ಮಂಗಳವಾರ, ಮಾರ್ಚ್ 2, 2021
26 °C

ಹತ್ತಿ ಬೆಳೆಗೂ ಹುಳುಗಳ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತಿ ಬೆಳೆಗೂ ಹುಳುಗಳ ಕಾಟ

ಚಾಮರಾಜನಗರ: ಭತ್ತ, ಮುಸುಕಿನ ಜೋಳ ಮತ್ತಿತರ ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡು ರೈತರಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ, ಜಿಲ್ಲೆಯ ಹಲವೆಡೆ ಬಿ.ಟಿ ಹತ್ತಿಗೆ ಗುಲಾಬಿ ಕಾಯಿಕೊರಕ ಹುಳುಗಳು ದಾಳಿ ಇಟ್ಟಿವೆ.

ಜಿಲ್ಲೆಯ ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಬಿ.ಟಿ ಹತ್ತಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ 9,911 ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ ಹತ್ತಿ ಬಿತ್ತನೆ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅರಳುವ ಹಂತದಲ್ಲಿರುವ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ಬಾಧೆ ಕಂಡುಬಂದಿದ್ದು, ಹಲವೆಡೆ ಬೆಳೆ ನಷ್ಟ ಉಂಟಾಗಿದೆ. ಗುಂಡ್ಲುಪೇಟೆಯಲ್ಲಿ ಶೇ 75ರಷ್ಟು ಮತ್ತು ಕೊಳ್ಳೇಗಾಲದಲ್ಲಿ ಶೇ 57ರಷ್ಟು ಬೆಳೆಹಾನಿ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಗುಲಾಬಿ ಬಣ್ಣದ ಹುಳುಗಳು: ಈ ಬಾಧೆ ಹರಡುವ ಪತಂಗಗಳು ಚಪ್ಪಟೆಯಾಕಾರದ ಮೊಟ್ಟೆಗಳನ್ನು ಇಡುತ್ತವೆ. ಸುಮಾರು 3-6 ದಿವಸಗಳ ನಂತರ ಮರಿಗಳು ಹೊರಬರುತ್ತವೆ. ಇವು ಹೂವನ್ನು ನಾಶ ಮಾಡುವುದಲ್ಲದೆ ಬೆಳೆಯುತ್ತಿರುವ ಕಾಯಿಗಳ ಒಳ ಹೊಕ್ಕು ಬೀಜಗಳನ್ನು ತಿನ್ನುತ್ತವೆ. ಇದರಿಂದ ಹತ್ತಿಯ ಗುಣಮಟ್ಟ ಹಾಗೂ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗುತ್ತದೆ.

ಮೊದಲೆರಡು ಹಂತದಲ್ಲಿ ಮರಿ ಹುಳುಗಳು ಬಿಳಿ ಬಣ್ಣದಿಂದಿದ್ದು, ಮೂರನೇ ಹಂತದಲ್ಲಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಇವು 9-14 ದಿನಗಳವರೆಗೆ ಬೆಳೆದು ಕಾಯಿಗಳಿಂದ ಹೊರಬಂದು ಕೋಶಾವಸ್ಥೆಗೆ ಹೋಗುತ್ತವೆ.

ಹಾನಿಯ ಲಕ್ಷಣ: ಮರಿ ಹುಳುಗಳು ಹತ್ತು ದಿನಗಳಿಗಿಂತ ಕಡಿಮೆ ಇರುವ ಮೊಗ್ಗುಗಳಿಗೆ ಹಾನಿ ಮಾಡುವುದರಿಂದ ಮೊಗ್ಗುಗಳು ಉದುರುತ್ತವೆ. ಬೀಜಗಳನ್ನು ತಿಂದು ಎಳೆಯ ಕಾಯಿಗಳನ್ನು ಸಂಪೂರ್ಣವಾಗಿ ನಾಶಮಾಡುತ್ತವೆ.

