದ್ದಾಗಿದೆ. 30 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರು ದೇಶದಲ್ಲೇ ಮಾದರಿ ಆಡಳಿತ ನೀಡಿದ್ದರು’ ಎಂದು ಸ್ಮರಿಸಿದರು.

‘1985-86 ರಲ್ಲಿ ಅವರು ಅಧ್ಯಕ್ಷರಾಗಿದ್ದಾಗ ಡಿಸಿಸಿ ಬ್ಯಾಂಕ್‌ನ ಬಂಡವಾಳ ₹ 15.85 ಕೋಟಿ ಇತ್ತು. ಅವರು ಕೊನೆಯುಸಿರು ಎಳೆದಾಗ ₹ 2,500 ಕೋಟಿಗೆ ತಲುಪಿತು. ಅವರು ಗತಿಸಿ ಎರಡು ವರ್ಷಗಳಾಗಿವೆ. ಬ್ಯಾಂಕ್‌ನ ಈಗಿನ ಬಂಡವಾಳ ₹ 2,633 ಕೋಟಿಗೆ ಏರಿದೆ’ ಎಂದು ಅವರು ತಿಳಿಸಿದರು.

‘ಬ್ಯಾಂಕ್‌ನಿಂದ 1,938 ಕೋಟಿ ಸಾಲ ವಿತರಿಸಲಾಗಿದೆ. ಸಾಲ ನೀಡಿ ಜನರನ್ನು ಸಾಲಗಾರರನ್ನಾಗಿ ಮಾಡುವುದು ಬ್ಯಾಂಕ್ ಉದ್ದೇಶ ಅಲ್ಲ. ರೈತರಿಗೆ ಸಕಾಲಕ್ಕೆ ನೆರವಾಗಿ ಅವರನ್ನು ಸಶಕ್ತಗೊಳಿಸುವುದೇ ಬ್ಯಾಂಕ್‌ ಧ್ಯೇಯವಾಗಿದೆ’ ಎಂದು ಹೇಳಿದರು.

‘ಬ್ಯಾಂಕ್ ಅಧೀನದ ಶಾರದಾ ರುಡ್‌ಸೆಟಿ ಮೂಲಕ 12,673 ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲ ತರಬೇತಿ ಕೊಡಲಾಗಿದೆ. ನಾಗಮಾರಪಳ್ಳಿ ಅವರು ಜಿಲ್ಲೆಯಲ್ಲಿ ಹುಟ್ಟು ಹಾಕಿದ ಸ್ವಸಹಾಯ ಗುಂಪುಗಳು ವಿಶ್ವದ ಚಿತ್ತ ತಮ್ಮತ್ತ ಸೆಳೆದಿವೆ. ₹ 626 ಕೋಟಿ ಬಂಡವಾಳ ಹಾಗೂ ₹107 ಕೋಟಿ ಠೇವಣಿಯನ್ನು ಹೊಂದಿವೆ. ಇಂಥ ಕ್ರಾಂತಿ ದೇಶದ ಬೇರೆಲ್ಲೂ ಕಾಣಸಿಗದು’ ಎಂದು ಅವರು ನುಡಿದರು.

‘ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೋಡ ಮಾತನಾಡಿ, ‘ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಹಿಂದೆ ವಾರ್ಷಿಕ ಶೇ 4 ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿತ್ತು. ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ ₹ 100 ಕೋಟಿ ಸಾಲ ಒದಗಿಸುವ ಯೋಜನೆ ಇದೆ’ ಎಂದು ತಿಳಿಸಿದರು.

‘ಕೃಷಿ ಸಾಲ ಮನ್ನಾದ ಹೆಚ್ಚು ಲಾಭ ಪಡೆದ ಜಿಲ್ಲೆಗಳಲ್ಲಿ ಬೀದರ್ ರಾಜ್ಯದಲ್ಲೇ ಮೂರನೇ ಸಾಲಿನಲ್ಲಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತಿಹೆಚ್ಚು ರೈತರು ವಿಮೆ ಮಾಡಿಸಿದ್ದು, ₹ 145 ಕೋಟಿ ಪರಿಹಾರ ದೊರೆತಿದೆ. 1.85 ಲಕ್ಷ ಜನ ಯಶಸ್ವಿನಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ’ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತ ಮಾರುತಿ ಸೋನಾರ್ ಮಾತನಾಡಿ, ‘ಸಹಕಾರ ಕ್ಷೇತ್ರದ ಮೂಲಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಪ್ರಯತ್ನಗಳು ನಡೆಯಬೇಕಿದೆ’ ಎಂದು ತಿಳಿಸಿದರು. ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ನಿರ್ದೇಶಕರಾದ ಮಹಮ್ಮದ್ ಸಲಿಮೊದ್ದೀನ್, ವಿಜಯಕುಮಾರ ಎಸ್.ಪಾಟೀಲ ಗಾದಗಿ, ಸಂಗಮೇಶ ಪಾಟೀಲ ಅಲಿಯಂಬರ್‌, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರಎ. ಪಾಟೀಲ, ಹೊಸಪೇಟೆಯ ಇಫ್ಕೋ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಜಿ. ಹಿರೇಮಠ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕ ಕೆ.ಬಿ. ವೀರಾಪುರ, ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ, ಉಪ ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ರಾಜಕುಮಾರ ಆಣದೂರೆ, ಪಂಢರಿರೆಡ್ಡಿ, ಅನಿಲ ಪಾಟೀಲ, ಸದಾಶಿವ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಪರಮೇಶ್ವರ ಮುಗಟೆ ಉಪಸ್ಥಿತರಿದ್ದರು. ಬಸವರಾಜ ಕಲ್ಯಾಣಿ ನಿರೂಪಿಸಿ ದರು. ಚನ್ನಬಸಯ್ಯ ಸ್ವಾಗತಿಸಿದರು.

* * 

ಕೆಲ ಸ್ವಸಹಾಯ ಗುಂಪುಗಳು ಸದಸ್ಯರಿಗೆ ಮಾಸಿಕ ₹ 2 ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿರುವ ದೂರುಗಳಿವೆ. ವಾರ್ಷಿಕ ₹ ಶೇ 14 ರಷ್ಟು ಬಡ್ಡಿ ಮಾತ್ರ ಪಡೆಯಬಹುದು. ವಿಶ್ವನಾಥ ಮಲಕೋಡ
ಸಹಕಾರ ಸಂಘಗಳ ಉಪ ನಿಬಂಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT