ಬುಧವಾರ, ಮಾರ್ಚ್ 3, 2021
30 °C

‘ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಖಾಸಗಿ ಮಸೂದೆ ಮಂಡನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಖಾಸಗಿ ಮಸೂದೆ ಮಂಡನೆ’

ಚಿತ್ರದುರ್ಗ: ಚುನಾಯಿತ ಪ್ರತಿನಿಧಿಗಳ, ಸರ್ಕಾರಿ ನೌಕರರು ಮತ್ತು ಸಿಬ್ಬಂದಿಯ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಬೇಕೆಂಬ ಖಾಸಗಿ ಮಸೂದೆ

ಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಈಗಾಗಲೇ ಸಭಾಧ್ಯಕ್ಷರಲ್ಲಿ ಮನವಿ ಮಾಡಲಾಗಿದ್ದು, ಇದೇ ನ. 17ರಂದು ವಿಷಯವೂ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದರು.

ಈ ಮಸೂದೆ ಮಂಡನೆಯಾಗಿ ಅನುಷ್ಠಾನಕ್ಕೆ ಬಂದಲ್ಲಿ ಎಲ್ಲ ಹಂತದ ಸರ್ಕಾರಿ ನೌಕರರ, ಸಚಿವರ, ಶಾಸಕರ, ಸಂಸದರ, ವಿಧಾನ ಪರಿಷತ್ ಸದಸ್ಯರ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಬೇಕಾಗುತ್ತದೆ. ಆಗ ಸರ್ಕಾರಿ ಶಾಲೆಗಳು ಉಳಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಶಾಲಾ, ಕಾಲೇಜುಗಳಿಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದ ಅವರು, ‘ನನ್ನ ಪ್ರಯತ್ನದಿಂದ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ₹ 1.1 ಕೋಟಿ ಅನುದಾನ ಮಂಜೂರು ಆಗಿದೆ’ ಎಂದರು.

ಚಿತ್ರದುರ್ಗದ ಐತಿಹಾಸಿಕ ಕೋಟೆ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಕೋಟೆಗೆ ಭೇಟಿ ನೀಡಿ ಪರಿಶೀಲಿಸಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

‘ಚಿತ್ರದುರ್ಗ ಮತ್ತು ದಾವಣಗೆರೆ ನನ್ನ ರಾಜಕೀಯದ ಪ್ರಮುಖ ಕ್ಷೇತ್ರಗಳು. ದಾವಣಗೆರೆ ಲೋಕಸಭಾ ಕ್ಷೇತ್ರ ಅಥವಾ ಹರಿಹರ ಇಲ್ಲವೇ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಆದರೆ, ನಾನಾಗಿಯೇ ಸ್ಪರ್ಧಿಸುವ ಉದ್ದೇಶವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಎಸ್‌.ಆರ್‌.ಎಸ್‌. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಮುಖಂಡ ಎಂ.ಜಯಣ್ಣ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫಿವುಲ್ಲಾ, ಎಸ್‌ಟಿ ಘಟಕ ಅಧ್ಯಕ್ಷ ಅಂಜಿನಪ್ಪ ಇದ್ದರು.

* * 

ಬರಗೇರಮ್ಮ ದೇಗುಲದ ಆವರಣದಲ್ಲಿ ಒಂದು ಯಾತ್ರಿ ನಿವಾಸ್ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ರಘು ಆಚಾರ್,

ವಿಧಾನ ಪರಿಷತ್ ಸದಸ್ಯ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.