ಒಂದು ತೊಳೆಯಿಂದ ಇನ್ನೊಂದು ತೊಳೆಗೆ ಮತ್ತು ಬೀಜದಿಂದ ಬೀಜಕ್ಕೆ ಚಲಿಸುವಾಗ ಹತ್ತಿಯನ್ನು ಕತ್ತರಿಸುತ್ತವೆ. ಹೂವು ಮತ್ತು ಹಸಿರು ಕಾಯಿಗಳ ಮೇಲೆ ಸಣ್ಣ ರಂಧ್ರಗಳನ್ನು ಮೂಡಿಸುತ್ತವೆ. ಹತ್ತಿಯನ್ನು ಕಲೆ ಮಾಡುವುದರಿಂದ ಗುಣಮಟ್ಟ ಕಡಿಮೆಯಾಗುತ್ತದೆ.

ನಿರ್ವಹಣೆ ಹೇಗೆ?:

ಒಣಗಿ ತೆರೆಯದ ಅಥವಾ ಅರ್ಧ ತೆರೆದಿರುವ ಕಾಯಿಗಳಲ್ಲಿ ಇರುವ ಬೀಜಗಳಲ್ಲಿ ಗುಲಾಬಿ ಕಾಯಿಕೊರಕದ ಹುಳುಗಳು ಕಂಡುಬರುತ್ತವೆ. ಇಂತಹ ಕಾಯಿ ಮತ್ತು ರೆಂಬೆಗಳನ್ನು ಕಿತ್ತು ನಾಶ ಮಾಡಬೇಕು.

ಬಾಧೆಗೆ ತುತ್ತಾದ ಬೀಜಗಳನ್ನು ಮತ್ತು ಹಾನಿಗೊಳಗಾದ ಹತ್ತಿಯನ್ನು ಸುಟ್ಟು ನಾಶ ಮಾಡಬೇಕು. ಬಿ.ಟಿ ಹತ್ತಿಯ ಜೊತೆಗೆ ಬಿ.ಟಿ ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಬೆಳೆಯಬೇಕು.

ಹತ್ತಿ ತೀವ್ರ ಹಾನಿಗೊಳಗಾದ ಸಂದರ್ಭದಲ್ಲಿ ಬೆಳೆಯನ್ನು ಗೊಬ್ಬರ ಮತ್ತು ನೀರು ಕೊಟ್ಟು ಹೊಸ ಚಿಗುರು ಹೂವು ಮತ್ತು ಕಾಯಿ ಬರುವಂತೆ ಮಾಡಬಾರದು. ಇದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಔಷಧ ಪ್ರಮಾಣ

ಪ್ರತಿ ಹೆಕ್ಟೇರ್‌ಗೆ ಬಲೆಗಳನ್ನು ಸಮಾನಾಂತರವಾಗಿ ಅಳವಡಿಸಬೇಕು. 1 ಮಿ.ಲಿ. ಲ್ಯಾಮ್‍ಡಾ ಸೈಲೊಥ್ರೀನ್ ಅಥವಾ 2 ಮಿ.ಲಿ. ಪ್ರೊಫೆನೋಫಾಸ್ ಅಥವಾ 1 ಗ್ರಾಂ ಥೈಯೋಡಿಕಾರ್ಬ್ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಅಗತ್ಯಕ್ಕೆ ಅನುಗುಣವಾಗಿ 1-2 ಸಲ ಸಿಂಪಡಣೆ ಮಾಡಬೇಕು.

* * 

ರೈತರು ಕೂಳೆ ಬೆಳೆ ಬೆಳೆಯುವ ಪದ್ಧತಿಯನ್ನು ನಿಲ್ಲಿಸಬೇಕು. ಇದು ಹುಳುಗಳು ಜಮೀನಿನಲ್ಲಿಯೇ ಉಳಿದುಕೊಂಡು ಹೊಸ ಬೆಳೆಗೂ ಹರಡಲು ಕಾರಣವಾಗುತ್ತದೆ

 ಜಿ.ಎಚ್. ಯೋಗೇಶ್‌,

ಉಪ ನಿರ್ದೇಶಕ, ಕೃಷಿ ಇಲಾಖೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.